ಕನ್ನಡ ಬದುಕಿನ ಭಾಗವಾಗಬೇಕು, ಆಗ ಮಾತ್ರ ಮಾತೃಭಾಷೆ ಉಳಿಸಿ ಬೆಳೆಸಲು ಸಾಧ್ಯ: ಡಾ.ಎಚ್.ಜಿ.ವಿನುತ
Madhugiri News: ಪ್ರತಿಯೊಂದು ಆಚರಣೆಯ ಹಿಂದೆಯೂ ವೈಜ್ಞಾನಿಕ ಸತ್ಯ ಅಡಗಿರುತ್ತದೆ. ವಿದ್ಯಾರ್ಥಿಗಳು ಅದರ ಸಾರವನ್ನು ತಾಳ್ಮೆಯಿಂದ ಅರಿತುಕೊಂಡಾಗ ಮಾತ್ರ ನಿಜವಾದ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಎಚ್.ಜಿ. ವಿನುತ ತಿಳಿಸಿದ್ದಾರೆ.
-
ಮಧುಗಿರಿ, ನ.21: ಕನ್ನಡ ಭಾಷೆಯನ್ನು ಕೇವಲ ಮಾತೃಭಾಷೆಯಾಗಿ ಸ್ವೀಕರಿಸಿದರೆ ಸಾಲದು. ಅದು ನಮ್ಮ ಬದುಕಿನ ಭಾಗವಾಗಬೇಕು. ಆಗ ಮಾತ್ರ ಮಾತೃಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಎಚ್.ಜಿ. ವಿನುತ ತಿಳಿಸಿದರು. ತಾಲೂಕಿನ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ಕ್ರಾಸ್, ಐಕ್ಯೂಎಸಿ ಸೇರಿದಂತೆ ವಿವಿಧ ಸಮಿತಿಗಳ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಆಚರಣೆಯ ಹಿಂದೆಯೂ ವೈಜ್ಞಾನಿಕ ಸತ್ಯ ಅಡಗಿರುತ್ತದೆ. ವಿದ್ಯಾರ್ಥಿಗಳು ಅದರ ಸಾರವನ್ನು ತಾಳ್ಮೆಯಿಂದ ಅರಿತುಕೊಂಡಾಗ ಮಾತ್ರ ನಿಜವಾದ ಜ್ಞಾನ ಸಂಪಾದಿಸಲು ಸಾಧ್ಯ ಎಂದರು.
ಬುಕ್ಕಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಎ.ಎಂ. ಸತೀಶ್ ಮಾತನಾಡಿ, ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಬೆಳೆಸಬಹುದು. ತಂತ್ರಜ್ಞಾನದ ಅವಕಾಶಗಳನ್ನು ಬಳಸಿಕೊಂಡು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಇಂದಿನ ಕನ್ನಡಿಗರ ಮೇಲಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಪ್ರೊ. ಜಿ.ಸಿ. ರಜನಿ ಮಾತನಾಡಿ, ಕನ್ನಡ ಭಾಷೆಯ ಸಾಂಸ್ಕೃತಿಕ ಪರಂಪರೆ, ಗಡಿನಾಡಿನಲ್ಲಿ ಭಾಷೆಯ ಉಳಿವು ಮತ್ತು ಬೆಳವಣಿಗೆಯ ಮಹತ್ವದ ಬಗ್ಗೆ ತಿಳಿಸಿದರು.
ಐಕ್ಯೂಎಸಿ ಸಂಚಾಲಕಿ ಡಾ. ಮಂಜುಭಾರ್ಗವಿ ಮಾತನಾಡಿ, ಭಾಷೆ ಎಂದರೆ ಕೇವಲ ಅಕ್ಷರಗಳಲ್ಲ, ಅದೊಂದು ಭಾವನೆ. ಪ್ರಾದೇಶಿಕತೆಯನ್ನು ಮೀರಿ ಸಂಬಂಧಗಳನ್ನು ಬೆಸೆಯುವ ಶಕ್ತಿ ಕನ್ನಡ ಭಾಷೆಗಿದೆ ಎಂದರು.
ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ತಮ್ಮ ಕನಸು ಹಾಗೂ ಗುರಿಗಳನ್ನು ಹಂಚಿಕೊಂಡು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಅನುಪಮ ಆರ್., ಪುಟ್ಟರಾಜು, ಡಾ. ಶೋಭಾ , ಗ್ರಂಥಪಾಲಕರಾದ ಷಣ್ಮುಖಚಾರಿ, ರಾಮಚಂದ್ರಪ್ಪ, ಡಾ. ಸವಿತಾ , ಡಾ. ಸಿದ್ದನಾಯ್ಕ, ಸ್ವಾರಪ್ಪ, ಆಶಾ, ಪವಿತ್ರ, ಶೈಕ್ಷಣಿಕ ಸಂಯೋಜಕರಾದ ರಮೇಶ್, ವೆಂಕಟೇಶ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.