ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಹಿಂದ ಸಮುದಾಯಕ್ಕೆ ರಾಜಕೀಯ ಅಧಿಕಾರ: ಎಂಎಲ್‌ಸಿ ಶ್ರೀನಿವಾಸ್
Tumkur News: ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲೆಲ್ಲಾ ತಳ ಸಮುದಾಯಗಳ ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ ಎಂದು ಹೇಳಿದ್ದಾರೆ.
-
ತುಮಕೂರು, ಸೆ.29: ಅಹಿಂದ ಹಾಗೂ ಅಂತಹ ಸಮಾಜಗಳಿಗೆ ರಾಜಕೀಯ ಅಧಿಕಾರ ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ತಿಳಿಸಿದ್ದಾರೆ. ನಗರದ (Tumkur News) ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲೆಲ್ಲಾ ತಳ ಸಮುದಾಯಗಳ ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ ಎಂದರು.
'ಉಳುವವನೇ ಭೂಮಿಯ ಒಡೆಯ' ಕಾಯ್ದೆ ಹಾಗೂ ಹಾವನೂರು ಆಯೋಗದ ಮೂಲಕ ಮೀಸಲಾತಿಯು ಜಾರಿಗೆ ಬಂದಿತು. ಇದರಿಂದಾಗಿ ಇತರೆ ಸಮುದಾಯಗಳ ರೀತಿಯಲ್ಲಿ ತೀವ್ರ ಪೈಪೋಟಿ ನೀಡಲು ಸಾಧ್ಯವಾಗದಿದ್ದರೂ, ಸಮಾಜದಲ್ಲಿ ಒಂದು ಪಾಲನ್ನು ಪಡೆಯಲು ಕಾಂಗ್ರೆಸ್ ಕಾಲದಲ್ಲೇ ಸಾಧ್ಯವಾಯಿತು ಎಂದು ಹೇಳಿದರು.
"ಉಳುವವನೇ ಭೂಮಿಯ ಒಡೆಯ" ಯೋಜನೆಯು ಎಲ್ಲ ವರ್ಗದ ಬಡವರಿಗೂ ಅನುಕೂಲ ಕಲ್ಪಿಸಿದೆ. ಬಂಗಾರಪ್ಪನವರ ಕಾಲದಲ್ಲಿ ಆರಾಧನೆ, ಆಶ್ರಯ, ಕನ್ನಡ ಮಾಧ್ಯಮ ಕೃಪಾಂಕ ಹಾಗೂ ವೀರಪ್ಪ ಮೊಯ್ಲಿ ಅವರ ಕಾಲದಲ್ಲಿ ಬಂದ ಸಿಇಟಿ ವ್ಯವಸ್ಥೆಯಿಂದ ತಮ್ಮಂತಹ ಅನೇಕರಿಗೆ ಎಂಜಿನಿಯರ್, ಡಾಕ್ಟರ್ ಆಗಲು ಸಾಧ್ಯವಾಯಿತು.
ನೀಟ್ ಹಗರಣದಿಂದ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರೂ, ಸಿಇಟಿ ವ್ಯವಸ್ಥೆಯಿಂದ ಇದುವರೆಗೆ ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಿಲ್ಲ. ಸಿದ್ದರಾಮಯ್ಯ ಅವರ ಅನ್ನಭಾಗ್ಯ ಮತ್ತು ಪಂಚ ಗ್ಯಾರಂಟಿಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದ ಹಾಗೂ ಪಂಚ ಗ್ಯಾರಂಟಿಗಳನ್ನು ಟೀಕಿಸಿದವರೇ ಇದರ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ. ಪಂಚ ಗ್ಯಾರಂಟಿಗಳಿಂದ ಮಹಿಳಾ ಸಬಲೀಕರಣವೂ ಸಾಕಾರಗೊಂಡಿದೆ ಎಂದರು.
ರಾಷ್ಟ್ರಮಟ್ಟದಲ್ಲೂ ಸಹ ಹಿಂದುಳಿದ ವರ್ಗದ ನಾಯಕರ ಕೈಯಲ್ಲಿ ಅಧಿಕಾರ ಸಿಕ್ಕಿದಾಗ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಮೇಲೆತ್ತುವ ಕೆಲಸವಾಗಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಇಂತಹ ಯಾವುದೇ ನಿರ್ದೇಶನವಿಲ್ಲ ಎಂದು ಲೇವಡಿ ಮಾಡಿದ ಅವರು, ಬಿಜೆಪಿ ಮತ್ತು ಆರ್.ಎಸ್.ಎಸ್. ನೀತಿಗಳಿಂದ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿತವು ಜನರನ್ನು ತೀವ್ರವಾಗಿ ಕಾಡುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ರಾಮಕೃಷ್ಣ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ದುರಾಡಳಿತವನ್ನು ಜನರ ಮುಂದಿಡುವ ಕೆಲಸವನ್ನು ನಾವು ಮಾಡಬೇಕಿದೆ. ಜಿ.ಎಸ್.ಟಿಯಿಂದ ಸಣ್ಣಪುಟ್ಟ ವ್ಯಾಪಾರಸ್ಥರು ತತ್ತರಿಸಿ ಹೋಗಿದ್ದಾರೆ. ಸಣ್ಣಪುಟ್ಟ ಜಾತಿಗಳು ರಾಜಕೀಯ ಅಧಿಕಾರ ಪಡೆದಿದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದರು.
ಮೇಕೆದಾಟು ಸೇರಿ ವಿವಿಧ ನೀರಾವರಿ ಯೋಜನೆಗಳಿಗೆ ಮಧ್ಯಸ್ಥಿಕೆ ವಹಿಸಲು ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ: ಸಿಎಂ
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ. ಚಂದ್ರಶೇಖರಗೌಡ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್, ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಡಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಅನಿಲ್, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ನಾಗಮಣಿ, ಸೌಭಾಗ್ಯ, ಶಣ್ಮುಖಪ್ಪ, ರೇವಣಸಿದ್ದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.