Tumkur News: ಬಾಳಿಗೊಂದು ಗುರಿ ಇರಲಿ: ಶ್ರೀ ರಂಭಾಪುರಿ ಜಗದ್ಗುರು
ಭೂಮಿಯ ವ್ಯಾಸ ಇದ್ದಷ್ಟೇ ಇದೆ. ಆದರೆ ಮನುಷ್ಯನ ಹವ್ಯಾಸಗಳು ಮಾತ್ರ ಬೆಳೆಯುತ್ತಲೆ ಇವೆ. ದೈಹಿಕವಾಗಿ ನಾವೆಷ್ಟೇ ಸದೃಢವಾಗಿದ್ದರೂ ಮನಸ್ಸು ದೃಢವಾಗಿರದಿದ್ದರೆ ಯಾವ ಪ್ರಯೋಜನವು ಇಲ್ಲ. ಬೆಳೆಯುವ ಯುವ ಜನಾಂಗದಲ್ಲಿ ಕರ್ತವ್ಯಶೀಲತೆ ಮತ್ತು ಪ್ರಾಮಾಣಿಕತೆ ಬೆಳೆದು ಬರುವ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು. -
ತುಮಕೂರು, ಡಿ.25: ಯುವಶಕ್ತಿ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಲು ದೊಡ್ಡದು. ಬಾಳೆಗೊಂದು ಗೊನೆಯಿರುವಂತೆ ಯುವಕರ ಬಾಳಿಗೊಂದು ಗುರಿಯಿರಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. (Tumkur News) ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್‌ನಿಂದ ಸಂಘಟಿಸಿದ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ-ಜನ ಜಾಗೃತಿ ಧರ್ಮ ಸಮಾರಂಭದ 3ನೇ ದಿನದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಭೂಮಿಯ ವ್ಯಾಸ ಇದ್ದಷ್ಟೇ ಇದೆ. ಆದರೆ ಮನುಷ್ಯನ ಹವ್ಯಾಸಗಳು ಮಾತ್ರ ಬೆಳೆಯುತ್ತಲೆ ಇವೆ. ದೈಹಿಕವಾಗಿ ನಾವೆಷ್ಟೇ ಸದೃಢವಾಗಿದ್ದರೂ ಮನಸ್ಸು ದೃಢವಾಗಿರದಿದ್ದರೆ ಯಾವ ಪ್ರಯೋಜನವು ಇಲ್ಲ. ಬೆಳೆಯುವ ಯುವ ಜನಾಂಗದಲ್ಲಿ ಕರ್ತವ್ಯಶೀಲತೆ ಮತ್ತು ಪ್ರಾಮಾಣಿಕತೆ ಬೆಳೆದು ಬರುವ ಅವಶ್ಯಕತೆಯಿದೆ ಎಂದು ಹೇಳಿದರು.
ಯುವ ಜನಾಂಗಕ್ಕೆ ಇತಿಹಾಸದ ಅರಿವು ಅಗತ್ಯ. ಯುವ ಜನಾಂಗ ಈ ರಾಷ್ಟ್ರದ ಅಮೂಲ್ಯ ಸಂಪತ್ತು. ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸಮಾಜ ಕಟ್ಟಿ ಬೆಳೆಸುವುದರಲ್ಲಿ ಯುವಕರು ಶ್ರಮಿಸುವ ಅವಶ್ಯಕತೆಯಿದೆ. ಯುವಾವಸ್ಥೆಯಲ್ಲಿ ಧರ್ಮಾಚರಣೆ ಪಾಲಿಸಿದರೆ ಜೀವನ ಉಜ್ವಲವಾಗುವುದರಲ್ಲಿ ಅನುಮಾನವಿಲ್ಲ. ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿದಾಗ ಅದ್ಭುತ ಸಾಧನೆ-ಶಾಂತಿ ನೆಲೆಗೊಳ್ಳಲು ಸಾಧ್ಯವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದನ್ನು ಮರೆಯಲಾಗದು ಎಂದು ತಿಳಿಸಿದರು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ಅವರು ಆಗಮಿಸಿ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದ ನಂತರ ಮಾತನಾಡಿ, ಮಾನವ ಜೀವನದಲ್ಲಿ ಆದರ್ಶ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಬರುವ ಅಗತ್ಯವಿದೆ. ತುಮಕೂರು ನಗರದಲ್ಲಿ ಧನುರ್ಮಾಸದ ಅಂಗವಾಗಿ 5 ದಿನಗಳ ಕಾರ್ಯಕ್ರಮ ಜರುಗುತ್ತಿರುವುದು ಭಕ್ತರ ಸೌಭಾಗ್ಯವೆಂದರೆ ತಪ್ಪಾಗದು. ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿ ಇದರ ಪ್ರಯೋಜನವನ್ನು ಭಕ್ತರು ಪಡೆದು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆಯನ್ನು ನೀಡಲಿ ಎಂದು ಹೇಳಿದರು.
ತೆವಡೆಹಳ್ಳಿ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಸಮಾರಂಭದ ನೇತೃತ್ವ ವಹಿಸಿ ವೀರಶೈವ ಧರ್ಮ ಸಂಸ್ಕೃತಿ ಹಾಗೂ ಗುರುವಿನ ಮಹತ್ವವನ್ನು ಕುರಿತು ಮಾತನಾಡಿದರು.
ಯುವ ಸಾಹಿತಿ, ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ ಮಾತನಾಡಿ, ಯುವ ಜನಾಂಗದಲ್ಲಿ ಅದ್ಭುತ ಶಕ್ತಿಯಿದೆ. ಆ ಶಕ್ತಿಯನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಂಡರೆ ಬಲು ದೊಡ್ಡ ಸಾಧನೆ ಮಾಡಲು ಸಾಧ್ಯವಿದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕೊಡುವ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.
ವಿಜೃಂಭಣೆಯಿಂದ ನೆರವೇರಿದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ರಜತ ಮಹೋತ್ಸವ
ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಟಿ.ಸಿ. ಓಹಿಲೇಶ್ವರ, ಜಿ. ಮಲ್ಲಿಕಾರ್ಜುನಯ್ಯ, ಗಂಗಾಧರ ಶಾಸ್ತ್ರಿಗಳು, ಸಿ.ವಿ. ಮಹದೇವಯ್ಯ, ಎಂ.ಎಸ್. ಉಮೇಶ್, ಮಂಜುಳಾ ಲೋಕೇಶ್, ಎಚ್. ನೀಲೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಕೀಲರಾದ ಜಿ. ನಾಗರಾಜು, ಕೆ.ಎಸ್. ಶಿವಕುಮಾರ್ ಸೇರಿದಂತೆ ಹಲವಾರು ಗಣ್ಯರು ರಂಭಾಪುರಿ ಜಗದ್ಗುರುಗಳಿಂದ ಗೌರವ ಗುರುರಕ್ಷೆ ಸ್ವೀಕರಿಸಿದರು. ಜಿ.ಎಸ್. ಸಿದ್ಧರಾಜು ಸ್ವಾಗತಿಸಿದರು. ಓಂಕಾರಸ್ವಾಮಿ ನಿರೂಪಿಸಿದರು. ಆರ್. ಶಿವಕುಮಾರ್ ಮತ್ತು ಕುಟುಂಬ ವರ್ಗದವರು ಪೂಜಾ ಸೇವೆಯನ್ನು ಸಲ್ಲಿಸಿದರು.