Crime News: 17 ವರ್ಷದ ಬಾಲಕನ ಜತೆ ಓಡಿಹೋದ 27 ವರ್ಷದ ಇಬ್ಬರು ಮಕ್ಕಳ ತಾಯಿಯ ಬಂಧನ
ಹದಿ ಹರೆಯದ ಯುವಕನೊಂದಿಗೆ ಮಹಿಳೆಯೋರ್ವರು ಕೇರಳದಿಂದ ಕೊಲ್ಲೂರಿಗೆ ಓಡಿ ಬಂದಿದ್ದು, ವಸತಿಗೃಹದಲ್ಲಿ ಆತನ ಜತೆ ಉಳಿದಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ -

ತಿರುವನಂತಪುರಂ: ಕೇರಳದ (Kerala) ಆಲಪ್ಪುಳದ (Alappuzha) 27 ವರ್ಷದ ಇಬ್ಬರು ಮಕ್ಕಳ ತಾಯಿಯೊಬ್ಬಳು 17 ವರ್ಷದ ಅಪ್ರಾಪ್ತ ವಿದ್ಯಾರ್ಥಿಯ ಜತೆ ಓಡಿಹೋದ ಆಘಾತಕಾರಿ ಘಟನೆ ನಡೆದಿದೆ. ಸದ್ಯ ಕೇರಳ ಪೊಲೀಸರು ಆಕೆಯನ್ನು ಕೊಲ್ಲೂರಿನಲ್ಲಿ ಬಂಧಿಸಿದ್ದಾರೆ. ಸುಮಾರು 12 ದಿನಗಳ ಹಿಂದೆ ಬಾಲಕ ನಾಪತ್ತೆಯಾಗಿರುವ ಕುರಿತು ಆಲಪ್ಪುಳದ ಚೆರ್ತಲಾ ಬಳಿಯ ಪಲ್ಲಿಪುರಂನಲ್ಲಿ ದೂರು ದಾಖಲಾಗಿತ್ತು. ಬಂಧಿತ ಮಹಿಳೆಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ, ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅಪ್ರಾಪ್ತ ಬಾಲಕನನ್ನು ಕರೆದುಕೊಂಡು ಆಲಪ್ಪುಳದಿಂದ 600 ಕಿ.ಮೀ. ದೂರದ ಕರ್ನಾಟಕದ ಕೊಲ್ಲೂರಿನಲ್ಲಿ ಒಡಾಡಿದ್ದಳು. ಬಾಲಕನ ಪೋಷಕರು ಆತ ಕಾಣೆಯಾದ ಬಗ್ಗೆ ಚೆರ್ತಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆಯಲ್ಲಿ, ಮಹಿಳೆ ತಾನು ಬಾಲಕನೊಂದಿಗೆ ಜೀವನ ನಡೆಸಲು ಬಯಸಿದ್ದೆ. ಆದ್ದರಿಂದ ಪತಿಯನ್ನು ಬಿಟ್ಟು ಓಡಿಹೋದೆ ಎಂದು ತಿಳಿಸಿದ್ದಾಳೆ. ಆಕೆ ತನ್ನ ಮೊಬೈಲ್ ಫೋನ್ ಬಳಸದಿರುವುದರಿಂದ ಪೊಲೀಸರಿಗೆ ಆಕೆಯನ್ನು ಪತ್ತೆಹಚ್ಚುವುದು ಕಷ್ಟವಾಗಿತ್ತು.
ಬೆಂಗಳೂರಿಗೆ ತೆರಳಿರಬಹುದೆಂದು ಶಂಕಿಸಿದ ಪೊಲೀಸರು ಹಲವು ಸ್ಥಳಗಳಲ್ಲಿ ಶೋಧ ನಡೆಸಿದರೂ ವಿಫಲರಾದರು. ಎರಡು ದಿನಗಳ ಹಿಂದೆ ಮಹಿಳೆ ಕೊಲ್ಲೂರಿನಿಂದ ಆಲಪ್ಪುಳದ ಸಂಬಂಧಿಯೊಬ್ಬರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದರಿಂದ ಆಕೆಯ ಸ್ಥಳವನ್ನು ಪತ್ತೆ ಹಚ್ಚಲಾಯಿತು. ಸೋಮವಾರ ಆಕೆಯನ್ನು ಆಲಪ್ಪುಳಕ್ಕೆ ಕರೆತಂದು, ಚೆರ್ತಲಾದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಕೊಟ್ಟರಕ್ಕರ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬಾಲಕನನ್ನು ಆತನ ಪೋಷಕರಿಂದಿಗೆ ಕಳುಹಿಸಲಾಗಿದೆ.
ಈ ಸುದ್ದಿಯನ್ನು ಓದಿ: Crime News: ಇನ್‌ಸ್ಟಾಗ್ರಾಂನಲ್ಲಿ ಲವ್ವಿ-ಡವ್ವಿ; ಫಿಲ್ಟರ್ ಬಳಸಿ ವಯಸ್ಸು ಮುಚ್ಚಿಟ್ಟ ಮಹಿಳೆ- ಕೊನೆಗೆ ಪ್ರಿಯಕರನಿಂದಲೇ ಕೊಲೆಯಾದ್ಳು
ಬಾಲಕನ ಮೇಲೆ ಕೊಲ್ಲೂರಿನಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಇನ್ನೂ ದೃಢವಾಗಿಲ್ಲ. ಈ ಸಂಬಂಧದ ಆರಂಭ ಮತ್ತು ಅದರ ಸ್ವರೂಪದ ಬಗ್ಗೆ ತನಿಖೆ ಮುಂದುವರಿದಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದ ಮೂಲಕ ಆರಂಭವಾಗುವ ಸಂಬಂಧಗಳ ಅಪಾಯಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಆಲಪ್ಪುಳದ ಈ ಘಟನೆ ಸ್ಥಳೀಯ ಸಮುದಾಯದಲ್ಲಿ ಆಘಾತವನ್ನುಂಟು ಮಾಡಿದ್ದು, POCSO ಕಾಯ್ದೆಯಡಿ ಮುಂದಿನ ಕಾನೂನು ಕ್ರಮಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.