ಆಯತಪ್ಪಿ ರೈಲಿನಡಿ ಬೀಳುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ಪಾಯಿಂಟ್ಸ್‌ಮನ್; 10 ಸಾವಿರ ನಗದು ಬಹುಮಾನ ಘೋಷಿಸಿದ ಕೊಂಕಣ ರೈಲ್ವೆ
ಮುರುಡೇಶ್ವರ ನಿಲ್ದಾಣದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರ ಶ್ಲಾಘನೀಯ ಕರ್ತವ್ಯ ನಿಷ್ಠೆ ಮತ್ತು ಸಮಯಪ್ರಜ್ಞೆಯನ್ನು ಕೊಂಕಣ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಸಂತೋಷ್ ಕುಮಾರ್ ಝಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೇ ಸಿಬ್ಬಂದಿಗೆ 10,000 ನಗದು ಬಹುಮಾನವನ್ನು ಘೋಷಿಸಿದ್ದಾರೆ.
-
ಭಟ್ಕಳ: ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯುವ ವೇಳೆ ಕಾಲು ಜಾರಿ ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೊಂಕಣ ರೈಲ್ವೆಯ ಮುರುಡೇಶ್ವರ ನಿಲ್ದಾಣದ (Murdeshwar Railway Station) ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ (Ganapati Naik) ರಕ್ಷಣೆ ಮಾಡಿದ್ದು, ಇವರ ಸಮಯಪ್ರಜ್ಞೆ ಮತ್ತು ಸಾಹಸ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮುರುಡೇಶ್ವರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ರೈಲು ಸಂಖ್ಯೆ 16312 ಅಪ್ ಬೆಳಿಗ್ಗೆ 07:56 ರ ಸುಮಾರಿಗೆ ನಿಲ್ದಾಣದಿಂದ ಹೊರಡುತ್ತಿದ್ದಾಗ, ಮೊಹಮ್ಮದ್ ಗೌಫುರ್ (22) ಎಂಬ ಪ್ರಯಾಣಿಕನು ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಯತ್ನಿಸಿದ್ದಾನೆ. ಈ ವೇಳೆ ಆತ ಆಯತಪ್ಪಿ ರೈಲಿನಡಿ ಬೀಳುತ್ತಿದ್ದ. ಇದನ್ನು ತಕ್ಷಣವೇ ಗಮನಿಸಿದ ಆನ್-ಡ್ಯೂಟಿ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ (ಉದ್ಯೋಗಿ ಸಂಖ್ಯೆ: 6241), ಕ್ಷಣಾರ್ಧವೂ ತಡಮಾಡದೆ ಸ್ಥಳಕ್ಕೆ ಧಾವಿಸಿದ್ದಾರೆ. ಅತ್ಯಂತ ಧೈರ್ಯದಿಂದ ಪ್ರಯಾಣಿಕನನ್ನು ಗಟ್ಟಿಯಾಗಿ ಹಿಡಿದು, ಆತನ ಪ್ರಾಣವನ್ನು ರಕ್ಷಿಸಿದ್ದಾರೆ.
ಗಣಪತಿ ನಾಯ್ಕ್ ಅವರ ಈ ಶ್ಲಾಘನೀಯ ಕರ್ತವ್ಯ ನಿಷ್ಠೆ ಮತ್ತು ಸಮಯಪ್ರಜ್ಞೆಯನ್ನು ಕೊಂಕಣ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ (CMD) ಮತ್ತು ಅಧ್ಯಕ್ಷ ಸಂತೋಷ್ ಕುಮಾರ್ ಝಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಂಸ್ಥೆಯ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿದ ಗಣಪತಿ ನಾಯ್ಕ್ ಅವರಿಗೆ ₹10,000 ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಕೊಂಕಣ ರೈಲ್ವೆಯ ಕಾರವಾರದ ವಲಯ ಮೇಲ್ವಿಚಾರಕ ಸಂಜೀವ ಪೆಡನೇಕಾರ್ (AS/KAWR) ಸಿಎಂಡಿ ಅವರ ಪರವಾಗಿ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ₹10,000 ನಗದು ಪ್ರಶಸ್ತಿ ಹಾಗೂ ಶುಭ ಹಾರೈಕೆಗಳನ್ನು ಹಸ್ತಾಂತರಿಸಿದರು.
ಕೊಂಕಣ ರೈಲ್ವೆಯ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ (Manager Public Relations) ಕೆ. ಸುಧಾ ಕೃಷ್ಣಮೂರ್ತಿ ಅವರು ಪಾಯಿಂಟ್ಸ್‌ಮನ್ ಅವರ ಈ ಕಾರ್ಯ ಇಡೀ ರೈಲ್ವೆ ಇಲಾಖೆಗೆ ಹೆಮ್ಮೆ ತಂದಿದೆ ಎಂದು ತಿಳಿಸಿದ್ದಾರೆ.
ಪಾಯಿಂಟ್ಸ್ಮನ್ ಧೈರ್ಯಕ್ಕೆ ಶಾಸಕ ಮಂಕಾಳ ವೈದ್ಯ ಮೆಚ್ಚುಗೆ
ಮುರುಡೇಶ್ವರ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರ ಸಾಹಸಕ್ಕೆ ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಮತ ಕ್ಷೇತ್ರದ ಭಟ್ಕಳದ ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಚಲಿಸುವ ರೈಲಿನಿಂದ ಇಳಿಯಲು ಯತ್ನಿಸಿ, ಕಾಲು ಜಾರಿ ಬಿದ್ದು ರೈಲಿಡಿ ಸಿಲುಕುತ್ತಿದ್ದ ವ್ಯಕ್ತಿಯನ್ನು ರೈಲ್ವೆ ಸಿಬ್ಬಂದಿ ಆದಂತಹ ನಮ್ಮೂರಿನ ಗಣಪತಿ ನಾಯ್ಕ ಸಮಯಪ್ರಜ್ಞೆಯಿಂದ ಎಳೆದು ಅಪಾಯದಿಂದ ಪಾರು ಮಾಡಿದ್ದಾರೆ.
ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ರೈಲಿನ ಅಡಿಗೆ ಸಿಲುಕುವ ಸ್ಥಿತಿಯಲ್ಲಿದ್ದ ಅವರನ್ನು ರಕ್ಷಿಸಿರುವ ದೃಶ್ಯ ರೈಲ್ವೆ ನಿಲ್ದಾಣದ ಸಿ ಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಅವರ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಅಭಿನಂದನೆಗಳು. ದೇವರು ಅವರಿಗೆ ಸದಾ ಒಳಿತನ್ನೇ ಮಾಡಲಿ ಎಂದು ಆಶಿಸುವೆ ಎಂದು ತಿಳಿಸಿದ್ದಾರೆ.