Sirsi-Haveri Road: ರಸ್ತೆ ದುರಸ್ತಿಗಾಗಿ ಬೀದಿಗಿಳಿದ ಸಾವಿರಾರು ಸಾರ್ವಜನಿಕರು; ಶಿರಸಿ-ಹಾವೇರಿ ಹೈವೆ ಬಂದ್: ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್
Sirsi News: ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಅವ್ಯಸ್ಥೆಯಿಂದ ರೋಸಿ ಹೋದ ಸಾವಿರಾರು ಮಂದಿ ಮಂಗಳವಾರ (ಮೇ 5) ಶಿರಸಿಯ ಬಿಸಲಕೊಪ್ಪದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕಿಲೋ ಮೀಟರ್‌ಗಟ್ಟಲೆ ವಾಹನಗಳ ಸಾಲು ಕಂಡು ಬಂದಿದ್ದು ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು.
ಶಿರಸಿಯ ಬಿಸಿಲಕೊಪ್ಪದಲ್ಲಿ ಪ್ರತಿಭಟನೆ ನಡೆಯಿತು -
ಉತ್ತರ ಕನ್ನಡ, ಮೇ 5: ಕೆಸರು ಗದ್ದೆಯಂತಾದ ರಸ್ತೆ. ಅರ್ಧದಲ್ಲೇ ಬಾಕಿಯಾಗುವ ಬಸ್, ವಾಹನಗಳನ್ನು ತಳ್ಳುವ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರ ಪಾಡು ಶತ್ರುವಿಗೂ ಬೇಡ...ಇದು ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಸದ್ಯದ ಸ್ಥಿತಿ (Sirsi-Haveri Road). ಈ ರಸ್ತೆಯನ್ನೇ ಅವಲಂಬಿಸಿರುವ ಇಲ್ಲಿನ ಸ್ಥಳೀಯರು ಬೇಸತ್ತು ಹೋಗಿದ್ದು, ಪ್ರತಿಭಟನೆ ರೂಪದಲ್ಲಿ ಕಿಚ್ಚು ಹೊರ ಬಿದ್ದಿದೆ. ಹೌದು, ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಅವ್ಯಸ್ಥೆಯಿಂದ ರೋಸಿ ಹೋದ ಸಾವಿರಾರು ಮಂದಿ ಮಂಗಳವಾರ (ಮೇ 5) ಶಿರಸಿಯ ಬಿಸಲಕೊಪ್ಪದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು (Sirsi News). ಇದರಿಂದ ಕಿಲೋ ಮೀಟರ್‌ಗಟ್ಟಲೆ ವಾಹನಗಳ ಸಾಲು ಕಂಡು ಬಂದಿದ್ದು ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು.
ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಗೆ ಪ್ರತಿ ವರ್ಷ ಅಲ್ಪ ಸ್ವಲ್ಪ ಡಾಂಬರು ಹಾಕಿ ಪ್ಯಾಚ್ ವರ್ಕ್ ಮಾಡಲಾಗುತ್ತದೆ. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ಇದು ರಸ್ತೆಯಾಗಿ ಉಳಿದಿಲ್ಲ. ರಸ್ತೆಯ ಅವಶೇಷವಷ್ಟೇ ಬಾಕಿ ಉಳಿದಿದೆ. ಹೀಗಾಗಿ ಸಾವಿರಾರು ಸಾರ್ವಜನಿಕರು ಶಿರಸಿ ಹಾಗೂ ಹಾವೇರಿ ಮಧ್ಯೆ ಇರುವ ಬಿಸಲಕೊಪ್ಪದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಆ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ರೊಚ್ಚಿಗೆದ್ದ ಸಾರ್ವಜನಿಕರು
ರಸ್ತೆ ಕೆಲಸ ವಿಳಂಬ ಮತ್ತು ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಸ್ಥಳೀಯರು ಬಿಸಲಕೊಪ್ಪ ಬಳಿ ವಾಹನ ತಡೆದು, ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರ ಹಾಕಿದರು. ಯಾವ ವಾಹನಗಳಿಗೂ ಹೆದ್ದಾರಿಯಲ್ಲಿ ತೆರಳಲು ಅವಕಾಶ ನೀಡದೆ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ಬದುಕಿಗಾಗಿ ಹೋರಾಟ
'ಬದುಕಿಗಾಗಿ ಹೋರಾಟ' ಹೆಸರಿನಲ್ಲಿ ಬಿಸಲಕೊಪ್ಪ ಸರ್ಕಲ್‌ನಲ್ಲಿ ಈ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಜನರು ರಸ್ತೆ ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ತಕ್ಷಣ ಭೇಟಿ ನೀಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು.
ಜನಪ್ರತಿನಿಧಿ, ಗುತ್ತಿಗೆದಾರರ ವಿರುದ್ಧ ಆಕ್ರೋಶ
ಜನಪ್ರತಿನಿಧಿಗಳ, ಅಧಿಕಾರಿಗಳ ಗುತ್ತಿಗೆದಾರರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರನ ವಿರುದ್ಧ ಕೆಂಡಕಾರಿದರು. ಇದುವರೆಗೆ ಕ್ರಮ ಕೈಗೊಳ್ಳದ ಶಾಸಕರು, ಸಂಸದರು ಮತ್ತು ಅಧಿಕಾರಿಗಳ ಹೊಣೆಗೇಡಿತನಕ್ಕೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ವಿಶೇಷ ಎಂದರೆ ಈ ಹೋರಾಟಕ್ಕೆ ಪಕ್ಷಾತೀತವಾಗಿ ಜನ ಬೆಂಬಲ ದೊರೆಯಿತು.
ಶಿರಸಿ ಬಳಿ ಕೆಎಸ್‌ಆರ್‌ಟಿಸಿ- ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ತಾಳ್ಮೆ ಪರೀಕ್ಷಿಸಬೇಡಿ
ಬಂದ್ ಹಿನ್ನೆಲೆಯಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನಗಳ ಸಾಲು ಕಂಡು ಬಂತು. ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಪ್ರತಿಭಟನಾನಿರತರಿಂದ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಲಾಯಿತು. ಇದು ಆರಂಭ ಅಷ್ಟೆ, ಬಗ್ಗದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಜತೆಗೆ ಜಿಲ್ಲಾಧಿಕಾರಿ ಬಂದು ಸಮಸ್ಯೆ ಆಲಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ಸಂದೇಶವೂ ರವಾನಿಸಲಾಗಿದೆ.
ಶ್ರದ್ಧಾಂಜಲಿ ಅರ್ಪಣೆ
ಇದೇ ವೇಳೆ ಪ್ರತಿಭನಾನಿರತರು ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ ಅರ್ಪಿಸಿ, ಧಿಕ್ಕಾರ ಕೂಗಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಮೂಡಿದ್ದು, ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಎಸಿ ಚಂದ್ರಶೇಖರ್, ತಹಶೀಲ್ದಾರ್ ಪಟ್ಟರಾಜ ಗೌಡ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.