Akshay Mashelkar: ಶೈಕ್ಷಣಿಕ ಸಂಶೋಧನೆ; ಶಿರಸಿಯ ಯುವ ವಿಜ್ಞಾನಿ ಅಕ್ಷಯ್ ಮಶೇಲ್ಕರ್ ರಾಷ್ಟ್ರಮಟ್ಟದ ಗೌರವಕ್ಕೆ ಆಯ್ಕೆ
ಪ್ರಸ್ತುತ ಬೆಂಗಳೂರಿನ ಆರ್.ವಿ. ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಅಕ್ಷಯ್ ಮಶೆಲ್ಕರ್ ಅವರು, ಹಲವು ವರ್ಷಗಳಿಂದ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿಜ್ಞಾನ ಮತ್ತು ಗಣಿತ ಶಿಕ್ಷಣವನ್ನು ತಲುಪಿಸುವ ಉದ್ದೇಶದಿಂದ ಸಂಶೋಧನೆ ನಡೆಸುತ್ತಿದ್ದಾರೆ.
-
ಶಿರಸಿ (ಉತ್ತರ ಕನ್ನಡ): ಶಿರಸಿಯ ಯುವ ವಿಜ್ಞಾನಿ ಹಾಗೂ ಎಕ್ಸ್‌ಪೆರಿಮೈಂಡ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (Experimind Labs Pvt. Ltd) ಸಂಸ್ಥೆಯ ಸಂಸ್ಥಾಪಕ, ಶಿರಸಿ ಮೂಲದ ಅಕ್ಷಯ್ ಜಯವಂತ್ ಮಶೆಲ್ಕರ್ ಅವರು ನೀತಿ ಆಯೋಗದ ಅಟಲ್ ನವೋದ್ಯಮ ಮಿಷನ್ (Atal Innovation Mission - AIM) ವತಿಯಿಂದ ನೀಡಲಾಗುವ 'ಗ್ರಾಸ್‌ರೂಟ್ಸ್ ಇನೋವೇಟರ್ ರೆಕಗ್ನಿಷನ್–2026' (Grassroots Innovator Recognition - 2026) ರಾಷ್ಟ್ರ ಮಟ್ಟದ ಗೌರವಕ್ಕೆ ಆಯ್ಕೆಯಾಗಿದ್ದಾರೆ. ದೇಶದಾದ್ಯಂತ ಆಯ್ಕೆಯಾದ 26 ಗ್ರಾಸ್‌ರೂಟ್ಸ್ ನವೋದ್ಯಮಿಗಳಲ್ಲಿ ಅವರು ಒಬ್ಬರಾಗಿದ್ದಾರೆ.
ಶೈಕ್ಷಣಿಕ ಸಂಶೋಧನಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನ ಶಿಕ್ಷಣವನ್ನು ಹೆಚ್ಚು ಪರಿಣಾಮಕಾರಿ, ಅನುಭವಾತ್ಮಕ ಮತ್ತು ಸುಲಭಗೊಳಿಸುವ ನವೀನ ಸಂಶೋಧನೆ ಹಾಗೂ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿರುವ ಸಾಧನೆಯನ್ನು ಪರಿಗಣಿಸಿ ಈ ರಾಷ್ಟ್ರೀಯ ಗೌರವಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಸ್ತುತ ಬೆಂಗಳೂರಿನ ಆರ್.ವಿ. ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಅಕ್ಷಯ್ ಮಶೆಲ್ಕರ್ ಅವರು, ಹಲವು ವರ್ಷಗಳಿಂದ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿಜ್ಞಾನ ಮತ್ತು ಗಣಿತ ಶಿಕ್ಷಣವನ್ನು ತಲುಪಿಸುವ ಉದ್ದೇಶದಿಂದ ಸಂಶೋಧನೆ ನಡೆಸುತ್ತಿದ್ದಾರೆ.
ಅವರು ಗಣಿತ ಮತ್ತು ವಿಜ್ಞಾನ ಕಲಿಕೆಗೆ ನೆರವಾಗುವ ಶೈಕ್ಷಣಿಕ ಆಟಿಕೆಗಳು, ವರ್ಧಿತ ವಾಸ್ತವಿಕತೆ ಹಾಗೂ ಆಭಾಸಿ ವಾಸ್ತವಿಕತೆ ಆಧಾರಿತ ಕಲಿಕಾ ವಿಧಾನಗಳು, ಪ್ರಯೋಗಾಧಾರಿತ ವಿಜ್ಞಾನ-ತಂತ್ರಜ್ಞಾನ-ಎಂಜಿನಿಯರಿಂಗ್-ಗಣಿತ ಶಿಕ್ಷಣ ಸಾಧನಗಳು, ಕೃತಕ ಬುದ್ಧಿಮತ್ತೆ ಆಧಾರಿತ ಶೈಕ್ಷಣಿಕ ಉಪಕರಣಗಳು ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ನವೋದ್ಯಮ ಸಂಸ್ಕೃತಿಯನ್ನು ಬೆಳೆಸುವ ಹಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಅವರು ರೂಪಿಸಿರುವ 'ಜಿಯೋಮ್ಯಾಜಿಕ್' ಎಂಬ ಗಣಿತ ಶಿಕ್ಷಣ ಸಂಶೋಧನೆಗೆ ಇತ್ತೀಚೆಗೆ ನಾಲ್ಕು ಪೇಟೆಂಟ್‌ಗಳು ಲಭಿಸಿರುವುದು ಅವರ ಸಂಶೋಧನಾ ಸಾಧನೆಗೆ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ. ಗಣಿತವನ್ನು ವಿದ್ಯಾರ್ಥಿಗಳಿಗೆ ಆಟದ ಮೂಲಕ ಸುಲಭವಾಗಿ ಹಾಗೂ ಅನುಭವಾತ್ಮಕವಾಗಿ ಕಲಿಸುವ ಉದ್ದೇಶದಿಂದ ರೂಪಿಸಲಾದ ಈ ನವೀನ ಮಾದರಿಗೆ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಗೌರವ ಪ್ರದಾನ ಸಮಾರಂಭವು ಜುಲೈ 31ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿದ್ದು, ಭಾರತದ ಗೌರವಾನ್ವಿತ ರಾಷ್ಟ್ರಪತಿಯವರು ಅಕ್ಷಯ್ ಮಶೆಲ್ಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅಕ್ಷಯ್ ಮಶೆಲ್ಕರ್ ಅವರ ಈ ಸಾಧನೆ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದ್ದು, ವಿಜ್ಞಾನ, ಸಂಶೋಧನೆ, ನವೋದ್ಯಮ ಹಾಗೂ ಉದ್ಯಮಶೀಲತೆಯತ್ತ ಹೆಜ್ಜೆಯಿಡಲು ಬಯಸುವ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ. ಶಿಕ್ಷಣ, ವಿಜ್ಞಾನ ಸಂವಹನ ಹಾಗೂ ತಂತ್ರಜ್ಞಾನ ಆಧಾರಿತ ಕಲಿಕಾ ವ್ಯವಸ್ಥೆಯ ಅಭಿವೃದ್ಧಿಗೆ ಅವರು ಸಲ್ಲಿಸಿರುವ ಕೊಡುಗೆಗಳಿಗೆ ದೊರೆತಿರುವ ಈ ರಾಷ್ಟ್ರೀಯ ಮಾನ್ಯತೆ, ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆ ತರುವ ಅವರ ನಿರಂತರ ಪ್ರಯತ್ನಕ್ಕೆ ಸಂದ ಗೌರವವಾಗಿದೆ.