ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sadhana Sourabha: ವಿಶ್ವೇಶ್ವರ ಭಟ್ಟರಿಗೆ ಹುಟ್ಟೂರಿನಲ್ಲಿ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼ ಪ್ರದಾನ

Vishweshwar Bhat: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ʼಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ ಮತ್ತು ರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ ಆಯೋಜಿಸಲಾಗಿತ್ತು. ಈ ವೇಳೆ ವಿಶ್ವವಾಣಿ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರಿಗೆ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼಯನ್ನು ಪ್ರದಾನ ಮಾಡಲಾಗಿದೆ.

ವಿಶ್ವೇಶ್ವರ ಭಟ್ಟರಿಗೆ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼ ಪ್ರದಾನ

ಕುಮಟಾದಲ್ಲಿ ಸೌರಭ ಸಂಸ್ಥೆಯಿಂದ ವಿಶ್ವೇಶ್ವರ ಭಟ್‌ ಅವರಿಗೆ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿ ಪ್ರದಾನ. -

Prabhakara R
Prabhakara R Apr 26, 2026 7:52 PM

ಕುಮಟಾ: ಸೌರಭ ಸಂಸ್ಥೆ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಾಧನಾ ಸೌರಭ (Sadhana Sourabha) ಕಾರ್ಯಕ್ರಮದಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ (Vishweshwar Bhat) ಅವರಿಗೆ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼಯನ್ನು ಪ್ರದಾನ ಮಾಡಲಾಯಿತು.

ತಮ್ಮ ಅಪೂರ್ವ ಸಾಧನೆಯಿಂದ ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಗೌರವವನ್ನು ಜಗದಗಲ ವಿಸ್ತರಿಸಿದ, ಸಾಂಸ್ಕೃತಿಕ ಶ್ರೇಷ್ಠ ಕಿಂಕರರೊಬ್ಬರವರಿಗೆ ಸೌರಭ ಸಂಸ್ಥೆ ವತಿಯಿಂದ ʼರಾಷ್ಟ್ರೀಯ ಸೌರಭ ಸಮ್ಮಾನ್ʼ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದೆ. ಈ ವರ್ಷ ಈ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮೂರೂರಿನ ವಿಶ್ವೇಶ್ವರ ಭಟ್ಟರು ಭಾಜನರಾಗಿದ್ದಾರೆ.



ಹುಟ್ಟಿದ ಊರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯ ಸಂಗತಿ: ಕಾಗೇರಿ

ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ಸೌರಭ ಸಮ್ಮಾನ್‌ ಪ್ರಶಸ್ತಿಯನ್ನು ವಿಶ್ವೇಶ್ವರ ಭಟ್ಟರಿಗೆ ನೀಡಿರುವುದು ಸಂತಸ ತಂದಿದೆ. ಹುಟ್ಟಿದ ಊರಿನಲ್ಲಿ ಪ್ರಶಸ್ತಿ ಬರುವುದು ಹೆಮ್ಮೆಯ ಸಂಗತಿಯಾಗಿದೆ. ಇಡೀ ಜಗತ್ತನ್ನು ಸುಲಲಿತವಾಗಿ ಪ್ರವಾಸ ಮಾಡಿ, ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿರುವ ಕೀರ್ತಿ ಭಟ್ಟರಿಗೆ ಸಲ್ಲುತ್ತದೆ. ಅವರಿಗೆ ಆ ಸರಸ್ವತಿ ಅಂತಹ ಬರವಣಿಗೆಯ ಶಕ್ತಿ ನೀಡಿದ್ದಾಳೆ. ಅವರ ಪ್ರತಿಭೆಯನ್ನು ನಾವು ಮೆಚ್ಚಲೇಬೇಕು. ಅವರು ಎಲ್ಲರ ಜತೆಗೂ ಉತ್ತಮ ಸ್ನೇಹಿತರಾಗಿದ್ದಾರೆ.

ಪ್ರಧಾನಿ ಮೋದಿ, ವಾಜಪೇಯಿ ಅವರ ಬಗ್ಗೆಯೂ ಪುಸ್ತಕ ಸೇರಿ ನೂರಕ್ಕೂ ಹೆಚ್ಚಿನ ಪುಸ್ತಕ ಬರೆದಿದ್ದಾರೆ. ಇತ್ತೀಚೆಗೆ ಹವ್ಯಕ ಭಾಷೆ ಅಕಾಡೆಮಿ ಸ್ಥಾಪನೆಯಾಗುವಲ್ಲಿ ಅವರ ಪ್ರಭಾವ ಇದೆ. ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರರಾದ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆ ಸಲ್ಲಿಸುವೆ ಎಂದು ಸಂಸದರು ತಿಳಿಸಿದರು.



ಭಟ್ಟರ ಪುಸ್ತಕಗಳಲ್ಲಿ ಬಹಳ ಪ್ರಬುದ್ಧತೆ ಇದೆ: ರಾಮನಾರಾಯಣ ಜೋಯಿಸ್

ಶ್ರೀ ಕ್ಷೇತ್ರ ಹೊರನಾಡಿನ ರಾಮನಾರಾಯಣ ಜೋಯಿಸ್ ಅವರು ಮಾತನಾಡಿ, ನಿಜವಾದ ಜ್ಞಾನ, ವಿದ್ಯೆ ಯಾರಲ್ಲಿ ಇರುತ್ತದೋ ಅವರಲ್ಲಿ ವಿನಯತೆ ತಾನಾಗಿಯೇ ಬರುತ್ತದೆ. ಅದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ. ಅಲ್ಲದೇ ಎಲ್ಲ ರೀತಿಯ ಐಶ್ವರ್ಯ ಲಭಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ವಿಶ್ವೇಶ್ವರ ಭಟ್ಟರು.

ಭಟ್ಟರು ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದಿದ್ದು, ಪ್ರಧಾನಿ, ರಾಷ್ಟ್ರಪತಿಗಳಿಂದ ಹಿಡಿದು ಎಲ್ಲರ ಜತೆಯೂ ಕೆಲಸ ಮಾಡಿ, ಪ್ರಪಂಚ ಏನು ಎಂದು ನೋಡಿದ್ದಾರೆ. ಇನ್ನು ವೈಎನ್‌ಕೆ ಅವರ ಜತೆ ಕೆಲಸ ಮಾಡಿ ಪತ್ರಿಕೆ ಏನು ಎಂಬುವುದು ತಿಳಿದುಕೊಂಡಿದ್ದಾರೆ. 18 ವರ್ಷಕ್ಕೆ ಪತ್ರಿಕೆಯ ಸಂಪಾದಕನಾದ ಅಂದ ಕೂಡಲೇ ಪತ್ರಕರ್ತ ಆಗುವುದಿಲ್ಲ. ಜೀವನದ ಮಜಲುಗಳನ್ನು ದಾಟಿಕೊಂಡು ಬರುವುದು ಅನುಭವವಾಗಿದೆ. ಇನ್ನು ಇವರ ಪುಸ್ತಕಗಳಲ್ಲಿ ಬಹಳ ಪ್ರಬುದ್ಧತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



ಕಾರ್ಯಕ್ರಮದಲ್ಲಿ ಸೌರಭ ಅಧ್ಯಕ್ಷ ಶ್ರೀಕಾಂತ ಕೆ. ಭಟ್ಟ, ಉಪಾಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಅರುಣ್ ಎನ್‌.ಹೆಗಡೆ, ಮಾಜಿ ಸಂಸದ ಹಾಗೂ ಖ್ಯಾತ ಅಂಕಣಕಾರ ಪತ್ರಕರ್ತ ಪ್ರತಾಪ್‌ ಸಿಂಹ, ಜನಸೇವಾ ಟ್ರಸ್ಟ್‌ ಪ್ರವರ್ತಕ ವಸಂತ ಗಿಳಿಯಾರ್‌, ಹಿರಿಯ ಪತ್ರಕರ್ತ ರಾಜು ಅಡಕಳ್ಳಿ, ನಾಗರಿಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಪತ್ರಕರ್ತ ನಂಜನಗೂಡು ಮೋಹನ್, ಅಂಕಣಕಾರ ಕಿರಣ್ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.