ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral News: ಕೇರಳಂ ಮೀರಿಸುವ ಹೊನ್ನಾವರ ಹಿನ್ನೀರು ಸ್ವರ್ಗ; ಭೇಟಿ ನೀಡುವಂತೆ ಪ್ರವಾಸಿಗರಿಗೆ ಆನಂದ್ ಮಹೀಂದ್ರಾ ಕರೆ

Anand Mahindra: ಉದ್ಯಮಿ ಆನಂದ್ ಮಹೀಂದ್ರಾ ತಮ್ಮ #SundayWanderer ಪೋಸ್ಟ್‌ನಲ್ಲಿ ಉತ್ತರ ಕನ್ನಡದ ಹೊನ್ನಾವರ ಹಿನ್ನೀರಿನ ಅದ್ಭುತ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಕೇರಳಂನ ಹಿನ್ನೀರಿಗೆ ಸಮಾನವಾಗಿ ಪ್ರಕೃತಿ ಸೊಬಗು ಹೊಂದಿರುವ ಈ ಪ್ರದೇಶವು ಮಂಗ್ರೋವ್ ಕಾಡುಗಳು, ಪ್ರಶಾಂತ ಜಲಮಾರ್ಗಗಳು ಮತ್ತು ಜೀವವೈವಿಧ್ಯತೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕೇರಳಕ್ಕೂ ಟಕ್ಕರ್ ಕೊಡುವ ಹೊನ್ನಾವರ ಹಿನ್ನೀರು

ಸಾಂದರ್ಭಿಕ ಚಿತ್ರ -

Profile
Sushmitha Jain Jun 15, 2026 10:03 PM

ಹೊನ್ನಾವರ, ಜೂ. 15: ಭಾರತದ ಪ್ರವಾಸೋದ್ಯಮ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಕೇರಳಂನ ಹಿನ್ನೀರು, ಗೋವಾದ ಬೀಚ್‌ಗಳು ಅಥವಾ ಹಿಮಾಚಲ ಪ್ರದೇಶದ ಪರ್ವತಗಳು. ಆದರೆ ದೇಶದ ಅತ್ಯಂತ ಸುಂದರವಾದ ಜಲರಾಶಿ ಪ್ರವಾಸಿಗರ ಕಣ್ಣಿಗೆ ಬೀಳದೆ ದೂರ ಉಳಿದಿದೆ ಎಂದು ದೇಶದ ಪ್ರಮುಖ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಜನಪ್ರಿಯ #SundayWanderer ಸರಣಿಯ ಭಾಗವಾಗಿ ಅವರು ಕರ್ನಾಟಕದ ಕರಾವಳಿ ಪಟ್ಟಣವಾದ ಹೊನ್ನಾವರದ ಮನಮೋಹಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹೊನ್ನಾವರವು ಅತ್ಯಂತ ವಿಶಿಷ್ಟ ಭೌಗೋಳಿಕ ಸೌಂದರ್ಯವನ್ನು ಹೊಂದಿದೆ. ವಿಶ್ವವಿಖ್ಯಾತ ಜೋಗ ಜಲಪಾತವನ್ನು ಸೃಷ್ಟಿಸುವ ಶರಾವತಿ ನದಿಯು ಅರಬ್ಬೀ ಸಮುದ್ರವನ್ನು ಸೇರುವ ಮುನ್ನ ಇಲ್ಲಿ ಸುಂದರ ಹಿನ್ನೀರನ್ನು ನಿರ್ಮಿಸುತ್ತದೆ. ಈ ಪ್ರದೇಶದ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿರುವ ಮಹೀಂದ್ರಾ, "ನಾವು ಯಾವಾಗಲೂ ಕೇರಳದ ಹಿನ್ನೀರನ್ನು ಕೊಂಡಾಡುತ್ತೇವೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ಅಷ್ಟೇ ಗಮನ ಸೆಳೆಯುವಂತಹ ಗುಪ್ತ ರತ್ನ ಅಡಗಿದೆ" ಎಂದು ಬರೆದಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರಾ ಅವರ ಎಕ್ಸ್‌ ಪೋಸ್ಟ್‌:



ಹೊನ್ನಾವರವು ಕೇರಳಂನ ಹಿನ್ನೀರಿಗೆ ಪ್ರಬಲ ಪೈಪೋಟಿ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಹೌಸ್‌ಬೋಟ್‌ಗಳ ಗದ್ದಲ ಹಾಗೂ ಜನದಟ್ಟಣೆಯ ಪ್ರವಾಸಿ ತಾಣಗಳಿಗಿಂತ ಭಿನ್ನವಾಗಿ, ಇಲ್ಲಿ ದಟ್ಟವಾದ ತೆಂಗಿನ ತೋಟಗಳು ಮತ್ತು ಮಂಗ್ರೋವ್ (ಕಂಡ್ಲಾ) ಕಾಡುಗಳಿಂದ ಆವೃತವಾದ ಪ್ರಶಾಂತ ಜಲಮಾರ್ಗಗಳಿವೆ. ಪಕ್ಷಿ ವೀಕ್ಷಣೆ, ಛಾಯಾಗ್ರಹಣ ಮತ್ತು ಪ್ರಕೃತಿ ಪ್ರವಾಸವನ್ನು ಇಷ್ಟಪಡುವವರಿಗೆ ಇದು ಸೂಕ್ತ ತಾಣ.

ದೈಹಿಕ ಶಿಕ್ಷಣ ಶಿಕ್ಷಕರ ಭರ್ತಿ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿ 10 ಬೇಡಿಕೆಗಳ ಈಡೇರಿಕೆಗೆ ಸಿಎಂಗೆ ಮನವಿ

ನೈಸರ್ಗಿಕ ಸೌಂದರ್ಯ

ಚಿತ್ರಗಳಲ್ಲಿ ಕಾಣಿಸುವಂತೆ, ಹೊನ್ನಾವರದ ಕಿರಿದಾದ ಜಲಮಾರ್ಗಗಳು ಪ್ರವಾಸಿಗರಿಂದ ತೊಂದರೆಗೊಳಗಾಗದೆ ನೈಸರ್ಗಿಕ ಸೊಬಗನ್ನು ಉಳಿಸಿಕೊಂಡಿವೆ. ಕೇವಲ ಸೌಂದರ್ಯ ಮಾತ್ರವಲ್ಲದೆ, ಕರಾವಳಿ ಸವೆತ, ಬಿರುಗಾಳಿ ಮತ್ತು ಪ್ರವಾಹಗಳ ವಿರುದ್ಧ ನೈಸರ್ಗಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುವ ಕಂಡ್ಲಾ ಕಾಡುಗಳು ಇಲ್ಲಿನ ಪರಿಸರ ವ್ಯವಸ್ಥೆಯನ್ನು ಶ್ರೀಮಂತಗೊಳಿಸಿವೆ. ಜೀವವೈವಿಧ್ಯತೆಯಿಂದ ತುಂಬಿರುವ ಈ ಪರಿಸರವು ಪ್ರಕೃತಿಯ ಅತ್ಯಂತ ಅಮೂಲ್ಯ ರಕ್ಷಣಾ ಕವಚವಾಗಿದೆ ಎಂದು ಪರಿಸರವಾದಿಗಳು ಬಣ್ಣಿಸುತ್ತಾರೆ.

ಹೊನ್ನಾವರಕ್ಕೆ ಭೇಟಿ ನೀಡುವ ಪ್ರವಾಸಿಗರು ಹಿನ್ನೀರಿನ ದೋಣಿ ವಿಹಾರ, ಮಂಗ್ರೋವ್ ಪ್ರವಾಸಗಳು, ಪಕ್ಷಿ ವೀಕ್ಷಣೆ, ಸ್ಥಳೀಯ ಕರಾವಳಿ ಆಹಾರ ಸವಿಯುವುದರ ಜತೆ ಹತ್ತಿರದ ಬೀಚ್ ಹಾಗೂ ಜೋಗ ಜಲಪಾತಕ್ಕೂ ಭೇಟಿ ನೀಡಬಹುದು. ವಿಶೇಷವಾಗಿ ಮುಂಗಾರು ಮಳೆಯ ಸಮಯದಲ್ಲಿ ಮತ್ತು ಮಳೆಯ ನಂತರ ಈ ಜಲಮಾರ್ಗಗಳು ತುಂಬಿ ಹರಿಯುವಾಗ ಇಲ್ಲಿನ ಪ್ರಕೃತಿ ಹಸಿರಾಗಿ ಕಂಗೊಳಿಸುತ್ತದೆ. ಪ್ರಸಿದ್ಧ ಪ್ರವಾಸಿ ತಾಣಗಳ ಗದ್ದಲದಿಂದ ದೂರವಿದ್ದು, ಪ್ರಕೃತಿಯ ಮಡಿಲಿನಲ್ಲಿ ಶಾಂತಿ ಹುಡುಕುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಹೊನ್ನಾವರ ಅತ್ಯುತ್ತಮ ಆಯ್ಕೆ ಎನಿಸಿಕೊಂಡಿದೆ. ಆನಂದ್ ಮಹೀಂದ್ರಾ ಅವರ ಈ ಪೋಸ್ಟ್ ಕರಾವಳಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಭರವಸೆ ಮೂಡಿಸಿದೆ.