ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vijayanagara News: ವಾಸಂತಿದೇವಿ ಬಲ್ಡೋಟ ರಕ್ತಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ

Vijayanagara News: ಅಭೆರಾಜ್ ಬಲ್ಡೋಟ ಫೌಂಡೇಶನ್ ವತಿಯಿಂದ ಅಭೆರಾಜ್ ಎಚ್. ಬಲ್ಡೋಟ 2001ರಲ್ಲಿ ಹೊಸಪೇಟೆ ನಗರದಲ್ಲಿ ಸ್ಥಾಪಿಸಿದ ವಾಸಂತಿದೇವಿ ಬಲ್ಡೋಟ ರಕ್ತಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮ ಜರುಗಿತು. ಡಾ. ನರೇಂದ್ರ ಕುಮಾರ್ ಎ. ಬಲ್ಡೋಟ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.

ವಾಸಂತಿದೇವಿ ಬಲ್ಡೋಟ ರಕ್ತಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ

-

Profile
Siddalinga Swamy Oct 20, 2026 8:51 PM

ಹೊಸಪೇಟೆ: ಸಾಮಾಜಿಕ ಸೇವೆ ಹಾಗೂ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದ ಅಭೆರಾಜ್ ಬಲ್ಡೋಟ ಅವರು ಹೊಸಪೇಟೆ ಹಾಗೂ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತುರ್ತು ಸಂದರ್ಭಗಳಲ್ಲಿ ರಕ್ತ ಸುಲಭವಾಗಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ 2001ರಲ್ಲಿ ಈ ರಕ್ತಕೇಂದ್ರವನ್ನು ಸ್ಥಾಪಿಸಿದರು ಎಂದು ಡಾ. ನರೇಂದ್ರ ಕುಮಾರ್ ಎ. ಬಲ್ಡೋಟ ತಿಳಿಸಿದರು.

ಅಭೆರಾಜ್ ಬಲ್ಡೋಟ ಫೌಂಡೇಶನ್ ವತಿಯಿಂದ ಅಭೆರಾಜ್ ಎಚ್. ಬಲ್ಡೋಟ 2001ರಲ್ಲಿ ಹೊಸಪೇಟೆ ನಗರದಲ್ಲಿ ಸ್ಥಾಪಿಸಿದ ವಾಸಂತಿದೇವಿ ಬಲ್ಡೋಟ ರಕ್ತಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಡಾ. ನರೇಂದ್ರ ಕುಮಾರ್ ಎ. ಬಲ್ಡೋಟ ಉದ್ಘಾಟಿಸಿ, ಅವರು ಮಾತನಾಡಿದರು.

Hosapete News

ರಕ್ತಕೇಂದ್ರ ಸ್ಥಾಪನೆಯ ಮೊದಲು ರಕ್ತದ ತುರ್ತು ಅವಶ್ಯಕತೆ ಎದುರಾದಾಗ ಬಳ್ಳಾರಿ, ಹುಬ್ಬಳ್ಳಿ ಹಾಗೂ ದಾವಣಗೆರೆ ನಗರಗಳನ್ನು ಅವಲಂಬಿಸಬೇಕಾಗಿತ್ತು. ಆದರೆ ಈ ರಕ್ತಕೇಂದ್ರದ ಸ್ಥಾಪನೆಯಿಂದ ಅಪಘಾತಕ್ಕೀಡಾದವರು, ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವ ಮಹಿಳೆಯರು ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವವರು ಸೇರಿದಂತೆ ಅನೇಕ ರೋಗಿಗಳಿಗೆ ಸ್ಥಳೀಯವಾಗಿಯೇ ರಕ್ತ ದೊರೆಯುವಂತಾಗಿದೆ. ಈ ಮೂಲಕ ರಕ್ತಕೇಂದ್ರವು ಜನರ ಜೀವ ಉಳಿಸುವ ಮಹತ್ವದ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.

ರಕ್ತಕೇಂದ್ರದ ಸೇವೆಗೆ ಸಹಕರಿಸುತ್ತಿರುವ ರಕ್ತದಾನಿಗಳು, ಹೊಸಪೇಟೆ ನಗರದ ನಾಗರಿಕರು, ವಿವಿಧ ಆಸ್ಪತ್ರೆಗಳ ವೈದ್ಯರು, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಬೆಳ್ಳಿ ಹಬ್ಬದ ಅಂಗವಾಗಿ ರಕ್ತಕೇಂದ್ರವನ್ನು ಅತ್ಯಾಧುನಿಕ ಉಪಕರಣಗಳು ಹಾಗೂ ಅಗತ್ಯ ಸೌಲಭ್ಯಗಳೊಂದಿಗೆ ನವೀಕರಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಜನರಿಗೆ ಗುಣಮಟ್ಟದ ಸೇವೆ ನೀಡಲು ಬದ್ಧವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರಶ್ಮಿ ಎಸ್. ಬಲ್ಡೋಟ, ಕಳೆದ 25 ವರ್ಷಗಳಲ್ಲಿ ವಾಸಂತಿದೇವಿ ಬಲ್ಡೋಟ ರಕ್ತಕೇಂದ್ರದ ಮೂಲಕ ಅಗತ್ಯವಿರುವವರಿಗೆ 1,28,834 ಯುನಿಟ್ ರಕ್ತವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಅಭೆರಾಜ್ ಎಚ್. ಬಲ್ಡೋಟ ಹಾಗೂ ವಾಸಂತಿದೇವಿ ಬಲ್ಡೋಟ ಅವರು ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಮನಗಂಡು ಈ ರಕ್ತಕೇಂದ್ರವನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ರಕ್ತಕೇಂದ್ರವು ಗುಣಮಟ್ಟದ ಸೇವೆ ನೀಡುತ್ತಾ ಜನರ ವಿಶ್ವಾಸ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ. ಸಾರ್ವಜನಿಕರ ಸಹಕಾರ ಹಾಗೂ ರಕ್ತದಾನಿಗಳ ಉದಾರ ಮನೋಭಾವವೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದರು.‌

ರಕ್ತಕೇಂದ್ರದಲ್ಲಿ ಲಭ್ಯವಿರುವ ಆಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ನೆರವಿನಿಂದ ದಾನಿಯಿಂದ ಸಂಗ್ರಹಿಸಿದ ರಕ್ತವನ್ನು ಕೆಂಪು ರಕ್ತಕಣಗಳು, ಪ್ಲಾಸ್ಮಾ ಮತ್ತು ಪ್ಲೇಟ್ಲೆಟ್ ಘಟಕಗಳಾಗಿ ಬೇರ್ಪಡಿಸಿ, ಅಗತ್ಯಕ್ಕೆ ಅನುಗುಣವಾಗಿ ವಿವಿಧ ರೋಗಿಗಳಿಗೆ ಬಳಸಬಹುದಾಗಿದೆ. ಇದರಿಂದ ಒಬ್ಬ ರಕ್ತದಾನಿಯ ರಕ್ತವು ಮೂರು ಜನರ ಜೀವ ಉಳಿಸಲು ಸಾಧ್ಯವಾಗಿದೆ. ಬೆಳ್ಳಿ ಹಬ್ಬದ ಅಂಗವಾಗಿ ರಕ್ತಕೇಂದ್ರವನ್ನು ಆಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮ ಆರೋಗ್ಯ ಸೇವೆ ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಸಂತೋಷ್ ಕೆ.ಎಂ. ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ. ಸಚಿನ್ ಬಿ. ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲ್ಡೋಟ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಶ್ವಿನ್ ಕುಮಾರ್ ಸ್ವಾಗತಿಸಿದರು. ಖುಷ್ಬೂ ನಿರೂಪಿಸಿದರು. ಡಾ. ಬಾಗ್ಮಿ ಪಾಂಡಾ ವಂದಿಸಿದರು‌.

BSA Gold Star 650 Bike: ಹಬ್ಬದ ಸೀಸನ್‌ಗೆ ರಾಯಲ್ ಎಂಟ್ರಿ: 'ಬಿಎಸ್‌ಎ ಗೋಲ್ಡ್ ಸ್ಟಾರ್ 650' ಬೈಕ್‌ನ 2 ಹೊಸ ಎಡಿಷನ್‌ಗಳು ಬಿಡುಗಡೆ, ದರ ಎಷ್ಟು?

ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೇಣಿಕ್ ಕುಮಾರ್ ಬಲ್ಡೋಟ, ಚಿತ್ರದೇವಿ ಬಲ್ಡೋಟ, ನಗರದ ವಿವಿಧ ಆಸ್ಪತ್ರೆಗಳ ವೈದ್ಯರು, ರಕ್ತದಾನಿಗಳು, ಬಲ್ಡೋಟ ಸಮೂಹದ ಹಿರಿಯ ಅಧಿಕಾರಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.