ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ; ನಕಲಿ ಡಿಎಸ್‌ಪಿ ಹೆಡೆಮುರಿ ಕಟ್ಟಿದ ವಿಜಯಪುರ ಖಾಕಿ
Vijayapura News: ತಾನು ಡಿಎಸ್‌ಪಿ ಎಂದು ನಂಬಿಸಿ, ಉದ್ಯೋಗ ಕೊಡಿಸುವುದಾಗಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಕಳೆದ 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
-
ವಿಜಯಪುರ: ತನ್ನನ್ನು ತಾನು ಡಿಎಸ್‌ಪಿ ಎಂದು ಪರಿಚಯಿಸಿಕೊಂಡು, ನಿರುದ್ಯೋಗಿ ಯುವಕರಿಗೆ ಪೊಲೀಸ್ ಹಾಗೂ ಜೈಲರ್ ನೌಕರಿ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ಆರೋಪಿಯನ್ನು ವಿಜಯಪುರ (Vijayapura News) ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು ಬಂಧಿತನನ್ನು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ವರಗೋಡದಿನ್ನಿ ನಿವಾಸಿ ಗ್ಯಾನನಗೌಡ @ ಜ್ಞಾನಗೌಡ @ ಗಣೇಶ @ ಸಿ. ಸಂಪತ್‌ಕುಮಾರ ಪಾಟೀಲ (31) ಎಂದು ಗುರುತಿಸಲಾಗಿದೆ.
ಕಳೆದ 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ತಿಪ್ಪರೆಡ್ಡಿ ನೇತೃತ್ವದ ವಿಶೇಷ ತಂಡ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಲ್ಮೆಟ್‌ನಿಂದ ಹೊಡೆದು ಪತ್ನಿಯನ್ನೇ ಕೊಲೆಗೈದ ಗಂಡ!
ಹುಬ್ಬಳ್ಳಿ: ಪತ್ನಿಯನ್ನು ಹೆಲ್ಮೆಟ್‌ನಿಂದ ಹೊಡೆದು ಪತಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ಹೊರವಲಯ ತಾರಿಹಾಳ ಗ್ರಾಮದಲ್ಲಿ ನಡೆದಿದೆ. ಮೂಲತಃ ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ ನಾಗರತ್ನ ಹಳೆಮನಿ (19) ಕೊಲೆಯಾದ ಪತ್ನಿ. ಶಿವರಾಜ್ ಕೊಲೆ ಮಾಡಿದ ಪತಿ ಎನ್ನಲಾಗಿದೆ.
ಕಳೆದ ಫೆಬ್ರವರಿಯಲ್ಲಿ ವಿವಾಹವಾಗಿದ್ದ ಈ ದಂಪತಿ ತಾರಿಹಾಳ ಗ್ರಾಮದಲ್ಲಿ ವಾಸವಾಗಿದ್ದರು. ಇಂದು ಬೆಳಗ್ಗೆ ಗಂಡ-ಹೆಂಡತಿ ನಡುವಿನ ವಾಗ್ವಾದ ಶುರುವಾಗಿತ್ತು. ಬಳಿಕ ಗಲಾಟೆ ತಾರಕಕ್ಕೇರಿದ್ದು, ಪತಿ ಶಿವರಾಜ್ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ನಾಗರತ್ನ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಎಸ್‌ಪಿ ಗುಂಜನ್ ಆರ್ಯ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕೊಲೆಗೆ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.