ಪ್ರೊ. ಶರದ್ ಜೋಶಿ ನೇತೃತ್ವದ ನೀರಾವರಿ ತಜ್ಞರ ತಂಡದಿಂದ ಆಲಮಟ್ಟಿ ಜಲಾಶಯದ ಸುರಕ್ಷತೆ ಪರಿಶೀಲನೆ
Almatti Reservoir: ಪ್ರೊ. ಶರದ್ ಜೋಶಿ ನೇತೃತ್ವದ ಎಂಟು ಜನ ನೀರಾವರಿ ತಜ್ಞರ ತಂಡ ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಆಲಮಟ್ಟಿ ಜಲಾಶಯದ ಸಮಗ್ರ ಸುರಕ್ಷತಾ ಪರಿಶೀಲನೆ ನಡೆಸಿತು. ಈ ಕುರಿತ ವಿವರ ಇಲ್ಲಿದೆ.
-
ಆಲಮಟ್ಟಿ, ಆ.20: ಅಣೆಕಟ್ಟು ಸುರಕ್ಷತಾ ಕಾಯ್ದೆ–2021ರ ಅನ್ವಯ ಪ್ರೊ. ಶರದ್ ಜೋಶಿ ನೇತೃತ್ವದ ಎಂಟು ಜನ ನೀರಾವರಿ ತಜ್ಞರ ತಂಡ ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಆಲಮಟ್ಟಿ ಜಲಾಶಯದ (Almatti Reservoir) ಸಮಗ್ರ ಸುರಕ್ಷತಾ ಪರಿಶೀಲನೆ ನಡೆಸಿತು. ಕೇಂದ್ರ ಸರ್ಕಾರ ಗುರುತಿಸಿರುವ ವಿವಿಧ ಮಾನದಂಡಗಳ ಆಧಾರದಲ್ಲಿ ಜಲಾಶಯದ ಬಾಳಿಕೆ, ನೀರಿನ ಸೋರಿಕೆ, ಭೂಕಂಪ ನಿರೋಧಕ ಸಾಮರ್ಥ್ಯ, ಗೇಟ್‌ಗಳ ಕಾರ್ಯಕ್ಷಮತೆ, ಸಿವಿಲ್ ಕಾಮಗಾರಿಗಳು ಹಾಗೂ ಕಾಫರ್ ಜಲಾಶಯಗಳ ಗುಣಮಟ್ಟ ಸೇರಿದಂತೆ ಹಲವು ಅಂಶಗಳನ್ನು ತಜ್ಞರು ಪರಿಶೀಲಿಸಿದರು.
ಪರಿಶೀಲನಾ ಸಮಿತಿಯ ಅಧ್ಯಕ್ಷ ಪ್ರೊ. ಶರದ್ ಜೋಶಿ ಮಾತನಾಡಿ, ಜಲಾಶಯಗಳ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ಕಟ್ಟಡವೊಂದು ಕುಸಿದರೆ ಹಾನಿ ಸೀಮಿತವಾಗಿರಬಹುದು. ಆದರೆ ಜಲಾಶಯಕ್ಕೆ ಹಾನಿಯಾದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಣೆಕಟ್ಟು ಸುರಕ್ಷತಾ ಕಾಯ್ದೆ–2021 ಜಾರಿಗೆ ತಂದಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ಜಲಾಶಯಗಳ ಸಮಗ್ರ ಸುರಕ್ಷತಾ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ ಎಂದರು.
ಆಲಮಟ್ಟಿ ಜಲಾಶಯದ ಗುಣಮಟ್ಟ ಉತ್ತಮವಾಗಿದ್ದು, ಅದರ ಸುರಕ್ಷತೆ ಹಾಗೂ ಸಾಮರ್ಥ್ಯವನ್ನು ಮತ್ತಷ್ಟು ಸುಧಾರಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪರಿಶೀಲಿಸಲಾಗಿದೆ. ಒಳಹರಿವು ಮತ್ತು ಹೊರಹರಿವಿನ ಮೇಲ್ವಿಚಾರಣೆಯಲ್ಲಿ ಬಳಸಬಹುದಾದ ನೂತನ ತಂತ್ರಜ್ಞಾನಗಳ ಬಗ್ಗೆಯೂ ವಿಶ್ಲೇಷಣೆ ನಡೆಸಲಾಗಿದೆ ಎಂದರು.
ತಜ್ಞರು ತಮ್ಮ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರತ್ಯೇಕ ವರದಿಗಳನ್ನು ನೀಡಲಿದ್ದು, ಅವುಗಳನ್ನು ಕ್ರೋಡೀಕರಿಸಿ ಡಿಸೆಂಬರ್ 2026ರೊಳಗೆ ಜಲಾಶಯದ ಸಮಗ್ರ ಮೌಲ್ಯಮಾಪನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಅಗತ್ಯವಿರುವ ತುರ್ತು ಕ್ರಮಗಳ ಬಗ್ಗೆಯೂ ವರದಿಯಲ್ಲಿ ಶಿಫಾರಸು ಮಾಡಲಾಗುವುದು ಎಂದು ಜೋಶಿ ತಿಳಿಸಿದರು.
ಮೂರು ವರ್ಗಗಳಲ್ಲಿ ಜಲಾಶಯಗಳ ವಿಂಗಡಣೆ
ರಾಜ್ಯದಲ್ಲಿ ಒಟ್ಟು 231 ಅಣೆಕಟ್ಟುಗಳಿದ್ದು, ಅವುಗಳ ಸಮಗ್ರ ಸುರಕ್ಷತಾ ಪರಿಶೀಲನೆಗಾಗಿ 16 ತಂಡಗಳನ್ನು ರಚಿಸಲಾಗಿದೆ. ಪರಿಶೀಲನೆಯ ಬಳಿಕ ಜಲಾಶಯಗಳ ಸ್ಥಿತಿಗತಿಯನ್ನು ಆಧರಿಸಿ ಸಂಪೂರ್ಣ ದುರಸ್ತಿ ಅಗತ್ಯವಿರುವ, ಭಾಗಶಃ ದುರಸ್ತಿ ಅಗತ್ಯವಿರುವ ಹಾಗೂ ಅಲ್ಪ ಪ್ರಮಾಣದ ದುರಸ್ತಿ ಅಗತ್ಯವಿರುವ ಮೂರು ವರ್ಗಗಳಲ್ಲಿ ವಿಂಗಡಿಸಲಾಗುವುದು ಎಂದು ಜೋಶಿ ಹೇಳಿದರು.
ಜಲಾಶಯಗಳಿಂದ ಭೂಕಂಪ ಸಂಭವಿಸುವುದು ತಪ್ಪು ಕಲ್ಪನೆ
ಕರ್ನಾಟಕದಲ್ಲಿ ಈವರೆಗೆ 4 ರಿಕ್ಟರ್ ಮಾಪಕಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪ ಸಂಭವಿಸಿಲ್ಲ. 7 ರಿಕ್ಟರ್ ಮಾಪಕದ ಭೂಕಂಪ ಸಂಭವಿಸಿದರೂ ತಡೆದುಕೊಳ್ಳುವಂತೆ ಜಲಾಶಯಗಳನ್ನು ವಿನ್ಯಾಸಗೊಳಿಸಲಾಗಿದೆ. ಜಲಾಶಯಗಳಿಂದಲೇ ಭೂಕಂಪ ಸಂಭವಿಸುತ್ತದೆ ಎಂಬುದು ತಪ್ಪು ಕಲ್ಪನೆ. ಭೂಮಿಯ ಪದರಗಳ ಚಲನೆಯಿಂದ ಕೆಲವೆಡೆ ಭೂಕಂಪಗಳು ಸಂಭವಿಸುತ್ತವೆ. ಜಲಾಶಯಗಳಿಂದ ಭೂಕಂಪ ಉಂಟಾಗುತ್ತದೆ ಎಂಬುದಕ್ಕೆ ಆಧಾರವಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.
ನದಿ ಪಾತ್ರದ ಒತ್ತುವರಿ ತೆರವು ಅಗತ್ಯ
ನದಿ ಪಾತ್ರಗಳ ಒತ್ತುವರಿಯಿಂದಾಗಿ ದಿಢೀರ್ ಪ್ರವಾಹಗಳು ಸಂಭವಿಸುತ್ತಿವೆ. ಕೆಲ ರಾಜ್ಯಗಳಲ್ಲಿ ನದಿಗಳ ಪಥವೇ ಬದಲಾಗುತ್ತಿರುವ ಪರಿಸ್ಥಿತಿ ಇದೆ. ಹೀಗಾಗಿ ನದಿ ಪಾತ್ರಗಳಲ್ಲಿನ ಒತ್ತುವರಿಯನ್ನು ತೆರವುಗೊಳಿಸುವುದು ಅಗತ್ಯ. ಇದು ಕೇವಲ ಆಡಳಿತಾತ್ಮಕ ವಿಷಯವಲ್ಲ, ಸಾಮಾಜಿಕ ಸಮಸ್ಯೆಯೂ ಆಗಿದೆ ಎಂದು ಜೋಶಿ ಹೇಳಿದರು.
ವಿದೇಶಗಳಲ್ಲಿರುವ ಬ್ರಹತ್ ಜಲಾಶಯಗಳ ನದಿಗಳು ತನ್ನ ಪಥ ಬದಲಿಸುವುದರ ಬಗ್ಗೆ ವರದಿಯಾಗಿದ್ದು ಈ ವಿಷಯ ಗಂಭೀರವಾಗಿದ್ದರು ಇಂತಹ ಸನ್ನಿವೇಶ ನಮ್ಮ ದೇಶದಲ್ಲಿ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು ಹೀಗಾಗಿ ನದಿ ಪಾತ್ರದ ಒತ್ತುವರಿ ತೆರವುಗೊಳಿಸುವುದರ ಬಗ್ಗೆ ಗಂಭೀರವಾದ ಚಿಂತನೆ ಅಗತ್ಯವಿದೆ ಎಂದು ಅವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಶಿವಪ್ರಸಾದ, ಎಸ್.ಎಲ್. ರಾಜಶೇಖರ, ಕೆ. ಸತ್ಯನಾರಾಯಣ, ಅಮರನಾಥ ಹೆಗಡೆ, ಕಮಲಶೇಖರನ್, ಪ್ರಾಣೇಶ ಮುರನಾಳ, ಎಸ್. ರಂಗರಾಮ, ಮುಖ್ಯ ಎಂಜಿನಿಯರ್ ಡಿ. ಬಸವರಾಜ, ಅಧೀಕ್ಷಕ ಎಂಜಿನಿಯರ್ ಬಿ.ಎಸ್. ಪಾಟೀಲ, ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಕೊಳ್ಳಿ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿಠ್ಠಲ ಜಾಧವ ಹಾಗೂ ರವಿ ಚಂದ್ರಗಿರಿಯವರ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.