ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Colonel Vasanth Venugopal: ʼಕಾಂತಾರʼದ ಕನಕವತಿ ರುಕ್ಮಿಣಿ ತಂದೆ, ಅಶೋಕ ಚಕ್ರ ಪುರಸ್ಕೃತ ಕರ್ನಲ್‌ ವಸಂತ್‌ ವೇಣುಗೋಪಾಲ್‌ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಅತ್ಯುನ್ನತ ಮಿಲಿಟರಿ ಗೌರವ ಅಶೋಕ ಚಕ್ರವನ್ನು ಪಡೆದ ಕರ್ನಾಟಕದ ಮೊದಲ ಅಧಿಕಾರಿ ದಿ. ಕರ್ನಲ್‌ ವಸಂತ್‌ ವೇಣುಗೋಪಾಲ್‌. ಅವರು ಸ್ಯಾಂಡಲ್‌ವುಡ್‌ ನಟಿ ರುಕ್ಮಿಣಿ ವಸಂತ್‌ ಅವರ ತಂದೆ. ಬೆಂಗಳೂರು ಮೂಲದ ಇವರ ಹಿನ್ನೆಲೆ ಕುರಿತಾದ ಮಾಹಿತಿ ಇಲ್ಲಿದೆ.

ʼಕಾಂತಾರʼದ ಕನಕವತಿ ರುಕ್ಮಿಣಿ ತಂದೆ ಕರ್ನಲ್‌ ವಸಂತ್‌ ಗೋಪಾಲ್‌

-

Ramesh B Ramesh B Oct 3, 2025 5:57 PM

ಬೆಂಗಳೂರು: ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ಸ್ಯಾಂಡಲ್‌ವುಡ್‌ನ ಪ್ಯಾನ್‌ ಇಂಡಿಯಾ ಚಿತ್ರ ʼಕಾಂತಾರ: ಚಾಪ್ಟರ್‌ 1' (Kantara Chapter 1) ಭಾರಿ ಸದ್ದು ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್‌ ಅದ್ಧೂರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ (Rishab Shetty) ನಾಯಕನಾಗಿ ನಟಿಸುವ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಸಮರ್ಥವಾಗಿ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ರಿಷಬ್‌ ಶೆಟ್ಟಿಗೆ ನಾಯಕಿಯಾಗಿ ಮೊದಲ ಬಾರಿಗೆ ರುಕ್ಮಿಣಿ ವಸಂತ್‌ (Rukmini Vasanth) ಕಾಣಿಸಿಕೊಂಡಿದ್ದು, ರಾಜಕುಮಾರಿ ಕನಕವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದ್ದು, ಸಹಜವಾಗಿ ಅಭಿನಯಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದರೊಂದಿಗೆ ಅವರು ಮತ್ತೊಮ್ಮೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚಿದ್ದು, ನ್ಯಾಶನಲ್‌ ಕ್ರಶ್‌ ಎಂದು ಫ್ಯಾನ್ಸ್‌ ಕರೆಯತೊಡಗಿದ್ದಾರೆ. ಅಷ್ಟರಮಟ್ಟಿಗೆ ಅವರು ಪ್ರಭಾವ ಬೀರಿದ್ದು, ಅವರ ಬಗ್ಗೆ, ಹಿನ್ನಲೆ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಮುಂದಾಗಿದ್ದಾರೆ. ರುಕ್ಮಿಣಿ ಅವರ ತಂದೆ ಭಾರತೀಯ ಸೇನೆಯಲ್ಲಿ ಕರ್ನಲ್‌ ಆಗಿ ಸೇವೆ ಸಲ್ಲಿಸಿದ್ದಲ್ಲದೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಮರಣೋತ್ತರವಾಗಿ ಅಶೋಕ ಚಕ್ರವನ್ನೂ ಪಡೆದುಕೊಂಡಿದ್ದಾರೆ ಎನ್ನುವುದು ಬಹಳ ಮಂದಿಗೆ ತಿಳಿದಿಲ್ಲ.

ರುಕ್ಮಿಣಿ ಅವರ ತಂದೆಯ ಹೆಸರು ದಿ. ಕರ್ನಲ್‌ ವಸಂತ್‌ ವೇಣುಗೋಪಾಲ್‌ (Col Vasanth Venugopal). ಅವರು ಭಾರತದ ಅತ್ಯುನ್ನತ ಮಿಲಿಟರಿ ಗೌರವ ಅಶೋಕ ಚಕ್ರವನ್ನು ಪಡೆದ ಕರ್ನಾಟಕದ ಮೊದಲ ಅಧಿಕಾರಿ. ಬೆಂಗಳೂರು ಮೂಲದ ಅವರು 1967ರಲ್ಲಿ ಜನಿಸಿದರು. 40ನೇ ವಯಸ್ಸಿನಲ್ಲಿ 2007ರ ಜುಲೈ 31ರಂದು ಅವರು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತ ಹುತಾತ್ಮರಾದರು. ಅದೇ ವರ್ಷ ಆಗಸ್ಟ್‌ 1ರಂದು ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಘೋಷಿಸಲಾಯಿತು. ವಸಂತ್‌ ವೇಣುಗೋಪಾಲ್‌ ವೀರ ಮರಣ ಹೊಂದಿದಾಗ ರುಕ್ಮಿಣಿ ಅವರಿಗೆ 10 ವರ್ಷ ವಯಸ್ಸಾಗಿತ್ತು.

ಈ ಸುದ್ದಿಯನ್ನೂ ಓದಿ: Rukmini Vasanth: 'ಕಾಂತಾರ: ಚಾಪ್ಟರ್ 1’ ಚಿತ್ರದ ಬಗ್ಗೆ ರುಕ್ಮಿಣಿ ವಸಂತ್ ಭಾವನಾತ್ಮಕ ಪೋಸ್ಟ್!

ದಿ. ಕರ್ನಲ್‌ ವಸಂತ್‌ ವೇಣುಗೋಪಾಲ್‌ ಹಿನ್ನೆಲೆ

ವಸಂತ್‌ ಅವರು ಪ್ರಫುಲ್ಲಾ ಮತ್ತು ಎನ್‌.ಕೆ. ವೇಣುಗೋಪಾಲ್‌ ದಂಪತಿಗೆ 1967ರ ಮಾರ್ಚ್‌ 25ರಂದು ಬೆಂಗಳೂರಿನಲ್ಲಿ ಜನಿಸಿದರು. ವೇಣುಗೋಪಾಲ್‌ ಉದ್ಯೋಗ ನಿಮಿತ್ತ ಕರ್ನಾಟಕದಾದ್ಯಂತ ಸಂಚರಿಸುತ್ತುತ್ತಿದ್ದರಿಂದ ವಸಂತ್‌ ತಮ್ಮ ಶಿಕ್ಷಣವನ್ನು ಉಡುಪಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಪೂರೈಸಿದರು. ಕಾಲೇಜಿನಲ್ಲಿದ್ದಾಗ ಅವರು ಎನ್‌ಸಿಸಿಯಲ್ಲಿ ಸಕ್ರಿಯರಾಗಿದ್ದರು. ಮುಂದೇ ಇದೇ ಅವರನ್ನು ಭಾರತೀಯ ಸೇನೆಯ ಬಾಗಿಲಿಗೆ ತಂದು ನಿಲ್ಲಿಸಿತು.

1988ರಲ್ಲಿ ಡೆಹ್ರಾಡೂನ್‌ನ ಇಂಡಿಯನ್‌ ಮಿಲಿಟರಿ ಅಕಾಡೆಮಿಗೆ ಪ್ರವೇಶ ಪಡೆದ ವಸಂತ್‌ ವೇಣುಗೋಪಾಲ್‌, ಕಠಿಣ ತರಬೇತಿಯ ಬಳಿಕ 1989ರ ಜೂನ್‌ 10ರಂದು ಭಾರತೀಯ ಸೇನೆಯ ಅತ್ಯಂತ ಹಳೆಯ ರೆಜಿಮೆಂಟ್‌ಗಳಲ್ಲಿ ಒಂದಾದ ಮರಾಠ ಲೈಟ್‌ ಇನ್‌ಫ್ಯಾಂಟ್ರಿ ರೆಜಿಮೆಂಟ್‌ನ 8ನೇ ಬೆಟಾಲಿಯನ್‌ಗೆ ಸೇರಿಕೊಂಡರು.

Colonel Vasanth Venugopal 4

ಹೀಗೆ ಭಾರತೀಯ ಸೇನೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರಿಗೆ 1991ರ ಜೂನ್ 10ರಂದು ಲೆಫ್ಟಿನೆಂಟ್ ಮತ್ತು1994ರ ಜೂನ್ 10ರಂದು ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಯಿತು. 2000ರ ಜನವರಿ 14ರಂದು ಮೇಜರ್ ಆಗಿ ನೇಮಕಗೊಂಡರು. 2004ರ ಡಿಸೆಂಬರ್ 16ರಂದು ಲೆಫ್ಟಿನೆಂಟ್-ಕರ್ನಲ್ ಆಗಿ ಬಡ್ತಿ ನೀಡಲಾಯಿತು. 2006ರ ಅಕ್ಟೋಬರ್ 28ರಂದು ಅವರು ಮರಾಠ ಲೈಟ್‌ ಇನ್‌ಫ್ಯಾಂಟ್ರಿಯ 9ನೇ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡರು. ಆ ಸಮಯದಲ್ಲಿ ಬೆಟಾಲಿಯನ್ ಅನ್ನು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಿಯೋಜಿಸಲಾಗಿತ್ತು. 18 ವರ್ಷಗಳ ಮಿಲಿಟರಿ ವೃತ್ತಿಜೀವನದಲ್ಲಿ ಅವರು ಪಠಾಣ್‌ಕೋಟ್, ಸಿಕ್ಕಿಂ, ಗಾಂಧಿನಗರ, ರಾಂಚಿ, ಬೆಂಗಳೂರು ಹಾಗೂ ಜಮ್ಮು ಮತ್ತು ಕಾಶ್ಮೀರದ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿದರು.

Colonel Vasanth Venugopal 2

ವೈಯಕ್ತಿಕ ಬದುಕು

1993ರಲ್ಲಿ ವಸಂತ್‌ ಭರತನಾಟ್ಯ ಕಲಾವಿದೆಯಾಗಿದ್ದ ಸುಭಾಷಿಣಿ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳು. ರುಕ್ಮಿಣಿ ಮತ್ತು ಯಶೋದಾ. ಪತಿಯ ಮರಣದ ನಂತರ ಸುಭಾಷಿಣಿ ಕರ್ನಾಟಕದಲ್ಲಿನ ಮಡಿದ ಸೈನಿಕರ ಪತ್ನಿಯರು ಮತ್ತು ಅವರ ಕುಟುಂಬಗಳನ್ನು ನೋಡಿಕೊಳ್ಳಲು ವಸಂತರತ್ನ ಎನ್‌ಜಿಒ ಒಂದನ್ನು ಸ್ಥಾಪಿಸಿದರು. ಅಲ್ಲದೆ ಸುಭಾಷಣಿ ʼಫಾರ್‌ಎವೆರ್‌ ಫೋರ್ಟಿʼ (Forever Forty) ಎನ್ನುವ ಹೆಸರಿನಲ್ಲಿ ತಮ್ಮ ಪತಿಯ ಜೀವನ ಚರಿತ್ರೆಯನ್ನು ವೀಣಾ ಪ್ರಸಾದ್‌ ಅವರೊಂದಿಗೆ ರಚಿಸಿದ್ದು, ಇದು 2011ರಲ್ಲಿ ಬಿಡುಗಡೆಯಾಗಿದೆ.

Colonel Vasanth Venugopal 5

ವೀರ ಮರಣ

ವಸಂತ್‌ ಅವರ ತಾಯಿ ಅವರ ಬಳಿಯೊಮ್ಮೆ ʼʼರೆಜಿಮೆಂಟ್‌ ನಡೆಸುವ ಎಲ್ಲ ಕಾರ್ಯಾಚರಣೆಯಲ್ಲಿ ಕರ್ನಲ್‌ ಭಾಗವಹಿಸಲೇ ಬೇಕೆ?ʼʼ ಎಂದು ಕೇಳಿದ್ದರು. ಅದಕ್ಕೆ ವಸಂತ್‌ ಉತ್ತರಿಸಿ, ʼʼನನ್ನ ಸೈನಿಕರು ಎಲ್ಲಿರುತ್ತಾರೋ ನಾನಲ್ಲಿಗೆ ಹೋಗುತ್ತೇನೆʼʼ ಎಂದಿದ್ದರು. 2007ರ ಜುಲೈ 30ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಎಲ್‌ಒಸಿಯಿಂದ ಭಯೋತ್ಪಾದಕರು ನುಗ್ಗಿದ್ದಾರೆ ಎನ್ನುವ ಮಾಹಿತಿ ಸೇನೆಗೆ ತಿಳಿಯಿತು. ಅದರಂತೆ ವಸಂತ್‌ ತಮ್ಮ ಮರಾಠ ಲೈಟ್‌ ಇನ್‌ಫ್ಯಾಂಟ್ರಿಯ 9ನೇ ಬೆಟಾಲಿಯನ್‌ ಜತೆ ಉಗ್ರರನ್ನು ಮಟ್ಟ ಹಾಕಲು ಧಾವಿಸಿದರು.

Colonel Vasanth Venugopal 3

ದಟ್ಟ ಕಾಡಿನಲ್ಲಿ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ವಸಂತ್‌ ಉಗ್ರನನ್ನು ಹೊಡೆದುರುಳಿಸಿದರು. ಈ ವೇಳೆ ಅವರಿಗೂ ಗುಂಡು ತಗುಲಿತು. ಗಾಯಗೊಂಡರೂ ಅವರು ತಮ್ಮ ಹೋರಾಟ ಮುಂದುವರಿಸಿದರು. ಈ ವೇಳೆ ಒಟ್ಟು 8 ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಈ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಕರ್ನಲ್‌ ವಸಂತ್‌ ಹಾಗೂ ಲ್ಯಾನ್ಸ್ ನಾಯಕ್ ಬಚ್ಚವ್ ಶಶಿಕಾಂತ್ ಗಣಪತ್ ವೀರ ಮರಣ ಹೊಂದಿದರು.