Yadgir accident: ಯಾದಗಿರಿ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ; ಸಿರವಾರ ಪಟ್ಟಣ ಪಂಚಾಯತ್ ಸದಸ್ಯನ ಕುಟುಂಬದ 6 ಮಂದಿ ಸಜೀವ ದಹನ
ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಕಲಬುರಗಿಯಿಂದ ರಾಯಚೂರು ಜಿಲ್ಲೆಯ ಸಿರವಾರ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಶುಕ್ರವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿತ್ತು. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಇದರಿಂದ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಮೃತರಾದ ಸಿರವಾರ ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣನಾಯಕ ಕುಟಂಬ. -
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಕಾರು ನಡುವಿನ ಭೀಕರ ಅಪಘಾತದಲ್ಲಿ (Yadgir accident) ಮೃತಪಟ್ಟವರ ಗುರುತು ಪತ್ತೆಯಾಗಿದೆ. ಇಂದು ಬೆಳಗ್ಗೆ 9:45ರ ಸುಮಾರಿಗೆ ನಡೆದ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದು, ಮೃತರು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ ಅವರ ಕುಟುಂಬಸ್ಥರು ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಕಲಬುರಗಿಯಿಂದ ರಾಯಚೂರು ಜಿಲ್ಲೆಯ ಸಿರವಾರ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಇದರಿಂದ ಕಾರಿನಲ್ಲಿದ್ದ ಎಂಟು ಮಂದಿಯ ಪೈಕಿ ಆರು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ.
ಮೃತರನ್ನು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ (52), ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳು ನಿಸರ್ಗ (30), ಶಶಿಕಲಾ (30) ಹಾಗೂ ಮಗು ಸಿದ್ಧಾರ್ಥ (3) ಎಂದು ಗುರುತಿಸಲಾಗಿದೆ.
ಇನ್ನು ಕಾರಿನಲ್ಲಿದ್ದ ಅದ್ವಿಕಾ (5) ಮತ್ತು ಶ್ರೀನಿಧಿ (ಒಂದೂವರೆ ವರ್ಷದ ಮಗು) ಗಂಭೀರವಾಗಿ ಗಾಯಗೊಂಡಿದ್ದು, ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾಗ ದುರಂತ
ಈ ಕುಟುಂಬ ಅಮಾವಾಸ್ಯೆ ನಿಮಿತ್ತ ತಿಂಥಣಿ ಮೌನೇಶ್ವರ, ವೇಣುಗೋಪಾಲ ಸ್ವಾಮಿ ದರ್ಶನ ಮುಗಿಸಿಕೊಂಡು ಸಿರವಾರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂತೋಷದ ಪ್ರಯಾಣ ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಬಸ್‌ಗೂ ಬೆಂಕಿ ತಗುಲಿದರೂ, ಅದರಲ್ಲಿದ್ದ ಸುಮಾರು 33 ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎನ್ನಲಾಗಿದೆ.
Bus Caught fire: ಸರ್ಕಾರಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಅಪಘಾತದ ತೀವ್ರತೆಗೆ ಕಾರಿನ ಬಾಗಿಲುಗಳು ಲಾಕ್ ಆಗಿ ಒಳಗಿದ್ದವರು ಹೊರಬರಲು ಸಾಧ್ಯವಾಗಿಲ್ಲ. ಬೆಂಕಿ ವೇಗವಾಗಿ ವ್ಯಾಪಿಸಿ ಕಾರು ಸಂಪೂರ್ಣ ಕರಕಲಾಗಿದ್ದು, ಸುಟ್ಟ ಅವಶೇಷಗಳ ನಡುವೆ ತಲೆಬುರುಡೆಗಳು ಪತ್ತೆಯಾಗಿವೆ. ಘಟನೆಯ ಮಾಹಿತಿ ತಿಳಿದು ಸುರಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬಳಿಕ ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದಾರೆ.