ಐಎಸ್‌ಎಲ್ ಲೀಗ್ ಬಿಕ್ಕಟ್ಟು ಪರಿಹಾರಕ್ಕೆ ಸುಪ್ರೀಂಗೆ ಹೋಗಿ; 11 ಕ್ಲಬ್‌ಗಳಿಂದ ಎಐಎಫ್ಎಫ್‌ಗೆ ಮನವಿ
‘ಕಾನೂನಿನ ಮೊರೆ ಹೋಗುವುದು ಬಿಟ್ಟು ಬೇರೆ ಆಯ್ಕೆಯಿಲ್ಲ. ಸದ್ಯದ ಬಿಕ್ಕಟ್ಟಿನ ಬಗ್ಗೆ ಗೌರವಾನ್ವಿತ ಕೋರ್ಟ್ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದಿವೆ. ಒಟ್ಟು 13 ಐಎಸ್‌ಎಲ್ ಕ್ಲಬ್‌ಗಳ ಪೈಕಿ ಮೋಹನ್ ಬಗಾನ್ ಸೂಪರ್ ಜೈಂಟ್ಸ್ ಮತ್ತು ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ಹೊರತುಪಡಿಸಿ ಉಳಿದ 11 ತಂಡಗಳು ಪತ್ರಕ್ಕೆ ಸಹಿ ಹಾಕಿವೆ.


ನವದೆಹಲಿ: ಎಐಎಫ್‌ಎಫ್(AIFF) ಹಾಗೂ ಐಎಸ್‌ಎಲ್(ISL) ಆಯೋಜಕರಾದ ಎಫ್‌ಸಿಡಿಲ್ ನಡುವಿನ ಬಿಕ್ಕಟ್ಟಿನಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ಐಎಸ್‌ಎಲ್ ಟೂರ್ನಿಯ ವಿಚಾರವನ್ನು ಸುಪ್ರೀಂ ಕೋರ್ಟ್(Supreme Court) ಗಮನಕ್ಕೆ ತರಬೇಕು ಹಾಗೂ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್ ) ಅಧ್ಯಕ್ಷ ಕಲ್ಯಾಣ್ ಚೌಬೆ ಅವರಿಗೆ 11 ಕ್ಲಬ್‌ಗಳು ಪತ್ರ ಬರೆದಿದ್ದು, ಈ ವಿಷಯವನ್ನು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯುವಂತೆ ಒತ್ತಾಯಿಸಿದೆ. ಫೆಡರೇಶನ್ ಮಧ್ಯಪ್ರವೇಶಿಸದಿದ್ದರೆ, ಸ್ವತಃ ತಾವೇ ಸುಪ್ರೀಂ ಮೆಟ್ಟಿಲೇರಲು ಸಿದ್ಧರಿದ್ದೇವೆ ಎಂದು ಕ್ಲಬ್‌ಗಳು ಹೇಳಿವೆ.
"ಭಾರತದಲ್ಲಿ ಫುಟ್‌ಬಾಲ್‌ನ ಶಾಸನಬದ್ಧ ನಿಯಂತ್ರಕ ಮತ್ತು ಪ್ರಕ್ರಿಯೆಯ ಪ್ರಮುಖ ಪಕ್ಷವಾಗಿ ಎಐಎಫ್‌ಎಫ್‌ನ ಸಾಮರ್ಥ್ಯದಲ್ಲಿ, ಪ್ರಸ್ತುತ ಪರಿಸ್ಥಿತಿಯನ್ನು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರುವಂತೆ ನಾವು ಗೌರವಯುತವಾಗಿ ಒತ್ತಾಯಿಸುತ್ತೇವೆ" ಎಂದು ಚೌಬೆಗೆ ಬರೆದ ಜಂಟಿ ಪತ್ರದಲ್ಲಿ ಕ್ಲಬ್‌ಗಳು ತಿಳಿಸಿವೆ.
‘ಕಾನೂನಿನ ಮೊರೆ ಹೋಗುವುದು ಬಿಟ್ಟು ಬೇರೆ ಆಯ್ಕೆಯಿಲ್ಲ. ಸದ್ಯದ ಬಿಕ್ಕಟ್ಟಿನ ಬಗ್ಗೆ ಗೌರವಾನ್ವಿತ ಕೋರ್ಟ್ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದಿವೆ. ಒಟ್ಟು 13 ಐಎಸ್‌ಎಲ್ ಕ್ಲಬ್‌ಗಳ ಪೈಕಿ ಮೋಹನ್ ಬಗಾನ್ ಸೂಪರ್ ಜೈಂಟ್ಸ್ ಮತ್ತು ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ಹೊರತುಪಡಿಸಿ ಉಳಿದ 11 ತಂಡಗಳು ಪತ್ರಕ್ಕೆ ಸಹಿ ಹಾಕಿವೆ.
ಇಂಡಿಯನ್ ಸೂಪರ್ ಲೀಗ್ ಮುಂದೂಡಲ್ಪಟ್ಟ ಬೆನ್ನಲ್ಲೇ ಒಡಿಶಾ ಫುಟ್ಬಾಲ್ ಕ್ಲಬ್ (ಒಎಫ್‌ಸಿ) ಸೇರಿ ಹಲವು ಕ್ಲಬ್‌ಗಳು ತನ್ನ ಆಟಗಾರರು ಹಾಗೂ ಸಿಬ್ಬಂದಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿವೆ ಎನ್ನುವ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ Indian football team: ಭಾರತ ಫುಟ್ಬಾಲ್ ತಂಡಕ್ಕೆ ಖಾಲಿದ್ ಜಮಿಲ್ ನೂತನ ಕೋಚ್
ಆತಿಥ್ಯ ಹಕ್ಕನ್ನು ಎಐಎಫ್‌ಎಫ್ ನವೀಕರಣಗೊಳಿಸದ ಹಿನ್ನೆಲೆಯಲ್ಲಿ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಎಫ್‌ಎಸ್‌ಡಿಎಲ್ ಇತ್ತೀಚೆಗೆ ಘೋಷಿಸಿತ್ತು. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಫ್‌ಎಸ್‌ಡಿಎಲ್‌ಗೆ ಇನ್ನೂ ಸಾಧ್ಯವಾಗಿಲ್ಲ. ಆತಿಥ್ಯ ಹಕ್ಕು ನವೀಕರಿಸುವ ಬಗ್ಗೆ ಎಐಎಫ್‌ಎಫ್ ಸಹ ಯಾವುದೇ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಈ ವರ್ಷ ಟೂರ್ನಿ ನಡೆಯದೆ ಇರಬಹುದು ಎನ್ನುವ ಚರ್ಚೆ ಭಾರತೀಯ ಫುಟ್ಬಾಲ್ ವಲಯದಲ್ಲಿ ನಡೆಯುತ್ತಿದೆ.