ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heavy Rain In Delhi: ದೆಹಲಿಯಲ್ಲಿ ಭಾರಿ ಮಳೆ; ಗೋಡೆ ಕುಸಿದು 7 ಮಂದಿ ಸಾವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಗೋಡೆ ಕುಸಿದು ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ದೆಹಲಿಯ ಹರಿನಗರದಲ್ಲಿ ಈ ಅನಾಹುತ ಸಂಭವಿಸಿದ್ದು, ಮೃತರಲ್ಲಿ ಮೂವರು ಪುರುಷರು, ತಲಾ ಇಬ್ಬರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಶುಕ್ರವಾರ (ಆಗಸ್ಟ್‌ 8) ರಾತ್ರಿ ಇಡೀ ಮಳೆ ಸುರಿದ ಕಾರಣ ಗೋಡೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ಭಾರಿ ಮಳೆ; ಗೋಡೆ ಕುಸಿದು 7  ಮಂದಿ ಸಾವು

Ramesh B Ramesh B Aug 9, 2025 2:45 PM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು (Heavy Rain In Delhi), ಗೋಡೆ ಕುಸಿದು ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ದೆಹಲಿಯ ಹರಿನಗರದಲ್ಲಿ ಈ ಅನಾಹುತ ಸಂಭವಿಸಿದ್ದು, ಮೃತರಲ್ಲಿ ಮೂವರು ಪುರುಷರು, ತಲಾ ಇಬ್ಬರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಶುಕ್ರವಾರ (ಆಗಸ್ಟ್‌ 8) ರಾತ್ರಿ ಇಡೀ ಮಳೆ ಸುರಿದ ಕಾರಣ ಗೋಡೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.



ಮೃತರನ್ನು ಶಬಿಬುಲ್ (30), ರಬಿಬುಲ್ (30), ಮುತ್ತು ಅಲಿ (45), ರುಬಿನಾ (25), ಡಾಲಿ (25), ರುಖ್ಸಾನಾ (6) ಮತ್ತು ಹಸೀನಾ (7) ಎಂದು ಗುರುತಿಸಲಾಗಿದೆ. ಅದಾಗ್ಯೂ ಗೋಡೆ ಕುಸಿತಕ್ಕೆ ನಿಖರ ಕಾರಣ ತಿಳಿದು ಬಂದುಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಆಗ್ನೇಯ ವಿಭಾಗದ ಹೆಚ್ಚುವರಿ ಡಿಸಿಪಿ ಐಶ್ವರ್ಯ ಶರ್ಮಾ, "ಹರಿ ನಗರದಲ್ಲಿ ಪ್ರಾಚೀನ ದೇವಾಲಯವಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಈ ದೇಗುಲದ ಗೋಡೆ ಕುಸಿದಿದೆ. ದೇವಾಲಯದ ಪಕ್ಕ ಗುಜರಿ ವ್ಯಾಪಾರಿಗಳು ವಾಸಿಸುತ್ತಿದ್ದು, ಅವರ ಶೆಡ್‌ನ ಮೇಲೆ ಬಿದ್ದು ಅನಾಹುತ ಸಂಭವಿಸಿದೆ. ಆರಂಭದಲ್ಲಿ ಅವಶೇಷಗಳಡಿ 8 ಜನರು ಸಿಲುಕಿಕೊಂಡಿದ್ದರು ಎನ್ನಲಾಗಿತ್ತು. ಸದ್ಯ ಘಟನೆಯಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೆಲವರನ್ನು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭವಿಷ್ಯದಲ್ಲಿ ಅಂತಹ ಯಾವುದೇ ಘಟನೆ ಸಂಭವಿಸದಂತೆ ನಾವು ಈಗ ಈ ಶೆಡ್‌ಗಳನ್ನು ಸ್ಥಳಾಂತರಿಸಿದ್ದೇವೆ" ಎಂದು ಹೇಳಿದ್ದಾರೆ..

ದೆಹಲಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯ ಪ್ರಗತಿ ಮೈದಾನದಲ್ಲಿ 100 ಮಿಮೀ, ಲೋಧಿ ರಸ್ತೆಯಲ್ಲಿ 80 ಮಿಮೀ, ಪುಸಾದಲ್ಲಿ 69 ಮಿಮೀ ಮತ್ತು ಪಾಲಂನಲ್ಲಿ 31.8 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ತಡರಾತ್ರಿಯಿಂದ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ (IMD) ಹೆಚ್ಚಿನ ಭಾಗಗಳಲ್ಲಿ ಶನಿವಾರ ರೆಡ್ ಅಲರ್ಟ್ ಘೋಷಿಸಿದ್ದು, ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಪಂಚಕುಯಿಯಾನ್ ಮಾರ್ಗ, ಮಥುರಾ ರಸ್ತೆ, ಶಾಸ್ತ್ರಿ ಭವನ, ಆರ್‌.ಕೆ. ಪುರಂ, ಮೋತಿ ಬಾಗ್ ಮತ್ತು ಕಿದ್ವಾಯಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆ ಶನಿವಾರ ಬೆಳಗ್ಗೆವರೆಗೂ ಮುಂದುವರಿದಿದ್ದು, ನಗರದಾದ್ಯಂತ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ತಗ್ಗು ಪ್ರದೇಶ ಮತ್ತು ಅಸುರಕ್ಷಿತ ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಅಧಿಕಾರಿಗಳು ಸೂಚಿಸಿದ್ದಾರೆ.