ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Budget 2025: ಮೊದಲ ಬಾರಿಗೆ ರಾಜ್ಯದ ಬಜೆಟ್‌ ಗಾತ್ರ 4 ಲಕ್ಷ ಕೋಟಿ ರುಪಾಯಿಗೆ ಏರಿಕೆ

2025-26ರ ಬಜೆಟ್‌ನಲ್ಲಿ ಒಟ್ಟು ವೆಚ್ಚದ ಮೊತ್ತ 4,09,549 ಕೋಟಿ ರುಪಾಯಿಗಳಾಗಿದೆ. ಇದರಲ್ಲಿ 3,11,739 ಕೋಟಿ ರುಪಾಯಿ ರಾಜಸ್ವ ವೆಚ್ಚ, 71,336 ಕೋಟಿ ಬಂಡವಾಳ ವೆಚ್ಚ ಮತ್ತು 26,474 ಕೋಟಿ ರುಪಾಯಿಗಳ ಸಾಲ ಮರು ಪಾವತಿ ಇದೆ.

ಮೊದಲ ಬಾರಿಗೆ ರಾಜ್ಯ ಬಜೆಟ್‌ ಗಾತ್ರ 4 ಲಕ್ಷ ಕೋಟಿ ರೂ.ಗೆ ಏರಿಕೆ

Profile Rakshita Karkera Mar 7, 2025 1:02 PM

ಬೆಂಗಳೂರು: ಕರ್ನಾಟಕ ರಾಜ್ಯದ ಬಜೆಟ್‌(Karnataka Budget 2025) ಗಾತ್ರವು ಇದೇ ಮೊದಲ ಬಾರಿಗೆ 4 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. ಕಳೆದ ಬಾರಿಯ ಬಜೆಟ್‌ ಗಾತ್ರ 3.71 ಲಕ್ಷ ಕೋಟಿ ರುಪಾಯಿಗಳಾಗಿತ್ತು. ಈ ಸಲ 4,09,549 ಕೋಟಿ ರುಪಾಯಿಗೆ ವೃದ್ಧಿಸಿದೆ. 2025-26ನೇ ಸಾಲಿಗೆ ಒಟ್ಟು 2,92,477 ಕೋಟಿ ರುಪಾಯಿಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಇದರಲ್ಲಿ 2,08,100 ಕೋಟಿ ರುಪಾಯಿಗಳ ಸ್ವಂತ ತೆರಿಗೆ ರಾಜಸ್ವ, 16,500 ಕೋಟಿ ರುಪಾಯಿಗಳ ತೆರಿಗೆಯೇತರ ರಾಜಸ್ವ ಮತ್ತು ಕೇಂದ್ರ ಸರಕಾರದ ಸ್ವೀಕೃತಿ 67,877 ಕೋಟಿ ರುಪಾಯಿಗಳು ಸೇರಿದೆ.

ರಾಜ್ಯದ ಸಾಲ ಎಷ್ಟು?

2025-26ನೇ ಸಾಲಿಗೆ ಒಟ್ಟು 1,16,000 ಕೋಟಿ ರುಪಾಯಿಗಳ ಸಾಲ ಮತ್ತು 170 ಕೋಟಿ ರುಪಾಯಿಗಳ ತೆರಿಗೆಯೇತರ ಬಂಡವಾಳ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. ಈ ಎಲ್ಲ ಸ್ವೀಕೃತಿಗಳು ಸೇರಿ 2025-26ನೇ ಸಾಲಿನಲ್ಲಿ ಒಟ್ಟು 4,08,647 ಕೋಟಿ ರುಪಾಯಿಗಳ ಸ್ವೀಕೃತಿಯನ್ನು ಅಂದಾಜಿಸಲಾಗಿದೆ. 2025-26ರ ಬಜೆಟ್‌ನಲ್ಲಿ ಒಟ್ಟು ವೆಚ್ಚದ ಮೊತ್ತ 4,09,549 ಕೋಟಿ ರುಪಾಯಿಗಳಾಗಿದೆ. ಇದರಲ್ಲಿ 3,11,739 ಕೋಟಿ ರುಪಾಯಿ ರಾಜಸ್ವ ವೆಚ್ಚ, 71,336 ಕೋಟಿ ಬಂಡವಾಳ ವೆಚ್ಚ ಮತ್ತು 26,474 ಕೋಟಿ ರುಪಾಯಿಗಳ ಸಾಲ ಮರು ಪಾವತಿ ಇದೆ.

ವಿತ್ತೀಯ ಕೊರತೆ ಎಷ್ಟು?

2025-26ರ ಸಾಲಿಗೆ 19,262 ಕೋಟಿ ರುಪಾಯಿಗಳ ರಾಜಸ್ವ ಕೊರತೆಯನ್ನು ಅಂದಾಜಿಸಲಾಗಿದೆ. ಅಂದರೆ ಜಿಎಸ್‌ಡಿಪಿಯ 0.63 % ಆಗುತ್ತದೆ. ವಿತ್ತೀಯ ಕೊರತೆ 90,428 ಕೋಟಿ ರುಪಾಯಿಗಳಾಗಿದೆ. ಅಂದ್ರೆ ಜಿಎಸ್‌ಡಿಪಿಯ 2.95% ರಷ್ಟಿದೆ.

ರಾಜ್ಯಕ್ಕೆ ಬರುವ ಒಂದು ರುಪಾಯಿ ಆದಾಯದಲ್ಲಿ ಯಾವುದರ ಪಾಲು ಎಷ್ಟು?

ರಾಜ್ಯ ಸರಕಾರ ಗಳಿಸುವ ಪ್ರತಿ ಒಂದು ರುಪಾಯಿಯಲ್ಲಿ ಯಾವುದರ ಪಾಲು ಎಷ್ಟು ಎಂಬುದನ್ನು ಈಗ ನೋಡೋಣ. ರಾಜ್ಯ ಸರಕಾರ ಗಳಿಸುವ ಒಂದು ರುಪಾಯಿ ಆದಾಯದಲ್ಲಿ 52 ಪೈಸೆ ಮೊತ್ತವು ರಾಜ್ಯ ತೆರಿಗೆಗಳಿಂದ ಬರುತ್ತದೆ. ಸಾಲದಿಂದ 27 ಪೈಸೆ ಸಿಗುತ್ತಿದೆ. ಕೇಂದ್ರ ತೆರಿಗೆಯಲ್ಲಿನ ಪಾಲಿನಿಂದ 13 ಪೈಸೆ ಸಿಗುತ್ತಿದೆ. ರಾಜ್ಯದ ತೆರಿಗೆಯೇತರ ರಾಜಸ್ವದಿಂದ 4 ಪೈಸೆ ಸಿಗುತ್ತದೆ.

ರಾಜ್ಯ ಸರಕಾರ ಖರ್ಚು ಮಾಡುವ ಒಂದು ರುಪಾಯಿಯಲ್ಲಿ ಯಾವುದಕ್ಕೆ ಎಷ್ಟು ಹೋಗುತ್ತದೆ ಎಂಬುದನ್ನು ಈಗ ನೋಡೋಣ. ಸಾಲದ ಮರು ಪಾವತಿಗೆ 18 ಪೈಸೆ, ಇತರ ಸಾಮಾನ್ಯ ಸೇವೆಗಳಿಗೆ 18 ಪೈಸೆ, ಸಮಾಜ ಕಲ್ಯಾಣಕ್ಕೆ 15 ಪೈಸೆ, ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿಗೆ 14 ಪೈಸೆ, ಶಿಕ್ಷಣಕ್ಕೆ 10 ಪೈಸೆ, ಆರೋಗ್ಯಕ್ಕೆ 5 ಪೈಸೆ, ಇತರ ಸಾಮಾಜಿಕ ಸೇವೆ ಮತ್ತು ನೈರ್ಮಲ್ಯಕ್ಕೆ 3 ಪೈಸೆ ವೆಚ್ಚವಾಗಲಿದೆ.

ವಾಣಿಜ್ಯ ತೆರಿಗೆಯಿಂದ 1 ಲಕ್ಷ ಕೋಟಿ ರುಪಾಯಿ ಸಂಗ್ರಹ ನಿರೀಕ್ಷೆ:

2024-25ರ ಸಾಲಿನಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಜಿಎಸ್‌ ಟಿ ಸಂಗ್ರಹಿಸಿದ ರಾಜ್ಯಗಳಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿತ್ತು. 2024-25ರ ಪರಿಷ್ಕೃತ ಅಂದಾಜಿನ ಪ್ರಕಾರ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರುಪಾಯಿಗಳ ರಾಜಸ್ವವನ್ನು ನಿರೀಕ್ಷಿಸಲಾಗಿದೆ. ವಾರ್ಷಿಕ ವೃತ್ತಿ ತೆರಿಗೆಯ ಮಿತಿಯನ್ನು 2,500 ರುಪಾಯಿಗೆ ನಿಗದಿಪಡಿಸಲಾಗಿದೆ. 2025-26ರ ಸಾಲಿಗೆ ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯನ್ನು 1,20,000 ಕೋಟಿ ರುಪಾಯಿಗೆ ಏರಿಸಲಾಗಿದೆ.

2025-26ರಲ್ಲಿಯೂ ಅಬಕಾರಿ ತೆರಿಗೆಯ ಶ್ರೇಣಿಗಳನ್ನು ಸರಳಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಪಾರದರ್ಶಕವಾಗಿ ಎಲೆಕ್ಟ್ರಾನಿಕ್‌ ಹರಾಜಿನ ಮೂಲಕ ಹಂಚಿಕೆ ಮಾಡಲು ಸರಕಾರ ನಿರ್ಧರಿಸಿದೆ. ಇದರಿಂದ ರಾಜಸ್ವ ಸಂಗ್ರಹ ಹೆಚ್ಚುವ ನಿರೀಕ್ಷೆ ಇದೆ. ಅಬಕಾರಿ ತೆರಿಗೆಯಿಂದ 2025-26 ಸಾಲಿಗೆ 40,000 ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಇದೆ. 2025-26 ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 28,000 ಕೋಟಿ ರುಪಾಯಿಗಳ ರಾಜಸ್ವ ಗುರಿ ನಿಗದಿಪಡಿಸಲಾಗಿದೆ. ಮೋಟಾರು ವಾಹನ ತೆರಿಗೆಯಿಂದ 15,000 ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಇದೆ.