Reeshma Nanaiah: ಪರಭಾಷೆಯತ್ತ ಹೊರಟ ಮತ್ತೋರ್ವ ಸ್ಯಾಂಡಲ್‌ವುಡ್ ನಟಿ; ತಮಿಳು ಚಿತ್ರಕ್ಕೆ ರೀಷ್ಮಾ ನಾಣಯ್ಯ ಆಯ್ಕೆ
Worker: 2022ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ ʼಏಕ್ ಲವ್ ಯಾʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ರೀಷ್ಮಾ ನಾಣಯ್ಯ ಇದೀಗ ಕಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ತಮಿಳಿನ ಜನಪ್ರಿಯ ನಟ ಜೈ ಅಭಿನಯದ ʼವರ್ಕರ್ʼ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರೀಷ್ಮಾ ನಾಣಯ್ಯ (ಇನ್‌ಸ್ಟಾಗ್ರಾಮ್ ಚಿತ್ರ). -

ಚೆನ್ನೈ: ಸ್ಯಾಂಡಲ್‌ವುಡ್ (Sandalwood) ಮೂಲಕ ವೃತ್ತಿ ಜೀವನ ಆರಂಬಿಸಿ ಬಳಿಕ ಪರಭಾಷೆಯಲ್ಲಿ ಮಿಂಚಿದ, ಮಿಂಚುತ್ತಿರುವ ಅಪ್ಪಟ ಕನ್ನಡ ಪ್ರತಿಭೆಗಳ ದೊಡ್ಡ ಪಟ್ಟಿಯೇ ಇದೆ. ಅದರಲ್ಲಿಯೂ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಪ್ರಸ್ತುತ ವಿವಿಧ ಚಿತ್ರರಂಗಗಳಲ್ಲಿ ಬೇಡಿಕೆ ಹೊಂದಿರುವ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್, ರುಕ್ಮಿಣಿ ವಸಂತ್ ಮತ್ತಿತರರ ಸಾಲಿಗೆ ಮತ್ತೊಬ್ಬ ಕನ್ನಡದ ನಟಿ ಸೇರ್ಪಡೆಯಾಗಿದ್ದಾರೆ. ಅವರೇ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah). ಪ್ರಸ್ತುತ ಸ್ಯಾಂಡಲ್‌ವುಡ್‌ನ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ, ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾವಿದೆ ರೀಷ್ಮಾ ನಾಣಯ್ಯ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ.
2022ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ ʼಏಕ್ ಲವ್ ಯಾʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ರೀಷ್ಮಾ ಇದೀಗ ತಮಿಳು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಜೈಗೆ ಜೋಡಿ
ʼಎಂಗೆಯುಮ್ ಎಪ್ಪೋದುಮ್ʼ, ʼರಾಜ ರಾಣಿʼ ಚಿತ್ರಗಳ ಮೂಲಕ ತಮಿಳು ಪ್ರೇಕ್ಷಕರ ಮನಗೆದ್ದ ಜೈಗೆ ಜೋಡಿಯಾಗುವ ಮೂಲಕ ರೀಷ್ಮಾ ಕಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ʼವರ್ಕರ್ʼ (Worker) ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಮೂಹರ್ತ ಪೂಜೆ ನಡೆಯಿತು. ವಿನಯ್ ಕೃಷ್ಣ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ವಿಶೇಷ ಎಂದರೆ ಇವರು ಈ ಹಿಂದೆ 2018ರಲ್ಲಿ ರಿಲೀಸ್ ಆದ ಕನ್ನಡದ ʼಸೀಜರ್ʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಚಿರಂಜೀವಿ ಸರ್ಜಾ, ವಿ. ರವಿಚಂದ್ರನ್ ಮತ್ತು ಪಾರುಲ್ ಯಾದವ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ತಮಿಳು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಸ್ಟಾರ್‌ಗಳಿಗೆ ಜೋಡಿ
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ರೀಷ್ಮಾ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 3 ವರ್ಷಗಳಲ್ಲೇ ಗಣೇಶ್, ಉಪೇಂದ್ರ , ಧ್ರುವ ಸರ್ಜಾ ಅವರಂತಹ ಟಾಪ್ ನಾಯಕರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿಯೂ ಇದೀಗ ಬಿಡುಗಡೆಗೆ ಸಜ್ಜಾಗಿರುವ, ಪ್ರೇಮ್ ನಿರ್ದೇಶನದ ʼಕೆಡಿʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದು ತೆರೆಗೆ ಬರಲಿದೆ. ಧ್ರುವ ಸರ್ಜಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ. ರವಿಚಂದ್ರನ್, ರಮೇಶ್ ಅರವಿಂದ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ರೀಷ್ಮಾ ನಾಣಯ್ಯ ಕೂಡ ಅಭಿನಯಿಸಿದ್ದಾರೆ. ಸದ್ಯ ಅವರು ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾ ಬಹು ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದೆ. ಸದ್ಯದಲ್ಲೇ ಚಿತ್ರ ತೆರೆ ಕಾಣಲಿದೆ. ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ಚಿತ್ರದ ʼʼಶಿವ ಶಿವʼʼ ಹಾಡು ಈಗಾಗಲೇ ಹಿಟ್ ಆಗಿದೆ. ʼಕೆಡಿʼ ಚಿತ್ರದ ಮೂಲಕ ಧ್ರುವ ಸರ್ಜಾಗೆ ಜೋಡಿಯಾಗಿ ಮೊದಲ ಬಾರಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ.