Tejashwi Yadav: ಬಿಹಾರ ಸಿಎಂ ಅಭ್ಯರ್ಥಿಯಾಗಿ ಘೋಷಿಸಿಕೊಂಡ ತೇಜಸ್ವಿ ಯಾದವ್!
ಚುನಾವಣಾ ಆಯೋಗವು ತನ್ನ ನಂಬಿಕೆಯನ್ನು ಕಳೆದುಕೊಂಡಿದೆ. ಬಿಹಾರದಲ್ಲಿ ಎಸ್‌ಐಆರ್ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ ಮಾಡಿದೆ. ಇದು ಜನರ ಮತವನ್ನು ಕಳ್ಳತನ ಮಾಡುವ ಪ್ರಯತ್ನವಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರ ರೀತಿ ವರ್ತಿಸುತ್ತಿದ್ದಾರೆ’ ಎಂದು ತೇಜಸ್ವಿ ಯಾದವ್ ಕಿಡಿಕಾರಿದ್ದರು.

-

ಪಾಟ್ನಾ: ಬಿಹಾರ ವಿಧಾನಸಭೆಗೆ ಮುಂಬರುವ ನವೆಂಬರ್ ತಿಂಗಳಲ್ಲಿ ಚುನಾವಣೆ(bihar election 2025) ನಡೆಯಲಿದ್ದು, ಒಂದೆಡೆ ಮತಪಟ್ಟಿ ಪರಿಷ್ಕರಣೆ ಕಿತ್ತಾಟವಾರೆ, ಮತ್ತೊಂದೆಡೆ ಬಿರುಸಿನ ಚುನಾವಣ ಪ್ರಚಾರ ನಡೆಯುತ್ತಿದೆ. ಇದರ ಮಧ್ಯೆ ಆರ್‌ಜೆಡಿ ನಾಯಕ, ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್(Tejashwi Yadav) ಅವರು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ತಾನೇ ಮೈತ್ರಿಕೂಟದ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ 'ವೋಟರ್ ಅಧಿಕಾರ ಯಾತ್ರೆ'ಯಲ್ಲಿ ಭಾಗವಹಿಸಿದ್ದ ತೇಜಸ್ವಿ, ಅರಾದಲ್ಲಿ ನಡೆದ ಸಮಾರಂಭದಲ್ಲಿ ಈ ಘೋಷಣೆ ಮಾಡಿದರು.
ಸೆಪ್ಟೆಂಬರ್ 1ರಂದು ಪಾಟ್ನಾ ನಗರದಲ್ಲಿ ಬೃಹತ್ ಪಾದಯಾತ್ರೆ ಕೈಗೊಳ್ಳುವ ಮೂಲಕ 'ವೋಟರ್ ಅಧಿಕಾರ ಯಾತ್ರೆ' ಮುಕ್ತಾಯವಾಗಲಿದ್ದು, ಇಂಡಿಯಾ ಮೈತ್ರಿಕೂಟದ ನಾಯಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
"ತೇಜಸ್ವಿ ಆಗೇ ಆಗೇ.. ಸರ್ಕಾರ್ ಪೀಚೇ ಪೀಚೇ. ಒರಿಜಿನಲ್ ಸಿಎಂ ಚಾಹಿಯೇ ಕಿ ಡೂಪ್ಲಿಕೇಟ್?" (ತೇಜಸ್ವಿ ಮುಂದೆ ಹೋಗುತ್ತಿದ್ದರೆ ಸರ್ಕಾರ ಅವರನ್ನು ಹಿಂಬಾಲಿಸುತ್ತಿದೆ. ನಿಮಗೆ ತಾಜಾ ಸಿಎಂ ಬೇಕೇ ನಕಲಿ ಸಿಎಂ ಬೇಕೇ) ಎಂದು ತೇಜಸ್ವಿ ಪ್ರೇಕ್ಷಕರನ್ನು ಪ್ರಶ್ನಿಸಿದರು. ರಾಹುಲ್ ಮತ್ತು ಇತರ ಇಂಡಿಯಾ ಮೈತ್ರಿ ನಾಯಕರು ತೇಜಸ್ವಿ ಅವರನ್ನೇ ದಿಟ್ಟಿಸಿ ನೋಡುತ್ತಿರಬೇಕಾದರೆ ಸಭೆಯಿಂದ ಒರಿಜಿನಲ್ ಸಿಎಂ ಎಂಬ ಉತ್ತರ ಬಂದಾಗ, ತೇಜಸ್ವಿ ಅದನ್ನು ಪುನರಾವರ್ತಿಸಲು ಹೇಳಿದರು.
ಕೆಲ ದಿನಗಳ ಹಿಂದೆ ಚುನಾವಣಾ ಆಯೋಗವು ಬಿಜೆಪಿಯ ಪರವಾಗಿ ಕೆಲಸ ಮಾಡುವ ಮೂಲಕ ‘ಗೋದಿ ಆಯೋಗ’ವಾಗಿ ಬದಲಾಗಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದರು. ಚುನಾವಣಾ ಆಯೋಗವು ತನ್ನ ನಂಬಿಕೆಯನ್ನು ಕಳೆದುಕೊಂಡಿದೆ. ಬಿಹಾರದಲ್ಲಿ ಎಸ್‌ಐಆರ್ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ ಮಾಡಿದೆ. ಇದು ಜನರ ಮತವನ್ನು ಕಳ್ಳತನ ಮಾಡುವ ಪ್ರಯತ್ನವಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರ ರೀತಿ ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದರು.
ಬಿಹಾರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯು ಚುನಾವಣಾ ಆಯೋಗದ ಮೂಲಕ ಮತ ಕಳ್ಳತನ ಮಾಡುವುದನ್ನು ನಾವು ತಡೆಯುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ ಬಿಹಾರದಲ್ಲಿ ಪ್ರಧಾನಿ ಮೋದಿಯನ್ನು ನಿಂದಿಸಿದ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗುತ್ತಿದೆ; ಬಿಜೆಪಿ ಬೆಂಬಲಿಗನ ಆರೋಪ