ʼಕಾಂತಾರ ಚಾಪ್ಟರ್ 1ʼ ಬಿಡುಗಡೆ ಹೊತ್ತಲ್ಲೇ ರಿಷಬ್ ಶೆಟ್ಟಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್; ಪ್ರಶಾಂತ್ ನೀಲ್-ಜೂ. ಎನ್‌ಟಿಆರ್ ಚಿತ್ರದಲ್ಲಿ ಡಿವೈನ್ ಸ್ಟಾರ್?
Actor Rishab Shetty: ʼಕಾಂತಾರʼ, ʼಕೆಜಿಎಫ್ʼ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ರಿಷಬ್ ಶೆಟ್ಟಿ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ಗಾಗಿ ಕಾಯುತ್ತಿರುವವರಿಗೆ ಗುಡ್‌ನ್ಯೂಸ್ ಹೊರಬಿದ್ದಿದೆ. ಪ್ರಶಾಂತ್ ನೀಲ್-ಜೂ. ಎನ್‌ಟಿಆರ್ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

-

ಬೆಂಗಳೂರು: ಇಡೀ ಸಿನಿ ಜಗತ್ತನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ, ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Actor Rishab Shetty) ನಟಿಸಿ, ನಿರ್ದೇಶಿಸುತ್ತಿರುವ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 2ರಂದು ಕನ್ನಡವೂ ಸೇರಿದಂತೆ 7 ಭಾಷೆಗಳಲ್ಲಿ, 30ಕ್ಕೂ ಹೆಚ್ಚು ದೇಶಗಳಲ್ಲಿ ಇದು ರಿಲೀಸ್ ಆಗಲಿದೆ. 2022ರಲ್ಲಿ ರಿಲೀಸ್ ಆದ ʼಕಾಂತಾರʼ (Kantara) ಸಿನಿಮಾದ ಪ್ರೀಕ್ವೆಲ್ ಇದಾಗಿದ್ದು, ಈ ಕಾರಣಕ್ಕೆ ಭಾರಿ ನಿರೀಕ್ಷೆ ಮೂಡಿಸಿದೆ. ಕೊನೆಯ ಹಂತದಲ್ಲಿ ತಯಾರಿಯಲ್ಲಿ ರಿಷಬ್ ಶೆಟ್ಟಿ ಮತ್ತು ತಂಡ ನಿರತವಾಗಿದ್ದು, ಈ ಮಧ್ಯೆ ಮತ್ತೊಂದು ಥ್ರಿಲ್ಲಿಂಗ್ ಸುದ್ದಿ ಹೊರಬಿದ್ದಿದೆ. ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು ದಾಖಲೆ ಬರೆದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ʼಕೆಜಿಎಫ್ 2ʼ ಭಾರಿ ಯಶಸ್ಸಿನ ಬಳಿಕ ಟಾಲಿವುಡ್‌ಗೆ ಹಾರಿರುವ ಪ್ರಶಾಂತ್ ನೀಲ್ ಪ್ರಭಾಸ್ ಜತೆಗಿನ ʼಸಲಾರ್ʼ ನಂತರ ಇದೀಗ ಜೂ. ಎನ್‌ಟಿಆರ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ʼಡ್ರ್ಯಾಗನ್ʼ ಎನ್ನುವ ತಾತ್ಕಾಲಿಕ ಟೈಟಲ್ ಹೊಂದಿರುವ ಈ ಚಿತ್ರದ ಶೂಟಿಂಗ್ ಭರರಿಂದ ಸಾಗುತ್ತಿದೆ. ಆ್ಯಕ್ಷನ್ ಪ್ಯಾಕ್ಡ್ ಚಿತ್ರವಾಗಿರುವ ಇದರ ಶೂಟಿಂಗ್ ಕರ್ನಾಟಕ ಸೇರಿದಂತೆ ದೇಶದ ವಿವಿಧ ಕಡೆ ನಡೆಯುತ್ತಿದೆ. ಜತೆಗೆ ಚಿತ್ರತಂಡ ಅಕ್ಟೋಬರ್‌ನಲ್ಲಿ ವಿದೇಶಕ್ಕೂ ಹಾರುವ ಸಿದ್ಧತೆ ಮಾಡಿಕೊಂಡಿದೆ. ಈ ಮಧ್ಯೆ ಈ ಬಹುನಿರೀಕ್ಷಿತ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಈ ಸುದ್ದಿಯನ್ನೂ ಓದಿ: NTRNeel Movie: ಶೀಘ್ರದಲ್ಲೇ ವಿದೇಶಕ್ಕೆ ಹಾರಲಿದ್ದಾರೆ ಪ್ರಶಾಂತ್ ನೀಲ್; ಮತ್ತಷ್ಟು ಹಿರಿದಾಗುತ್ತಿದೆ ಜೂ. ಎನ್‌ಟಿಆರ್ ಚಿತ್ರ
ರಿಷಬ್ ನಟಿಸುತ್ತಾರಾ?
123ತೆಲುಗು ವೆಬ್‌ಸೈಟ್ ವರದಿಯ ಪ್ರಕಾರ ʼಡ್ರ್ಯಾಗನ್ʼ ಚಿತ್ರದ ಅತಿಥಿ ಪಾತ್ರಕ್ಕೆ ರಿಷಬ್ ಶೆಟ್ಟಿ ಅವರನ್ನು ಸಂಪರ್ಕಿಸಲಾಗಿದೆಯಂತೆ. ಅವರೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅದಾಗ್ಯೂ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ. ಹಾಗೆ ನೋಡಿದರೆ ಜೂ. ಎನ್‌ಟಿಆರ್ ಜತೆಗೆ ರಿಷಬ್ ಶೆಟ್ಟಿ ಉತ್ತಮ ಒಡನಾಟ ಹೊಂದಿದ್ದಾರೆ. ಹಿಂದೊಮ್ಮೆ ಜೂ. ಎನ್‌ಟಿಆರ್, ಪ್ರಶಾಂತ್ ನೀಲ್ ಕುಂದಾಪುರಕ್ಕೆ ಆಗಮಿಸಿ ರಿಷಬ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದರು. ಅಲ್ಲದೆ ರಿಷಬ್ ಶೆಟ್ಟಿ ಮುಂದೆ ʼಕಾಂತಾರ 3ʼ ಮಾಡುತ್ತಿದ್ದು, ಅದರಲ್ಲಿ ಜೂ. ಎನ್‌ಟಿಆರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಗಾಳಿ ಸುದ್ದಿಯೂ ಹರಿದಾಡುತ್ತಿದೆ. ಈ ಎಲ್ಲ ಕಾರಣದಿಂದ ರಿಷಬ್ ʼಡ್ರ್ಯಾಗನ್ʼ ಸಿನಿಮಾದಲ್ಲಿ ಅಭಿನಯಿಸಿದರೆ ಯಾವುದೇ ಅಚ್ಚರಿ ಇಲ್ಲ ಎನ್ನುವ ಮಾತೂ ಕೇಳಿ ಬಂದಿದೆ.
ʼಡ್ರ್ಯಾಗನ್ʼ ಚಿತ್ರದಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದು ಮುಂದಿನ ವರ್ಷ ತೆರೆಗೆ ಬರಲಿದೆ. ʼಕಾಂತಾರʼ ಚಿತ್ರದ ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ಆಗಿದ್ದು, ವಿವಿಧ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದು, ತೆಲುಗು ಮತ್ತು ಹಿಂದಿಯ ಬಿಗ್ ಬಜೆಟ್ ಚಿತ್ರಗಳನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ. ಇದೀಗ ʼಡ್ರ್ಯಾಗನ್ʼನಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ದೈತ್ಯ ಪ್ರತಿಭೆಗಳ ಈ ಸಂಗಮದ ಅಧಿಕೃತ ಪ್ರಕಟಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.