Kaliyugam Movie: ʼಕಲಿಯುಗಂʼ ತಮಿಳು ಚಿತ್ರದಲ್ಲಿ ಕನ್ನಡಿಗರದ್ದೇ ಹವಾ; ಕಿಶೋರ್-ಶ್ರದ್ಧಾ ಶ್ರೀನಾಥ್ ನಟನೆಯ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್
Shraddha Srinath: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಕಲಾವಿದರಾದ ಕಿಶೋರ್ ಮತ್ತು ಶ್ರದ್ಧಾ ಶ್ರೀನಾಥ್ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿರುವ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾದ ʼಕಲಿಯುಗಂʼ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಮೇ 9ರಂದು ಈ ಬಹುನಿರೀಕ್ಷಿತ ಸಿನಿಮಾ ತೆರೆ ಕಾಣಲಿದೆ.


ಚೆನ್ನೈ: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಕಲಾವಿದರಾದ ಕಿಶೋರ್ (Kishore) ಮತ್ತು ಶ್ರದ್ಧಾ ಶ್ರೀನಾಥ್ (Shraddha Srinath) ಪರಭಾಷೆಯಲ್ಲಿಯೂ ಛಾಪು ಮೂಡಿಸಿದ್ದಾರೆ. ಇವರು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿಯೂ ಗಮನ ಸೆಳೆದಿದ್ದಾರೆ. ಇದೀಗ ಇವರಿಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಿರುವ ತಮಿಳು-ತೆಲುಗಿನ ದ್ವಿಭಾಷಾ ಚಿತ್ರ ʼಕಲಿಯುಗಂʼ (Kaliyugam Movie)ನ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮೇ 9ರಂದು ಈ ಬಹುನಿರೀಕ್ಷಿತ ಸಿನಿಮಾ ತೆರೆ ಕಾಣಲಿದೆ.
ವಿಶೇಷ ಎಂದರೆ ʼಕಲಿಯುಗಂʼ ಭವಿಷ್ಯತ್ತಿನ ಕಥೆ ಹೇಳಲಿದೆ. 2064ರಲ್ಲಿ ಏನಾಗಲಿದೆ, ಸಮಾಜ ಯಾವ ರೀತಿ ಬದಲಾಗಲಿದೆ ಎನ್ನುವುದನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ. ಈಗಾಗಲೇ ಹೊರ ಬಂದಿರುವ ಟ್ರೈಲರ್ ಗಮನ ಸೆಳೆದಿದ್ದು, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗಿದೆ. ಆರ್.ಕೆ. ಇಂಟರ್‌ನ್ಯಾಶನಲ್ ಮತ್ತು ಪ್ರೈಮ್ ಸಿನಿಮಾಸ್ ಬ್ಯಾನರ್‌ನಡಿ ಕೆ.ಎಸ್.ರಾಮಕೃಷ್ಣ ಮತ್ತು ಕೆ.ರಾಮ್‌ಚರಣ್ ನಿರ್ಮಿಸಿರುವ ಈ ಚಿತ್ರವನ್ನು ಪ್ರಮೋದ್ ಸುಂದರ್ ನಿರ್ದೇಶಿಸಿದ್ದಾರೆ. ಇದು ಇವರ ಮೊದಲ ಚಿತ್ರ.
ʼಕಲಿಯುಗಂʼ ಚಿತ್ರದ ಪೋಸ್ಟರ್ ಇಲ್ಲಿದೆ:
Kaliyugam from May 9 2025!#KaliyugamFromMay9@ShraddhaSrinath #Kishore @rkintrnational @primecinemas_ @MythriRelease @rck_dop @SonyMusicSouth @nimzcut #Dawnvincent @iniyansubramani @SaktheeArtDir @SidhooU @PraveenRaja_Off @sivadigitalart #TapasNayak @proyuvraaj @Sreedharsri4u pic.twitter.com/qelI1oS6VU
— Pramodh Sundar (@prastories) April 19, 2025
ಈ ಸುದ್ದಿಯನ್ನೂ ಓದಿ: Billa Ranga Baasha: ಬಹುನಿರೀಕ್ಷಿತ ʼಬಿಲ್ಲ ರಂಗ ಭಾಷʼದ ಶೂಟಿಂಗ್ ಆರಂಭ; ಕಿಚ್ಚ ಸುದೀಪ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ
ಭವಿಷ್ಯದ ಕಥೆ
2064ರಲ್ಲಿ ಮಾನವರು ಹೇಗೆ ಬದುಕುತ್ತಾರೆ, ಬದುಕುಳಿಯುತ್ತಾರೆ ಮತ್ತು ಅಂತಿಮವಾಗಿ ಸಾಯುತ್ತಾರೆ ಎಂಬುದನ್ನು ತಿಳಿಸುವ ಸೈನ್ಸ್-ಫಿಕ್ಷನ್ ಸಿನಿಮಾ ಇದಾಗಿದೆ. ಪುರಾಣದಲ್ಲಿ ಉಲ್ಲೇಖಿಸಿರುವ ಕಲಿಯುಗದ ಸಂಕೇತವಾಗಿ ಈ ಟೈಟಲ್ ಇಡಲಾಗಿದೆ. ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಭವಿಷ್ಯದ ಕಥೆ ಹೇಳುವ ಟ್ರೆಂಡ್ ಚಿತ್ರರಂಗದಲ್ಲಿ ಆರಂಭವಾಗಿದೆ. ಕಳೆದ ವರ್ಷ ತೆರೆಕಂಡ ಪ್ರಭಾಸ್-ದೀಪಿಕಾ ಪಡುಕೋಣೆ-ಅಮಿತಾಭ್ ಬಚ್ಚನ್ ನಟನೆಯ ʼಕಲ್ಕಿ 2898 ಎಡಿʼ, ಉಪೇಂದ್ರ ನಟಿಸಿ ನಿರ್ದೇಶಿಸಿದ ʼಯುಐʼ ಸಿನಿಮಾಗಳು ಭವಿಷ್ಯತ್ತಿನ ಕರಾಳ ಮುಖವನ್ನು ತೆರೆದಿಟ್ಟಿದ್ದವು. ʼಕಲ್ಕಿʼ ಚಿತ್ರದಲ್ಲಿ 2898ನೇ ಇಸವಿಯಲ್ಲಿ ಏನಾಗಲಿದೆ ಎಂದು ವಿವರಿಸಿದರೆ, ʼಯುಐʼಯಲ್ಲಿ 2040ರ ಜಗತ್ತು ಹೇಗಿರಲಿದೆ ಎನ್ನುವುದನ್ನು ತಿಳಿಸಲಾಗಿತ್ತು. ಅಲ್ಲದೆ ಇತ್ತೀಚೆಗೆ ಸೆಟ್ಟೇರಿದ ಕಿಚ್ಚ ಸುದೀಪ್-ಅನೂಪ್ ಭಂಡಾರಿ ಕಾಂಬಿನೇಷನ್ ʼಬಿಲ್ಲ ರಂಗ ಭಾಷʼದ ಕಥೆ 2209ರ ಕಾಲಘಟ್ಟದಲ್ಲಿ ನಡೆಯಲಿದೆಯಂತೆ. ಅಂದರೆ 185 ವರ್ಷಗಳ ಬಳಿಕ ಏನಾಗಲಿದೆ ಎನ್ನುವುದನ್ನು ರೋಚಕವಾಗಿ ಅನೂಪ್ ಕಟ್ಟಿ ಕೊಡಲಿದ್ದಾರೆ.
ಕೆಲವು ವರ್ಷಗಳ ಹಿಂದೆ ರೆಟ್ರೋ ಶೈಲಿಯ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಹಿಂದಿನ ಕಾಲದಲ್ಲಿ ಏನಾಗಿತ್ತು ಎನ್ನುವುದನ್ನು ತೆರೆಮೇಲೆ ಪ್ರಸ್ತುತಪಡಿಸಲಾಗುತ್ತಿತ್ತು. ಇದೀಗ ಚಿತ್ರ ನಿರ್ದೇಶಕರ ಕಣ್ಣು ಭವಿಷ್ಯದತ್ತ ನೆಟ್ಟಿದೆ.
ʼಕಲಿಯುಗಂʼ ಚಿತ್ರದ ಟ್ರೈಲರ್ ಇಲ್ಲಿದೆ:
ನಿರ್ಮಾಪಕರು ಹೇಳಿದ್ದೇನು?
ʼಕಲಿಯುಗಂʼ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ಮಾಪಕ ಕೆ.ಎಸ್.ರಾಮಕೃಷ್ಣ ಈ ಚಿತ್ರವು ಇಂದಿನ ಪೀಳಿಗೆಗೆ ಹೆಚ್ಚು ಪ್ರಸ್ತುತವಾಗಲಿದೆ ಎಂದು ತಿಳಿಸಿದ್ದರು. ಅದ್ಧೂರಿಯಾಗಿ ಚಿತ್ರವನ್ನು ಕಟ್ಟಿ ಕೊಡಲಾಗಿದ್ದು, ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸವನ್ನು ಅನ್ನು ನಾರ್ವೆಯಲ್ಲಿ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ಈ ಚಿತ್ರದಲ್ಲಿ ಕಿಶೋರ್, ಶ್ರದ್ಧಾ ಶೀನಾಥ್ ಜತೆಗೆ ಇನಿಯನ್ ಸುಬ್ರಮಣಿ, ಹ್ಯಾರಿ, ಅಸ್ಮಲ್, ಸಂತೋಷ್, ಆರ್ಯ ಲಕ್ಷ್ಮೀ, ಮಾಸ್ಟರ್ ರೋನಿತ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.