ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼಟಾಕ್ಸಿಕ್‌ʼ ಚಿತ್ರದಿಂದ ಬಿಗ್‌ ಅಪ್‌ಡೇಟ್‌; ಯಶ್‌ ಜತೆ ಹಾಲಿವುಡ್ ಸ್ಟಂಟ್ ಮ್ಯಾನ್ ಜೆ.ಜೆ. ಪೆರ್ರಿ ಸಾಹಸ: 45 ದಿನಗಳ ಆ್ಯಕ್ಷನ್‌ ಚಿತ್ರೀಕರಣಕ್ಕೆ ಚಾಲನೆ

J.J.Perry: ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನ ಶೂಟಿಂಗ್‌ ನಡೆಯುತ್ತಿದೆ. ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಚಿತ್ರಕ್ಕೆ ಹಾಲಿವುಡ್‌ನ ಸ್ಟಂಟ್‌ ಮ್ಯಾನ್‌ ಜೆ.ಜೆ. ಪೆರ‍್ರಿ ಸಾಹಸ ದೃಶ್ಯ ಸಂಯೋಜಿಸುತ್ತಿದ್ದಾರೆ. ಸದ್ಯ ಮುಂಬೈಯಲ್ಲಿ ಮತ್ತೊಂದು ಹಂತದ ಶೂಟಿಂಗ್‌ ಆರಂಭಗೊಂಡಿದೆ.

ʼಟಾಕ್ಸಿಕ್‌ʼ ಚಿತ್ರದ 45 ದಿನಗಳ ಆ್ಯಕ್ಷನ್‌ ಚಿತ್ರೀಕರಣಕ್ಕೆ ಚಾಲನೆ

Ramesh B Ramesh B Aug 25, 2025 5:14 PM

ಮುಂಬೈ: ʼಕೆಜಿಎಫ್‌ʼ (KGF) ಸರಣಿ ಚಿತ್ರಗಳ ಮೂಲಕ ಗ್ಲೋಬಲ್‌ ಸ್ಟಾರ್‌ ಆಗಿ ಗುರುತಿಸಿಕೊಂಡ ಯಶ್‌ (Yash) ದೇಶದ ಬಹು ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಸದ್ಯ ಅವರು ಬಹುನಿರೀಕ್ಷಿತ ಕನ್ನಡ-ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ 'ಟಾಕ್ಸಿಕ್‌' ಸಿನಿಮಾದಲ್ಲಿ (Toxic Movie) ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಹಾಲಿವುಡ್‌ನ 'ಜಾನ್‌ ವಿಕ್‌', 'ಫಾಸ್ಟ್‌ & ಫ್ಯೂರಿಯಸ್‌' ಮುಂತಾದ ಚಿತ್ರಗಳಿಗೆ ಸ್ಟಂಟ್‌ ಮ್ಯಾನ್‌ ಆಗಿ ಕಾರ್ಯ ನಿರ್ವಹಿಸಿದ ಜೆ.ಜೆ. ಪೆರ‍್ರಿ (J.J.Perry) ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಇದಿಗ ಬರೋಬ್ಬರಿ 45 ದಿನಗಳ ಆ್ಯಕ್ಷನ್‌ ದೃಶ್ಯಗಳ ಚಿತ್ರೀಕರಣಕ್ಕೆ ಮುಂಬೈಯಲ್ಲಿ ಚಾಲನೆ ನೀಡಲಾಗಿದೆ.

ಯಶ್‌, ಜೆ.ಜೆ. ಪೆರ‍್ರಿ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್‌ (Geethu Mohandas) ಜತೆಗೆ ನಿಂತಿರುವ, ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಫೋಟೊಗಳನ್ನು ಸಿನಿಮಾತಂಡ ಹಂಚಿಕೊಂಡಿದೆ. ಹಿಂದೆಂದೂ ಭಾರತೀಯ ಚಿತ್ರರಂಗದಲ್ಲೇ ಕಂಡುಬರದ ರೀತಿಯ, ಮೈ ನವಿರೇಳಿಸುವ ಹಾಗೆ ಜೆ.ಜೆ.ಪೆರ‍್ರಿ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿದ್ದಾರೆ ಎನ್ನಲಾಗಿದೆ.



ಈ ಸುದ್ದಿಯನ್ನೂ ಓದಿ: Toxic Movie: ʼಟಾಕ್ಸಿಕ್‌ʼ ಚಿತ್ರದ ಶೂಟಿಂಗ್‌ಗಾಗಿ ಮುಂಬೈಗೆ ಮರಳಿದ ಯಶ್‌; ಭರ್ಜರಿ ಆ್ಯಕ್ಷನ್‌ ದೃಶ್ಯಗಳಲ್ಲಿ ರಾಕಿ ಭಾಯ್‌ ಮಿಂಚು

ಕೆಲವು ತಿಂಗಳ ಹಿಂದೆ ಒಂದು ಹಂತದ ಶೂಟಿಂಗ್‌ ಮುಗಿಸಿರುವ ಜೆ.ಜೆ.ಪೆರ‍್ರಿ ಇದೀಗ ಮತ್ತೊಮ್ಮೆ ಚಿತ್ರತಂಡವನ್ನು ಕೂಡಿಕೊಂಡಿದ್ದಾರೆ. ಭಾರತೀಯ ತಂಡದೊಂದಿಗೆ ಕಾರ್ಯ ನಿರ್ವಹಿಸಲು ಉತ್ಸುಕರಾಗಿರುವುದಾಗಿ ಜೆ.ಜೆ.ಪೆರ‍್ರಿ ತಿಳಿಸಿದ್ದಾರೆ. ʼʼಪ್ರಮುಖ ದೃಶ್ಯಗಳ ಚಿತ್ರೀಕರಣವನ್ನು ಕೈಗೆತ್ತಿಕೊಂಡಿದ್ದೇವೆ. ಸವಾಲಿನ ಪರಿಸ್ಥಿತಿಯನ್ನು ಎದುರಿಸುವುದು ನನಗೆ ಇಷ್ಟ. ನಾನು ಮತ್ತು ತಂಡದವರು ಸೇರಿ ಗಡಿಯನ್ನು ವಿಸ್ತರಿಸುತ್ತಿದ್ದೇವೆ. ಈ ಮೂಲಕ ಹೊಸ ಸಾಹಸಕ್ಕೆ, ಹೊಸ ರೀತಿಯ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇವೆʼʼ ಎಂದಿದ್ದಾರೆ. ಆ ಮೂಲಕ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಕಟ್ಟಿಕೊಡುವ ಸೂಚನೆ ನೀಡಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್​​ ಮತ್ತು ನಟ ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯರಾಗಿ ವಿವಿಧ ಚಿತ್ರರಂಗದ ಪ್ರಮುಖ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತಿತರರು ಮುಖ್ಯಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇವರೊಂದಿಗೆ ಕನ್ನಡದ ರುಕ್ಮಿಣಿ ವಸಂತ್‌ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರ ಬಿದ್ದಿಲ್ಲ.

ಯಶ್‌ ಅವರ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಜನವರಿ 8ರಂದು ರಿಲೀಸ್‌ ಆಗಿರುವ ಚಿತ್ರದ ಟೀಸರ್‌ ಈಗಾಗಲೇ ಗಮನ ಸೆಳೆದಿದ್ದು, ದಾಖಲೆಯ ವೀಕ್ಷಣೆ ಕಂಡಿದೆ. ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿ ಬರುತ್ತಿರುವ ಸೂಚನೆಯನ್ನು ಈ ಟೀಸರ್‌ ಬಹಿರಂಗಪಡಿಸಿದ್ದು, ಯಶ್‌ ಅವರ ಸ್ಟೈಲಿಶ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಜತೆಗೆ ಹಾಲಿವುಡ್‌ ರೇಂಜಿನಲ್ಲೇ ಟೀಸರ್‌ ಕಂಡು ಬಂದಿದ್ದು, ಸ್ಯಾಂಡಲ್‌ವುಡ್‌ನ ದಿಶೆಯನ್ನೇ ಬದಲಾಯಿಸುವ ಎಲ್ಲ ಸಾಮರ್ಥ್ಯವನ್ನೂ ಇದು ಒಳಗೊಂಡಿದೆ.

ರಿಲೀಸ್‌ ಯಾವಾಗ?

ಈಗಾಗಲೇ ಚಿತ್ರದ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಆಗಿದ್ದು, ಮುಂದಿನ ವರ್ಷ ತೆರೆ ಕಾಣಲಿದೆ. 2026ರ ಮಾರ್ಚ್‌ 19ರಂದು ಕನ್ನಡ, ಇಂಗ್ಲಿಷ್‌ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲೂ ರಿಲೀಸ್‌ ಆಗಲಿದೆ.