Operation Akhal: ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ; ಇಬ್ಬರ ಎನ್‌ಕೌಂಟರ್, ಓರ್ವ ಯೋಧನಿಗೆ ಗಾಯ
ಆಪರೇಷನ್ ಅಖಾಲ್ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಅಡಗಿದ್ದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಓರ್ವ ಯೋಧನಿಗೆ ಗಂಭೀರ ಗಾಯಗಳಾಗಿವೆ. ಶನಿವಾರ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡಿದ್ದರು.


ಶ್ರೀನಗರ: ಆಪರೇಷನ್ ಅಖಾಲ್ (Operation Akhal) ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಅಡಗಿದ್ದ ಇಬ್ಬರು ಭಯೋತ್ಪಾದಕರನ್ನು (Terrorist Encounter) ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಓರ್ವ ಯೋಧನಿಗೆ ಗಂಭೀರ ಗಾಯಗಳಾಗಿವೆ. ಶನಿವಾರ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡಿದ್ದರು. ಈ ವರೆಗೆ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಒಟ್ಟು ಭಯೋತ್ಪಾದಕರ ಸಂಖ್ಯೆ 5 ಕ್ಕೆ ಏರಿದೆ. ದಕ್ಷಿಣ ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ರಾತ್ರಿಯಿಡೀ ಸ್ಫೋಟಗಳು ಮತ್ತು ಗುಂಡಿನ ಸದ್ದುಗಳು ಮುಂದುವರೆದವು.
ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ಗೆ ಸೇರಿದವರು ಎಂದು ತಿಳಿದು ಬಂದಿದೆ. ಶ್ರೀನಗರ ಬಳಿಯ ದಚಿಗಮ್ ರಾಷ್ಟ್ರೀಯ ಉದ್ಯಾನವನದೊಳಗೆ ಭಯೋತ್ಪಾದಕರು ಅಡಗಿದ್ದರು. ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ. ಶುಕ್ರವಾರ, ಅಖಾಲ್ ಅರಣ್ಯದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಕಾಡಿನಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರ ಗುಂಪೊಂದು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಎನ್‌ಕೌಂಟರ್ ನಡೆಯಿತು.ಆರಂಭಿಕ ಗುಂಡಿನ ಚಕಮಕಿಯ ನಂತರ, ಶುಕ್ರವಾರ ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಶನಿವಾರ ಮತ್ತೆ ಕಾರ್ಯಾಚರಣೆ ಪುನರಾರಂಭವಾಯಿತು, ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಕೊಂದರು.
ಈ ಸುದ್ದಿಯನ್ನೂ ಓದಿ: Land Slide: ಜಮ್ಮು ಕಾಶ್ಮೀರದಲ್ಲಿ ಭಾರೀ ಭೂಕುಸಿತ; SDM ರಾಜಿಂದರ್ ಸಿಂಗ್ ರಾಣಾ, ಪುತ್ರ ಸ್ಥಳದಲ್ಲಿಯೇ ಸಾವು, ಪತ್ನಿಗೆ ಗಂಭೀರ ಗಾಯ
ಈ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಜೀವ ಸಹಿತ ಸೆರೆ ಹಿಡಿಯಲಾಗಿದೆ ಎಂದು ಸೇನೆ ತಿಳಿಸಿದೆ. ಈ ವಾರದ ಆರಂಭದಲ್ಲಿ, ಶ್ರೀನಗರದ ದಾಚಿಗಾಮ್‌ನಲ್ಲಿ ದಾಳಿಯ ಮಾಸ್ಟರ್‌ಮೈಂಡ್ ಸುಲೇಮಾನ್ ಶಾ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು. ಮರುದಿನ, ‘ಆಪರೇಷನ್ ಶಿವ ಶಕ್ತಿ’ ಅಡಿಯಲ್ಲಿ ಪೂಂಚ್ ವಲಯದ ಗಡಿರೇಖೆಯಲ್ಲಿ ಒಳನುಸುಳಲು ಯತ್ನಿಸಿದ ಇನ್ನಿಬ್ಬರು ಭಯೋತ್ಪಾದಕರನ್ನು ಕೊಲ್ಲಲಾಯಿತು.