20,000 ಭದ್ರತಾ ಸಿಬ್ಬಂದಿ, ಎನ್‌ಡಿಆರ್‌ಎಫ್ ಪಡೆ, ಸಿಸಿ ಕ್ಯಾಮರಾ: ದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸರ್ಪಗಾವಲು
Preparations for Independence Day Celebrations: ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಾಗ, ದೆಹಲಿಯು ಕೆಂಪು ಕೋಟೆಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭದ್ರತಾ ವ್ಯವಸ್ಥೆಯ ಭಾಗವಾಗಿ ದೆಹಲಿ ಪೊಲೀಸ್ ಸಿಬ್ಬಂದಿ, ಅರೆಸೇನಾ ಪಡೆಗಳು, ಕಮಾಂಡೋಗಳು ಹಾಗೂ ಎನ್‌ಎಸ್‌ಜಿ ತಂಡಗಳನ್ನು ನಿಯೋಜಿಸಲಾಗಿದೆ.
ಕೆಂಪು ಕೋಟೆಯ ಸುತ್ತಲೂ ಬಿಗಿ ಭದ್ರತೆ -
ನವದೆಹಲಿ, ಆ. 9: ಸ್ವಾತಂತ್ರ್ಯ ದಿನಾಚರಣೆಗೆ (Independence Day) ಕೆಲವೇ ದಿನಗಳು ಬಾಕಿ ಇರುವಾಗ, ದೆಹಲಿಯು ಕೆಂಪು ಕೋಟೆಯ (Red Fort) ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶವನ್ನುದ್ದೇಶಿಸಿ ಆಗಸ್ಟ್ 15ರಂದು ಭಾಷಣ ಮಾಡಲಿದ್ದಾರೆ. ಹೀಗಾಗಿ ಈ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲು ಸುಮಾರು 20,000 ಸಿಬ್ಬಂದಿ ಮತ್ತು ಬಹು-ಹಂತದ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕಳೆದ ವರ್ಷ ಕೆಂಪು ಕೋಟೆ ಸಮೀಪದ ಮೆಟ್ರೋ ನಿಲ್ದಾಣದ ಬಳಿ ಬಾಂಬ್ ಸ್ಫೋಟ ನಡೆದಿದ್ದರಿಂದ ಸರ್ಪಗಾವಲು ಹೆಚ್ಚಿಸಲಾಗಿದೆ.
ದೆಹಲಿ ಪೊಲೀಸ್ ಸಿಬ್ಬಂದಿ, ಅರೆಸೇನಾ ಪಡೆಗಳು, ಕಮಾಂಡೋಗಳು ಹಾಗೂ ಎನ್‌ಎಸ್‌ಜಿ ತಂಡಗಳನ್ನು ವಿವಿಧ ಕಡೆಗಳಲ್ಲಿ ನಿಯೋಜಿಸಲಾಗಿದೆ. ಇದರಲ್ಲಿ ಸ್ನೈಪರ್‌ಗಳು ಮತ್ತು ವಿಶೇಷ ತರಬೇತಿ ಪಡೆದ ಹಿಟ್ ಟೀಮ್‌ಗಳೂ ಸೇರಿವೆ. ಕೆಂಪು ಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 1,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳು ಮತ್ತು ವಾಹನಗಳ ನಂಬರ್ ಪ್ಲೇಟ್ ಪತ್ತೆಹಚ್ಚುವ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ʼʼಭದ್ರತಾ ನಿಯೋಜನೆಯಲ್ಲಿ ಸಂಚಾರ ಘಟಕದ ದೆಹಲಿ ಪೊಲೀಸ್ ಸಿಬ್ಬಂದಿ, ಉತ್ತರ ಜಿಲ್ಲಾ ತಂಡಗಳು, ಸ್ಥಳೀಯ ಪೊಲೀಸರು, ಪಿಸಿಆರ್, ವಿಶೇಷ ಶಾಖೆ ಮತ್ತು ವಿಶೇಷ ಕೋಶದ ಸಿಬ್ಬಂದಿ ಮತ್ತು ಸಾಮಾನ್ಯ ಭದ್ರತಾ ಸಿಬ್ಬಂದಿ ಸೇರಿದ್ದಾರೆʼʼ ಎಂದು ಡಿಸಿಪಿ ಉತ್ತರ ರಾಜ ಬಂಥಿಯಾ ತಿಳಿಸಿದ್ದಾರೆ.
79ನೇ ಸ್ವಾತಂತ್ರ್ಯ ದಿನಾಚರಣೆ- ಭಾರತದ ಸ್ವಾತಂತ್ರ್ಯ ಸಂಗ್ರಾಮದ 7 ಅಪರೂಪದ ಫೋಟೋಗಳು
ʼʼಈ ಎಲ್ಲ ವಿಭಾಗಗಳ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಹೆಚ್ಚುವರಿಯಾಗಿ, ಹಲವು ಅರೆಸೇನಾ ಪಡೆಗಳ ತುಕಡಿಗಳು, ಕಮಾಂಡೋಗಳು ಹಾಗೂ ಹಿಟ್ ಟೀಮ್‌ಗಳು ಮತ್ತು ಸ್ನೈಪರ್‌ಗಳನ್ನು ಒಳಗೊಂಡ ಎನ್‌ಎಸ್‌ಜಿ ತಂಡಗಳನ್ನೂ ಇಲ್ಲಿ ಸಜ್ಜುಗೊಳಿಸಲಾಗುವುದುʼʼ ಎಂದು ಅವರು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗಾಗಿ ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಬಂಥಿಯಾ ಹೇಳಿದ್ದಾರೆ. ʼʼಮೇಲ್ವಿಚಾರಣೆ ಮಾಡಲು ಮೀಸಲಾಗಿರುವ ಹೆಚ್ಚು ತರಬೇತಿ ಪಡೆದ ಸಿಬ್ಬಂದಿಗಾಗಿ ನಿಯಂತ್ರಣ ಕೊಠಡಿಗಳನ್ನು ಹೊಂದಿದ್ದೇವೆ. ಆನ್-ಗ್ರೌಂಡ್ ರೆಸ್ಪಾನ್ಸ್ ತಂಡಗಳು ತ್ವರಿತವಾಗಿ ಕಾರ್ಯನಿರ್ವಹಿಸಲು ನಾವು ಸಜ್ಜುಗೊಳಿಸಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ.
ಕೆಲವು ಪೊಲೀಸ್ ಸಿಬ್ಬಂದಿಗೆ ದೇಹಕ್ಕೆ ಅಳವಡಿಸಿಕೊಳ್ಳುವ ಕ್ಯಾಮರಾಗಳನ್ನು ಒದಗಿಸಲಾಗುವುದು. ಡ್ರೋನ್‌ಗಳಿಂದ ಎದುರಾಗಬಹುದಾದ ಬೆದರಿಕೆಗಳನ್ನು ತಡೆಯಲು ಆ್ಯಂಟಿ-ಡ್ರೋನ್ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳ ಮೇಲೂ ಸಕ್ರಿಯವಾಗಿ ನಿಗಾ ವಹಿಸಲಾಗುತ್ತಿದೆ.
“ಎಲ್ಲ ರೀತಿಯಲ್ಲೂ ನಾವು ಸಂಪೂರ್ಣ ಸಿದ್ಧರಾಗಿದ್ದೇವೆ. ಎಲ್ಲ ಬ್ರೀಫಿಂಗ್‌ಗಳು ಹಾಗೂ ತರಬೇತಿ ಕಾರ್ಯಾಗಾರಗಳು ಪೂರ್ಣಗೊಂಡಿವೆ. ನಾವು ಸಿದ್ಧತಾ ಕಾರ್ಯದಲ್ಲಿ ಸರಿಯಾದ ಹಾದಿಯಲ್ಲಿದ್ದೇವೆ” ಎಂದು ಬಂಥಿಯಾ ತಿಳಿಸಿದ್ದಾರೆ.