ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Diamonds Found In Field: ಪರಿಶ್ರಮಕ್ಕೆ ಸಿಕ್ಕ ಫಲ; 5 ವರ್ಷ ಭೂಮಿ ಅಗೆದ ದಂಪತಿಗೆ ಸಿಕ್ತು 8 ವಜ್ರ

ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಗಣಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಗೆ 8 ವಜ್ರ ಲಭಿಸಿದೆ. ಇವರು ಇದಕ್ಕಾಗಿ 5 ವರ್ಷಗಳ ಕಾಲ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಇದರ ಬೆಲೆ 10ರಿಂದ 12 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

5 ವರ್ಷ ಭೂಮಿ ಅಗೆದ ದಂಪತಿಗೆ ಸಿಕ್ತು 8 ವಜ್ರ

Ramesh B Ramesh B Jul 23, 2025 6:26 PM

ಭೋಪಾಲ್‌: ಅದೃಷ್ಟ ಕೈ ಹಿಡಿದರೆ ಕಡು ಬಡವನೂ ಶ್ರೀಮಂತನಾಗುತ್ತಾನೆ ಎನ್ನುವ ಮಾತಿಗೆ ಈ ಘಟನೆಯೇ ಉತ್ತಮ ಉದಾಹರಣೆ. ಕಾರ್ಮಿಕ ದಂಪತಿಗೆ ಬೆಲೆ ಬಾಳುವ 8 ವಜ್ರ ಲಭಿಸಿದ್ದು, ಆ ಮೂಲಕ ಲಕ್ಷಾಧಿಪತಿಯಾಗಿ ಬದಲಾಗಿದ್ದಾರೆ (Diamonds Found In Field). ಮಧ್ಯ ಪ್ರದೇಶದ ಛತರ್‌ಪುರ್‌ ಜಿಲ್ಲೆಯ ಚಿಕ್ಕ ಗ್ರಾಮವೊಂದರ ಹರ್‌ಗೋವಿಂದ್‌ ಯಾದವ್‌ ಮತ್ತು ಪವನ್‌ ದೇವಿ ಯಾದವ್‌ ಅವರಿಗೆ ಈ ಅದೃಷ್ಟ ಒಲಿದಿದೆ. ಹಾಗಂತ ಇದು ಒಂದೇ ದಿನದಲ್ಲಿ ಒಲಿದ ಸಂಪತ್ತಲ್ಲ. ಇವರು ಸತತ 5 ವರ್ಷಗಳಿಂದ ಪನ್ನಾದ (Panna) ವಜ್ರದ ಗಣಿಯಲ್ಲಿ ಹುಡುಕಾಟ ನಡೆಸುತ್ತಲೇ ಬಂದಿದ್ದರು. ಕೊನೆಗೂ ಅವರ ಶ್ರಮಕ್ಕೆ ಫಲ ದೊರೆತಿದೆ.

ಕಳೆದ 5 ವರ್ಷಗಳಿಂದ ಹರ್‌ಗೋವಿಂದ್‌ ಯಾದವ್‌ ಮತ್ತು ಅವರ ಪತ್ನಿ ಪವನ್‌ ದೇವಿ ಯಾದವ್‌ ಗಣಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ 8 ವಜ್ರ ಪತ್ತೆಯಾಗಿದ್ದು, ಈ ಪೈಕಿ ಕೆಲವು ಉತ್ಕೃಷ್ಟ ಗುಣಮಟ್ಟದ್ದಾದರೆ ಇನ್ನು ಕೆಲವು ಕಡಿಮೆ ಗುಣಮಟ್ಟ ಹೊಂದಿವೆ ಎಂದು ಮೂಲಗಳು ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Indian Railway Department: ಪ್ರಯಾಣಿಕರಿಗೆ ಗುಡ್‌ನ್ಯೂಸ್‌! ಬೆಂಗಳೂರು ಸೇರಿ 7 ರೈಲ್ವೇ ಸ್ಟೇಷನ್‌ಗಳಲ್ಲಿ AI ತಂತ್ರಜ್ಞಾನ ಅಳವಡಿಕೆ

ಛತರ್‌ಪುರ್‌ ಜಿಲ್ಲೆಯ ತಿಲ್ವ ಪಂಚಾಯತ್‌ನ ಕಟಿಯಾ ಗ್ರಾಮದಲ್ಲಿ ಹರ್‌ಗೋವಿಂದ ಯಾದವ್‌ ಮತ್ತು ಪವನ್‌ ದೇವಿ ವಾಸಿಸುತ್ತಿದ್ದಾರೆ. ಸಿಕ್ಕ ವಜ್ರಗಳ ಬೆಲೆ 10ರಿಂದ 12 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ಪನ್ನಾದ ವಜ್ರ ವಸ್ತು ಸಂಗ್ರಹಾಲಯದಲ್ಲಿ ದಂಪತಿ ಈ ವಜ್ರಗಳನ್ನು ಠೇವಣಿ ಇಡಲಿದ್ದಾರೆ. ಅದಾದ ಬಳಿಕ ವಜ್ರದ ಬೆಲೆ ನಿಗದಿಯಾಗಲಿದ್ದು, ಹರಾಜು ನಡೆದು ದಂಪತಿಗೆ ಹಣ ಪಾವತಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಹರ್‌ಗೋವಿಂದ್‌ ಮತ್ತು ಪವನ್ ದೇವಿ ಜೀವನೋಪಾಯಕ್ಕಾಗಿ ಗಣಿಗಳಲ್ಲಿ ಹಗಲಿರುಳು ಶ್ರಮಿಸುತ್ತಿದ್ದು, ಅವರ ಕೈಯಲ್ಲಿ ಗುಳ್ಳೆಗಳು ಎದ್ದಿವೆ.

ಹರ್‌ಗೋವಿಂದ್‌ ಯಾದವ್‌ ಹೇಳಿದ್ದೇನು?

ಈ ಬಗ್ಗೆ ಮಾತನಾಡಿದ ಹರ್‌ಗೋವಿಂದ್‌ ಯಾದವ್‌, ʼʼಕಳೆದ 5 ವರ್ಷಗಳಿಂದ ನೆಲ ಅಗೆಯುತ್ತಲೇ ಇದ್ದೇವೆ. ಈ ಬಾರಿ ದೇವರು ನಮ್ಮ ಮನವಿ ಆಲಿಸಿದ್ದಾನೆ. ಒಟ್ಟು 8 ವಜ್ರ ಲಭಿಸಿದೆ. ಇವನ್ನು ಠೇವಣಿ ಇಡುತ್ತೇವೆ. ಇದರಿಂದ ಸೂಕ್ತ ಬೆಲೆ ದೊರೆಯಲಿದೆʼʼ ಎಂದು ಹೇಳಿದ್ದಾರೆ.

ಮಧ್ಯ ಪ್ರದೇಶದಲ್ಲಿ ಹಿಂದೆಯೂ ಪತ್ತೆಯಾಗಿತ್ತು ವಜ್ರ

ಮಧ್ಯ ಪ್ರದೇಶದಲ್ಲಿ ವಜ್ರ ಪತ್ತೆಯಾಗುತ್ತಿರುವುದು ಇದು ಮೊದಲ ಸಲವೇನಲ್ಲ. ಕಳೆದ ವರ್ಷವೂ ಇಂತಹದ್ದೇ ಘಟನೆಯೊಂದು ನಡೆದಿತ್ತು. 19.22 ಕ್ಯಾರಟ್‌ನ ಸುಮಾರು 80 ಲಕ್ಷ ರೂ. ಬೆಲೆಬಾಳುವ ವಜ್ರ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ವಜ್ರವನ್ನು ಪರಿಶೀಲಿಸಿದ ತಜ್ಞ ಅನುಪಮ್‌ ಸಿಂಗ್‌ ಇದು ಸುಮಾರು 80 ಲಕ್ಷ ರೂ. ಬೆಲೆಬಾಳುತ್ತದೆ ಎಂದು ತಿಳಿಸಿದ್ದರು. ʼʼಇಲ್ಲಿ 1961ರಲ್ಲಿ 54.55 ಕ್ಯಾರಟ್‌ನ ವಜ್ರ ದೊರೆತಿದ್ದರೆ, 2018ರಲ್ಲಿ 42 ಕ್ಯಾರಟ್‌ನ ವಜ್ರವನ್ನು ಹೊರ ತೆಗೆಯಲಾಗಿತ್ತು. ಇದೀಗ 19.22 ಕ್ಯಾರಟ್‌ ವಜ್ರ ಪತ್ತೆಯಾಗಿದೆʼʼ ಎಂದು ವಿವರಿಸಿದ್ದರು.

ಮಧ್ಯ ಪ್ರದೇಶದ ಉತ್ತರ ಜಿಲ್ಲೆಯಾದ ಪನ್ನಾದಲ್ಲಿ ಅಪರೂಪದ ವಜ್ರ ಲಭಿಸುತ್ತಿದ್ದು, ಇಲ್ಲಿ ಶತಮಾನಗಳಿಂದ ಗಣಿಗಾರಿಕೆ ನಡೆಯುತ್ತಿದೆ.