ಹೈದರಾಬಾದ್ ಮೆಟಾ ಕಚೇರಿ ಮೇಲೆ ಯುವ ಕಾಂಗ್ರೆಸ್ ದಾಳಿ: ಪೀಠೋಪಕರಣ ಧ್ವಂಸ, ಖಾತೆ ಮರುಸ್ಥಾಪನೆಗೆ ಆಗ್ರಹ
Youth Congress protest at Meta: ಭಾರತೀಯ ಯುವ ಕಾಂಗ್ರೆಸ್ ನಾಯಕರ ಸಾಮಾಜಿಕ ಜಾಲತಾಣ ಖಾತೆಗಳನ್ನು ಮೆಟಾ ಸಂಸ್ಥೆ ಅಮಾನತುಗೊಳಿಸಿರುವುದನ್ನು ಖಂಡಿಸಿ ಹೈದರಾಬಾದ್‌ನಲ್ಲಿರುವ ಮೆಟಾ ಕಚೇರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಮೆಟಾ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿ ಕಾರ್ಯಕರ್ತರು ಕಚೇರಿ ಆವರಣದಲ್ಲಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಮೆಟಾ ಕಚೇರಿ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರ ದಾಳಿ -
ಹೈದರಾಬಾದ್, ನ. 21: ಭಾರತೀಯ ಯುವ ಕಾಂಗ್ರೆಸ್ ನಾಯಕರ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳನ್ನು ಮೆಟಾ (Meta) ಸಂಸ್ಥೆ ಏಕಾಏಕಿ ಅಮಾನತುಗೊಳಿಸಿರುವುದನ್ನು ವಿರೋಧಿಸಿ, ತೆಲಂಗಾಣ ಯುವ ಕಾಂಗ್ರೆಸ್ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಮೆಟಾ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಮೆಟಾ ಸಂಸ್ಥೆಯ ಕಚೇರಿ ಆವರಣಕ್ಕೆ ನುಗ್ಗಿದ ನೂರಾರು ಕಾರ್ಯಕರ್ತರು, ಸಾಮಾಜಿಕ ಜಾಲತಾಣ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ದಿಢೀರ್ ಪ್ರತಿಭಟನೆಯಿಂದಾಗಿ ಕಚೇರಿ ಸುತ್ತಮುತ್ತ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಮೆಟಾ ಸಂಸ್ಥೆಯು ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಯುವ ಕಾಂಗ್ರೆಸ್ ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಯುವ ಕಾಂಗ್ರೆಸ್ ನಾಯಕರ ಅಧಿಕೃತ ಖಾತೆಗಳನ್ನು ಬ್ಲಾಕ್ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಅಮಾನತುಗೊಳಿಸಲಾದ ಎಲ್ಲ ಖಾತೆಗಳನ್ನು ತಕ್ಷಣವೇ ಮರುಸ್ಥಾಪಿಸಬೇಕು ಎಂದು ಪಟ್ಟು ಹಿಡಿದ ಕಾರ್ಯಕರ್ತರು ಕಚೇರಿ ಮುಂಭಾಗ ಧರಣಿ ನಡೆಸಿದ್ದಾರೆ.
ಮೆಟಾ ಕಚೇರಿಯಲ್ಲಿ ಯುವ ಕಾಂಗ್ರೆಸ್ ಗಲಾಟೆ: ವಿಡಿಯೊ ನೋಡಿ
#BREAKING: IYC workers stormed into BJP ka BETA - META's Hyderabad office! 🔥 Enough of blocking opposition accounts and silencing independent voices! Meta must follow India's Constitution, NOT the BJP's orders. Remove restrictions from all accounts within 7 days, or we will shut down your offices everywhere! Stop the censorship. The countdown begins!
— Telangana Youth Congress (@IYCTelangana) November 20, 2026
ಕಚೇರಿಯ ಹೂ ಕುಂಡ ಹೊಡೆದು ದಾಂದಲೆ
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊಗಳ ಪ್ರಕಾರ, ಹಲವರು ಕಚೇರಿಯ ಒಳಗೆ ಪ್ರವೇಶಿಸಿ, ಹೂ ಕುಂಡ ಹೊಡೆದು ಗಲಾಟೆ ನಡೆಸಿದ್ದಾರೆ. ಜತೆಗೆ ಹಲವು ಕಾರ್ಯಕರ್ತರ ಪೋಸ್ಟರ್‌ಗಳನ್ನು ಹಿಡಿದು ಕಚೇರಿಯಲ್ಲೇ ಕುಳಿತು ಘೋಷಣೆ ಕೂಗಿದ್ದಾರೆ. ಹೈದರಾಬಾದ್ ಪೊಲೀಸರು ಅವರ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು, ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಿದರು. ಅಲ್ಲದೆ ಮುಂಬೈಯ ಬಿಕೆಸಿ ಬಳಿಯ ಮೆಟಾ ಕಚೇರಿ ಹೊರಗೆ ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷ ಜೀನತ್ ಶಬ್ರಿನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರ ಪೋಸ್ಟರ್‌ಗಳನ್ನು ಸುಟ್ಟುಹಾಕಿದ್ದಾರೆ. ಅಲ್ಲದೇ ಮೆಟಾ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ರಾಜಸ್ಥಾನ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು; ಆಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗ
ಮೆಟಾ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಮೆಟಾವನ್ನು ಟೀಕಿಸಿದ್ದಾರೆ. ವಿದೇಶಿ ಕಂಪನಿಗಳು ನಮ್ಮ ದೇಶದಲ್ಲಿ ವ್ಯಾಪಾರ ನಡೆಸಬೇಕು ಹೊರತು ರಾಜಕೀಯವಲ್ಲ, ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸರ್ಕಾರವು ಸಹ ವಿದೇಶಿ ಕಂಪನಿಗಳ ಮೇಲೆ ತಮ್ಮ ಒತ್ತಡ ಹೇರುವ ಮೂಲಕ ಅವರ ವ್ಯವಹಾರಗಳನ್ನು ರಾಜಕೀಯಗೊಳಿಸಬಾರದು ಎಂದು ಬರೆದುಕೊಂಡಿದ್ದಾರೆ.
ಪ್ರತಿಭಟನೆಗೆ ಬಿಜೆಪಿ ಆಕ್ರೋಶ
ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯನ್ನು ಬಿಜೆಪಿ ಖಂಡಿಸಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ಪ್ರೈವೇಟ್ ಕಂಪನಿಗಳ ಕಚೇರಿಗಳನ್ನು ಧ್ವಂಸಗೊಳಿಸುವುದು ಕಾಂಗ್ರೆಸ್‌ನ ಮಾದರಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದುರ್ಬಲ ಭಾರತ ದುರ್ಬಲ ಆರ್ಥಿಕತೆಯಲ್ಲಿತ್ತು ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಗೂಂಡಾಗಳು ಎಂದು ಕರೆದಿದ್ದಾರೆ.