West Bengal CM: ಅಮಿತ್ ಶಾ ಆಯ್ಕೆಯ ನಾಯಕ ಸುವೇಂದು ಅಧಿಕಾರಿ
Suvendu Adhikari: ಪಶ್ಚಿಮ ಬಂಗಾಳದಲ್ಲಿ ಸ್ಥಿರ ಮತ್ತು ದಕ್ಷ ಆಡಳಿತ ನೀಡುವ, ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ನಿಗ್ರಹಿಸುವ ಮೂಲಕ ದೇಶದ ಆಂತರಿಕ ಭದ್ರತೆಗೆ ಪುಷ್ಟಿ ನೀಡಬೇಕಾದ ಮಹತ್ವದ ಜವಾಬ್ದಾರಿಯು ಸುವೇಂದು ಅಧಿಕಾರಿ ಅವರ ಮೇಲಿದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರಗಳನ್ನು ತಹಬದಿಗೆ ತರಬೇಕಾದ, ಕಾನೂನು ಸುವ್ಯವಸ್ಥೆ ಕಾಪಾಡುವ, ಮತ್ತು ಆರ್ಥಿಕ ಅಭಿವೃದ್ಧಿ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಅವರ ಮೇಲಿದೆ.
ಸುವೇಂದು ಅಧಿಕಾರಿ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಮೇ 8: ಸುವೇಂದು ಅಧಿಕಾರಿ (Suvendu Adhikari) 2020ರ ಡಿಸೆಂಬರ್‌ನಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದಾಗ ಪಕ್ಷದ ಚಾಣಕ್ಯ ಅಮಿತ್ ಶಾ ಇದ್ದರು. ಈಗ 2026ರಲ್ಲಿ ಅವರ ಸಮ್ಮುಖದಲ್ಲಿಯೇ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ! ಬಹುಶಃ ಆರು ವರ್ಷಗಳ ಹಿಂದೆಯೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಯೋಗ್ಯ, ದಿಟ್ಟ ನಾಯಕನನ್ನು ಅಮಿತ್ ಶಾ ಸುವೇಂದು ಅಧಿಕಾರಿಯಲ್ಲಿ ನಿಶ್ಚಿತವಾಗಿಯೂ ಕಂಡಿದ್ದರು. ಅವರ ಗ್ರಹಿಕೆ ನಿಜವಾಗಿದೆ.
ನಂದಿಗ್ರಾಮ ಚಳವಳಿಯ ಮೂಲಕ ಟಿಎಂಸಿಯನ್ನು ಅಧಿಕಾರಕ್ಕೆ ತರುವಲ್ಲಿ ಸುವೇಂದು ಅವರ ಪಾತ್ರ ದೊಡ್ಡದಾಗಿತ್ತು. ಆದರೆ, ಕಾಲಕ್ರಮೇಣ ತಮಗೆ ಸಿಗಬೇಕಾದ ಮನ್ನಣೆ ಮತ್ತು ಸ್ವಾತಂತ್ರ್ಯ ಸಿಗುತ್ತಿಲ್ಲ ಎಂದು ಅವರು ಭಾವಿಸಿದ್ದರು. ಬಿಜೆಪಿಯು ಅವರಿಗೆ ದೊಡ್ಡ ವೇದಿಕೆ ಮತ್ತು ಪ್ರಾಮುಖ್ಯತೆಯನ್ನು ನೀಡುವ ಭರವಸೆ ನೀಡಿತು.
ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಅವರ ಪ್ರಾಬಲ್ಯ ಹೆಚ್ಚಾಗಿತ್ತು. ಅಭಿಷೇಕ್ ಬ್ಯಾನರ್ಜಿ ಅವರನ್ನು ಮಮತಾ ಅವರ ಉತ್ತರಾಧಿಕಾರಿಯನ್ನಾಗಿ ಬಿಂಬಿಸುತ್ತಿರುವುದು ಸುವೇಂದು ಸೇರಿದಂತೆ ಹಲವು ಹಿರಿಯ ನಾಯಕರಿಗೆ ಇಷ್ಟವಿರಲಿಲ್ಲ. ಪಕ್ಷದ ನಿರ್ಧಾರಗಳಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಅವರಿಗಿತ್ತು.
ಅಮಿತ್ ಶಾ ಮತ್ತು ಬಿಜೆಪಿ ನಾಯಕತ್ವವು ಪಶ್ಚಿಮ ಬಂಗಾಳದಲ್ಲಿ ಪ್ರಬಲ ಪ್ರಾದೇಶಿಕ ನಾಯಕರಿಗಾಗಿ ಹುಡುಕಾಟ ನಡೆಸುತ್ತಿತ್ತು. ಸುವೇಂದು ಅವರಂತಹ ಪ್ರಭಾವಿ ನಾಯಕ ಪಕ್ಷಕ್ಕೆ ಸೇರಿದರೆ ಅದು ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಹೊಡೆತ ನೀಡುತ್ತದೆ ಮತ್ತು ಬಿಜೆಪಿಗೆ ಬಲ ಬರುತ್ತದೆ ಎಂಬುದು ಅಮಿತ್ ಶಾ ಅವರ ಲೆಕ್ಕಾಚಾರವಾಗಿತ್ತು. ಅದಕ್ಕಾಗಿಯೇ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು. ಪಕ್ಷ ನೀಡಿದ ಹೊಣೆಯನ್ನು ಯಶಸ್ವಿಯಾಗಿ ಸುವೇಂದು ನಿಭಾಯಿಸಿದರು. ಇಂದು ಅಧಿಕಾರಯುತವಾಗಿ ಪಶ್ಚಿಮ ಬಂಗಾಳದ 9ನೇ ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿದ್ದಾರೆ.
ತೃಣಮೂಲ ಕಾಂಗ್ರೆಸ್‌ನಲ್ಲಿ 2016-2020ರ ತನಕ ಸುವೇಂದು ಅಧಿಕಾರಿ ಸಚಿವರಾಗಿದ್ದರು. ಟಿಎಂಸಿಗೆ ಸೇರುವುದಕ್ಕೆ ಮೊದಲು ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು. ಸುವೇಂದು ಅಧಿಕಾರಿಯವರ ತಂದೆ ಸಿಸಿರ್ ಕುಮಾರ್ ಅಧಿಕಾರಿ ಅವರು ಮನಮೋಹನ್ ಸಿಂಗ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಪ್ರಸ್ತುತ ಭಾಜಪದಲ್ಲಿದ್ದಾರೆ.
ಸುವೇಂದು ಅಧಿಕಾರಿಯವರು 2016-2021ರಲ್ಲಿ ನಂದಿಗ್ರಾಮದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2026ರ ಚುನಾವಣೆಯಲ್ಲಿ ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರಗಳೆರಡರಲ್ಲೂ ಸ್ಪರ್ಧಿಸಿ ಗೆದ್ದಿದ್ದರು. ಮಮತಾ ಬ್ಯಾನರ್ಜಿ ಅವರನ್ನು 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದರು.
ಬಿಜೆಪಿಯ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ
ಪಶ್ಚಿಮ ಬಂಗಾಳದಲ್ಲಿ ಸ್ಥಿರ ಮತ್ತು ದಕ್ಷ ಆಡಳಿತ ನೀಡುವ, ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ನಿಗ್ರಹಿಸುವ ಮೂಲಕ ದೇಶದ ಆಂತರಿಕ ಭದ್ರತೆಗೆ ಪುಷ್ಟಿ ನೀಡಬೇಕಾದ ಮಹತ್ವದ ಜವಾಬ್ದಾರಿ ಅವರ ಮೇಲಿದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರಗಳನ್ನು ತಹಬದಿಗೆ ತರಬೇಕಾದ, ಕಾನೂನು ಸುವ್ಯವಸ್ಥೆ ಕಾಪಾಡುವ, ಮತ್ತು ಆರ್ಥಿಕ ಅಭಿವೃದ್ಧಿ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಅವರ ಮೇಲಿದೆ.