ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CP Radhakrishnan: ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

Vice President: ಭಾರತದ 15ನೇ ಉಪರಾಷ್ಟ್ರಪತಿಯಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಅವರು ಪ್ರತಿಪಕ್ಷ ಇಂಡಿಯಾ ಒಕ್ಕೂಟದ ಬಿ. ಸುದರ್ಶನ್ ರೆಡ್ಡಿ ವಿರುದ್ಧ ಜಯ ಗಳಿಸಿದ್ದಾರೆ. ರಾಧಾಕೃಷ್ಣನ್ ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾರೆ.

ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

-

Ramesh B Ramesh B Sep 9, 2025 7:36 PM

ದೆಹಲಿ: ಭಾರತದ ನೂತನ ಉಪರಾಷ್ಟ್ರಪತಿಯಾಗಿ (Vice President) ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ (CP Radhakrishnan) ಆಯ್ಕೆಯಾಗಿದ್ದಾರೆ. ಅವರು ಪ್ರತಿಪಕ್ಷ ಇಂಡಿಯಾ ಒಕ್ಕೂಟದ ಬಿ. ಸುದರ್ಶನ್ ರೆಡ್ಡಿ ವಿರುದ್ಧ ಜಯ ಗಳಿಸಿದ್ದಾರೆ. ರಾಧಾಕೃಷ್ಣನ್ ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರು. ಸುದರ್ಶನ್ ರೆಡ್ಡಿ ಸುಪ್ರೀಂ ಕೋರ್ಟ್‌ನ ಜಡ್ಜ್ ಆಗಿದ್ದರು. ಜುಲೈಯಲ್ಲಿ ಆರೋಗ್ಯ ಕಾರಣ ನೀಡಿ ಜಗದೀಪ್ ಧನ್ಕರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಚುನಾವಣೆ ನಡೆಸಲಾಯಿತು. ಸಿ.ಪಿ. ರಾಧಾಕೃಷ್ಣನ್ 452 ಮತ ಪಡೆದರೆ, ಸುದರ್ಶನ್ ರೆಡ್ಡಿ ಪರ 300 ಸದಸ್ಯರು ಚಲಾಯಿಸಿದರು.

ಸಂಸತ್ತಿನಲ್ಲಿ ಸೆಪ್ಟೆಂಬರ್ 9ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಚುನಾವಣೆ ನಡೆಯಿತು. ಸಂಜೆ 6 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮತ ಚಲಾಯಿಸಿದರು.



ಪ್ರಸ್ತುತ ಲೋಕಸಭೆಯಲ್ಲಿ 542 ಸಂಸದರು ಮತ್ತು ರಾಜ್ಯಸಭೆಯಲ್ಲಿ 239 ಸಂಸದರು ಇದ್ದಾರೆ. ಎರಡೂ ಸದನಗಳಲ್ಲಿ ಒಟ್ಟು ಸದಸ್ಯರ ಸಂಖ್ಯೆ 781. ಈ ಪೈಕಿ 13 ಮಂದಿ ಮತ ಚಲಾಯಿಸಲಿಲ್ಲ. ಇನ್ನು ಎನ್‌ಡಿಎ 427 ಸದಸ್ಯ ಬಲ ಹೊಂದಿದ್ದರೆ ವಿಪಕ್ಷಗಳ ಸದಸ್ಯರ ಸಂಖ್ಯೆ 354. ಹೀಗಾಗಿ ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್ ನಿರೀಕ್ಷೆಯಂತೆಗೆ ಗೆಲುವಿನ ನಗೆ ಬೀರಿದ್ದಾರೆ.

ಈ ಸುದ್ದಿಯನ್ನೂ ಓದಿ: CP Radhakrishnan: ಉಪರಾಷ್ಟ್ರಪತಿ ಹುದ್ದೆಯ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್‌ ಆಯ್ಕೆ

ಯಾರಿಗೆ ಯಾರ ಬೆಂಬಲ?

ರಾಧಾಕೃಷ್ಣನ್ ಅವರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ), ತೆಲುಗು ದೇಶಂ ಪಕ್ಷ (ಟಿಡಿಪಿ), ಜನತಾ ದಳ ಯುನೈಟೆಡ್ (ಜೆಡಿಯು), ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಅಸೋಮ್ ಗಣ ಪರಿಷತ್ (ಎಜಿಪಿ), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ), ಜನತಾ ದಳ (ಆರ್‌ಎಲ್‌ಡಿ), ಅಖಿಲ ಭಾರತ ದಳ ಸೆಕ್ಯುಲರ್ (ಡಾ. ಕೆಜೆಡಿಎಸ್) ಬೆಂಬಲ ನೀಡಿದವು. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಕೂಡ ರಾಧಾಕೃಷ್ಣನ್ ಪರವಾಗಿ ಮತ ಚಲಾಯಿಸಿದೆ.

ಸುದರ್ಶನ್‌ ರೆಡ್ಡಿ ಪರವಾಗಿ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಸಮಾಜವಾದಿ ಪಕ್ಷ (ಎಸ್‌ಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಆಮ್ ಆದ್ಮಿ ಪಕ್ಷ (ಎಎಪಿ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಶಿವಸೇನೆ (ಯುಬಿಟಿ), ನ್ಯಾಶನಲಿಸ್ಟ್ ಕಾಂಗ್ರೆಸ್ (ಯುಬಿಟಿ) ಸದಸ್ಯರು ಮತ ಚಲಾಯಿಸಿದರು.

ಬಿಜು ಜನತಾದಳ (ಬಿಜೆಡಿ), ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸೇರಿದಂತೆ ವಿವಿಧ ಪಕ್ಷಗಳು ಮತದಾನದಿಂದ ದೂರ ಉಳಿದವು. ರಾಧಾಕೃಷ್ಣನ್ 437 ಮತಗಳನ್ನು ಪಡೆಯುವ ನಿರೀಕ್ಷೆ ಹೊಂದಿದ್ದರು. ಆದರೆ 452 ಮತಗಳನ್ನು ಪಡೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂಸತ್‌ ಸಂಕೀರ್ಣದ ಕೊಠಡಿ ಸಂಖ್ಯೆ 10ರಲ್ಲಿರುವ ಮತಗಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ಮೊದಲ ಮತ ಚಲಾಯಿಸಿದರು. ಅವರೊಂದಿಗೆ ಕೇಂದ್ರ ಸಚಿವರಾದ ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘವಾಲ್, ಜಿತೇಂದ್ರ ಸಿಂಗ್ ಮತ್ತು ಎಲ್. ಮುರುಗನ್ ಮತ್ತಿತರರು ಇದ್ದರು.

ಸಿ.ಪಿ. ರಾಧಾಕೃಷ್ಣನ್‌ ಹಿನ್ನೆಲೆ

1957ರ ಅಕ್ಟೋಬರ್‌ 20ರಂದು ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಜನಿಸಿದ ರಾಧಾಕೃಷ್ಣನ್‌ 16 ವರ್ಷದಿಂದಲೇ ಆರ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಜುಲೈಯಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು 2023ರ ಫೆಬ್ರವರಿಯಿಂದ 2024 ಜುಲೈ ತನಕ ಜಾರ್ಖಂಡ್‌ ರಾಜ್ಯಪಾಲರಾಗಿದ್ದರು. ಜತೆಗೆ 2024ರ ಮಾರ್ಚ್‌ನಿಂದ ಜುಲೈ ತನಕ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿಯೂ ಸೇವೆ ಸಲ್ಲಿಸಿದ್ದರು. ಈ ಹಿಂದೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.