Aadhaar Card: ಪೌರತ್ವದ ಪುರಾವೆಯಾಗಿಲ್ಲ ಆಧಾರ್; ಯಾಕೆ ಗೊತ್ತೆ?
ಪ್ರತಿಯೊಂದು ವಹಿವಾಟಿಗೂ ದಾಖಲೆಯಾಗಿ ಸಲ್ಲಿಕೆಯಾಗುವ ಆಧಾರ್ ಕಾರ್ಡ್ ದೇಶದ ಪೌರತ್ವದ ಪುರಾವೆಯಾಗಿಲ್ಲ. ಯಾಕೆಂದರೆ ಇದನ್ನು ಪಡೆಯಲು ವಿದೇಶಿಯರು ಕೂಡ ಅರ್ಹರಾಗಿದ್ದಾರೆ. ಈ ಕುರಿತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮುಖ್ಯಸ್ಥ ಭುವನೇಶ್ ಕುಮಾರ್ ಹೇಳುವುದೇನು? ಇಲ್ಲಿದೆ ಮಾಹಿತಿ.

-

ನವದೆಹಲಿ: ಹಣಕಾಸು, ವಿವಿಧ ದಾಖಲೆ ಪತ್ರಗಳು ಸೇರಿದಂತೆ ಪ್ರತಿಯೊಂದು ವಹಿವಾಟಿಗೂ ದಾಖಲೆಯಾಗಿ ಸಲ್ಲಿಕೆಯಾಗುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುವ ಗುರುತು ಚೀಟಿ ಆಧಾರ್ ಕಾರ್ಡ್ (Aadhaar Card) ದೇಶದ ಪೌರತ್ವದ (citizenship) ಪುರಾವೆಯಾಗಿಲ್ಲ. ಯಾಕೆಂದರೆ ಇದನ್ನು ಪಡೆಯಲು ವಿದೇಶಿಯರು ಕೂಡ ಅರ್ಹರಾಗಿದ್ದಾರೆ ಎನ್ನುತ್ತಾರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (Unique Identification Authority of India) ಮುಖ್ಯಸ್ಥ ಭುವನೇಶ್ ಕುಮಾರ್ (Bhuvnesh Kumar). ಆಧಾರ್ ಪೌರತ್ವದ ಪುರಾವೆಯಲ್ಲ ಎಂದು ಪ್ರತಿಪಾದಿಸಿರುವ ಅವರು ಮಕ್ಕಳು ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 182 ದಿನಗಳವರೆಗೆ ಭಾರತದಲ್ಲಿ ವಾಸಿಸುವ ಯಾರು ಬೇಕಾದರೂ ಇದಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ದೇಶದಲ್ಲಿರುವ ಒಂದು ಸಣ್ಣ ವರ್ಗಕ್ಕೆ ಮಾತ್ರ ಪೌರತ್ವದ ದಾಖಲೆಯ ಅಗತ್ಯವಿರುತ್ತದೆ. ಹೀಗಾಗಿ ಇವರಿಗೂ ಕೂಡ ಇಲ್ಲಿ ವಹಿವಾಟು ನಡೆಸಲು ಅನುಕೂಲವಾಗುವಂತೆ ಆಧಾರ್ ಅನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿಯ ಗುರುತಿನ ಚೀಟಿಯಾಗಿ ಆಧಾರ್‌ನ ಅಗತ್ಯವನ್ನು ವಿವರಿಸಿರುವ ಅವರು, ಆಧಾರ್ ಇತರ ಐಡಿಗಳಿಗಿಂತ ಭಿನ್ನವಾಗಿದೆ. ಅದು ದೇಶದಲ್ಲಿರುವ ಪ್ರತಿಯೊಬ್ಬರೂ ಹೊಂದಿರಲೇಬೇಕಾದ ಗುರುತು ಪತ್ರ ಎಂದು ತಿಳಿಸಿದರು.
ಹೆಚ್ಚಿನ ಗುರುತು ದಾಖಲೆಗಳನ್ನು ಜನಸಂಖ್ಯಾ ವಿವರಗಳ ಆಧಾರದ ಮೇಲೆ ಮಾಡಲಾಗುತ್ತದೆ. ಅದರಲ್ಲಿ ಹೆಸರು, ವಯಸ್ಸು, ಛಾಯಾಚಿತ್ರಗಳಿರುತ್ತವೆ. ಉದಾಹರಣೆಗೆ ಚಾಲನಾ ಪರವಾನಗಿ ಅಥವಾ ಪಾಸ್‌ಪೋರ್ಟ್ ಇದೇ ರೀತಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಅವುಗಳನ್ನು ಹೊಂದಾಣಿಕೆ ಮಾಡಿದಾಗ ಒಂದೇ ವ್ಯಕ್ತಿಯದ್ದು ಇದು ಎಂದು ಗುರುತಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಆಧಾರ್‌ನೊಂದಿಗೆ ಅವುಗಳನ್ನು ಜೋಡಿಸಿದಾಗ ಶೇ. 100ರಷ್ಟು ಇದು ಒಬ್ಬನೇ ವ್ಯಕ್ತಿಯದ್ದು ಎಂದು ಖಚಿತವಾಗಿ ಗುರುತಿಸಬಹುದು. ಯಾಕೆಂದರೆ ಆಧಾರ್ ಅನ್ನು ರಚಿಸಲು 13 ಬಯೋಮೆಟ್ರಿಕ್ ಅಂಶಗಳು ಬೇಕಾಗುತ್ತವೆ. ಇದರಲ್ಲಿ ಬೆರಳಚ್ಚುಗಳು, ಕಣ್ಣಿನ ಸ್ಕ್ಯಾನ್‌ಗಳು ಮತ್ತು ಮುಖದ ಚಿತ್ರ ಒಳಗೊಂಡಿದೆ.
ಇದರಿಂದಾಗಿ ಸಿಐಡಿಆರ್, ಕೇಂದ್ರ ಗುರುತಿನ ದತ್ತಾಂಶ ಸಂಗ್ರಹಾಲಯ ಎಂದು ಕರೆಯಲ್ಪಡುವ ಡೇಟಾಬೇಸ್‌ನೊಂದಿಗೆ ಅವುಗಳನ್ನು ಹೋಲಿಸಿ ನೋಡಬಹುದು. ಈ ಹಿಂದೆ ರಚಿಸಲಾದ ಎಲ್ಲ ಆಧಾರ್‌ಗಳನ್ನು ಇದರಲ್ಲಿ ಹೋಲಿಸಲಾಗಿದೆ. ಪ್ರಸ್ತುತ 142 ಕೋಟಿ ದತ್ತಾಂಶಗಳ ಸಂಗ್ರಹವಿದೆ ಎಂದು ಅವರು ಹೇಳಿದರು.
ಆಧಾರ್‌ನ ಉದ್ದೇಶವನ್ನು ವಿವರಿಸಿದ ಅವರು, ಯುಐಡಿಎಐ ಎಲ್ಲರಿಗೂ ವಿಶಿಷ್ಟವಾದ ಮತ್ತು ನಕಲು ಮಾಡಲಾಗದ ಗುರುತ ದಾಖಲೆಯನ್ನು ಮಾಡಿದೆ. ಇದನ್ನು ನಕಲು ಮಾಡಲು ಹೋದರೆ ತಕ್ಷಣ ಪತ್ತೆ ಹಚ್ಚಬಹುದು. ಅದಕ್ಕಾಗಿಯೇ ಆಧಾರ್ ಅನ್ನು ದೃಢೀಕರಣ ಅಥವಾ ಆಫ್‌ಲೈನ್ ಪರಿಶೀಲನೆಯೊಂದಿಗೆ ಮಾತ್ರ ಬಳಸಬೇಕು. ಯಾರಾದರೂ ಕೇವಲ ಸಂಖ್ಯೆಯನ್ನು ದೃಢೀಕರಣಕ್ಕೆ ನೀಡಿದರೆ ಅದು ಸರಿಯಲ್ಲ ಎಂದು ತಿಳಿಸಿದರು.
ಆಧಾರ್ ಕಾರ್ಡ್‌ನ ಹಿಂಭಾಗದಲ್ಲಿರುವ ಕ್ಯೂಆರ್ ಕೋಡ್ ಅನ್ನು ಬಳಸಿಕೊಂಡು ಒಬ್ಬ ವ್ಯಕ್ತಿಯು ಆಧಾರ್‌ನ ನೈಜತೆಯನ್ನು ಪರಿಶೀಲಿಸಬಹುದು. ಈ ಕ್ಯೂಆರ್ ಕೋಡ್ ಯುಐಡಿಎಐನಿಂದ ಡಿಜಿಟಲ್ ಸಹಿ ಮಾಡಲಾದ ಒಂದು ಅನನ್ಯ ಡೇಟಾ ಮಾಹಿತಿಯನ್ನು ಒಳಗೊಂಡಿದೆ. ಇದನ್ನು ಆಧಾರ್ ಕ್ಯೂಆರ್ ಸ್ಕ್ಯಾನರ್ ಅಪ್ಲಿಕೇಶನ್‌ನಲ್ಲಿ ನೋಡಬಹುದಾಗಿದೆ. ಇದರಿಂದ ಮಾಹಿತಿ ಅಸಲಿಯೋ ನಕಲಿಯೋ ಎಂಬುದನ್ನು ಸ್ಪಷ್ಟಪಡಿಸಬಹುದು.
ವಿದೇಶಿಯರು ಕೂಡ ಅರ್ಹರು
ಆಧಾರ್ ಕಾರ್ಡ್ ಪೌರತ್ವದ ಪುರಾವೆಯಲ್ಲ. ಯಾಕೆಂದರೆ ಇದನ್ನು ವಿದೇಶಿಯರು ಕೂಡ ಪಡೆಯಬಹುದು. ನೇಪಾಳ, ಭೂತಾನ್, ಒಸಿಐ ಕಾರ್ಡ್ ಹೊಂದಿರುವ ಎಲ್ಲರೂ 182 ದಿನಗಳ ಅನಂತರ ಆಧಾರ್ ಕಾರ್ಡ್ ಮಾಡಿಸಬಹುದಾಗಿದೆ. ಎನ್‌ಆರ್‌ಐಗಳು ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವುದರಿಂದ ಅವರು ಇದನ್ನು ಪಡೆಯಬೇಕಾಗಿಲ್ಲ. ಆದರೆ ಆಧಾರ್ ಎಲ್ಲ ಭಾರತೀಯ ನಿವಾಸಿಗಳು, ಎನ್‌ಆರ್‌ಐಗಳು, ವಿದೇಶಿಯರು ಮತ್ತು ನವಜಾತ ಶಿಶುಗಳಿಗೆ ಕೂಡ ಮಾಡಿಸಬಹುದು. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ.
ಇದನ್ನೂ ಓದಿ: ಇಂದಿನಿಂದ ಏಷ್ಯಾಕಪ್ ಟಿ20; ಅಫ್ಘಾನಿಸ್ತಾನಕ್ಕೆ ಹಾಂಕಾಂಗ್ ಸವಾಲು
ದಾಖಲೆಯಾಗಿ ಆಧಾರ್
ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತದಾರರಿಗೆ ಆಧಾರ್ ಅನ್ನು 12ನೇ ದಾಖಲೆಯಾಗಿ ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ ಬಳಿಕ ಕುಮಾರ್ ಈ ಮಾಹಿತಿಯನ್ನು ನೀಡಿದ್ದಾರೆ.