Justice Mohammad Hidayatullah: ಸಿಜೆಐ, ರಾಷ್ಟ್ರಪತಿ, ಉಪ ರಾಷ್ಟ್ರಪತಿ.... ದೇಶದ ಮೂರು ಉನ್ನತ ಹುದ್ದೆಯನ್ನು ಪಡೆದ ಏಕೈಕ ವ್ಯಕ್ತಿ ಯಾರು ಗೊತ್ತೇ?
ದೇಶದ ಮೂರು ಉನ್ನತ ಹುದ್ದೆಗಳಾದ ಮುಖ್ಯ ನ್ಯಾಯಮೂರ್ತಿ, ಹಂಗಾಮಿ ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಏಕೈಕ ವ್ಯಕ್ತಿ ಎಂದರೆ ಮೊಹಮ್ಮದ್ ಹಿದಾಯತುಲ್ಲಾ. ಮೂರು ಪ್ರಮುಖ ಹುದ್ದೆಗಳಲ್ಲಿನ ಇವರ ಪ್ರಯಾಣವು ಭಾರತದ ಪ್ರಜಾಪ್ರಭುತ್ವ ಚೌಕಟ್ಟಿನ ಬಲ ಮತ್ತು ಅದರ ನಾಯಕತ್ವದ ಆಳವನ್ನು ಪ್ರತಿಬಿಂಬಿಸುತ್ತದೆ.

-

ನವದೆಹಲಿ: ದೇಶವು ಈಗ ಹೊಸ ಉಪರಾಷ್ಟ್ರಪತಿಯನ್ನು (Vice President) ಸ್ವಾಗತಿಸಲು ಸಜ್ಜಾಗಿದೆ. ಈ ನಡುವೆ ದೇಶದ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿರುವ ವ್ಯಕ್ತಿಯೊಬ್ಬರು ನೆನಪಾಗುತ್ತಾರೆ. ಇದೊಂದು ದೇಶದ ಇತಿಹಾಸದಲ್ಲೊಂದು ಗಮನಾರ್ಹ ಅಧ್ಯಾಯ. ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಏಕೈಕ ವ್ಯಕ್ತಿ ಎಂದರೆ ನ್ಯಾಯಮೂರ್ತಿ ಮೊಹಮ್ಮದ್ ಹಿದಾಯತುಲ್ಲಾ (Justice Mohammad Hidayatullah). ಇವರು ದೇಶದ ಮುಖ್ಯ ನ್ಯಾಯಮೂರ್ತಿಯಾಗಿ (CJI), ಹಂಗಾಮಿ ರಾಷ್ಟ್ರಪತಿಯಾಗಿ ಮತ್ತು ಉಪರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮೊಹಮ್ಮದ್ ಹಿದಾಯತುಲ್ಲಾ
1905ರ ಡಿಸೆಂಬರ್ 17ರಂದು ಜನಿಸಿದ ಹಿದಾಯತುಲ್ಲಾ ಅವರು ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿ ಉನ್ನತ ಸ್ಥಾನಕ್ಕೆ ಏರಿದವರು. 1968ರಲ್ಲಿ ಭಾರತದ 11ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಇವರು ಉನ್ನತ ನ್ಯಾಯಾಂಗ ಹುದ್ದೆಯನ್ನು ಅಲಂಕರಿಸಿದ ಮೊದಲ ಮುಸ್ಲಿಂ ವ್ಯಕ್ತಿ. ಇಸ್ಲಾಮಿಕ್ ಮತ್ತು ಹಿಂದೂ ಧರ್ಮಗ್ರಂಥಗಳೆರಡರಲ್ಲೂ ವಿದ್ವಾಂಸರಾಗಿದ್ದ ಇವರ ಕಾನೂನು ತತ್ವಶಾಸ್ತ್ರವು ಜಾತ್ಯತೀತತೆ, ಸಾಂವಿಧಾನಿಕತೆ ಮತ್ತು ಸಮಾನತೆಯನ್ನು ಪ್ರತಿಬಿಂಬಿಸುತ್ತದೆ.
ನ್ಯಾಯಮೂರ್ತಿಯಾಗಿ ಮೊಹಮ್ಮದ್ ಹಿದಾಯತುಲ್ಲಾ ಅವರು ಹಲವಾರು ಪ್ರಮುಖ ತೀರ್ಪುಗಳನ್ನು ನೀಡಿದ್ದಾರೆ. ಇದರಲ್ಲಿ ಗೋಲಕ್‌ನಾಥ್ v/s ಪಂಜಾಬ್ ರಾಜ್ಯ ಪ್ರಕರಣ, ರಂಜಿತ್ ಡಿ. ಉದೇಶಿ v/s ಮಹಾರಾಷ್ಟ್ರ ಪ್ರಕರಣ ಕೂಡ ಸೇರಿದೆ.
ಬಿಕ್ಕಟ್ಟಿನ ಸಂದರ್ಭದಲ್ಲಿ ಹಂಗಾಮಿ ಅಧ್ಯಕ್ಷರಾದರು
1969ರಲ್ಲಿ ರಾಷ್ಟ್ರಾಧ್ಯಕ್ಷರಾಗಿದ್ದ ಝಾಕಿರ್ ಹುಸೇನ್ ಅವರ ಹಠಾತ್ ನಿಧನದಿಂದ ತೆರವಾದಾಗ ಉಪಾಧ್ಯಕ್ಷ ವಿ.ವಿ. ಗಿರಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆ ನೀಡಿದರು. ಈ ವೇಳೆ ಸಂವಿಧಾನದ 65ನೇ ವಿಧಿ ಮತ್ತು ಹೊಸದಾಗಿ ಜಾರಿಗೆ ಬಂದ ರಾಷ್ಟ್ರಪತಿ ಕಾಯ್ದೆ 1969ರ ಅಡಿಯಲ್ಲಿ ಮುಖ್ಯ ನ್ಯಾಯಮೂರ್ತಿ ಹಿದಾಯತುಲ್ಲಾ ಅವರು ಜುಲೈ 20 ರಿಂದ 1969ರ ಆಗಸ್ಟ್ 24ರವರೆಗೆ ಭಾರತದ ಹಂಗಾಮಿ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು.
ಈ ವೇಳೆ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ರಾಷ್ಟ್ರಪತಿ ಭವನದ ಆತಿಥ್ಯ ವಹಿಸಿದರು. ಇದೊಂದು ದೇಶದ ನಿರ್ಣಾಯಕ ಅವಧಿಯ ಪ್ರಮುಖ ರಾಜಕೀಯ ಬೆಳವಣಿಗೆತ ಸಾಕ್ಷಿಯಾಗಿದೆ.
ಭಾರತದ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
1979ರಲ್ಲಿ ಹಿದಾಯತುಲ್ಲಾ ಅವರು ಭಾರತದ ಆರನೇ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1984ರವರೆಗೆ ಸೇವೆ ಸಲ್ಲಿಸಿದ ಅವರು ಅಧ್ಯಕ್ಷ ಜೈಲ್ ಸಿಂಗ್ ವಿದೇಶದಲ್ಲಿದ್ದಾಗ ಮತ್ತೊಮ್ಮೆ ಮೂರು ಸಂದರ್ಭಗಳಲ್ಲಿ ಹಂಗಾಮಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.
ಇದನ್ನೂ ಓದಿ: Murder Attempt: ಲವರ್ ಜೊತೆ ಸೇರಿ ಗಂಡನ ಮರ್ಮಾಂಗ ಹಿಸುಕಿದ ಪತ್ನಿ, ಕೊಲೆ ಯತ್ನದಿಂದ ಪಾರಾದ ಗಂಡ
ಇಚ್ಛೆಯಂತೆ ಅಂತ್ಯಕ್ರಿಯೆ
ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಹಿದಾಯತುಲ್ಲಾ ಅವರು ಜೈನ ಮಹಿಳೆ ಪುಷ್ಪಾ ಶಾ ಅವರನ್ನು ವಿವಾಹವಾದರು. ಹೀಗಾಗಿ ಅವರು ತಮ್ಮ ಜೀವನದಲ್ಲಿ ಅಂತರ್ಧರ್ಮೀಯ ಸಾಮರಸ್ಯವನ್ನು ಕಾಪಾಡಿಕೊಂಡರು.1992ರ ಸೆಪ್ಟೆಂಬರ್ 18ರಂದು ಅವರು ನಿಧನರಾದಾಗ ಅವರ ಆಶಯದಂತೆ ಹಿಂದೂ ವಿಧಿಗಳ ಪ್ರಕಾರ ಅವರ ಅಂತ್ಯಕ್ರಿಯೆ ನಡೆಸಲಾಯಿತು.