4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶ; ಯಾವ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬಂದ್ರು?
Election Results 2026: 2026ರ ನಾಲ್ಕು ರಾಜ್ಯಗಳು (ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳಂ, ಅಸ್ಸಾಂ) ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ (ಪುದುಚೇರಿ) ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು (ಮೇ 4) ಪ್ರಕಟವಾಗಿದ್ದು, ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಚುನಾವಣಾ ಫಲಿತಾಂಶಗಳ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ:
ಸಾಂದರ್ಭಿಕ ಚಿತ್ರ -
ನವದೆಹಲಿ, ಮೇ 4: 2026ರ ನಾಲ್ಕು ರಾಜ್ಯಗಳು (ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳಂ, ಅಸ್ಸಾಂ) ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ (ಪುದುಚೇರಿ) ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು (ಮೇ 4) ಪ್ರಕಟವಾಗಿದ್ದು, ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿಯ (Mamatha Banerjee) ಅವರ15 ವರ್ಷದ ಆಳ್ವಿಕೆ ಅಂತ್ಯ ಕಂಡರೆ, ತಮಿಳುನಾಡಿನಲ್ಲಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ (MK Stalin) ಸೋಲುಂಡಿದ್ದಾರೆ. ಕೇರಳಂನಲ್ಲಿ ಎಡರಂಗ ನೆಲಕಚ್ಚಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಭೇರಿ ಬಾರಿಸಿದೆ. ಅತ್ತ ಅಸ್ಸಾಂನಲ್ಲೂ ಕಮಲ ಅರಳಿದೆ. ಪುದುಚೇರಿಯಲ್ಲೂ ಎನ್‌ಡಿಎ ಗೆಲುವಿನತ್ತ ಮುಖ ಮಾಡಿದೆ. ಈ ಚುನಾವಣಾ ಫಲಿತಾಂಶಗಳ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ:
ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ಮತದಾರರ ಹೆಸರನ್ನು ದಾಖಲೆ ಸಂಖ್ಯೆಯಲ್ಲಿ ಡಿಲೀಟ್ ಮಾಡಿದ ನಂತರದ ಮೊದಲ ಚುನಾವಣೆಯಲ್ಲಿ, 15 ವರ್ಷಗಳ ಅಧಿಕಾರದ ನಂತರ ತೃಣಮೂಲ ಕಾಂಗ್ರೆಸ್ ಪಕ್ಷ ಸೋಲಿನತ್ತ ಮುಖ ಮಾಡಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 294 ಸ್ಥಾನಗಳಿವೆ. ಸರ್ಕಾರ ರಚಿಸಲು 148 ಸ್ಥಾನಗಳ ಸರಳ ಬಹುಮತದ ಅಗತ್ಯವಿದೆ. ಯಾವುದೇ ಪಕ್ಷ ಅಥವಾ ಮೈತ್ರಿ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ಈ ಮ್ಯಾಜಿಕ್ ನಂಬರ್ ಗಳಿಸಬೇಕು.
ಮೋದಿಮಯ್ ಭಾರತ್ʼ ನಕ್ಷೆ ಬಿಡುಗಡೆ ಮಾಡಿದ ಬಿಜೆಪಿ: ಪಶ್ಚಿಮ ಬಂಗಾಳವನ್ನು ತಲುಪಿದೆ ಕೇಸರಿ ಅಲೆ
ಇನ್ನು ಯಾವುದೆಲ್ಲ ಪಕ್ಷಗಳು ಮುನ್ನಡೆ ಸಾಧಿಸಿವೆ ಎಂಬುದು ನೋಡೋದಾದ್ರೆ, ಬಿಜೆಪಿಯು 204 ಸ್ಥಾನ, ಟಿಎಂಸಿ 84, ಕಾಂಗ್ರೆಸ್ 2, ಆಮ್ ಜನತಾ ಉನ್ನಯನ್ ಪಾರ್ಟಿ 2, ಸಿಪಿಐ (ಎಂ) 1, ಇತರರು 1 ಸ್ಥಾನ ಗಳಿಸಿದ್ದಾರೆ. ಬಿಜೆಪಿಯು ಮ್ಯಾಜಿಕ್ ನಂಬರ್ ದಾಟಿದ್ದು, ಮೊದಲ ಬಾರಿಗೆ ಬಂಗಾಳದಲ್ಲಿ ಕಮಲ ಅರಳಿದೆ. ಟಿಎಂಸಿಗೆ ಹೀನಾಯ ಸೋಲುಂಟಾಗಿದ್ದರೂ, ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸುಮಾರು 5,000 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ತಮಿಳುನಾಡು ಚುನಾವಣೆ ಫಲಿತಾಂಶ
ತಮಿಳುನಾಡಿನಲ್ಲಿ ದಶಕಗಳ ಕಾಲ ಆಳಿದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಮಣ್ಣು ಮುಕ್ಕಿಸಿದೆ. ಆಡಳಿತಾರೂಢ ಡಿಎಂಕೆಗೆ ಭಾರಿ ಹಿನ್ನಡೆಯಾಗಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಭದ್ರಕೋಟೆಯಾದ ಕೊಳತ್ತೂರು ಕ್ಷೇತ್ರದಲ್ಲೇ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ ಸೋಲು ಕಂಡಿದ್ದಾರೆ.
ವಿಜಯ್ ನೇತೃತ್ವದ ಟಿವಿಕೆ ಪಕ್ಷವು ತನ್ನ ಮೊದಲ ಚುನಾವಣೆಯಲ್ಲಿ ಗೆಲುವಿನತ್ತ ಸಾಗುತ್ತಿರುವಂತೆ ತೋರುತ್ತಿದೆ. ಪಕ್ಷವು 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಆಡಳಿತ ಪಕ್ಷ ಡಿಎಂಕೆ ಕೇವಲ 71 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ವಿಜಯ್ ಅವರ ಟಿವಿಕೆ ಇದುವರೆಗೆ 22 ಸ್ಥಾನಗಳನ್ನು, ಎಂಕೆ ಸ್ಟಾಲಿನ್ ಅವರ ಡಿಎಂಕೆ 8 ಸ್ಥಾನಗಳನ್ನು ಗೆದ್ದಿದೆ.
ತಮಿಳಗ ವೆಟ್ರಿ ಕಳಗಂ 109 ಸ್ಥಾನಗಳನ್ನು ಪಡೆದರೆ, ಎಐಎಡಿಎಂಕೆ 64, ಡಿಎಂಕೆ 44, ಕಾಂಗ್ರೆಸ್ 5, ಬಿಜೆಪಿ 3, ಇತರರು 09 ಸ್ಥಾನ ಗಳಿಸಿದ್ದಾರೆ. ಒಟ್ಟು ವಿಧಾನಸಭಾ ಸ್ಥಾನಗಳು 234. ಸರ್ಕಾರ ರಚಿಸಲು 118 ಸ್ಥಾನಗಳ ಅಗತ್ಯವಿದ್ದು, ಸದ್ಯಕ್ಕೆ ವಿಜಯ್ ಅವರ ಟಿವಿಕೆ ಪಕ್ಷವು ಬಹುಮತಕ್ಕೆ ಕೇವಲ 9 ಸ್ಥಾನಗಳ ಅಂತರದಲ್ಲಿದೆ.
ಅಸ್ಸಾಂ ಫಲಿತಾಂಶ
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಮೈತ್ರಿಕೂಟವು ಸತತ ಮೂರನೇ ಬಾರಿಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸ್ಪಷ್ಟ ಬಹುಮತ ಸಾಧಿಸಿವೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 64. ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವಿನತ್ತ ಧಾವಿಸುತ್ತಿದ್ದು, 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ ಟಿವಿಕೆಯ ವಿಜಯ್ ಮುಂದಿದೆ ಹಲವು ಆಯ್ಕೆಗಳು
ಕೇರಳಂ ಚುನಾವಣೆ ಫಲಿತಾಂಶ
ಕೇರಳಂ ವಿಧಾನಸಭಾ ಚುನಾವಣೆ 2026ರ ಫಲಿತಾಂಶವು ರಾಜಕೀಯ ಸಂಚಲನ ಮೂಡಿಸಿದೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಎಲ್‌ಡಿಎಫ್ (LDF) ಮೈತ್ರಿಕೂಟವನ್ನು ಜನರು ತಿರಸ್ಕರಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ಯುಡಿಎಫ್ - ಕಾಂಗ್ರೆಸ್ ಮೈತ್ರಿಕೂಟ 99 ಸ್ಥಾನಗಳು, ಎಲ್‌ಡಿಎಫ್- ಎಡರಂಗ ಮೈತ್ರಿಕೂಟಕ್ಕೆ 38, ಬಿಜೆಪಿ/ಎನ್‌ಡಿಎಗೆ 3 ಲಭಿಸಿದೆ. ಒಟ್ಟು 140 ಸ್ಥಾನಗಳಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 79. ಕಾಂಗ್ರೆಸ್ ನೇತೃತ್ವದ ಯುಡಿಎಫ್ 99 ಸ್ಥಾನಗಳನ್ನು ಗೆಲ್ಲುವ ಸೂಚನೆ ನೀಡುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ರಚಿಸಲು ಸಜ್ಜಾಗಿದ್ದು, ಎಡಪಕ್ಷಗಳು ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಬ್ರೇಕ್ ಹಾಕಿದೆ.
ಪುದುಚೇರಿ ಫಲಿತಾಂಶ
30 ಸದಸ್ಯ ಬಲದ ಚುನಾಯಿತ ವಿಧಾನಸಭೆಯಲ್ಲಿ, ಸರ್ಕಾರ ರಚಿಸಲು ಅಗತ್ಯವಿರುವ ಅರ್ಧದಷ್ಟು ಸ್ಥಾನಗಳು 16. ಎನ್. ರಂಗಸ್ವಾಮಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸತತ ಎರಡನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎನ್‌ಡಿಎ ಮೈತ್ರಿಕೂಟ 18, ಇಂಡಿಯಾ ಮೈತ್ರಿಕೂಟ 6, ತಮಿಳಗ ವೆಟ್ರಿ ಕಳಗಂ 2, ಪಕ್ಷೇತರರು 4 ಸ್ಥಾನಗಲಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮ್ಯಾಜಿಕ್ ಸಂಖ್ಯೆಯನ್ನು ಎನ್‌ಡಿಎ ದಾಟಿದೆ.