Community Radio Stations: 6 ವರ್ಷಗಳಿಂದ ಭಾರತದಾದ್ಯಂತ 264 ಸಮುದಾಯ ರೇಡಿಯೋ ಕೇಂದ್ರಗಳ ಸ್ಥಾಪನೆ
2019ರಿಂದ ಭಾರತದಾದ್ಯಂತ ಒಟ್ಟು 264 ಸಮುದಾಯ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಸ್ತಿತ್ವದಲ್ಲಿರುವ ಸಮುದಾಯ ರೇಡಿಯೋ ಕೇಂದ್ರಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಮೇಲ್ದರ್ಜೆಗೇರಿಸಲು, 2020-21ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 26 ಕೇಂದ್ರಗಳಿಗೆ ಹಣಕಾಸಿನ ನೆರವು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಾಂದರ್ಭಿಕ ಚಿತ್ರ

ದೆಹಲಿ: 2019ರಿಂದ ಭಾರತದಾದ್ಯಂತ ಒಟ್ಟು 264 ಸಮುದಾಯ ರೇಡಿಯೋ ಕೇಂದ್ರಗಳನ್ನು (Community Radio Stations) ಸ್ಥಾಪಿಸಲಾಗಿದೆ. ಅಸ್ತಿತ್ವದಲ್ಲಿರುವ ಸಮುದಾಯ ರೇಡಿಯೋ ಕೇಂದ್ರಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಮೇಲ್ದರ್ಜೆಗೇರಿಸಲು, 2020-21ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 26 ಕೇಂದ್ರಗಳಿಗೆ ಹಣಕಾಸಿನ ನೆರವು ನೀಡಲಾಗಿದೆ. 2019ರ ನಂತರ 6 ದೂರದರ್ಶನ ವಾಹಿನಿಗಳನ್ನು ಸ್ಥಾಪಿಸಲಾಗಿದೆ ಮತ್ತು ಅಸ್ತಿತ್ವದಲ್ಲಿರುವ 17 ದೂರದರ್ಶನ ವಾಹಿನಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸರ್ಕಾರವು 2017ರಲ್ಲಿ ಸಮುದಾಯ ರೇಡಿಯೋ ಕೇಂದ್ರಗಳ ಪ್ರಭಾವದ ಮೌಲ್ಯಮಾಪನವನ್ನು ನಡೆಸಿದೆ ಮತ್ತು ʼಭಾರತದಲ್ಲಿ ಸಮುದಾಯ ರೇಡಿಯೋ ಕೇಂದ್ರಗಳ ಕೇಳುಗರ ಸಂಖ್ಯೆ, ತಲುಪುವಿಕೆ ಮತ್ತು ಪರಿಣಾಮಕಾರಿತ್ವದ ಕುರಿತು ಅಧ್ಯಯನ ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಿದೆ.
ವರದಿಯ ಪ್ರಕಾರ, ಸಮುದಾಯ ರೇಡಿಯೋ ಜನರನ್ನು ಒಟುಗೂಡಿಸುವಲ್ಲಿ, ಸ್ಥಳೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಮಾಹಿತಿಯನ್ನು ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಈ ಸುದ್ದಿಯನ್ನೂ ಓದಿ: ಅಡಕೆ ಬೆಳೆಗಾರರ ಸಂಕಷ್ಟ; ಜೋಶಿ ನೇತೃತ್ವದಲ್ಲಿ ರಾಜ್ಯ ಸಂಸದರ ತಂಡದಿಂದ ಕೇಂದ್ರ ಕೃಷಿ ಸಚಿವರ ಭೇಟಿ
2019ರ ಫೆಬ್ರವರಿಯಲ್ಲಿ ಛತ್ತೀಸ್‌ಗಢದ ರಾಯಗಢ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ದೂರದರ್ಶನ ಕೇಂದ್ರಗಳಿಗಾಗಿ ಪ್ರಚಾರ ಅಭಿಯಾನದ ಮೇಲಿನ ಪರಿಣಾಮದ ಮೌಲ್ಯಮಾಪನ ಅಧ್ಯಯನವನ್ನು ನಡೆಸಲಾಯಿತು. ರಾಯಗಢ ಆಕಾಶವಾಣಿಯಿಂದ ಪ್ರಸಾರವಾಗುವ ಜಿಂಗಲ್‌ಗಳು / ಸ್ಪಾಟ್‌ಗಳ ಬಗ್ಗೆ ಶೇ. 73.5 ಕೇಳುಗರಲ್ಲಿ ಜಾಗೃತಿ ಮೂಡಿಸಲಾಗಿದೆ. ರಾಯಗಢ ಆಕಾಶವಾಣಿಯಿಂದ ವಾರಕ್ಕೊಮ್ಮೆ ಜಿಂಗಲ್‌ಗಳು/ಸ್ಪಾಟ್‌ಗಳಿಗೆ ತಲುಪುವ ಸಂಖ್ಯೆ ಶೇ. 67ರಷ್ಟು ಎಂದು ಕಂಡುಬಂದಿದೆ.
ಸರ್ಕಾರವು ತನ್ನ ಗ್ರಾಮೀಣ ಮಾಧ್ಯಮ ಸಂಪರ್ಕ ವ್ಯಾಪ್ತಿಯನ್ನು ನಿರಂತರವಾಗಿ ಬಹು ವೇದಿಕೆಗಳ ಮೂಲಕ ವಿಸ್ತರಿಸುತ್ತಿದೆ ಮತ್ತು ವೈವಿಧ್ಯಗೊಳಿಸುತ್ತಿದೆ:
- ಡಿಡಿ ಫ್ರೀ ಡಿಶ್ (ಫ್ರೀ-ಟು-ಏರ್ ಡೈರೆಕ್ಟ್-ಟು-ಹೋಮ್) ಸೇವೆಯು 2019ರಲ್ಲಿದ್ದ 104 ವಾಹಿನಿಗಳಿಂದ ಪ್ರಸ್ತುತ 510 ವಾಹಿನಿಗಳಿಗೆ ಗಮನಾರ್ಹವಾಗಿ ಬೆಳೆದಿದೆ. ಇದರಲ್ಲಿ 92 ಖಾಸಗಿ ವಾಹಿನಿಗಳು, 50 ದೂರದರ್ಶನ ವಾಹಿನಿಗಳು ಮತ್ತು 320 ಶೈಕ್ಷಣಿಕ ವಾಹಿನಿಗಳು ಸೇರಿವೆ.
- ಎಫ್.ಎಂ. ಗೋಲ್ಡ್, ರೇನ್ ಬೋ ಮತ್ತು ವಿವಿಧ ಭಾರತಿ ಸೇರಿದಂತೆ 48 ಆಕಾಶವಾಣಿ ರೇಡಿಯೋ ವಾಹಿನಿಗಳು ಡಿಟಿಎಚ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯ.
- 2024ರಲ್ಲಿ ಪ್ರಸಾರ ಭಾರತಿಯು ದೂರದರ್ಶನ ಮತ್ತು ಆಕಾಶವಾಣಿಯ ನೆಟ್‌ವರ್ಕ್ ಚಾನಲ್ ಗಳನ್ನು ಸಂಯೋಜಿಸುವ ಬಹು-ಪ್ರಕಾರದ ಡಿಜಿಟಲ್ ಸ್ಟ್ರೀಮಿಂಗ್ ಮಧ್ಯವರ್ತಿಯಾದ ವೇವ್ಸ್ ಎಂಬ ಒ.ಟಿ.ಟಿ. ಪ್ಲಾಟ್‌ಫಾರ್ಮ್ ಪ್ರಾರಂಭಿಸಿತು. ಈ ವೇದಿಕೆಗಳು ಮಾಹಿತಿ, ಶಿಕ್ಷಣ, ಸಂಸ್ಕೃತಿ ಮತ್ತು ಸುದ್ದಿಗಳನ್ನು ಎಲ್ಲರಿಗೂ ಸುಲಭವಾಗಿ ತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಖಾಸಗಿ ವಾಹಿನಿಗಳ ಮೂಲಕವೂ ಸೇರಿದಂತೆ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಅವು ವಿಶೇಷವಾಗಿ ಪ್ರಭಾವಶಾಲಿಯಾಗಿವೆ.