Robbery Case: ದೇವರ ಮೇಲೆಯೇ ಸೇಡು ತೀರಿಸಿಕೊಳ್ಳಲು ದೇವಸ್ಥಾನಕ್ಕೆ ಕನ್ನ ಹಾಕಿದ ಎಚ್‌ಐವಿ ಪೀಡಿತ; 10 ವರ್ಷಗಳ ಬಳಿಕ ಕೃತ್ಯ ಬಯಲು
ಎಚ್‌ಐವಿ ಪೀಡಿತ ವ್ಯಕ್ತಿಯೊಬ್ಬ ತನ್ನ ಸ್ಥಿತಿಗೆ ದೇವರನ್ನು ದೂಷಿಸಿ ದೇವಸ್ಥಾನದಿಂದ ಹಲವು ವರ್ಷಗಳ ಕಾಲ ಕಳವು ಮಾಡಿದ್ದಾನೆ. ಇದೀಗ ಆತನ ಅದೃಷ್ಟ ಕೈಕೊಟ್ಟಿದ್ದು, ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜತೆಗೆ ಆತನ ದೇವರ ವಿರುದ್ಧದ ಸೇಡಿನ ಕಥೆಯೂ ಅನಾವರಣಗೊಂದಿದೆ

-

ರಾಯ್‌ಪುರ: ಎಚ್‌ಐವಿ ಪೀಡಿತ ವ್ಯಕ್ತಿಯೊಬ್ಬ ತನ್ನ ಸ್ಥಿತಿಗೆ ದೇವರನ್ನು ದೂಷಿಸಿ ದೇವಸ್ಥಾನದಿಂದ ಹಲವು ವರ್ಷಗಳ ಕಾಲ ಕಳವು ಮಾಡಿದ್ದಾನೆ. ಸುಮಾರು 10 ವರ್ಷ ಛತ್ತೀಸ್‌ಗಢದ ದುರ್ಗ್ (Chhattisgarh's Durg) ಎಂಬಲ್ಲಿನ ದೇವಸ್ಥಾನದಿಂದ ನಿರಂತವಾಗಿ ನಗದು ಕಳವಾಗುತ್ತಿತ್ತು. ಚಾಣಾಕ್ಷ ಕಳ್ಳ ಸುಳಿವನ್ನೆಲ್ಲ ಅಳಸಿ ಹಾಕಿ ತಪ್ಪಿಸಿಕೊಳ್ಳುತ್ತಿದ್ದ. ಇದೀಗ ಆತನ ಅದೃಷ್ಟ ಕೈಕೊಟ್ಟಿದ್ದು, ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜತೆಗೆ ಆತನ ದೇವರ ವಿರುದ್ಧದ ಸೇಡಿನ ಕಥೆಯೂ ಅನಾವರಣಗೊಂದಿದೆ (Revenge Against God). ವಿಷಯ ತಿಳಿದು ದೇಶವೇ ಬೆಚ್ಚಿ ಬಿದ್ದಿದೆ. 45 ವರ್ಷದ ಎಚ್‌ಐವಿ ಪೀಡಿತ ಈ ವ್ಯಕ್ತಿ ತನ್ನ ಸ್ಥಿತಿಗೆ ದೇವರೇ ಕಾರಣ ಎಂದು ಆರೋಪಿಸಿ ಸೇಡು ತೀರಿಸಿಕೊಳ್ಳಲು ಹುಂಡಿಯಿಂದ ನಗದು ಕದ್ದಿರುವುದಾಗಿ ತಿಳಿಸಿದ್ದಾನೆ.
ಆಗಸ್ಟ್ 28ರಂದು ಪೊಲೀಸರು ಸರಣಿ ಕಳವಿನ ಸೂತ್ರಧಾರರನ್ನು ಅರೆಸ್ಟ್ ಮಾಡುವುದರ ಮೂಲಕ ಸುಮಾರು 1 ದಶಕದ ನಿಗೂಢ ಪ್ರಕರಣಕ್ಕೆ ತೆರೆ ಬಿದ್ದಿದೆ. 2012ರಲ್ಲಿ ಹಲ್ಲೆ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ ವೈರಸ್ ಸೋಂಕಿಗೆ ಒಳಗಾದ ನಂತರ ಧರ್ಮದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾಗಿ ಎಚ್‌ಐವಿ ಪೀಡಿತ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ತನ್ನ ಸ್ಥಿತಿಗೆ ದೇವರೇ ಕಾರಣವೆಂದು ಹೇಳಿದ ಆತ ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ದೇವಸ್ಥಾನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಈ ಸುದ್ದಿಯನ್ನೂ ಓದಿ: Villagers Attack: ಕಳ್ಳರೆಂದು ಭಾವಿಸಿ ಗೂಗಲ್ ಮ್ಯಾಪಿಂಗ್ ತಂಡವನ್ನು ಥಳಿಸಿದ ಗ್ರಾಮಸ್ಥರು!
ದುರ್ಗ್ ಮತ್ತು ಅದರ ಹೊರವಲಯದಲ್ಲಿರುವ ದೇವಾಲಯಗಳಲ್ಲಿ ಕನಿಷ್ಠ 10 ಬಾರಿ ಕಳವು ಮಾಡಿರುವುದಾಗಿ ಈ ವ್ಯಕ್ತಿ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಇನ್ನೂ ಹೆಚ್ಚಿನ ಕಳವು ಪ್ರಕರಣಗಳಲ್ಲಿ ಆತ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕಾಣಿಕೆ ಡಬ್ಬಿಯಿಂದ ಹಣವನ್ನು ಮಾತ್ರ ಕದಿಯುತ್ತಿದ್ದುದಾಗಿಯೂ ಆಭರಣಗಳನ್ನು ಮುಟ್ಟಿರಲಿಲ್ಲ ಎಂದು ಹೇಳಿದ್ದಾನೆ. "ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುವುದನ್ನು ತಪ್ಪಿಸಲು ಆತ ಪ್ರತಿ ಕಳವಿನ ಮೊದಲು ಮತ್ತು ನಂತರ ಬಟ್ಟೆ ಬದಲಾಯಿಸುತ್ತಿದ್ದ ಮತ್ತು ಯಾವಾಗಲೂ ತನ್ನ ಜುಪಿಟರ್ ಸ್ಕೂಟರ್ ಅನ್ನು ಅಪರಾಧ ಸ್ಥಳದಿಂದ ದೂರದಲ್ಲಿ ನಿಲ್ಲಿಸುತ್ತಿದ್ದ" ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 23 ಮತ್ತು 24ರ ಮಧ್ಯರಾತ್ರಿ ಆರೋಪಿ ದುರ್ಗ್ ಹೊರವಲಯದಲ್ಲಿರುವ ಜೈನ ದೇವಾಲಯಕ್ಕೆ ನುಗ್ಗಿದ ನಂತರ ಕೃತ್ಯ ಬಯಲಾಗಿದೆ. ವಿಚಾರಣೆಗಾಗಿ ಆತನನ್ನು ಕರೆದೊಯ್ದ ಮರುದಿನ ಆತನನ್ನು ಬಂಧಿಸಲಾಯಿತು. 1,282 ರೂ. ಮೌಲ್ಯದ ಕದ್ದ ನಾಣ್ಯ ಮತ್ತು ಆತನ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಜೈನ ದೇವಾಲಯದಲ್ಲಿ ನಡೆದ ಕಳ್ಳತನದ ನಂತರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಅಗರ್ವಾಲ್ ತನಿಖೆಗೆ ಆದೇಶ ಹೊರಡಿಸಿದರು. ಅಪರಾಧ ನಿಗ್ರಹ ಮತ್ತು ಸೈಬರ್ ಘಟಕ (ACCU) ಮತ್ತು ನೆವಾಯ್ ಪೊಲೀಸ್ ಠಾಣೆಯ ಜಂಟಿ ತಂಡವು ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ 'ತ್ರಿನಯನ್' ಅಪ್ಲಿಕೇಶನ್ ಬಳಸಿ ಅವನ ಚಲನವಲನಗಳನ್ನು ಪತ್ತೆಹಚ್ಚಿದೆ.
ಪೊಲೀಸರ ಪ್ರಕಾರ, ಆರೋಪಿಯು 2012ರಲ್ಲಿ ಜೈಲಿನಿಂದ ಬಿಡುಗಡೆಯಾದ ಕೂಡಲೇ ದೇವಾಲಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಪ್ರಾರಂಭಿಸಿದನು. ಮೊದಲು ಆತ ದೇವಾಲಯವನ್ನು ಪರಿಶೀಲಿಸಿ ಮರುದಿನ ತನ್ನ ಸ್ಕೂಟರ್‌ನಲ್ಲಿ ಹಿಂತಿರುಗಿ, ದೂರದಲ್ಲಿ ನಿಲ್ಲಿಸಿ, ಬಟ್ಟೆ ಬದಲಾಯಿಸಿಕೊಂಡು ನಂತರ ಒಳಗೆ ನುಗ್ಗುತ್ತಿದ್ದ.
ಇಲ್ಲಿಯವರೆಗೆ ಆತ ನೆವಾಯ್, ಸುಪೇಲಾ, ಪದ್ಮನಾಭಪುರ, ಭಿಲಾಯಿ ಭಟ್ಟಿ ಮತ್ತು ಭಿಲಾಯಿ ನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ದೇವಾಲಯಗಳು ಸೇರಿದಂತೆ ಕನಿಷ್ಠ 10 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.