ಬಿಹಾರದಲ್ಲಿ ಪ್ರಧಾನಿ ಮೋದಿಯನ್ನು ನಿಂದಿಸಿದ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗುತ್ತಿದೆ; ಬಿಜೆಪಿ ಬೆಂಬಲಿಗನ ಆರೋಪ
ಬಿಹಾರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಮೇಲೆ ನಿಂದನೆಯ ಘೋಷಣೆಗಳನ್ನು ಕೂಗಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶ ಬಿಜೆಪಿ ಬೆಂಬಲಿಗ ನೆಕ್ ಮೊಹಮ್ಮದ್ ರಿಜ್ವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಕೇಳಿಬಂದಿವೆ.

-

ನವದೆಹಲಿ: ಬಿಹಾರದ (Bihar) ಚುನಾವಣಾ ರ‍್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಷ (Narendra Modi) ಅವರನ್ನು ನಿಂದಿಸಿದ ಆರೋಪದಲ್ಲಿ ಮಧ್ಯ ಪ್ರದೇಶ ಬಿಜೆಪಿ ಬೆಂಬಲಿಗ (BJP Supporter) ನೆಕ್ ಮೊಹಮ್ಮದ್ ರಿಜ್ವಿ (Nek Mohammad Rizwi) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಕೇಳಿಬಂದಿವೆ. ಈ ಘಟನೆಯು ಬಿಹಾರದ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ರಿಜ್ವಿ, ತನ್ನ ವಿರುದ್ಧದ ಆರೋಪಗಳನ್ನು ಖಂಡಿಸಿದ್ದು, ಇದು ಬಿಜೆಪಿಯನ್ನು ಸಿಲುಕಿಸಿವ ಷಡ್ಯಂತ್ರ ಎಂದು ಹೇಳಿದ್ದಾರೆ.
“ನಾನು ಬಿಹಾರಕ್ಕೆ ಹೋಗಿಲ್ಲ, ನಿಂದನೆ ಮಾಡಿಲ್ಲ. ಮೋದಿ ನಮ್ಮ ನಾಯಕ. ಇದು ಬಿಜೆಪಿಯನ್ನು ಸಿಲುಕಿಸಲು ನಡೆಸಿರುವ ಕೃತ್ಯ” ಎಂದು ರಿಜ್ವಿ ತಿಳಿಸಿದ್ದಾರೆ. ತನ್ನ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಪೊಲೀಸರಿಗೆ ದೂರು ನೀಡುವುದಾಗಿ ಆತ ಹೇಳಿದ್ದಾರೆ. “ಕಾಂಗ್ರೆಸ್‌ಗೆ ಮುಸ್ಲಿಮರು ಬಿಜೆಪಿಯನ್ನು ಬೆಂಬಲಿಸುತ್ತಿರುವುದು ಸಹಿಸಲು ಆಗುತ್ತಿಲ್ಲ. ನನ್ನ ಕರೆ ವಿವರಗಳು ಮತ್ತು ಸ್ಥಳಗಳನ್ನು ಪರಿಶೀಲಿಸಿ, ನಾನು ಬಿಹಾರಕ್ಕೆ ಎಂದೂ ಹೋಗಿಲ್ಲ” ಎಂದು ರಿಜ್ವಿ ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಶಾಲು ಹಾಕಿ ಬಸ್‌ನಲ್ಲಿ ಸೀಟ್ ಕಾದಿರಿಸಿದ್ದ ಮಹಿಳೆ; ವ್ಯಕ್ತಿಯೊಬ್ಬ ಕುಳಿತಿದ್ದಕ್ಕೆ ಶುರುವಾಯ್ತು ಜಗಳ, ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು
ಆಗಸ್ಟ್ 27ರಂದು ದರ್ಭಾಂಗಾದಲ್ಲಿ ನಡೆದ ಕಾಂಗ್ರೆಸ್‌ನ ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಮೋದಿ ಮತ್ತು ಅವರ ತಾಯಿ ಹೀರಾಬೆನ್ ವಿರುದ್ಧ “ತೀವ್ರ ನಿಂದನಾತ್ಮಕ ಭಾಷೆ” ಬಳಕೆಯಾಯಿತು ಎಂದು ಬಿಜೆಪಿ ಆರೋಪಿಸಿದಾಗ ಈ ವಿವಾದವು ತೀವ್ರಗೊಂಡಿತು. 33 ಸೆಕೆಂಡ್‌ನ ವಿಡಿಯೊವೊಂದು ವೈರಲ್ ಆಗಿದ್ದು, ಸ್ಥಳೀಯ ನಾಯಕನೊಬ್ಬ ಮೋದಿಯವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾನೆ. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವೇದಿಕೆಯಲ್ಲಿ ಇರಲಿಲ್ಲ. ಕಾಂಗ್ರೆಸ್ ಈ ಆರೋಪಗಳಿಂದ ದೂರವುಳಿದಿದ್ದು, ಬಿಜೆಪಿ ಪ್ರಮುಖವಲ್ಲದ ವಿಷಯಗಳನ್ನು ಎತ್ತುತ್ತಿದೆ ಎಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಸ್ಸಾಂ ರ‍್ಯಾಲಿಯಲ್ಲಿ, “ಕಾಂಗ್ರೆಸ್ ಯಾವಾಗಲೂ ಮೋದಿಯವರನ್ನು ನಿಂದಿಸುತ್ತದೆ” ಎಂದು ಈ ಘಟನೆಯನ್ನು ದೇಶಕ್ಕೆ ಕಳಂಕ ಎಂದು ಕರೆದಿದ್ದಾರೆ. ಬಿಹಾರ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ರಿಜ್ವಿ ತಾನು ಆರೋಪಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.