ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಭಾರತ-ಪಾಕ್ ನಡುವೆ ಉದ್ವಿಗ್ನತೆ- ಇಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೈವೋಲ್ಟೇಜ್ ಮೀಟಿಂಗ್

UN Security Council Meeting: ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಇಂದು ಸಭೆ ಸೇರಲಿದೆ.

ಪಹಲ್ಗಾಮ್‌ ಉಗ್ರರ ದಾಳಿ- ವಿಶ್ವಸಂಸ್ಥೆಯಿಂದ ಭದ್ರತಾ ಮಂಡಳಿ ಸಭೆ

Profile Sushmitha Jain May 5, 2025 11:08 AM

ನವದೆಹಲಿ: ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ (India and Pakistan) ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯು (United Nations Security Council) ಇಂದು ಸಭೆ ಸೇರಲಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿಯು ಭಾನುವಾರ, ಭಾರತದ ಆಕ್ರಮಣಕಾರಿ ಕ್ರಮಗಳು, ಪ್ರಚೋದನಾಕಾರಿ ಹೇಳಿಕೆಗಳು ಮತ್ತು ಕೃತ್ಯಗಳ ಬಗ್ಗೆ ವಿಶ್ವ ಭದ್ರತಾ ಸಂಸ್ಥೆಗೆ ಮಾಹಿತಿ ನೀಡುವುದಾಗಿ ತಿಳಿಸಿತು. "ಭಾರತವು ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿರುವ ಅಕ್ರಮ ಕ್ರಮವನ್ನು ಪಾಕಿಸ್ತಾನವು ನಿರ್ದಿಷ್ಟವಾಗಿ ಎತ್ತಿ ತೋರಿಸಲಿದೆ" ಎಂದು ಅದು ಹೇಳಿದ್ದು, ಭಾರತದ ಕ್ರಮಗಳು ಪ್ರದೇಶದ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುತ್ತಿವೆ ಎಂದು ಸ್ಪಷ್ಟಪಡಿಸಲಿದೆ.

ಸೋಮವಾರ ನಡೆಯಲಿರುವ ಸಭೆಯು, ಗಡಿಯಾಚೆಗಿನ ಉದ್ವಿಗ್ನತೆಯ ಬಗ್ಗೆ ಎರಡೂ ದೇಶಗಳಿಗೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಾಗಲಿದೆ. ಯುಎನ್‌ನಲ್ಲಿ ಗ್ರೀಸ್‌ನ ಶಾಶ್ವತ ಪ್ರತಿನಿಧಿಯಾಗಿರುವ ಮತ್ತು ಮೇ ತಿಂಗಳಿಗೆ ಭದ್ರತಾ ಮಂಡಳಿಯ ಅಧ್ಯಕ್ಷರಾಗಿರುವ ರಾಯಭಾರಿ ಇವಾಂಜೆಲೋಸ್ ಸೆಕೆರಿಸ್, ನಾವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತೇವೆ. ಆದರೆ, ಪ್ರದೇಶದಲ್ಲಿ ಹೆಚ್ಚುತ್ತಿರುವ ಈ ಉದ್ವಿಗ್ನತೆಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ" ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Pahalgam Terror Attack: ಪಹಲ್ಗಾಮ್‌ ಉಗ್ರರಿಗೆ ಸಹಾಯ ಮಾಡಿದ್ದ ಶಂಕಿತ ಪೊಲೀಸ್‌ ಚೇಸಿಂಗ್‌ ವೇಳೆ ನದಿಗೆ ಹಾರಿ ಸಾವು

ಈ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದು, ಯುಎನ್ ಭದ್ರತಾ ಮಂಡಳಿಯು ಈ ದಾಳಿಯನ್ನು ತೀವ್ರವಾಗಿ ಖಂಡಿಸಿತ್ತು. ಈ ನೀಚವಾದ ಭಯೋತ್ಪಾದಕ ಕೃತ್ಯದ ರೂವಾರಿಗಳು, ಸಂಘಟಕರು ಮತ್ತು ಪ್ರಾಯೋಜಕರನ್ನು ಜವಾಬ್ದಾರರನ್ನಾಗಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತ್ತು. ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ಘೋಷಿಸಿತು. ಇದರಲ್ಲಿ ಪಾಕಿಸ್ತಾನದ ಮಿಲಿಟರಿ ಅಟಾಚಿಗಳನ್ನು ಗಡೀಪಾರು ಮಾಡುವುದು, ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸುವುದು ಮತ್ತು ಅಟ್ಟಾರಿ ಭೂ-ಸಾಗಣೆ ಕೇಂದ್ರವನ್ನು ತಕ್ಷಣ ಮುಚ್ಚುವುದು ಸೇರಿವೆ.

ಇತ್ತ ಭಾರತದ ಕ್ರಮಗಳಿಗೆ ಪರತಿಕ್ರಿಯೆಯಾಗಿ ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತು. ಅಲ್ಲದೆ ಭಾರತದ ಜೊತೆಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿತು. ಜೊತೆಗೆ, ಭಾರತದ ಸಿಂಧೂ ನದಿ ಒಪ್ಪಂದ ರದ್ದತಿಯನ್ನು ತಿರಸ್ಕರಿಸಿದ ಪಾಕಿಸ್ತಾನ, ಒಪ್ಪಂದದಡಿ ನೀರಿನ ಹರಿವನ್ನು ನಿಲ್ಲಿಸುವ ಯಾವುದೇ ಕ್ರಮವನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ.