Cherkady Sachhidanand Shetty Column: ದೇಶದ ಆರ್ಥಿಕಾಭಿವೃದ್ದಿಯಲ್ಲಿ ಮೂಲಸೌಕರ್ಯ ಕ್ಷೇತ್ರದ ಪಾತ್ರ ಮಹತ್ವದ್ದು
ಬಂಡವಾಳ ವೆಚ್ಚವೆಂದರೆ ಸಾರಿಗೆ, ಶಿಕ್ಷಣ, ಆರೋಗ್ಯ, ವಿದ್ಯುತ್, ಇಂಧನ ಮೊದಲಾದ ವಲಯಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರ ಮಾಡುವ ವೆಚ್ಚವಾಗಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿನ ಸುಧಾರಣೆಗಳು ಜನಜೀವನ ಸುಧಾರಿಸುವಲ್ಲಿ ಹಾಗೂ ಸಂಕಷ್ಟಗಳನ್ನು ನಿವಾರಿಸಲು ಸಹಕಾರಿಯಾಗು ತ್ತವೆ. ಭಾರತ ಈಗ ವರ್ಷಕ್ಕೆ 11 ಲಕ್ಷ ಕೋಟಿ ರುಪಾಯಿಯಷ್ಟು ಮೊತ್ತವನ್ನು ಮೂಲಸೌಕರ್ಯ ಕ್ಷೇತ್ರಕ್ಕಾಗಿ ವಿನಿಯೋಗಿಸುತ್ತಿದೆ.


ಚಿಮ್ಮುಹಲಗೆ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಕೇಂದ್ರ ಸರಕಾರದ ದೂರದೃಷ್ಟಿ ಹಾಗೂ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರ ದಕ್ಷತೆ ಮತ್ತು ಬದ್ಧತೆಯ ಫಲವಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಶರವೇಗ ದಲ್ಲಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಗಡ್ಕರಿಯವರು ತಾವು ತೋರಿರುವ ದಕ್ಷತೆ ಮತ್ತು ಸಾಮರ್ಥ್ಯ ದಿಂದಾಗಿ ಕೇಂದ್ರ ಸಂಪುಟದಲ್ಲಿ ಕಳೆದ 11 ವರ್ಷಗಳಿಂದ ಒಂದೇ ಖಾತೆಯನ್ನು ಹೊಂದಿರುವ ಏಕೈಕ ಸಚಿವರೆನಿಸಿಕೊಂಡಿದ್ದಾರೆ ಮತ್ತು ಇವರ ಕಾರ್ಯವೈಖರಿ ಯನ್ನು ಎಲ್ಲಾ ನಾಯಕರು ಹಾಗೂ ಜನರು ಮುಕ್ತ ಕಂಠದಿಂದ ಪ್ರಶಂಸಿಸುತ್ತಾರೆ.
ಕೋವಿಡ್ ಸಾಂಕ್ರಾಮಿಕದ ಬಳಿಕ ಬದಲಾದ ಕೇಂದ್ರ ಸರಕಾರದ ಆರ್ಥಿಕ ಧೋರಣೆಗಳು, ಪ್ರಧಾನಿ ಯವರ ದೂರದೃಷ್ಟಿ ಯೋಜನೆಗಳು, ಮೂಲಸೌಕರ್ಯ ಮತ್ತು ಬಂಡವಾಳ ವೆಚ್ಚಕ್ಕೆ ನೀಡಿದ ಆದ್ಯತೆ, ಅನಗತ್ಯ ವೆಚ್ಚಗಳಿಗೆ ಹಾಕಲಾದ ಕಡಿವಾಣ ಮುಂತಾದವುಗಳಿಂದಾಗಿ ದೇಶದ ಆರ್ಥಿಕತೆ ನಿರೀಕ್ಷೆಗೂ ಮೀರಿ ಬೆಳವಣಿಗೆ ಸಾಧಿಸುತ್ತಿದೆ. ಆರ್ಥಿಕ ಸುಧಾರಣೆಯ ಕ್ರಮಗಳು ಭಾರತದ ಆರ್ಥಿಕತೆ ಮತ್ತು ಹಣದುಬ್ಬರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ.
ಹೆಚ್ಚಿನ ರಾಷ್ಟ್ರಗಳು ಹಣದುಬ್ಬರ, ಆರ್ಥಿಕತೆಯ ಮಂದಗತಿಯನ್ನು ಎದುರಿಸುತ್ತಿವೆ. ಆದರೆ ಭಾರತದ ಆರ್ಥಿಕತೆ ನಿರಂತರವಾಗಿ ಬೆಳವಣಿಗೆ ಕಾಣುತ್ತಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ. ಆ ಮೂಲಕ ವಿತ್ತೀಯ ಕೊರತೆ ಮತ್ತು ಸಾರ್ವಜನಿಕ ಸಾಲದ ಹೊರೆಯನ್ನು ತಗ್ಗಿಸ ಲಾಗುತ್ತಿದೆ ಎಂದು ಅಮೆರಿಕದ ಹಣಕಾಸು ಸೇವಾ ಸಂಸ್ಥೆ ಮೊರ್ಗಾನ್ ಸ್ಟಾನ್ಲಿ ತನ್ನ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: Cherkady Sachhidanand Shetty Column: ದಿವಾಳಿ ಅಂಚಿನಲ್ಲಿ ಭಯೋತ್ಪಾದಕ ಪಾಕ್
ಅಲ್ಲದೆ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು ಅದರ ಸಕಾರಾತ್ಮಕ ಪರಿಣಾಮಗಳು ಆರ್ಥಿಕಾಭಿವೃದ್ಧಿಯಲ್ಲಿ ಗೋಚರವಾಗುತ್ತಿದೆಯೆಂದೂ ಸದರಿ ಸಂಸ್ಥೆ ವರದಿ ಮಾಡಿದೆ. ಕೋವಿಡ್‌ಗೆ ಮೊದಲು ಅಂದರೆ 2020ನೇ ಹಣಕಾಸು ವರ್ಷದಲ್ಲಿ ಕೇಂದ್ರದ ಬಂಡವಾಳ ವೆಚ್ಚದ ಪ್ರಮಾಣ ಜಿಡಿಪಿಯ ಶೇ. 1.6ರಷ್ಟಿದೆ. ಇದು 2025 ರಲ್ಲಿ ಶೇ. 3.2ಕ್ಕೆ ಏರಿಕೆಯಾಗಿದೆ. ಬಂಡವಾಳ ವೆಚ್ಚವೆಂದರೆ ಸಾರಿಗೆ, ಶಿಕ್ಷಣ, ಆರೋಗ್ಯ, ವಿದ್ಯುತ್, ಇಂಧನ ಮೊದಲಾದ ವಲಯಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರ ಮಾಡುವ ವೆಚ್ಚವಾಗಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿನ ಸುಧಾರಣೆಗಳು ಜನಜೀವನ ಸುಧಾರಿಸುವಲ್ಲಿ ಹಾಗೂ ಸಂಕಷ್ಟಗಳನ್ನು ನಿವಾರಿಸಲು ಸಹಕಾರಿಯಾಗುತ್ತವೆ. ಭಾರತ ಈಗ ವರ್ಷಕ್ಕೆ 11 ಲಕ್ಷ ಕೋಟಿ ರುಪಾಯಿಯಷ್ಟು ಮೊತ್ತವನ್ನು ಮೂಲಸೌಕರ್ಯ ಕ್ಷೇತ್ರಕ್ಕಾಗಿ ವಿನಿಯೋಗಿಸುತ್ತಿದೆ.
ಹಾಗಾಗಿ ಗ್ರಾಮೀಣ ರಸ್ತೆ, ಹೆದ್ದಾರಿ, ರೈಲ್ವೆ, ವಿಮಾನ ನಿಲ್ದಾಣಗಳ ಜಾಲ ವೇಗವಾಗಿ ವಿಸ್ತರಣೆ ಯಾಗುತ್ತಿದೆ. ಕೇಂದ್ರ ಸರಕಾರದ ದೂರದೃಷ್ಟಿ ಹಾಗೂ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರ ದಕ್ಷತೆ ಮತ್ತು ಬದ್ಧತೆಯ ಫಲವಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಶರವೇಗದಲ್ಲಿ ನಡೆಯುತ್ತಿವೆ.
ಈ ನಿಟ್ಟಿನಲ್ಲಿ ಗಡ್ಕರಿಯವರು ತಾವು ತೋರಿರುವ ದಕ್ಷತೆ ಮತ್ತು ಸಾಮರ್ಥ್ಯದಿಂದಾಗಿ ಕೇಂದ್ರ ಸಂಪುಟದಲ್ಲಿ ಕಳೆದ 11 ವರ್ಷಗಳಿಂದ ಒಂದೇ ಖಾತೆಯನ್ನು ಹೊಂದಿರುವ ಏಕೈಕ ಸಚಿವರೆನಿಸಿ ಕೊಂಡಿದ್ದಾರೆ ಮತ್ತು ಇವರ ಕಾರ್ಯವೈಖರಿಯನ್ನು ಎಲ್ಲಾ ನಾಯಕರು ಹಾಗೂ ಜನರು ಮುಕ್ತ ಕಂಠದಿಂದ ಪ್ರಶಂಸಿಸುತ್ತಾರೆ. ಗುಣಮಟ್ಟದ ಕಾಮಗಾರಿಯು ನಡೆಯುತ್ತಿರುವುದರಿಂದ ರಸ್ತೆಗಳ ಚಹರೆ ಬದಲಾಗುತ್ತಿದೆ.

ನಗರಗಳ ನಡುವಿನ ಅಂತರ ಕಡಿಮೆಯಾಗಿ ಅಪಾರ ಸಮಯ ಹಾಗೂ ಇಂಧನ ಉಳಿತಾಯ ವಾಗುತ್ತಿದೆ. “ಅಮೆರಿಕವು ಶ್ರೀಮಂತ ದೇಶವಾಗಿರುವುದರಿಂದ ಇಲ್ಲಿ ಉತ್ತಮ ರಸ್ತೆಗಳಿವೆ ಎಂದೇನಲ್ಲ, ಬದಲಿಗೆ ಉತ್ತಮ ರಸ್ತೆಗಳಿರುವುದರಿಂದಲೇ ಅಮೆರಿಕ ಶ್ರೀಮಂತ ದೇಶವಾಗಿದೆ" ಎಂಬ ಮಾತನ್ನು ಅಮೆರಿಕದ ಅಂದಿನ ಅಧ್ಯಕ್ಷ ಜಾನ್ ಎಫ್.ಕೆನಡಿಯವರು ಹೇಳಿದ್ದರು.
ಈ ಉಪಮೆಯನ್ನು ದೆಹಲಿಯ ಟ್ರಾನ್ಸ್ ಪೋರ್ಟ್ ಭವನದಲ್ಲಿರುವ ರಸ್ತೆ ಮತ್ತು ಹೆದ್ದಾರಿ ಸಚಿವಾ ಲಯದ ಕಚೇರಿಯಲ್ಲಿ ಹಾಕಲಾಗಿದೆ. ಕೇಂದ್ರ ಸರಕಾರವು ದೃಢ ಸಂಕಲ್ಪದೊಂದಿಗೆ ಅಮೆರಿಕದ ರಸ್ತೆಗಳ ಗುಣಮಟ್ಟ, ವೇಗ, ಪಾರದರ್ಶಕತೆ ಮತ್ತು ಪರಿಸರ ಸ್ನೇಹಿ ನೀತಿ ಇತ್ಯಾದಿ ವಿಷಯಗಳ ಬಗ್ಗೆ ಸಮತೋಲನ ಕಾಯ್ದುಕೊಳ್ಳುವ ಮೂಲಕ ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲವು ವಿಶ್ವದಲ್ಲಿಯೇ ಮನ್ನಣೆ ಪಡೆಯಲು ಶ್ರಮಿಸುತ್ತಿದೆ.
2018ರಲ್ಲಿ ಮಹತ್ವಪೂರ್ಣ ‘ಭಾರತಮಾಲಾ ಪರಿಯೋಜನೆ’ ಯನ್ನು ಕೈಗೆತ್ತಿಕೊಳ್ಳಲಾಯಿತು. ಈ ಯೋಜನೆಯ ಮೂಲಕ 550 ಜಿಲ್ಲೆಗಳಿಗೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ದೊರೆಯಲಿದೆ. ಇದರಲ್ಲಿ ಆರ್ಥಿಕ ಕಾರಿಡಾರ್, ಕೈಗಾರಿಕಾ ಕಾರಿಡಾರ್ ಮತ್ತು ಲಾಜಿಸ್ಟಿಕ್ ಸಂಪರ್ಕ ಲಭ್ಯವಿರುವುದು. 2026ಕ್ಕೆ ಇದು ಮುಗಿ ಯುವ ಸಂಭವವಿದೆ. ಇದರಲ್ಲಿ 65000 ಕಿ.ಮೀ. ರಸ್ತೆ ನಿರ್ಮಿಸುವ ಗುರಿಯಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಈ ಕೆಲಸವು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿ ರುವುದಲ್ಲದೆ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. 10 ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಶೇ.60ರಷ್ಟು ವಿಸ್ತರಿಸಲಾಗಿದೆ. 91000 ಕಿ.ಮೀ.ವರೆಗೆ ಅದು ಹೆಚ್ಚಾಗಿದೆ. ‘ಐಐಎಂ ಬೆಂಗಳೂರು’ ನಡೆಸಿದ ಅಧ್ಯಯನದ ವರದಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ವೆಚ್ಚ ಮಾಡಿದ ಒಂದು ರುಪಾಯಿಯು ಭಾರತದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ)ದಲ್ಲಿ 3.21 ರು. ಹೆಚ್ಚಳಕ್ಕೆ ಕಾರಣವಾಗಿದೆ.
ಇದರ ಪರಿಣಾಮವಾಗಿ ದೇಶೀಯ ಉತ್ಪಾದನೆ ಶೇ.9ರಷ್ಟು ಮತ್ತು ಕಾರು ಮಾರಾಟ ಶೇ.10.4ರಷ್ಟು ಬೆಳೆದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೂಲಸೌಕರ್ಯ ಬೆಳವಣಿಗೆ ಯನ್ನು ಕೇಂದ್ರ ಬಿಂದುವನ್ನಾಗಿರಿಸಿಕೊಂಡು ಬಂದಿದೆ. ಕಳೆದ ಒಂದು ದಶಕದಲ್ಲಿ ದೇಶದ ಆರ್ಥಿಕಾ ಭಿವೃದ್ಧಿಯನ್ನು ಇದು ವೇಗಗೊಳಿಸಿದ್ದು ಮಾತ್ರವಲ್ಲದೆ ಅದಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ.
ಪೂರ್ಣಗೊಂಡ ಮತ್ತು ನಿರ್ಮಾಣ ಹಂತದಲ್ಲಿರುವ ಹೆದ್ದಾರಿಗಳ ನಿರ್ಮಾಣವು ದೇಶದ ಬೆಳವಣಿಗೆಯ ಪಥವನ್ನೇ ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಉತ್ತಮ ಹೆದ್ದಾರಿಗಳು, ಜಲಮಾರ್ಗಗಳು ಮತ್ತು ರೈಲು ಮಾರ್ಗಗಳು, ಸರಕು ಸಾಗಾಟದ (ಲಾಜಿಸ್ಟಿಕ್) ವೆಚ್ಚವನ್ನು ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡಿವೆ. ವಿಶ್ವದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸುವ ಮತ್ತು 2047ರ ವೇಳೆಗೆ ನಮ್ಮ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಅಮೆರಿಕದ ಹೆದ್ದಾರಿ ಜಾಲ ಕ್ಕಿಂತಲೂ ಶ್ರೇಷ್ಠವಾಗಿಸುವ ದೃಷ್ಟಿಕೋನವನ್ನು ಕೇಂದ್ರ ಸರಕಾರ ಹೊಂದಿದೆ. ಆ ಮೂಲಕ ಭಾರತವನ್ನು ಆರ್ಥಿಕ ಮಹಾಶಕ್ತಿಯನ್ನಾಗಿ ಮಾಡುವುದು ಕೇಂದ್ರ ಸರಕಾರದ ಗುರಿಯಾಗಿದೆ.
ಕಳೆದ ಒಂದು ದಶಕದಲ್ಲಿ ನಿರ್ಮಿಸಲಾದ ರಸ್ತೆಗಳು ಸರಕು ಸಾಗಾಟದ ವೆಚ್ಚವನ್ನು ಶೇ.16ರಿಂದ ಶೇ. 10ಕ್ಕೆ ಇಳಿಸಿವೆ. ಪ್ರಸಕ್ತ ಕೇಂದ್ರ ಸರಕಾರದ ಅಧಿಕಾರಾವಧಿಯು ದೇಶದಲ್ಲಿ ಹೆದ್ದಾರಿ ನಿರ್ಮಾಣದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ. ರಸ್ತೆಗಳ ನಿರ್ಮಾಣದಿಂದ ಆರ್ಥಿಕ ಬೆಳವಣಿಗೆಗೆ ಅಪಾರ ಕೊಡುಗೆ ಸಿಗುತ್ತದೆ, ಲಕ್ಷಾಂತರ ಜನರಿಗೆ ಕೆಲಸ ದೊರೆಯುತ್ತದೆ. ಸ್ಟೀಲ್, ಸಿಮೆಂಟ್ ಇನ್ನಿತರ ಪೂರಕ ವಸ್ತು ಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗುತ್ತದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶದಾದ್ಯಂತ ೨೫ ಹೊಸ ‘ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ವೇ’ಗಳನ್ನು ನಿರ್ಮಿಸುತ್ತಿದೆ. ಇದಲ್ಲದೆ ಬಂದರುಗಳನ್ನು ಸಂಪರ್ಕಿಸಲು ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು 3000 ಕಿ.ಮೀ.ಗಳಿಗೂ ಹೆಚ್ಚು ಉದ್ದದ ಹೆದ್ದಾರಿ ಗಳ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಕಳೆದ ಹತ್ತು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿದೆ.
ಭಾರತ ವಿಶ್ವದ ನಾಲ್ಕನೆಯ ಅತಿ ದೊಡ್ಡ ಆರ್ಥಿಕತೆಯಾಗುವತ್ತ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ದಾಪುಗಾಲಿಡುತ್ತಿರುವ ಈ ಸಂದರ್ಭದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಪಾತ್ರವು ಮಹತ್ತರದ್ದಾಗಿದೆ. ರೈಲ್ವೆ ವಲಯದ ವಿಚಾರದಲ್ಲಿ ಹೇಳುವುದಾದರೆ, ದಶಕದ ಮೊದಲು ಯೋಜನೆಗಳನ್ನು ಬಹುತೇಕವಾಗಿ ವಾರ್ಷಿಕವಾಗಿ ಸಂಗ್ರಹವಾಗುವ ಆದಾಯದ ಪಾಲಿನಲ್ಲಿ ಕೈಗೊಳ್ಳಲಾಗುತ್ತಿತ್ತು. ಒಂದೊಂದು ಯೋಜನೆ ಪೂರ್ಣಗೊಳ್ಳುವುದಕ್ಕೂ ದಶಕಗಳೇ ಹಿಡಿಯುತ್ತಿತ್ತು. ಸಂಪನ್ಮೂಲ ಕೊರತೆ ವಿಳಂಬವಾಗಿ ಯೋಜನಾ ವೆಚ್ಚ ಎರಡರಿಂದ ಮೂರು ಪಟ್ಟು ಹೆಚ್ಚಾ ಗುತ್ತಿತ್ತು.
ಪ್ರಸಕ್ತ ಸನ್ನಿವೇಶದಲ್ಲಿ ರೈಲ್ವೆ ಇಲಾಖೆಯ ಮಾನಸಿಕತೆ ಬದಲಾಗಿದೆ. ರೈಲ್ವೆಯಲ್ಲಿ ಹೂಡುವ ಬಂಡವಾಳವು ಅಭಿವೃದ್ಧಿಗೆ ಎಂಜಿನ್ ಎಂಬುದನ್ನು ಮನಗಂಡಿರುವ ಕಾರಣ ದೊಡ್ಡ ಮೊತ್ತದ ಬಂಡವಾಳ ಹೂಡಿಕೆಗೆ ಒತ್ತಾಸೆ ಸಿಕ್ಕಿದೆ. ಆರ್ಥಿಕತೆಯ ಮೇಲಿನ ಸಕಾರಾತ್ಮಕ ಪರಿಣಾಮಗಳು: ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಸಾರ್ವಜನಿಕ ವೆಚ್ಚದ ಹೆಚ್ಚಳ, ಹಣ ದುಬ್ಬರ ನಿಯಂತ್ರಣ, ಗ್ರಾಹಕ ಸ್ನೇಹಿ ಬ್ಯಾಂಕ್ ನೀತಿ, ಹಣದ ದ್ರವ್ಯಶೀಲತೆಯನ್ನು ಹೆಚ್ಚಿಸುವ ಉಪಕ್ರಮಗಳಿಂದಾಗಿ ಜೀವನ ಮಟ್ಟದಲ್ಲಿ ಸುಧಾರಣೆಯಾಗಿದೆ.
ಅನುಭೋಗದ ಗುಣಮಟ್ಟದ ಸುಧಾರಣೆಯಲ್ಲಿ ಬೆಲೆ ಇಳಿಕೆಗೆ ಅದು ಹೆಚ್ಚು ಬಲ ನೀಡಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಪ್ರಮಾಣ ಶೇ. 7.7ರಷ್ಟಿದ್ದರೂ 2016ರಿಂದೀಚೆಗೆ ಸರಾಸರಿ ಸಿಪಿಐ ಶೇ. 4.9ರಷ್ಟಿದೆ. ಇದೀಗ ಈ ಚಿಲ್ಲರೆ ಹಣದುಬ್ಬರ ವು ಕಳೆದ ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ.2.1ಕ್ಕೆ ಇಳಿಕೆಯಾಗಿದೆ. ಇದು ಪ್ರತ್ಯಕ್ಷ ಮತ್ತು ಪರೋಕ್ಷ ಬಂಡವಾಳ ವೆಚ್ಚದ ಪರಿಣಾಮವನ್ನು ತೋರಿಸುತ್ತದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಿಪಿಐ ಚಿಲ್ಲರೆ ಹಣದುಬ್ಬರವು ಸರಾಸರಿ ಶೇ.4ರಷ್ಟು ಇರುವ ನಿರೀಕ್ಷೆ ಯಿದೆಯೆಂದು ‘ಕ್ರಿಸಿಲ್’ ಸಂಶೋಧನಾ ವರದಿ ತಿಳಿಸಿದೆ. ಭಾರತೀಯ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ತೆರಿಗೆ ಸಂಗ್ರಹವು ಮಹತ್ತರ ಪಾತ್ರ ವಹಿಸುತ್ತಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದು ಎಂಟು ವರ್ಷವಾಗಿದೆ. ಜಿಎಸ್‌ಟಿಯಲ್ಲಿ ಮಹತ್ವದ ಸುಧಾರಣೆಯಾಗಿದ್ದು ಇದರಿಂದ ದೇಶದ ಆರ್ಥಿಕತೆಗೆ ಹೊಸ ರೂಪ ಸಿಕ್ಕಿದೆ. ದೇಶದ ಅಭಿವೃದ್ಧಿಗೆ ಮತ್ತು ಆರ್ಥಿಕ ಏಳಿಗೆಗೆ ಜಿಎಸ್‌ಟಿ ಸಮರ್ಥ ಎಂಜಿನ್ ಆಗಿ ಕಾರ್ಯ ನಿರ್ವಹಿಸುತ್ತಿದೆ.
2020ರ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹವು ಜಿಡಿಪಿಯ ಶೇ. 9.9ರಷ್ಟಿತ್ತು. ಅದು 2025ರಲ್ಲಿ ಶೇ. 11.5ಕ್ಕೇರಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ತೆರಿಗೆ ಆದಾಯವು ಜಿಡಿಪಿಯ ಶೇ.12ಕ್ಕೆ ಏರಿಕೆ ಯಾಗಲಿದೆ ಎಂದು ಬಜೆಟ್‌ನಲ್ಲೇ ಪ್ರಸ್ತಾಪಿಸಲಾಗಿದೆ. ಜಿಎಸ್‌ಟಿ ಸಂಗ್ರಹವು 2024-25ರ ಹಣಕಾಸು ವರ್ಷದಲ್ಲಿ 22.08 ಲಕ್ಷ ಕೋಟಿ ರುಪಾಯಿಗೆ ತಲುಪಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ 17 ತೆರಿಗೆಗಳು ಹಾಗೂ ಸೆಸ್‌ಗಳು ವಿಲೀನವಾಗಿ ತೆರಿಗೆ ಹೊರೆ ಕಡಿಮೆಯಾಗಿದೆ.
ಜಿಎಸ್‌ಟಿಯು ನವಭಾರತದ ಕ್ರಾಂತಿಕಾರಿ ಶಾಸನ. ಈ ಹೊಸ ಉಪಕ್ರಮದಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ತೆರಿಗೆ ಸಂಗ್ರಹ ದುಪ್ಪಟ್ಟಾಗಿದೆ. ದೇಶದ ಡಿಜಿಟಲ್ ಕ್ರಾಂತಿಯು ದಶಕದ ಸಂಭ್ರಮ ವನ್ನು ಪೂರೈಸಿದೆ. ಇದು ಜನರ ಜೀವನಮಟ್ಟಕ್ಕೆ ನೀಡಿದ ಕೊಡುಗೆ ಅನನ್ಯ. ಡಿಜಿಟಲ್ ಕ್ರಾಂತಿ ಎಲ್ಲಾ ಸೇವೆಗಳನ್ನು ಅಂಗೈಗೆ ತಂದಿಳಿಸಿದೆ.
ಡಿಜಿಟಲ್ ಕ್ರಾಂತಿಯಲ್ಲಿ ಮೂಲಸೌಕರ್ಯದ ಪಾಲು ಅತ್ಯಂತ ಮಹತ್ವದ್ದು. ಡಿಜಿಟಲ್ ಕ್ರಾಂತಿಗೆ ಮಹತ್ವದ ಮುನ್ನಡೆ ನೀಡಿದ್ದೇ ಈ ಕ್ಷೇತ್ರ. ಹೊಸ ಹೊಸ ಮೂಲಸೌಕರ್ಯ ನಿರ್ಮಾಣಕ್ಕೆ ಸರಕಾರ ನೀಡಿದ ಮಹತ್ವ ಇದಾಗಿದೆ. ಇಲ್ಲಿ ಮಧ್ಯವರ್ತಿಗಳಿಲ್ಲದೆಯೇ 97 ಕೋಟಿಗೂ ಹೆಚ್ಚಿನ ಅಂತರ್ಜಾಲ ಸಂಪರ್ಕ, ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ. ಸರಕಾರಕ್ಕೆ ಹಣ ಉಳಿತಾಯವಾಗಿದೆ. ಇದು ಯೋಜನೆಯನ್ನು ರೂಪಿಸುವಲ್ಲಿ ಸರಕಾರಕ್ಕೆ ಇರುವ ದೂರದೃಷ್ಟಿಗೆ ಒಂದು ಉದಾಹರಣೆ ಎನ್ನಲಡ್ಡಿಯಿಲ್ಲ.
ಇದಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ ಸಾರ್ವಜನಿಕ ವಲಯದ ಒಂದಿಷ್ಟು ಕಂಪನಿಗಳಿಂದ ಸರಕಾರವು ಗಣನೀಯ ಲಾಭಾಂಶವನ್ನು ಸ್ವೀಕರಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕೋಲ್ ಇಂಡಿಯಾ ಮತ್ತು ಒಎನ್‌ಜಿಸಿಯಿಂದ ಅತಿ ಹೆಚ್ಚು ಲಾಭಾಂಶ ಹರಿದುಬಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ನೈಜ ಜಿಡಿಪಿ ಬೆಳವಣಿಗೆ ಶೇ.6.5ಕ್ಕಿಂತಲೂ ಜಾಸ್ತಿ ಇರಬಹುದು ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ‘ಇಸಿಆರ್‌ಎ’ (ಇಕ್ರಾ) ಹೇಳಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಎಂಪಿಸಿ ಸದಸ್ಯರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಲ್ಲದೆ, ‘ದೇಶದ ಆರ್ಥಿಕತೆ ಸದೃಢವಾಗಿ ಬೆಳೆಯುತ್ತಿದೆ ಮತ್ತು ಮುಂಬರುವ ವರ್ಷಗಳಲ್ಲಿ ಆರ್ಥಿಕತೆಯು ಶೇ. 7ರಿಂದ ಶೇ. 7.5ರಷ್ಟು ಬೆಳವಣಿಗೆ ಸಾಧಿಸಲಿದೆ’ ಎಂಬ ನಿಖರ ಅಭಿಮತವೂ ಅವರಿಂದ ಹೊಮ್ಮಿದೆ.
ಅಭಿವೃದ್ಧಿಯ ವಿಷಯದಲ್ಲಿ ಯಾರೂ ರಾಜಕೀಯವನ್ನು ಎಳೆದು ತರಬಾರದು. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಅಭಿವೃದ್ಧಿಯನ್ನು ಸಂಭ್ರಮಿಸಬೇಕು. ಅಭಿವೃದ್ಧಿಯ ಪಥವನ್ನು ವಿಶ್ಲೇಷಿಸು ವಾಗ ಭಾರತವು ಬಹುಬೇಗ ವಿಶ್ವದ ಮೂರನೆಯ ಆರ್ಥಿಕತೆಯಾಗುವುದೆಂದು ಭಾವಿಸಬಹುದು.
11 ವರ್ಷಗಳ ಹಿಂದೆ 11ನೇ ಆರ್ಥಿಕತೆಯಾಗಿದ್ದ ಭಾರತ ಈಗ ವಿಶ್ವದ ನಾಲ್ಕನೆಯ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಆಳುಗರು ತಾವು ಹಮ್ಮಿಕೊಂಡಿರುವ ಎಲ್ಲಾ ಯೋಜನಾ ಕ್ರಮಗಳಿಗೆ ಬದ್ಧರಾದರೆ ಮುಂದಿನ ಮೂರು ವರ್ಷದೊಳಗೆ ಭಾರತವು ವಿಶ್ವದ ಮೂರನೆಯ ಆರ್ಥಿಕತೆಯ ಸ್ಥಾನ ಪಡೆಯಲಿದೆ.
(ಲೇಖಕರು ಆರ್ಥಿಕ ತಜ್ಞರು)