International Tiger Day: ಪ್ರತಿ ಭಾನುವಾರ ಉಪವಾಸ ಮಾಡಿದ್ದ ಹುಲಿ ಯಾವುದು ಗೊತ್ತೇ?
ಮಾನವರು ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಉಪವಾಸ ಮಾಡಿದ್ದನ್ನು ಕೇಳಿದ್ದೇವೆ. ಆದರೆ ಹುಲಿಯೊಂದು ಪ್ರತಿ ಭಾನುವಾರ ಉಪವಾಸ ಮಾಡುತ್ತಿತ್ತು. ಕೇಳಲು ಎಷ್ಟು ಸೊಗಸಾಗಿದೆಯೋ ಇದರ ಹಿಂದಿನ ಕಥೆಯು ಕೂಡ ಅಷ್ಟೇ ರೋಚಕವಾಗಿದೆ. ಮಂಗಳವಾರವಷ್ಟೇ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ಉಪವಾಸ ಮಾಡಿದ ವಿಶ್ವದ ಮೊದಲ ಹುಲಿಯ ಬಗ್ಗೆ ತಿಳಿದುಕೊಳ್ಳೋಣ.



ಮಧ್ಯಪ್ರದೇಶದ ರೇವಾದಲ್ಲಿದ್ಧ ಮೋಹನ್ ಎಂಬ ಹೆಸರಿನ ಬಿಳಿ ಹುಲಿಯೊಂದು ಪ್ರತಿ ಭಾನುವಾರ ಉಪವಾಸ ಮಾಡುತ್ತಿತ್ತು. ಈ ಹುಲಿಯನ್ನು ರಾಜ ಮನೆತನದವರಂತೆ ಸಾಕಲಾಗುತ್ತಿತ್ತು. ಇದನ್ನು ಪ್ರತಿ ವರ್ಷ ಅಂತಾರಾಷ್ಟ್ರೀಯ ಹುಲಿ ದಿನವಾದ ಜುಲೈ 29ರಂದು ಹೆಮ್ಮೆಯಿಂದ ನೆನಪಿಸಿಕೊಳ್ಳಲಾಗುತ್ತದೆ.

ವಿಶ್ವದಾದ್ಯಂತ ಜುಲೈ 29 ಅನ್ನು ಅಂತಾರಾಷ್ಟ್ರೀಯ ಹುಲಿ ದಿನವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ 1951 ರಲ್ಲಿ ಮಧ್ಯಪ್ರದೇಶದ ರೇವಾದಲ್ಲಿ ಕಂಡು ಬಂದ ವಿಶ್ವದ ಮೊದಲ ಬಿಳಿ ಹುಲಿ ಮೋಹನ್ ಅನ್ನು ನೆನಪಿಸಲಾಗುತ್ತದೆ. ಭಾರತದ ಹುಲಿಗಳ ರಾಜ್ಯ ಎಂದೇ ಕರೆಯಲ್ಪಡುವ ಮಧ್ಯಪ್ರದೇಶದಲ್ಲಿ ಇದು ಕಂಡು ಬಂದಿತ್ತು. ಜಗತ್ತಿಗೆ ತನ್ನ ಮೊದಲ ಬಿಳಿ ಹುಲಿಯನ್ನು ನೀಡಿದ್ದು ಕೂಡ ಇದೇ ರಾಜ್ಯ.

1951ರಲ್ಲಿ ರೇವಾ ಕಾಡುಗಳಲ್ಲಿ ಕಂಡು ಅಪರೂಪದ ಬಿಳಿ ಹುಲಿ ಮೋಹನ್. ಇದಕ್ಕೆ ನಾಮಕರಣ ಮಾಡಿದ್ದು ರೇವಾದ ರಾಜ ಮಾರ್ತಾಂಡ್ ಸಿಂಗ್. ಸಿಧಿಯ ಬರ್ಗಡಿ ಕಾಡಿನಲ್ಲಿ ಬಿಳಿ ಹುಲಿಯನ್ನು ನೋಡಿದ ಮಹಾರಾಜ ಮಾರ್ತಾಂಡ ಸಿಂಗ್ ಅದರ ವಿಶಿಷ್ಟ ನೋಟದಿಂದ ಆಕರ್ಷಿತರಾದರು. ಬಳಿಕ ಅದನ್ನು ಸೆರೆ ಹಿಡಿದು ಗೋವಿಂದಗಢದ ರಾಜ ಕೋಟೆಗೆ ಕರೆ ತಂದರು.

ಕಾಡಿನಿಂದ ರಾಜಮನೆತನದ ಅರಮನೆಗೆ ಬಂದ ಮೋಹನನ ಜೀವನ ಶೈಲಿ ಸಂಪೂರ್ಣ ಬದಲಾಯಿತು. ಅದರ ಹೊಳೆಯುವ ಬಿಳಿ ಮೈಬಣ್ಣ, ಆಕರ್ಷಕ ನೀಲಿ ಕಣ್ಣುಗಳು ಆಕರ್ಷಣೆಯ ಕೇಂದ್ರಬಿಂದುವಾಯಿತು. ಮೋಹನ್ ನನ್ನು ಸಾಕುಪ್ರಾಣಿಗಿಂತಲೂ ಹೆಚ್ಚು ಪ್ರೀತಿಯಿಂದ ಅರಮನೆಯಲ್ಲಿ ನೋಡಿಕೊಳ್ಳಲಾಯಿತು.

ಕುತೂಹಲಕಾರಿ ಸಂಗತಿ ಎಂದರೆ ಮೋಹನ್ ಪ್ರತಿ ಭಾನುವಾರ ಉಪವಾಸ ಮಾಡುತ್ತಿದ್ದ. ರಾಜನು ಆತನ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಆ ದಿನ ಹಾಲು ಮಾತ್ರ ಸೇವಿಸುತ್ತಿತ್ತು. ಮೋಹನ್ ಗೆ ಫುಟ್ಬಾಲ್ ತುಂಬಾ ಪ್ರಿಯವಾಗಿತ್ತು. ಮೋಹನ್ ಗೆ ಮೂವರು ಸಂಗಾತಿಗಳಿದ್ದು ಅವುಗಳಲ್ಲಿ ಒಂದಾದ ರಾಧಾ 1958ರ ಅಕ್ಟೋಬರ್ 30ರಂದು ನಾಲ್ಕು ಬಿಳಿ ಮರಿಗಳಿಗೆ ಜನ್ಮ ಅವುಗಳಿಗೆ ರಾಜ, ರಾಣಿ, ಮೋಹಿನಿ ಮತ್ತು ಸಕೇಶಿ ಎಂದು ಹೆಸರಿಡಲಾಯಿತು. ಇದು ವಿಶ್ವದ ಮೊದಲ ನೈಸರ್ಗಿಕವಾಗಿ ಜನಿಸಿದ ಬಿಳಿ ಹುಲಿಗಳಾಗಿ ಗುರುತಿಸಿಕೊಂಡವು.

ಮೋಹನ್ ವಂಶಾವಳಿಯಲ್ಲಿ 34 ಮರಿಗಳ ಜನನವಾಗಿದ್ದು, ಅವುಗಳಲ್ಲಿ 21 ಬಿಳಿ ಹುಲಿಗಳು. ಬಳಿಕ ಅವುಗಳ ಸಂತತಿಗಳನ್ನು ಭಾರತ ಮತ್ತು ವಿದೇಶಗಳಾದ್ಯಂತ ಪ್ರಾಣಿ ಸಂಗ್ರಹಾಲಯಗಳಿಗೆ ಕಳುಹಿಸಲಾಯಿತು. ಆದರೆ ರೇವಾದಲ್ಲಿ ಬಳಿಕ ಬಿಳಿ ಹುಲಿಗಳು ಕಣ್ಮರೆಯಾದವು. ಜಗತ್ತಿಗೆ ತನ್ನ ಮೊದಲ ಬಿಳಿ ಹುಲಿಯನ್ನು ನೀಡಿದ ಭೂಮಿಯೇ ಅವುಗಳೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು.

1969ರ ಡಿಸೆಂಬರ್ 19ರಂದು ಮೋಹನ್ ತನ್ನ 19ನೇ ವಯಸ್ಸಿನಲ್ಲಿ ನಿಧನವಾಯಿತು. ಅದರ ನೆನಪಿನಲ್ಲಿ ಗೋವಿಂದಗಢ ಕೋಟೆಯ ಉದ್ಯಾನದಲ್ಲಿ ಸಮಾಧಿ ಸ್ಥಾಪಿಸಲಾಯಿತು. ಇದು ಇಂದಿಗೂ ಇದೆ. ಮೋಹನ್ನ ಕೊನೆಯ ವಂಶಸ್ಥ ವಿರಾಟ್ ಎಂಬ ಬಿಳಿ ಹುಲಿ 1976ರಲ್ಲಿ ಸಾವನ್ನಪ್ಪಿದೆ.