Heart Attack Deaths: ಹೃದಯಾಘಾತದಿಂದ ಹೆಚ್ಚಾದ ಸಾವು; ನಮ್ಮ ಲಸಿಕೆ ಸೇಫ್ ಎಂದ ಕೋವಿಶೀಲ್ಡ್ ತಯಾರಕರು
ಇತ್ತೀಚೆಗೆ ಹೃದಯಾಘಾತದಿಂದ ಸಾವುಗಳು ಹೆಚ್ಚಾಗುತ್ತಿದ್ದು, ಕೋವಿಡ್ ಲಸಿಕೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಕೋವಿಡ್-19 ವೇಳೆ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸಿ ವಿತರಿಸಿದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೃದಯಾಘಾತದಿಂದ ಉಂಟಾಗುವ ಮರಣಗಳಿಗೂ, ನಮ್ಮ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಇತ್ತೀಚೆಗೆ ಹೃದಯಾಘಾತದಿಂದ (Heart Attack) ಸಾವುಗಳು ಹೆಚ್ಚಾಗುತ್ತಿದ್ದು, ಕೋವಿಡ್ ಲಸಿಕೆ (Covid Vaccine) ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಕೋವಿಡ್-19 ವೇಳೆ ಕೋವಿಶೀಲ್ಡ್ (Covishield) ಲಸಿಕೆಯನ್ನು ತಯಾರಿಸಿ ವಿತರಿಸಿದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute of India) ಹೃದಯಾಘಾತದಿಂದ ಉಂಟಾಗುವ ಮರಣಗಳಿಗೂ, ತಮ್ಮ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಡೆಸಿದ ಇತ್ತೀಚಿನ ಸಂಶೋಧನೆಗಳನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದೆ.
ಸೀರಂ ಇನ್‌ಸ್ಟಿಟ್ಯೂಟ್ ತನ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಲಸಿಕೆಗಳು ಸುರಕ್ಷಿತ ಮತ್ತು ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟಿವೆ ಎಂದು ಹೇಳಿಕೊಂಡಿದೆ. ICMR ಮತ್ತು AIIMS ನಡೆಸಿದ ಅಧ್ಯಯನಗಳು, ವಯಸ್ಕರಲ್ಲಿ ಆಕಸ್ಮಿಕ ಮರಣಕ್ಕೆ ಹುಟ್ಟಿನಿಂದ ಬಂದ ಕಾರಣಗಳು, ಜೀವನಶೈಲಿ, ಈಗಾಗಲೇ ಇದ್ದ ಆರೋಗ್ಯ ಸಮಸ್ಯೆಗಳು ಮತ್ತು ಕೋವಿಡ್ ನಂತರದ ಸಮಸ್ಯೆಗಳು ಕಾರಣವಾಗಿರಬಹುದು ಎಂದು ತಿಳಿಸಿವೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೋವಿಡ್ ಲಸಿಕೆಗಳು ಮತ್ತು ಇತ್ತೀಚಿನ ಹೃದಯ ಸಂಬಂಧಿ ಸಾವುಗಳ ನಡುವೆ ಸಂಬಂಧ ಇರಬಹುದೆಂದು ಹೇಳಿದ್ದರು. ಸಿದ್ದರಾಮಯ್ಯ ಅವರ ಹೇಳಿಕೆ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯವು ಲಸಿಕೆಗಳಿಗೂ ಈ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಎರಡು ಪ್ರಮುಖ ಲಸಿಕೆಗಳನ್ನು ಸುಮಾರು ಒಂದು ಬಿಲಿಯನ್ ಜನರಿಗೆ ನೀಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ಹೃದಯಾಘಾತದಿಂದ ಸಂಭವಿಸಿದ ಹಲವು ಸಾವುಗಳನ್ನು ಕಂಡು ಜನರು ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಈ ಸುದ್ದಿಯನ್ನು ಓದಿ: Heart Attack: ನಿನ್ನೆ ಒಂದೇ ದಿನದಲ್ಲಿ ರಾಜ್ಯದಲ್ಲಿ ಹೃದಯಾಘಾತದಿಂದ 6 ಜನ ಸಾವು
ಆರೋಗ್ಯ ಸಚಿವರು ಲಸಿಕೆಗಳು ಕೂಲಂಕಷವಾಗಿ ಅಧ್ಯಯನಗೊಳಪಟ್ಟಿದ್ದು, ಇವು ಸುರಕ್ಷಿತವಾಗಿವೆ ಎಂದು ಒತ್ತಿಹೇಳಿದ್ದಾರೆ. ICMR ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ 19 ರಾಜ್ಯಗಳ 47 ಆಸ್ಪತ್ರೆಗಳಲ್ಲಿ 18-45 ವರ್ಷ ವಯಸ್ಸಿನ ಜನರ ಆಕಸ್ಮಿಕ ಮರಣಗಳನ್ನು ಪರಿಶೀಲಿಸಿದೆ. 2021ರ ಅಕ್ಟೋಬರ್‌ನಿಂದ 2023ರ ಮಾರ್ಚ್‌ವರೆಗಿನ ದಾಖಲೆಗಳ ಪ್ರಕಾರ ಕೋವಿಡ್-19 ಲಸಿಕೆಗಳು ಆಕಸ್ಮಿಕ ಮರಣದ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ತೋರಿಸಿದೆ.
ಪ್ರಸ್ತುತ AIIMS ದಿಲ್ಲಿಯಲ್ಲಿ ICMR ಸಹಯೋಗದೊಂದಿಗೆ ನಡೆಯುತ್ತಿರುವ ಎರಡನೇ ಅಧ್ಯಯನವು ಈ ಮರಣಗಳ ಕಾರಣಗಳನ್ನು ರಿಯಲ್ ಟೈಮ್‌ನಲ್ಲಿ ತನಿಖೆ ಮಾಡುತ್ತಿದೆ. ಪ್ರಾಥಮಿಕ ಫಲಿತಾಂಶಗಳಲ್ಲಿ ಹೃದಯಾಘಾತವು ಸಾಮಾನ್ಯ ಕಾರಣವಾಗಿದ್ದು, ಕೆಲವು ಸಂದರ್ಭಗಳಲ್ಲಿ ಹುಟ್ಟಿನಿಂದ ಅನುವಂಶಿಕವಾಗಿ ಬಂದ ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು ಎಂದು ಸೂಚಿಸಿವೆ.