ಭೂ ವಿವಾದ; ತಂದೆ-ಮಕ್ಕಳಿಗೆ ಥಳಿಸಿದ ಸೋದರ ಸಂಬಂಧಿಗಳು, ಪುತ್ರಿಗೆ ವಿಷ ಪ್ರಾಸನ
Man, 3 Children Beaten Up By Cousins: ಜಮೀನು ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮನೆಗೆ ನುಗ್ಗಿದ ಆತನ ಸೋದರ ಸಂಬಂಧಿಗಳು ಆತನಿಗೆ ಹಾಗೂ ಅವನ ಮೂವರು ಮಕ್ಕಳಿಗೆ ಹಿಂಸಾತ್ಮಕವಾಗಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಬೀಡ್‌ನಲ್ಲಿ ನಡೆದಿದೆ. ಹಲ್ಲೆಗೊಳಗಾದ ಮೂವರು ಮಕ್ಕಳಲ್ಲಿ ಒಬ್ಬಳಿಗೆ ವಿಷಪ್ರಾಶನ ಮಾಡಲಾಗಿದೆ. ಆಕೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾಳೆ. ಹಲ್ಲೆಗೊಳಗಾದ ವಾಸುದೇವ್ ವಿಕ್ರಮ್ ಅಂಧಲೆ ಸುಮಾರು ಎರಡು ವರ್ಷಗಳಿಂದ ತಮ್ಮ ಸಂಬಂಧಿಕರೊಂದಿಗೆ ಭೂ ವಿವಾದದಲ್ಲಿದ್ದಾರೆ. ಈ ಸಂಬಂಧ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
-
Priyanka P
Oct 30, 2025 11:05 PM
ಮುಂಬೈ: ಜನರ ಗುಂಪೊಂದು ಮನೆಯೊಂದಕ್ಕೆ ನುಗ್ಗಿ ದೊಣ್ಣೆ ಮತ್ತು ರಾಡ್‌ಗಳಿಂದ ಥಳಿಸುವ ಮೂಲಕ ಸಂಬಂಧಿಕರ ನಡುವಿನ ಜಮೀನಿನ ವಿವಾದ ಹಿಂಸಾಚಾರಕ್ಕೆ ತಿರುಗಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಬೀಡ್‌ನಲ್ಲಿ ನಡೆದಿದೆ. ಸಂತ್ರಸ್ಥ ವಾಸುದೇವ್ ವಿಕ್ರಮ್ ಅಂಧಲೆ, ತನ್ನ ಸಂಬಂಧಿಕರು ತನ್ನ ಮೇಲೆ ಮತ್ತು ತನ್ನ ಕುಟುಂಬದ ಮೇಲೆ ದೈಹಿಕ ಹಲ್ಲೆ (Assault) ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಗೊಳಗಾದವರಲ್ಲಿ ಮೂವರು ಮಕ್ಕಳು, ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ಸೇರಿದ್ದಾರೆ. ಅವರಲ್ಲಿ ಒಬ್ಬರಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಿಸಬೇಕಾದ ಪೊಲೀಸರು ಸುಮ್ಮನಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹಲ್ಲೆಗೊಳಗಾದ ವಾಸುದೇವ್ ವಿಕ್ರಮ್ ಅಂಧಲೆ ಸುಮಾರು ಎರಡು ವರ್ಷಗಳಿಂದ ತಮ್ಮ ಸಂಬಂಧಿಕರೊಂದಿಗೆ ಭೂ ವಿವಾದದಲ್ಲಿದ್ದಾರೆ. ಈ ಸಂಬಂಧ ಅವರು ಪೊಲೀಸ್ ಪ್ರಕರಣವನ್ನೂ ದಾಖಲಿಸಿದ್ದರು. ಆದರೆ ಪ್ರಕರಣವನ್ನು ಹಿಂಪಡೆಯಲು ಒತ್ತಡ ಹೇರಲಾಗಿತ್ತು ಎಂದು ಆರೋಪಿಸಲಾಗಿದೆ. ಅಂಧಲೆ ಅವರ ಸೋದರ ಸಂಬಂಧಿಗಳು ಅವರ ಮನೆಗೆ ನುಗ್ಗಿ ಪ್ರಕರಣವನ್ನು ಹಿಂಪಡೆಯದಿದ್ದಕ್ಕಾಗಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬೆದರಿಕೆಯ ನಂತರ ಅಂಧಲೆ ಮತ್ತು ಅವರ ಮಕ್ಕಳ ಮೇಲೆ ಹಿಂಸಾತ್ಮಕ ಹಲ್ಲೆ ನಡೆಸಲಾಗಿದೆ.
ಇದನ್ನೂ ಓದಿ: Viral News: ದಾಂಪತ್ಯ ಬದುಕು ಇಷ್ಟೊಂದು ಕರಾಳವಾಗಿರುತ್ತಾ?ಈಕೆಯ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!
ಸೋದರ ಸಂಬಂಧಿಗಳು ನನ್ನನ್ನು ಮತ್ತು ನನ್ನ ಹಿರಿಯ ಮಗನನ್ನು ಹೊಡೆದು ಪ್ರಜ್ಞೆ ತಪ್ಪಿಸಿದರು. ನನ್ನ ಒಬ್ಬ ಹೆಣ್ಣುಮಗಳನ್ನು ಪ್ರಜ್ಞೆ ತಪ್ಪಿಸಿದರು ಮತ್ತು ಇನ್ನೊಬ್ಬಳಿಗೆ ವಿಷ ಹಾಕಿದರು ಎಂದು ಅಂಧಲೆ ಹೇಳಿದರು. ಅಂಧಲೆಯ ಇಬ್ಬರು ಹೆಣ್ಣುಮಕ್ಕಳು, ತಮ್ಮ ತಂದೆ ಮತ್ತು ಸಹೋದರನನ್ನು ಉಳಿಸುವಂತೆ ಗೋಳಾಡಿದ್ದಾರೆ. ಆದರ ಅವರನ್ನು ಬೆನ್ನಟ್ಟಿ ಮನಬಂದಂತೆ ಥಳಿಸಲಾಗಿದೆ.
ಘಟನೆಯನ್ನು ಗಮನಿಸಿದ ಕೂಡಲೇ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ನಮ್ಮನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು ಎಂದು ಹೇಳಿದರು. ನಾವು ಬಂದಾಗ, ನನ್ನ ಒಬ್ಬಳು ಮಗಳು ವಿಷ ಸೇವಿಸಿದ ಪರಿಣಾಮ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ನಮಗೆ ತಿಳಿಯಿತು ಎಂದು ಅಂಧಲೆ ಹೇಳಿದರು.
ತನ್ನ ಮೇಲೆ ಹಲ್ಲೆ ನಡೆಸಿದ ಸಂಬಂಧಿಕರು ಶ್ರೀಮಂತರಾಗಿದ್ದರು ಎಂಬ ಒಂದೇ ಕಾರಣಕ್ಕಾಗಿ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ಪೊಲೀಸರು ನಮ್ಮ ಮಾತನ್ನು ಕೇಳುತ್ತಿಲ್ಲ. ನ್ಯಾಯಕ್ಕಾಗಿ ನಾನು ಬೀಡ್ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದೇನೆ. ನನಗೆ ನ್ಯಾಯ ಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: Viral Video: ಕುಡುಕ ಶಿಕ್ಷಕನ ಹುಚ್ಚಾಟ! ಬೈಕ್ ಸಮೇತ ಸವಾರರನ್ನು ರಸ್ತೆಯಲ್ಲಿ ಎಳೆದೊಯ್ದ ಕಾರು- ಭಯಾನಕ ವಿಡಿಯೊ ವೈರಲ್
ಸ್ನೇಹಿತೆಯ ಮನೆಗೇ ಕನ್ನ ಹಾಕಿದ ಮಹಿಳಾ ಪೊಲೀಸ್ ಅಧಿಕಾರಿ
ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತೆಯ ಮನೆಯಿಂದ 2 ಲಕ್ಷ ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ಅನ್ನು ಕದ್ದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಕಲ್ಪನಾ ರಘುವಂಶಿ ಈ ಕೃತ್ಯವೆಸಗಿದವರು. ಸ್ನೇಹಿತೆಯ ಮನೆಗೆ ಬಂದು ವಾಪಸ್ಸಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಡಿಎಸ್ಪಿ ರಘುವಂಶಿ ಮನೆಯೊಳಗೆ ಪ್ರವೇಶಿಸಿ ನಿರ್ಗಮಿಸುತ್ತಿರುವುದನ್ನು ಮತ್ತು ಆವರಣದಿಂದ ಹೊರಡುವಾಗ ನಗದು ಬಂಡಲ್‌ನಂತೆ ಕಾಣುವ ಹಣವನ್ನು ಹಿಡಿದುಕೊಂಡು ಹೋಗುತ್ತಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕೂಡಲೇ ಆಕೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.