ಅಸ್ಸಾಂನಲ್ಲಿ ಪೊಲೀಸ್ ಎನ್‌ಕೌಂಟರ್; ರೈಲ್ವೆ ಹಳಿ ಸ್ಫೋಟದ ರೂವಾರಿ ಬಲಿ
ಮಾವೋವಾದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಶನಿವಾರ (ಅಕ್ಟೋಬರ್ 25) ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಐಪಿಲ್ ಮುರ್ಮು ಅಲಿಯಾಸ್ ರೋಹಿತ್ ಮುರ್ಮು ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ರೈಲ್ವೆ ಹಳಿ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಈತನೂ ಒಬ್ಬ.
ಸಾಂದರ್ಭಿಕ ಚಿತ್ರ -
Ramesh B
Oct 25, 2025 3:45 PM
ದಿಸ್‌ಪುರ, ಅ. 25: ಮಾವೋವಾದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಶನಿವಾರ (ಅಕ್ಟೋಬರ್ 25) ಅಸ್ಸಾಂನ ಕೊಕ್ರಜಾರ್ (Kokrajhar) ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಐಪಿಲ್ ಮುರ್ಮು ಅಲಿಯಾಸ್ ರೋಹಿತ್ ಮುರ್ಮು ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಎನ್‌ಕೌಂಟರ್ ನಡೆದಿದೆ. ಪೊಲೀಸರ ಪ್ರಕಾರ ರೋಹಿತ್ ಮುರ್ಮು ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ರೈಲ್ವೆ ಹಳಿ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬ. ಅಲ್ಲದೆ ಕಳೆದ ವರ್ಷ ಜಾರ್ಖಂಡ್‌ನಲ್ಲಿ ನಡೆದ ಇದೇ ರೀತಿಯ ಸ್ಫೋಟ ಪ್ರಕರಣದಲ್ಲಿಯೂ ಭಾಗಿಯಾಗಿದ್ದ.
ಆತನನ್ನು ಬಂಧಿಸಲು ಜಾರ್ಖಂಡ್ ಪೊಲೀಸ್ ತಂಡ ಇತ್ತೀಚೆಗೆ ಅಸ್ಸಾಂಗೆ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯ ಬಳಿಕ ಪೊಲೀಸರು ಎನ್‌ಕೌಂಟರ್ ನಡೆದ ಸ್ಥಳದಿಂದ 1 ಪಿಸ್ತೂಲ್, ಗ್ರೆನೇಡ್, ಮತದಾರರ ಗುರುತಿನ ಚೀಟಿ ಮತ್ತು ಜಾರ್ಖಂಡ್‌ನಲ್ಲಿ ನೀಡಲಾದ ಆಧಾರ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ.
ಎನ್‌ಕೌಂಟರ್ ಬಗ್ಗೆ ಮಾಹಿತಿ ನೀಡಿದ ಎಸ್‌ಎಸ್‌ಪಿ ಪುಷ್ಪರಾಜ್ ಸಿಂಗ್:
#WATCH | Kokrajhar, Assam: A maoist killed in Police encounter, SP Kokrajhar, Pushpraj Singh, says, "... We received a report that people with sophisticated arms hiding in Kokrajhar area, and planning a major incident. During a search operation led by the SP headquarters, an… pic.twitter.com/QVBFGEgf1o
— ANI (@ANI) October 25, 2025
ಈ ಸುದ್ದಿಯನ್ನೂ ಓದಿ: Terrorists Attack: ಅಸ್ಸಾಂ ಸೇನಾ ನೆಲೆಯ ಮೇಲೆ ಉಗ್ರರ ದಾಳಿ, ಮೂವರು ಯೋಧರಿಗೆ ಗಾಯ
ʼʼಕಳೆದ ವರ್ಷ ಜಾರ್ಖಂಡ್‌ನಲ್ಲಿ ಸ್ಫೋಟ ನಡೆಸಿದ ನಂತರ ಮುರ್ಮು ಅಸ್ಸಾಂಗೆ ಪರಾರಿಯಾಗಿದ್ದʼʼ ಎಂದು ಕೊಕ್ರಜಾರ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪುಷ್ಪರಾಜ್ ಸಿಂಗ್ ಹೇಳಿದ್ದಾರೆ. ಜಾರ್ಖಂಡ್‌ನಲ್ಲಿಆತ ರೋಹಿತ್ ಮುರ್ಮು ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ. ಅಸ್ಸಾಂನಲ್ಲಿ ಈತನ ಹೆಸರು ಐಪಿಲ್ ಮುರ್ಮು.
ಮೂಲಗಳ ಪ್ರಕಾರ ಮುರ್ಮು ರಾಷ್ಟ್ರೀಯ ಸಂತಲ್ ಲಿಬರೇಶನ್ ಆರ್ಮಿ (National Santal Liberation Army-NSLA) ಜತೆ ಸಂಬಂಧ ಹೊಂದಿದ್ದ. ಈ ಸಂಘಟನೆಯು ಮಾವೋವಾದಿ ಗುಂಪಿನೊಂದಿಗೆ ಗುರುತಿಸಿಕೊಂಡಿದೆ. ಈ ಹಿಂದೆ ಎನ್‌ಎಸ್‌ಎಲ್‌ಎ ಸದಸ್ಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದಾಗ, ಮುರ್ಮು ಶರಣಾಗಲು ನಿರಾಕರಿಸಿದ್ದ ಮತ್ತು ಜಾರ್ಖಂಡ್‌ಗೆ ಪರಾರಿಯಾಗಿದ್ದ. ಅಲ್ಲಿ ಪ್ರತ್ಯೇಕ ಬಣವನ್ನು ರಚಿಸಿ ಅದರ ಕಮಾಂಡರ್ ಕೂಡ ಆಗಿದ್ದ. ನಂತರ ಆತ ಮಾವೋವಾದಿ ಗುಂಪುಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಿ ತನ್ನ ಜಾಲವನ್ನು ವಿಸ್ತರಿಸಿದ. 2015ರಿಂದ ಜಾರ್ಖಂಡ್‌ನಲ್ಲಿ ನಡೆದ ಹಲವು ವಿಧ್ವಂಸಕ ಚಟುವಟಿಕೆಗಳಲ್ಲಿ ಈತನ ಕೈವಾಡವಿದೆ.
ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಇಬ್ಬರು ಗ್ರಾಮಸ್ಥರ ಹತ್ಯೆ
ರಾಂಚಿ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ನಕ್ಸಲರು ಇಬ್ಬರು ಗ್ರಾಮಸ್ಥರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸಗುಡ ಪೊಲೀಸ್ ಠಾಣೆ ವ್ಯಾಪ್ತಿಯ ನೆಲಾ ಕಂಕೇರ್ ಗ್ರಾಮದಲ್ಲಿ ಈ ದಾಳಿ ನಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಬಲಿಯಾದವರನ್ನು - 25 ವರ್ಷದ ರವಿ ಕಟ್ಟಮ್ ಮತ್ತು 38 ವರ್ಷದ ತಿರುಪತಿ ಸೋಧಿ ಎಂದು ಗುರುತಿಸಲಾಗಿದೆ - ಇವರು ನೆಲಾ ಕಂಕೇರ್ ನಿವಾಸಿಗಳು. ʼʼಅಕ್ಟೋಬರ್ 24ರ ರಾತ್ರಿ ಘಟನೆಯ ಬಗ್ಗೆ ಈ ಬಗ್ಗೆ ಲಭಿಸಿದ್ದು, ವಿವರಗಳನ್ನು ಪರಿಶೀಲಿಸಲಾಗುತ್ತಿದೆ" ಎಂದು ಬಿಜಾಪುರದ ಪೊಲೀಸ್ ವರಿಷ್ಠಾಧಿಕಾರಿ ಡಾ. ಜಿತೇಂದ್ರ ಯಾದವ್ ಹೇಳಿದ್ದಾರೆ. ಬಸ್ತಾರ್ ಪ್ರದೇಶದಾದ್ಯಂತ ಭದ್ರತಾ ಪಡೆಗಳು ನಕ್ಸಲರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಈ ಮಧ್ಯೆ ನಾಗರಿಕರ ಹತ್ಯೆ ನಡೆದಿದೆ. 2026ರ ಮಾರ್ಚ್ ವೇಳೆಗೆ ರಾಜ್ಯದಿಂದ ನಕ್ಸಲರನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.