ಅಮೆರಿಕ ಸೈನಿಕ ವ್ಯಾನ್‌ಡೈಕ್ ವಿರುದ್ಧದ ಭಯೋತ್ಪಾದನಾ ತನಿಖೆ ಮುಂದುವರಿದಿದೆ; ಎನ್‌ಐಎ ಸ್ಪಷ್ಟನೆ
VanDyke Case: ಹಣಕ್ಕಾಗಿ ಯುದ್ಧ ಮಾಡುವ ಅಮೆರಿಕನ್ ಸೈನಿಕ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ಮತ್ತು ಆರು ಉಕ್ರೇನಿಯನ್ ಪ್ರಜೆಗಳ ವಿರುದ್ಧದ ಭಯೋತ್ಪಾದನಾ ಕೋನದ ತನಿಖೆಯು ಮುಂದುವರಿದಿದೆ ಎಂದು ಎನ್‌ಐಎ ಸ್ಪಷ್ಟಪಡಿಸಿದೆ. ಸರ್ಕಾರ ವ್ಯಾನ್‌ಡೈಕ್ ಬಗ್ಗೆ ಮೃದು ಧೋರಣೆ ವಹಿಸಿರುವುದರ ಹಿಂದೆ ಅಮೆರಿಕದ ಒತ್ತಡ ಇದೆ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ಮಧ್ಯೆ ಈ ಸ್ಪಷ್ಟನೆ ಬಂದಿದೆ.
ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 9: ಹಣಕ್ಕಾಗಿ ಯುದ್ಧ ಮಾಡುವ ಅಮೆರಿಕ ಸೈನಿಕ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ (Matthew Aaron VanDyke) ಮತ್ತು ಆರು ಉಕ್ರೇನಿಯನ್ ಪ್ರಜೆಗಳ ವಿರುದ್ಧದ ಭಯೋತ್ಪಾದನಾ ಕೋನದ ತನಿಖೆಯು ಮುಂದುವರಿದಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸ್ಪಷ್ಟಪಡಿಸಿದೆ. ಕಸ್ಟಡಿ ಅವಧಿಯ ಮಿತಿ ಮುಕ್ತಾಯಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಸದ್ಯಕ್ಕೆ ವಲಸೆ ಮತ್ತು ವಿದೇಶಿಯರ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪೂರಕ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.
ಎನ್‌ಐಎ ಆರೋಪಿಗಳ ವಿರುದ್ಧ ಕಟ್ಟುನಿಟ್ಟಾದ ಭಯೋತ್ಪಾದನಾ ನಿರೋಧಕ ಕಾಯ್ದೆಯನ್ನು (UAPA) ಬಳಸದೆ, ಕೇವಲ ಭಾರತದಲ್ಲಿ ವಿದೇಶಿಯರ ಪ್ರವೇಶ ಮತ್ತು ಸಂಚಾರವನ್ನು ನಿಯಂತ್ರಿಸುವ ವಲಸೆ ಮತ್ತು ವಿದೇಶಿಯರ ಕಾಯ್ದೆಯಡಿ ದೋಷಾರೋಪ ಪಟ್ಟಿ ದಾಖಲಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಕುತೂಹಲದ ವಿಷಯವೆಂದರೆ, ಎನ್‌ಐಎ ಆರಂಭದಲ್ಲಿ ವ್ಯಾನ್‌ಡೈಕ್ ಮತ್ತು ಇತರರ ವಿರುದ್ಧ ಭಯೋತ್ಪಾದನಾ ಕೃತ್ಯಗಳ ಸಂಚಿಗೆ ಸಂಬಂಧಿಸಿದ ಯುಎಪಿಎನ ಸೆಕ್ಷನ್ 18ರ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ದೆಹಲಿ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಎನ್ಐಎ ಆರೋಪಪಟ್ಟಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿಯ ಆರೋಪಗಳು ಕಾಣೆಯಾಗಿವೆ. ಸರ್ಕಾರ ವ್ಯಾನ್‌ಡೈಕ್ ಬಗ್ಗೆ ಮೃದು ಧೋರಣೆ ವಹಿಸಿರುವುದರ ಹಿಂದೆ ಅಮೆರಿಕದ ಒತ್ತಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಲಸ ಬಿಡಿ ಅಥವಾ ಸಾವನ್ನು ಸ್ವೀಕರಿಸಿ: ಎಲ್‌ಇಟಿ ಬೆದರಿಕೆ; ಆತಂಕದಲ್ಲಿ ಕಾಶ್ಮೀರಿ ಪಂಡಿತರು
ಭಯೋತ್ಪಾದನಾ ಆರೋಪಗಳ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಎನ್ಐಎ ಸ್ಪಷ್ಟಪಡಿಸಿವೆ. ಭಯೋತ್ಪಾದನಾ ಕೋನದ ತನಿಖೆ ಇನ್ನೂ ಮುಂದುವರಿದಿದೆ ಎಂದು ಆರೋಪಪಟ್ಟಿಯಲ್ಲಿಯೇ ಉಲ್ಲೇಖಿಸಲಾಗಿದೆ. ತನಿಖೆ ಮುಂದುವರಿದಂತೆ ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಬಹುದು ಎಂದು ಎನ್ಐಎ ಒತ್ತಿ ಹೇಳಿದೆ.
ವ್ಯಾನ್‌ಡೈಕ್ ಮತ್ತು ಇತರ ಆರೋಪಿಗಳ 180 ದಿನಗಳ ಕಸ್ಟಡಿ ಅವಧಿ ಸೆಪ್ಟೆಂಬರ್ 8ರಂದು ಮುಕ್ತಾಯಗೊಳ್ಳಬೇಕಿತ್ತು. ಆರೋಪಪಟ್ಟಿ ಸಲ್ಲಿಸಬೇಕಾಗಿತ್ತು. ತನಿಖೆಯ ಸಮಯದಲ್ಲಿ ಅಪರಾಧಗಳು ಸಾಬೀತಾಗಿರುವುದರಿಂದ ಆರೋಪಪಟ್ಟಿಯಲ್ಲಿ ವಿದೇಶಿಯರ ಕಾಯ್ದೆಯನ್ನು ಸೇರಿಸಲಾಗಿದೆ ಎಂದು ಎನ್ಐಎ ತಿಳಿಸಿದೆ. ಭಯೋತ್ಪಾದನಾ ಪಿತೂರಿಯ ಬಗ್ಗೆ ವ್ಯಾಪಕ ತನಿಖೆ ಮುಕ್ತವಾಗಿದೆ ಎಂದು ಅದು ಒತ್ತಿ ಹೇಳಿದೆ.
ಅಮೆರಿಕದ ರಹಸ್ಯ ಆಡಳಿತ ವ್ಯವಸ್ಥೆಯ ಭಾಗವಾಗಿದ್ದಾರೆ ಎಂದು ನಂಬಲಾದ ವ್ಯಾನ್‌ಡೈಕ್ ಬಂಧನವು ಜಗತ್ತಿನ ಗಮನ ಸೆಳೆದಿದೆ. ದೀರ್ಘಕಾಲದಿಂದ ಬಂಧನದಲ್ಲಿರುವುದರ ಕುರಿತು ಅಮೆರಿಕದ ಹಲವು ಅಧಿಕಾರಿಗಳು ಆಕ್ಷೇಪವೆತ್ತಿದ್ದಾರೆ. ಕಳೆದ ತಿಂಗಳು, ಅವರ ಕುಟುಂಬದವರು ಸಹ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಮನವಿ ಮಾಡಿದ್ದರು.
ಪ್ರಧಾನಿ ಕಚೇರಿಯ ನಕಲಿ ಐಡಿ, ಬಂದೂಕು ಹೊಂದಿದ್ದ ಇಬ್ಬರ ಬಂಧನ
ಅಮೆರಿಕದ ಅಧಿಕಾರಿಗಳು ಈ ವಿಷಯವನ್ನು ಪ್ರಸ್ತಾಪಿಸಿರುವುದು ಸಾಮಾನ್ಯ ರಾಯಭಾರ ಕಚೇರಿ ಪ್ರಕ್ರಿಯೆಯ ಒಂದು ಭಾಗವಾಗಿದೆ. ಇದು ತಮ್ಮ ತನಿಖೆಯ ಅಂತಿಮ ಫಲಿತಾಂಶವನ್ನು ನಿರ್ಧರಿಸುವುದಿಲ್ಲ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ವ್ಯಾನ್‌ಡೈಕ್ ಯಾರು? ಏಕೆ ಬಂಧಿಸಲಾಯಿತು?
ಲಿಬಿಯಾ ಮತ್ತು ಸಿರಿಯಾದ ಸಶಸ್ತ್ರ ಸಂಘರ್ಷಗಳಲ್ಲಿ ಭಾಗಿಯಾಗಿದ್ದ ವ್ಯಾನ್‌ಡೈಕ್ ಅವರನ್ನು ಮಾರ್ಚ್ 13ರಂದು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಯಿತು. ಇನ್ನುಳಿದ ಆರು ಮಂದಿ ಉಕ್ರೇನಿಯನ್ ಪ್ರಜೆಗಳನ್ನು ದೆಹಲಿ ಮತ್ತು ಲಖನೌ ವಿಮಾನ ನಿಲ್ದಾಣಗಳಲ್ಲಿಬಂಧಿಸಲಾಯಿತು
ರಹಸ್ಯ ಏಜೆಂಟ್ ಆಗಿರುವ ವ್ಯಾನ್‌ಡೈಕ್, 2011ರಲ್ಲಿ ಲಿಬಿಯಾದ ಮುಅಮ್ಮರ್ ಗಡಾಫಿ ಆಡಳಿತದ ವೇಳೆ ಯುದ್ಧ ಕೈದಿಯಾಗಿ ಸೆರೆವಾಸ ಅನುಭವಿಸಿದ್ದರು. ಗಡಾಫಿ ಆಡಳಿತ ಪತನದ ನಂತರ ಬಿಡುಗಡೆಗೊಂಡಿದ್ದರು. ನಂತರ 'ಸನ್ಸ್ ಆಫ್ ಲಿಬರ್ಟಿ ಇಂಟರ್‌ನ್ಯಾಷನಲ್' ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಇದು ಯುದ್ಧ ಪೀಡಿತ ಪ್ರದೇಶಗಳಲ್ಲಿನ ಸಶಸ್ತ್ರ ಗುಂಪುಗಳಿಗೆ ಮಿಲಿಟರಿ ತರಬೇತಿಯನ್ನು ನೀಡುವ ಒಂದು ಲಾಭರಹಿತ ಭದ್ರತಾ ಸಂಸ್ಥೆ.