ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nuns Arrest Case: ಮತಾಂತರ ಕೇಸ್‌ನಲ್ಲಿ ಕ್ಯಾಥೋಲಿಕ್ ನನ್‌ ಅರೆಸ್ಟ್‌- ಕೇರಳದಿಂದ ಸಂಸತ್‌ವರೆಗೆ ಪ್ರೊಟೆಸ್ಟ್‌

ಛತ್ತೀಸ್‌ಗಢದಲ್ಲಿ ಕ್ಯಾಥೋಲಿಕ್ ಸನ್ಯಾಸಿನಿಯರ ಬಂಧನವನ್ನು (Nuns Arrest Case) ವಿರೋಧಿಸಿ ಸಂಸತ್ತಿನ ಕಲಾಪ ಆರಂಭಕ್ಕೂ ಮೊದಲು ಸೋಮವಾರ ವೇಣುಗೋಪಾಲ್, ಆರ್‌ಎಸ್‌ಪಿಯ ಎನ್‌.ಕೆ. ಪ್ರೇಮಚಂದ್ರನ್, ಐಯುಎಂಎಲ್‌ನ ಇ.ಟಿ. ಮೊಹಮ್ಮದ್ ಬಶೀರ್ ಸೇರಿದಂತೆ ಯುಡಿಎಫ್ ಸಂಸದರು ಸಂಸತ್ತಿನ ದ್ವಾರದ ಮೆಟ್ಟಿಲುಗಳ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾಥೋಲಿಕ್ ನನ್‌ ಬಂಧನ-ಕೇರಳದಿಂದ ಸಂಸತ್‌ವರೆಗೆ ಪ್ರೊಟೆಸ್ಟ್‌!

ಛತ್ತೀಸ್‌ಗಢ: ಮತಾಂತರ (religious conversion) ಮತ್ತು ಮಾನವ ಕಳ್ಳ ಸಾಗಣೆ (human trafficking) ಆರೋಪದಲ್ಲಿ ಕೇರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರನ್ನು (Nuns Arrest Case) ಛತ್ತೀಸ್‌ಗಢದಲ್ಲಿ ( Chhattisgarh) ಬಂಧಿಸಲಾಗಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಸೋಮವಾರ ಸಂಸತ್ತಿನ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದವು.ಕ್ಯಾಥೋಲಿಕ್ ಸನ್ಯಾಸಿನಿಯರ (Catholic nuns) ವಿರುದ್ಧ ಭಿಲಾಯಿಯ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಷಯವನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ (CM Vishnu Deo Sai) ನೇತೃತ್ವದ ಭಾರತೀಯ ಜನತಾ ಪಕ್ಷವು ರಾಜಕೀಯಗೊಳಿಸುತ್ತಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಸಂಸತ್ತಿನ ಕಲಾಪ ಆರಂಭಕ್ಕೂ ಮೊದಲು ಸೋಮವಾರ ವೇಣುಗೋಪಾಲ್, ಆರ್‌ಎಸ್‌ಪಿಯ ಎನ್‌.ಕೆ. ಪ್ರೇಮಚಂದ್ರನ್, ಐಯುಎಂಎಲ್‌ನ ಇ.ಟಿ. ಮೊಹಮ್ಮದ್ ಬಶೀರ್ ಸೇರಿದಂತೆ ಯುಡಿಎಫ್ ಸಂಸದರ ಗುಂಪು ಸಂಸತ್ತಿನ ದ್ವಾರದ ಮೆಟ್ಟಿಲುಗಳ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ನಿಲ್ಲಿಸಿ ಎನ್ನುವ ಪೋಸ್ಟರ್ ಹಿಡಿದು ಸನ್ಯಾಸಿನಿಯರ ಬಂಧನದ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇರಳದ ವಯನಾಡಿನ ಮಾಜಿ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕ್ಯಾಥೋಲಿಕ್ ಸನ್ಯಾಸಿನಿಯರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರನ್ನು ಜೈಲಿಗೆ ಹಾಕಲಾಗಿದೆ. ಇದು ನ್ಯಾಯವಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದಬ್ಬಾಳಿಕೆಯ ಆಡಳಿತ ನಡೆಸುತ್ತಿದೆ. ಇದು ಅಪಾಯಕಾರಿ. ಯುಡಿಎಫ್ ಸಂಸದರು ಇಂದು ಸಂಸತ್ತಿನಲ್ಲಿ ಪ್ರತಿಭಟಿಸಿದರು. ನಾವು ಮೌನವಾಗಿರುವುದಿಲ್ಲ. ಧಾರ್ಮಿಕ ಸ್ವಾತಂತ್ರ್ಯವು ಸಾಂವಿಧಾನಿಕ ಹಕ್ಕು ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, ಬಿಜೆಪಿ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರನ್ನು ನಿರಂತರವಾಗಿ ಕಿರುಕುಳ ಮತ್ತು ಅವಮಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ.



ಕೇರಳದ ಸನ್ಯಾಸಿನಿಯರ ಬಂಧನ ಯಾಕೆ?

ಛತ್ತೀಸ್‌ಗಢ ನಾರಾಯಣಪುರದ ಮೂವರು ಹುಡುಗಿಯರನ್ನು ಬಲವಂತವಾಗಿ ಮತಾಂತರಿಸಿ ಕಳ್ಳಸಾಗಣೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಬಜರಂಗದಳ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಜುಲೈ 25 ರಂದು ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಕ್ಯಾಥೋಲಿಕ್ ಸನ್ಯಾಸಿನಿಯರಾದ ಕೇರಳದ ಪ್ರೀತಿ ಮೆರ್ರಿ, ವಂದನಾ ಫ್ರಾನ್ಸಿಸ್ ಸೇರಿ ಸುಕಮನ್ ಮಾಂಡವಿ ಎಂಬವರನ್ನು ಬಂಧಿಸಲಾಗಿದೆ.

ಛತ್ತೀಸ್‌ಗಢ ಸಿಎಂ ಹೇಳುವುದೇನು?

ನಾರಾಯಣಪುರದ ಮೂವರು ಹೆಣ್ಣುಮಕ್ಕಳಿಗೆ ನರ್ಸಿಂಗ್ ತರಬೇತಿಯ ಬಳಿಕ ಉದ್ಯೋಗ ಭರವಸೆ ನೀಡಿ ವ್ಯಕ್ತಿಯೊಬ್ಬ ಅವರನ್ನು ದುರ್ಗ್ ನಿಲ್ದಾಣದಲ್ಲಿ ಇಬ್ಬರು ಸನ್ಯಾಸಿನಿಯರಿಗೆ ಹಸ್ತಾಂತರಿಸಿದ್ದಾನೆ. ಅವರು ಈ ಹೆಣ್ಣುಮಕ್ಕಳನ್ನು ಆಗ್ರಾಕ್ಕೆ ಕರೆದೊಯ್ಯುತ್ತಿದ್ದರು.ಈ ವೇಳೆ ಅವರನ್ನು ಬಂಧಿಸಲಾಗಿದೆ. ಅವರಿಗೆ ಆಮಿಷೆ ಒಡ್ಡಿ ಮಾನವ ಕಳ್ಳಸಾಗಣೆ ಮೂಲಕ ಮತಾಂತರಿಸಲು ಪ್ರಯತ್ನಿಸಲಾಗಿದೆ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರ ಆರೋಪವೇನು?

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಬಜರಂಗದಳದ ಗೂಂಡಾಗಳನ್ನು ಬಂಧಿಸುವ ಬದಲು ಛತ್ತೀಸ್‌ಗಢ ಮುಖ್ಯಮಂತ್ರಿ ಬಡವರ ನಡುವೆ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದ ಮುಗ್ಧ ಸನ್ಯಾಸಿಗಳನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಕುರಿಗಳ ಉಡುಪಿನಲ್ಲಿರುವ ತೋಳಗಳು. ಬಿಜೆಪಿಯಿಂದ ಬೆಂಬಲ ಮತ್ತು ಕಲ್ಯಾಣದ ಸುಳ್ಳು ಭರವಸೆ ನೀಡಲಾಗಿರುವ ಪ್ರತಿಯೊಂದು ಸಮುದಾಯಕ್ಕೂ ಇದು ಒಂದು ಎಚ್ಚರಿಕೆ ಎಂದು ಹೇಳಿದ್ದಾರೆ. ಸನ್ಯಾಸಿನಿಯರ ಬಂಧನದ ಬಳಿಕ ಕೇರಳದ ಸಚಿವರಾದ ಪಿ. ರಾಜೀವ್ ಮತ್ತು ರೋಶಿ ಅಗಸ್ಟೀನ್ ಅವರು ಪ್ರೀತಿ ಅವರ ಕುಟುಂಬವನ್ನು ಭೇಟಿ ಮಾಡಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರ್ಕಾರದಿಂದ ತಮಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್ ಮತ್ತು ಯುಡಿಎಫ್ ಶಾಸಕರ ನೇತೃತ್ವದ ಕಾಂಗ್ರೆಸ್ ನಿಯೋಗವು ಕೂಡ ಸನ್ಯಾಸಿನಿಯ ಮನೆಗೆ ಭೇಟಿ ನೀಡಿ ಬೆಂಬಲದ ಭರವಸೆ ನೀಡಿತು.

ಇದನ್ನೂ ಓದಿ: Raichur news: ಕಾಂಗ್ರೆಸ್‌ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಸಿಎಂ, ಡಿಸಿಎಂ ಫೋಟೋ ಮಾಯ; ʼಕ್ಷಮಿಸಿʼ ಎಂದ ಸೌಮ್ಯಾ ರೆಡ್ಡಿ

ಸನ್ಯಾಸಿನಿಯರ ಬಂಧನವನ್ನು ರಾಜ್ಯದ ಕ್ಯಾಥೋಲಿಕ್ ಚರ್ಚ್‌ನ ಪ್ರಭಾವಿ ಸಂಸ್ಥೆಯಾದ ಕೇರಳ ಕ್ಯಾಥೋಲಿಕ್ ಬಿಷಪ್‌ಗಳ ಮಂಡಳಿ (ಕೆಸಿಬಿಸಿ), ಖಂಡಿಸಿದೆ. ಕೇರಳ ಬಿಜೆಪಿ ಉಪಾಧ್ಯಕ್ಷ ಶಾನ್ ಜಾರ್ಜ್ ಮಾತನಾಡಿ, ಸನ್ಯಾಸಿನಿಯರು ಯಾವುದೇ ತಪ್ಪು ಮಾಡದಿದ್ದರೆ ಅವರು ಯಾವುದೇ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳಲು ಸಾಕಷ್ಟು ಕ್ರಮಗಳನ್ನು ಕೇಂದ್ರಾಡಳಿತ ತೆಗೆದುಕೊಂಡಿದೆ. ಪ್ರಧಾನಿ ಮತ್ತು ಗೃಹ ಸಚಿವರ ಕಚೇರಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಿವೆ. ನಾವು ಸನ್ಯಾಸಿನಿಯರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಗೆ ಆದಷ್ಟು ಬೇಗ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದರು.