ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಸ್ಲಾಮಿಕ್‌ ನ್ಯಾಟೋ ಸ್ಥಾಪನೆಗೆ ಪಾಕ್‌, ಟರ್ಕಿ, ಸೌದಿ ಅಡಿಪಾಯ ; ಭಾರತದ ಮೇಲಾಗುವ ಪರಿಣಾಮವೇನು?

ತೈಲ ಹಾಗೂ ಖನಿಜ ಭರಿತ ಸೌದಿ ಅರೇಬಿಯಾ, ಅಣ್ವಸ್ತ್ರ ಶಕ್ತಿ ಹೊಂದಿರುವ ಪಾಕಿಸ್ತಾನ ಹಾಗೂ ರಕ್ಷಣಾ ಉದ್ಯಮದಲ್ಲಿ ಬೆಳೆಯುತ್ತಿರುವ ಟರ್ಕಿ ನಡುವೆ ರಕ್ಷಣಾ ಒಪ್ಪಂದ ಏರ್ಪಟ್ಟಿದೆ. ಇಸ್ಲಾಮಿಕ್‌ ನ್ಯಾಟೊ ಕುರಿತು ಜೋರಾಗಿ ಚರ್ಚೆ ನಡೆಯುತ್ತಿರುವಾಗಲೇ ಈ ಒಪ್ಪಂದ ನಡೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೌದಿ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌, ಟರ್ಕಿ ಅಧ್ಯಕ್ಷ ರೆಸೆಪ್‌ ತ್ಯಯಿಪ್‌ ಎರ್ಡೋಗನ್‌ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ನಡುವಿನ ಸಭೆಯಲ್ಲಿಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಇಸ್ಲಾಮಿಕ್‌ ನ್ಯಾಟೋ ಸ್ಥಾಪನೆಗೆ ಮುಂದಾದ ಪಾಕ್‌, ಟರ್ಕಿ, ಸೌದಿ

ಮೆಕ್ಕಾ ಒಪ್ಪಂದ ಮಾಡಿಕೊಂಡಿರುವ ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ -

Vishakha Bhat Heggar
Vishakha Bhat Heggar Aug 9, 2026 1:09 PM

ನವದೆಹಲಿ: ತೈಲ ಹಾಗೂ ಖನಿಜ ಭರಿತ ಸೌದಿ ಅರೇಬಿಯಾ, ಅಣ್ವಸ್ತ್ರ ಶಕ್ತಿ ಹೊಂದಿರುವ ಪಾಕಿಸ್ತಾನ ಹಾಗೂ ರಕ್ಷಣಾ ಉದ್ಯಮದಲ್ಲಿ ಬೆಳೆಯುತ್ತಿರುವ ಟರ್ಕಿ ನಡುವೆ ರಕ್ಷಣಾ ಒಪ್ಪಂದ (Mecca Agreement) ಏರ್ಪಟ್ಟಿದೆ. ಇಸ್ಲಾಮಿಕ್‌ ನ್ಯಾಟೊ ಕುರಿತು ಜೋರಾಗಿ ಚರ್ಚೆ ನಡೆಯುತ್ತಿರುವಾಗಲೇ ಈ ಒಪ್ಪಂದ ನಡೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೌದಿ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌, ಟರ್ಕಿ ಅಧ್ಯಕ್ಷ ರೆಸೆಪ್‌ ತ್ಯಯಿಪ್‌ ಎರ್ಡೋಗನ್‌ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ನಡುವಿನ ಸಭೆಯಲ್ಲಿಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದಿಂದ ಭಾರತದ ಮೇಲಾಗುವ ಪರಿಣಾಮವೇನು? ಈ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.

ಇತಿಹಾಸದಿಂದ ಇಲ್ಲಿಯವರೆಗಿನ ರಾಜತಾಂತ್ರಿಕ ಸಂಬಂಧ ನೋಡಿದರೆ, ಸೌದಿ ಅರೇಬಿಯಾ ಮತ್ತು ಟರ್ಕಿಯ ಸಂಬಂಧಗಳು ಹಲವು ವರ್ಷಗಳಿಂದ ಏರಿಳಿತ ಕಂಡಿವೆ. ಒಟ್ಟೊಮನ್ ಸಾಮ್ರಾಜ್ಯದ ಕಾಲದಿಂದ ಎರಡೂ ದೇಶಗಳ ನಡುವೆ ಐತಿಹಾಸಿಕ ಸಂಬಂಧವಿದ್ದರೂ, ಆಧುನಿಕ ಕಾಲದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ವಿಶೇಷವಾಗಿ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರ ಆಡಳಿತದ ಅವಧಿಯಲ್ಲಿ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. ಅರಬ್ ಸ್ಪ್ರಿಂಗ್, ಜಮಾಲ್ ಖಶೋಗಿ ಹತ್ಯೆ ಹಾಗೂ ಲಿಬಿಯಾದಂತಹ ಪ್ರಾದೇಶಿಕ ಸಂಘರ್ಷಗಳ ವಿಚಾರದಲ್ಲಿಯೂ ಎರಡೂ ರಾಷ್ಟ್ರಗಳ ನಿಲುವುಗಳು ಭಿನ್ನವಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಸೌದಿ ಅರೇಬಿಯಾ ಮತ್ತು ಟರ್ಕಿ ತಮ್ಮ ದೀರ್ಘಕಾಲದ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಆರ್ಥಿಕ, ರಾಜಕೀಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಿವೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಸೌದಿಯ ರಕ್ಷಣಾ ಸಂಬಂಧವೂ ಗಟ್ಟಿಯಾಗಿದೆ.

ಮೂರು ದೇಶಗಳು ಒಂದಾಗಿದ್ದೇಕೆ?

ಮೆಕ್ಕಾ ಒಪ್ಪಂದದ ಹಿಂದೆ ಹಲವು ತಂತ್ರಾತ್ಮಕ ಕಾರಣಗಳಿವೆ. ರಕ್ಷಣೆ ಹಾಗೂ ಭದ್ರತೆಗೆ ಈ ಮೂರು ದೇಶಗಳು ಬಹುಪಾಲು ಅಮೆರಿಕವನ್ನು ಅವಲಂಬಿಸಿದ್ದವು. ಆದರೆ ಈಗ ಆ ನಿಲುವು ಬದಲಾಗುತ್ತಿದೆ. ಇತ್ತೀಚಿನ ಇರಾನ್‌, ಅಮೆರಿಕ ಹಾಗೂ ಇಸ್ರೇಲ್‌ ಯುದ್ಧದ ಬಳಿಕ ಅಮೆರಿಕದ ವರ್ಚಸ್ಸು ಕೊಂಚ ಕಡಿಮೆಯಾದಂತೆ ತೋರುತ್ತಿದೆ. ಅಷ್ಟೇ ಅಲ್ಲದೇ ಪಶ್ಚಿಮ ಏಷ್ಯಾದಲ್ಲಿನ ತನ್ನ ಮಿತ್ರ ದೇಶಗಳಿಗೆ ಭದ್ರತಾ ಭರವಸೆ ನೀಡುವ ವಿಚಾರದ ಕುರಿತು ಅಮೆರಿಕದ ಸಾಮರ್ಥ್ಯದ ಬಗ್ಗೆ ಕೊಲ್ಲಿ ದೇಶಗಳಲ್ಲಿ ಅನುಮಾನ ಹೆಚ್ಚುತ್ತಿದೆ. ಆ ಕಾರಣದಿಂದ ಈ ಒಪ್ಪಂದ ಏರ್ಪಟ್ಟಿದೆ' ಎಂದು ಅನೇಕ ರಕ್ಷಣಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸೌದಿ ಅರೇಬಿಯಾ ಹಲವು ದಶಕಗಳಿಂದ ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ತನ್ನ ಭದ್ರತೆಗೆ ಸಂಬಂಧಿಸಿದಂತೆ ಸ್ವತಂತ್ರ ಆಯ್ಕೆಗಳನ್ನು ಹುಡುಕುತ್ತಿದೆ. ಇರಾನ್ ಮತ್ತು ಹೌತಿ ಪಡೆಗಳಿಂದ ನಡೆದ ದಾಳಿಗಳು, ವಿಶೇಷವಾಗಿ ಸೌದಿಯ ತೈಲ ಮೂಲಸೌಕರ್ಯಗಳ ಮೇಲಿನ ದಾಳಿಗಳು, ಅಮೆರಿಕದ ಭದ್ರತಾ ಭರವಸೆಯ ಮಿತಿಗಳ ಬಗ್ಗೆ ರಿಯಾದ್‌ನಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿವೆ. 2023ರಲ್ಲಿ ಚೀನಾದ ಮಧ್ಯಸ್ಥಿಕೆಯಲ್ಲಿ ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ರಾಜತಾಂತ್ರಿಕ ಸಂಬಂಧ ಪುನಃಸ್ಥಾಪನೆಯಾಗಿರುವುದೂ ಈ ಬದಲಾವಣೆಯ ಭಾಗವಾಗಿದೆ.

ಸೌದಿ ಅರೇಬಿಯಾಕ್ಕೇನು ಲಾಭ?

ಹಾರ್ಮೊಜ್‌ ಜಲಸಂಧಿ ನಿಯಂತ್ರಣ ವಿಚಾರದಲ್ಲಿಇರಾನ್‌ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಸೌದಿ ಅರೇಬಿಯಾ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್‌ನ ಸೇನೆ ಹಾಗೂ ಹೌತಿ ಬಂಡುಕೋರರು ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಹಾಗೂ ತೈಲ ಉತ್ಪಾದನಾ ಘಟಕಗಳನ್ನು ಗುರಿಯಾಗಿಸಿ ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ನಡೆದ್ದವು. ಇತ್ತೀಚಿನ ಬಿಕ್ಕಟ್ಟುಗಳ ಸಮಯದಲ್ಲಿ ಅಮೆರಿಕದ ರಕ್ಷಣೆ ಅಷ್ಟಾಗಿ ಫಲ ನೀಡದ ಕಾರಣ ಮುಸ್ಲಿಂ ಜಗತ್ತಿನ ಪ್ರಬಲ ದೇಶಗಳ ಜತೆಗೂಡಿ ಒಪ್ಪಂದ ಮಾಡಿಕೊಂಡಿದೆ. ಅಷ್ಟೇ ಅಲ್ಲದೇ ಸೌದಿ ಅರೇಬಿಯಾ ತನ್ನ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ರೂಪಿಸಿರುವ ಬಿಲಿಯನ್ ಡಾಲರ್ ವೆಚ್ಚದ 'ವಿಷನ್ 2030' ಅಭಿವೃದ್ಧಿ ಯೋಜನೆಗಳಿಗೆ ಪ್ರಾದೇಶಿಕ ಶಾಂತಿ ಅತ್ಯಗತ್ಯ. ಯುದ್ಧದ ಭೀತಿ ಕಡಿಮೆಯಾದರೆ ಮಾತ್ರ ವಿದೇಶಿ ಹೂಡಿಕೆದಾರರು ಸೌದಿಗೆ ಬರುತ್ತಾರೆ. ಭವಿಷ್ಯದ ಭದ್ರತಾ ದೃಷ್ಟಿಯಿಂದಾಗಿ ಸೌದಿಗೆ ಈ ಒಪ್ಪಂದ ಬಹಳ ಮಹತ್ವದ್ದಾಗಿದೆ.

ಪಾಕಿಸ್ತಾನದ ಪಾತ್ರ

ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ಸವಾಲುಗಳನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಈ ಒಪ್ಪಂದ ಮರು ಜೀವವನ್ನೇ ನೀಡಲಿದೆ. ಈ ಒಪ್ಪಂದದ ಪ್ರತಿಯಾಗಿ, ಸೌದಿ ಅರೇಬಿಯಾವು ಪಾಕಿಸ್ತಾನದ ಕೇಂದ್ರ ಬ್ಯಾಂಕ್‌ನಲ್ಲಿ ಬಿಲಿಯನ್ ಡಾಲರ್‌ಗಳನ್ನು ಠೇವಣಿ ಇಡಲು ಮತ್ತು ತೈಲವನ್ನು ಸಾಲದ ರೂಪದಲ್ಲಿ ನೀಡಲು ಒಪ್ಪಿಕೊಂಡಿದೆ. ಪಾಕಿಸ್ತಾನ ಅಣ್ವಸ್ತ್ರ ಹೊಂದಿರುವ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿದ್ದು, ಸೌದಿ ಅರೇಬಿಯಾದೊಂದಿಗೆ ದೀರ್ಘಕಾಲದ ರಕ್ಷಣಾ ಸಂಬಂಧ ಹೊಂದಿದೆ. ಹೊಸ ಒಪ್ಪಂದದ ಬಳಿಕ ಜಾಗತಿಕ ವೇದಿಕೆಗಳಲ್ಲಿ, ವಿಶೇಷವಾಗಿ ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ ಭಾರತದ ವಿರುದ್ಧದ ವಿಷಯವನ್ನು ಪ್ರಸ್ತಾಪಿಸಿದಾಗ ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳಿಂದ ಪ್ರಬಲ ಬೆಂಬಲ ಸಿಗಲಿದೆ.

ಟರ್ಕಿಯೂ ಒಪ್ಪಂದದ ಭಾಗವಾಗಿರುವುದರಿಂದ ಯುದ್ಧವಿಮಾನ ಅಥವಾ ಶಸ್ತ್ರಾಸ್ತ್ರಗಳು ಸುಲಭವಾಗಿ ಲಭ್ಯವಾಗಲಿದೆ. ಟರ್ಕಿ ಮತ್ತು ಪಾಕಿಸ್ತಾನ ಸೇರಿ ಜಂಟಿಯಾಗಿ ರಕ್ಷಣಾ ಸಾಧನಗಳನ್ನು ಉತ್ಪಾದಿಸಲು ಈ ಒಪ್ಪಂದ ದಾರಿ ಮಾಡಿಕೊಡುತ್ತದೆ.

Honey Trap: ಮಹಿಳೆಯ ಆಮಿಷಕ್ಕೆ ಒಳಗಾಗಿ ಪಾಕಿಸ್ತಾನಕ್ಕೆ ರಕ್ಷಣಾ ರಹಸ್ಯ ಸೋರಿಕೆ ಮಾಡಿದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅರೆಸ್ಟ್‌

ಟರ್ಕಿಯ ಲೆಕ್ಕಾಚಾರ ಹೇಗಿದೆ?

ನ್ಯಾಟೋ ಸದಸ್ಯ ರಾಷ್ಟ್ರವಾಗಿರುವ ಟರ್ಕಿಗೂ ಈ ಮೈತ್ರಿ ಮಹತ್ವದ್ದಾಗಿದೆ. ಟರ್ಕಿಯ ರಕ್ಷಣಾ ಉದ್ಯಮವು ಅತ್ಯಾಧುನಿಕ ಡ್ರೋನ್‌ಗಳು ಮತ್ತು ಕ್ಷಿಪಣಿ ತಂತ್ರಜ್ಞಾನಕ್ಕೆ ಪ್ರಸಿದ್ಧಿಯಾಗಿದೆ. ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದೊಂದಿಗಿನ ಈ ಒಪ್ಪಂದದಿಂದಾಗಿ ಟರ್ಕಿಗೆ ಶತಕೋಟಿ ಡಾಲರ್ ಮೌಲ್ಯದ ಮಿಲಿಟರಿ ರಫ್ತು ಆರ್ಡರ್‌ಗಳು ಸಿಗಲಿವೆ. ಟರ್ಕಿ ಈಗಾಗಲೇ ಕತಾರ್‌ನೊಂದಿಗೆ ಬಲವಾದ ರಕ್ಷಣಾ ಸಂಬಂಧ ಹೊಂದಿದ್ದು, ಪಶ್ಚಿಮ ಏಷ್ಯಾದಲ್ಲಿ ತನ್ನದೇ ಆದ ಭದ್ರತಾ ಪಾತ್ರವನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ನೊಂದಿಗೆ ಟರ್ಕಿಯ ಸಂಬಂಧ ತೀವ್ರವಾಗಿ ಹಳಸಿದೆ. ಈ ಒಪ್ಪಂದಕ್ಕೆ ಆರ್ಥಿಕವಾಗಿ ಬಲಿಷ್ಠವಾಗಿರುವ ಸೌದಿ ಅರೇಬಿಯಾ ಮತ್ತು ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನವನ್ನು ಸೇರಿಸಿಕೊಳ್ಳುವ ಮೂಲಕ, ತನ್ನ ನೆರೆಹೊರೆಯಲ್ಲಿ ಇಸ್ರೇಲ್‌ನಿಂದ ಎದುರಾಗಬಹುದಾದ ಯಾವುದೇ ಸಂಭಾವ್ಯ ಸಂಘರ್ಷಕ್ಕೆ ಟರ್ಕಿ ಪ್ರಬಲ ಪ್ರತಿರೋಧ ಒಡ್ಡಬಹುದು. ಟರ್ಕಿ ಈಗಾಗಲೇ ಕತಾರ್, ಸಿರಿಯಾ ಮತ್ತು ಲಿಬಿಯಾದಂತಹ ದೇಶಗಳಿಗೆ ತನ್ನ ಭದ್ರತಾ ಕವಚವನ್ನು ನೀಡಿದೆ. ಈಗ ಈ ಒಕ್ಕೂಟಕ್ಕೆ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದಂತಹ ಪ್ರಬಲ ದೇಶಗಳು ಸೇರಿರುವುದರಿಂದ, ಟರ್ಕಿಗೆ ಇಸ್ಲಾಮಿಕ್‌ ದೇಶಗಳ ನಾಯಕತ್ವದ ಹಿಡಿತವನ್ನು ಸಾಧಿಸಬಹದು.

ಆದರೆ ಒಪ್ಪಂದದ ಮಿತಿಗಳೇನು?

ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳ ನಡುವಿನ ಈ ಒಪ್ಪಂದವು ಹೊರ ನೋಟಕ್ಕೆ ಬಲಿಷ್ಠವಾಗಿ ಕಂಡರೂ ಪ್ರಾಯೋಗಿಕವಾಗಿ ಇದು ಹಲವು ಮಿತಿಗಳು ಮತ್ತು ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ. ಟರ್ಕಿಯು ಈಗಾಗಲೇ ನ್ಯಾಟೋದ ಸದಸ್ಯ ರಾಷ್ಟ್ರವಾಗಿದ್ದು, ಅಮೆರಿಕದ ಅನುಮತಿಯಿಲ್ಲದೆ ಮತ್ತೊಂದು ಸ್ವತಂತ್ರ ಮಿಲಿಟರಿ ಒಕ್ಕೂಟದ ಪರವಾಗಿ ಯುದ್ಧಕ್ಕೆ ಇಳಿಯುವುದು ಅತ್ಯಂತ ಕಠಿಣ. ಸೌದಿ ಅರೇಬಿಯಾ ಇರಾನ್‌ನೊಂದಿಗೆ ಸಂಬಂಧ ಸುಧಾರಿಸಲು ಪ್ರಯತ್ನಿಸುತ್ತಿದ್ದರೆ, ಪಾಕಿಸ್ತಾನಕ್ಕೆ ಭಾರತದ ವಿಚಾರ ಅತ್ಯಂತ ಸೂಕ್ಷ್ಮ. ಹೀಗಾಗಿ, ಒಪ್ಪಂದದ ಪ್ರಾಯೋಗಿಕ ವ್ಯಾಪ್ತಿ ಮತ್ತು ಪರಸ್ಪರ ರಕ್ಷಣೆಯ ನಿಜವಾದ ಮಟ್ಟ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.

ಸೌದಿ ಅರೇಬಿಯಾ ತನ್ನನ್ನು ಇಸ್ಲಾಮಿಕ್ ಜಗತ್ತಿನ ಏಕೈಕ ನಾಯಕ ಎಂದು ಭಾವಿಸುತ್ತದೆ. ಆದರೆ ಟರ್ಕಿ ಕೂಡ ಅದೇ ನಾಯಕತ್ವದ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಈ ಎರಡು ದೇಶಗಳ ನಡುವಿನ ಆಂತರಿಕ ಪೈಪೋಟಿಯು ಭವಿಷ್ಯದಲ್ಲಿ ಈ ಒಪ್ಪಂದದ ಸಾಮೂಹಿಕ ನಿರ್ಧಾರಗಳಿಗೆ ಅಡ್ಡಿಯಾಗಬಹುದು ಎಂದು ಊಹಿಸಲಾಗಿದೆ.

ಭಯೋತ್ಪಾದನೆಗೆ ಶಾಶ್ವತ ತೆರೆ ಬಿದ್ದರೆ ಮಾತ್ರ ಸಿಂಧು ಜಲ ಒಪ್ಪಂದ: ಪಾಕಿಸ್ತಾನಕ್ಕೆ ಭಾರತದ ಖಡಕ್ ಸಂದೇಶ

ಭಾರತದ ಮೇಲೆ ಪರಿಣಾಮವೇನು?

ಮೆಕ್ಕಾ ಜಂಟಿ ಒಪ್ಪಂದ ಭಾರತದ ಮೇಲೆ ಕೆಲ ಸೂಕ್ಷ್ಮ ಪರಿಣಾಮಗಳನ್ನು ಉಂಟು ಮಾಡಬಹುದು. ಆಪರೇಷನ್‌ ಸಿಂದೂರ ಕಾರ್ಯಾಚರಣೆ ಬಳಿಕ ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಇದೀಗ ಸೌದಿ ಅರೇಬಿಯಾದ ಭಾರಿ ಹಣಕಾಸಿನ ನೆರವು ಟರ್ಕಿಯ ಸುಧಾರಿತ ರಕ್ಷಣಾ ತಂತ್ರಜ್ಞಾನ ಮತ್ತು ಪಾಕಿಸ್ತಾನದ ಸೇನಾ ಬಲ ಒಂದಾಗುತ್ತಿರುವುದು ಭಾರತಕ್ಕೆ ಕಳವಳಕಾರಿ ಸಂಗತಿಯಾಗಿದೆ.

ಕಾಶ್ಮೀರ ವಿಷಯದಲ್ಲಿ ಬೆಂಬಲ

ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ತಲೆ ಹಾಕುತ್ತಲೇ ಬಂದಿದೆ. ವಿಶ್ವಸಂಸ್ಥೆಯಲ್ಲಿಯೂ ಈ ಕುರಿತು ಪಾಕಿಸ್ತಾನ ಚರ್ಚೆ ನಡೆಸಿತ್ತು. ಟರ್ಕಿ ಈಗಾಗಲೇ ಜಾಗತಿಕ ವೇದಿಕೆಗಳಲ್ಲಿ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಾ ಬಂದಿದೆ. ಈ ಒಪ್ಪಂದದ ನಂತರ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಟರ್ಕಿಯಿಂದ ರಾಜತಾಂತ್ರಿಕ ಬೆಂಬಲ ಮತ್ತಷ್ಟು ಹೆಚ್ಚಾಗಬಹುದು. ಆದರೆ ಸೌದಿ ಹಾಗೂ ಭಾರತದ ಸಂಬಂಧ ಉತ್ತಮವಾಗಿದೆ. ಈ ಒಪ್ಪಂದದ ಬಳಿಕ ಸಂಘರ್ಷದ ಸಂದರ್ಭದಲ್ಲಿ ಸೌದಿ ತಟಸ್ಥವಾಗಿರದೆ ಪಾಕಿಸ್ತಾನದ ಪರವಾಗಿ ನಿಲ್ಲುವ ಅಥವಾ ಮಧ್ಯಸ್ಥಿಕೆಗೆ ಒತ್ತಡ ಹೇರುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಭಾರತ ಎಚ್ಚರಿಕೆ ಹೆಜ್ಜೆಯನ್ನಿಡಬೇಕಾಗುತ್ತದೆ.