ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM-Kisan: ಆ. 2ರಂದು ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತು ಬಿಡುಗಡೆ; ಹೀಗೆ ಹೆಸರು ನೋಂದಾಯಿಸಿ

Narendra Modi: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತು ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆ. 2ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ. 20ನೇ ಕಂತಿನಲ್ಲಿ 9.7 ಕೋಟಿ ರೈತರಿಗೆ 20,500 ಕೋಟಿ ರೂ. ಅನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

ಆ. 2ರಂದು ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತು ಬಿಡುಗಡೆ

ಸಾಂದರ್ಭಿಕ ಚಿತ್ರ.

Ramesh B Ramesh B Jul 30, 2025 5:17 PM

ದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ 20ನೇ ಕಂತು ಆ. 2ರಂದು ಬಿಡುಗಡೆಯಾಗಲಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ಗರಿಷ್ಠ ಸಂಖ್ಯೆಯಲ್ಲಿ ಯೋಜನೆ ರೈತರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಜು. 30) ಉನ್ನತ ಮಟ್ಟದ ಸಭೆ ನಡೆಯಿತು.

ದೇಶಾದ್ಯಂತದ 731 ಕೃಷಿ ವಿಜ್ಞಾನ ಕೇಂದ್ರಗಳು (KVK), ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಮತ್ತು ಕೃಷಿ ವಿಶ್ವವಿದ್ಯಾಲಯಗಳ ನಿರ್ದೇಶಕರು, ಉಪಕುಲಪತಿಗಳು ಮತ್ತು ಮುಖ್ಯಸ್ಥರು ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದರು.



ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, ʼʼಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರೈತರಿಗೆ 3 ಕಂತುಗಳಲ್ಲಿ 6,000 ರೂ.ಗಳನ್ನು ವರ್ಗಾಯಿಸಲಾಗುತ್ತಿದೆ. ಪ್ರತಿ ಕಂತು ಪ್ರತಿ 4 ತಿಂಗಳಿಗೊಮ್ಮೆ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಪ್ರಮುಖ ಪಾತ್ರವಹಿಸುತ್ತವೆ'' ಎಂದು ಹೇಳಿದರು. ಆ. 2ರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ರೈತರಿಗೆ ಕರೆ ನೀಡಿದರು. ʼʼಇದು ಯೋಜನೆಯ ಪ್ರಯೋಜನ ಪಡೆಯಲು ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲಿರುವ ಒಂದು ಉತ್ತಮ ಅವಕಾಶʼʼ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುಂಗಾರು ಬೆಳೆಗಳ ಬಗ್ಗೆ ರೈತರೊಂದಿಗೆ ಸಂವಾದ ನಡೆಯಲಿದೆ.

2019ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಇದುವರೆಗೆ 3.69 ಲಕ್ಷ ಕೋಟಿ ರೂ.ಗಳನ್ನು 19 ಕಂತುಗಳ ಮೂಲಕ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. 20ನೇ ಕಂತಿನಲ್ಲಿ 9.7 ಕೋಟಿ ರೈತರಿಗೆ 20,500 ಕೋಟಿ ರೂ. ಅನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುವುದು.

ಈ ಸುದ್ದಿಯನ್ನೂ ಓದಿ: Kisan Credit Card Loan: ರೈತರಿಗೆ ಬಜೆಟ್‌ನಲ್ಲಿ ಗುಡ್‌ನ್ಯೂಸ್‌; ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಏರಿಕೆ: ಹೀಗೆ ಅಪ್ಲೈ ಮಾಡಿ

ಪಿಎಂ ಕಿಸಾನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್‌ pmkisan.gov.inಗೆ ಭೇಟಿ ನೀಡಬೇಕು.
  • ಹೊಸ ರೈತರು ನೋಂದಣಿ (New Farmer Registration) ಬಟನ್‌ ಮೇಲೆ ಕ್ಲಿಕ್ ಮಾಡಿ.
  • ನಂತರ ಆಧಾರ್ ಸಂಖ್ಯೆ, ರಾಜ್ಯ, ಜಿಲ್ಲೆ ಮತ್ತು ವೈಯಕ್ತಿಕ ಬ್ಯಾಂಕ್ ಮಾಹಿತಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ನಂತರ ಫಾರ್ಮ್ ಅನ್ನು ಸಲ್ಲಿಸಿ ಮತ್ತು ಸೇವ್‌ ಮಾಡಿ ಇಟ್ಟುಕೊಳ್ಳಿ.
  • ನಿಮ್ಮ ಅರ್ಜಿ ಸಲ್ಲಿಕೆ ಆದ ನಂತರ ಅನುಮೋದನೆ ನೀಡುವ ಮೊದಲು ಸ್ಥಳೀಯ ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ.
  • ಅರ್ಜಿಯ ಸ್ಥಿತಿಯನ್ನು ಹೀಗೆ ಪರಿಶೀಲಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ-pmkisan.gov.in
  • ಈಗ ಪುಟದ ಬಲಭಾಗದಲ್ಲಿರುವ ‘ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ (Know Your Status) ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ಡೇಟಾ ಪಡೆಯಿರಿ ಆಯ್ಕೆಯನ್ನು ಆರಿಸಿ ನಿಮ್ಮ ಫಲಾನುಭವಿ ಸ್ಥಿತಿ ಪರದೆಯ ಮೇಲೆ ಬರುತ್ತದೆ.