ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೀರ್ಘಾವಧಿಯ ಇಂಧನ ಸಹಭಾಗಿತ್ವಕ್ಕೆ ವೆನೆಜುವೆಲಾ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

PM Modi-Venezuela's Interim President talks: ದೀರ್ಘಾವಧಿಯ ಇಂಧನ ಸಹಭಾಗಿತ್ವ, ಔಷಧೋದ್ಯಮ ಹಾಗೂ ಪ್ರಮುಖ ಖನಿಜಗಳ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಮಾತುಕತೆ ನಡೆಸಿದರು.

ಇಂಧನ ಸಹಭಾಗಿತ್ವ ಕುರಿತು ಭಾರತ-ವೆನೆಜುವೆಲಾ ಚರ್ಚೆ

ಪ್ರಧಾನಿ ನರೇಂದ್ರ ಮೋದಿ-ವೆನೆಜುವೆಲಾ ಹಂಗಾಮಿ ಅಧ್ಯಕ್ಷೆ -

Priyanka P
Priyanka P Jun 4, 2026 11:13 PM

ನವದೆಹಲಿ, ಜೂ. 4: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ (Delcy Rodríguez) ದೀರ್ಘಾವಧಿಯ ಇಂಧನ ಸಹಭಾಗಿತ್ವ, ಔಷಧೋದ್ಯಮ ಹಾಗೂ ಪ್ರಮುಖ ಖನಿಜಗಳ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವೆನೆಜುವೆಲಾದಲ್ಲಿರುವ ಭಾರತದ ಸರ್ಕಾರಿ ಸ್ವಾಮ್ಯದ ಕಂಪನಿಯೊಂದಕ್ಕೆ ಬಾಕಿಯಾಗಿರುವ ಲಾಭಾಂಶ ಮೊತ್ತವನ್ನು ಭಾರತಕ್ಕೆ ಮರಳಿ ಕಳುಹಿಸುವ ವಿಷಯವನ್ನು ಮೋದಿ ಪ್ರಸ್ತಾಪಿಸಿದರು.

ಅಮೆರಿಕದ ಸೈನಿಕರು ಜನವರಿಯಲ್ಲಿ ಕರಾಕಾಸ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ತೆಗೆದುಕೊಂಡ ಬಳಿಕ ಹಂಗಾಮಿ ಸರ್ಕಾರದ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡಿರುವ ಡೆಲ್ಸಿ ರೊಡ್ರಿಗಸ್, ಐವರು ಸಚಿವರನ್ನು ಒಳಗೊಂಡ ನಿಯೋಗದೊಂದಿಗೆ ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್‌ ಪೋಸ್ಟ್:



ಹೈದರಾಬಾದ್ ಹೌಸ್‌ನಲ್ಲಿ ನಡೆದ ಮಾತುಕತೆಯ ಬಳಿಕ ಉಭಯ ನಾಯಕರು ಸಾಮಾನ್ಯವಾಗಿ ಮಾಡುವಂತೆ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಇಂಧನ, ಪ್ರಮುಖ ಖನಿಜಗಳು, ತಂತ್ರಜ್ಞಾನ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ. “ಲ್ಯಾಟಿನ್ ಅಮೆರಿಕದಲ್ಲಿ ಮೌಲ್ಯಯುತ ಪಾಲುದಾರನಾಗಿ, ವೆನೆಜುವೆಲಾದೊಂದಿಗಿನ ನಮ್ಮ ನಿಕಟ ಸಹಕಾರವು ಜಾಗತಿಕ ದಕ್ಷಿಣ ರಾಷ್ಟ್ರಗಳಿಗೆ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ” ಎಂದು ಅವರು ಹೇಳಿದರು.

ಭಾರತದ ವಿರುದ್ಧ ನಮ್ಮ ನೆಲವನ್ನು ಬಳಸಲು ಬಿಡುವುದಿಲ್ಲ”: ಪ್ರಧಾನಿ ಮೋದಿಗೆ ಮ್ಯಾನ್ಮಾರ್ ಅಧ್ಯಕ್ಷ ಭರವಸೆ

ರಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಂತರ ವೆನೆಜುವೆಲಾ ಮೂರನೇ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿ ಮಾರ್ಪಟ್ಟಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತವು ಹೊರ್ಮುಜ್ ಜಲಸಂಧಿ ಮುಚ್ಚಲ್ಪಟ್ಟ ಪರಿಣಾಮ ಉಂಟಾದ ಪೂರೈಕೆ ಅಡಚಣೆಗಳನ್ನು ಸರಿದೂಗಿಸಲು ತನ್ನ ಇಂಧನ ಖರೀದಿಯ ಮೂಲಗಳನ್ನು ವೈವಿಧ್ಯಗೊಳಿಸಿದೆ. ಇದರ ಭಾಗವಾಗಿ ವೆನೆಜುವೆಲಾದಿಂದ ತೈಲ ಆಮದು ಪ್ರಮಾಣವನ್ನು ಹೆಚ್ಚಿಸಿದ ಈ ಸಮಯದಲ್ಲಿ ರೊಡ್ರಿಗಸ್ ನವದೆಹಲಿಗೆ ಭೇಟಿ ನೀಡಿರುವುದು ಮಹತ್ವ ಪಡೆದಿದೆ.

ಇನ್ನು ನವದೆಹಲಿದಲ್ಲಿರುವ ಔಷಧ ಕಂಪನಿ ಹಾಗೂ ಟಾಟಾ ಸಂಸ್ಥೆಯ ವಾಹನ ಉತ್ಪಾದನಾ ಘಟಕಕ್ಕೆ ಭೇಟಿ ನೀಡುವ ಜತೆಗೆ, ಡೆಲ್ಸಿ ರೊಡ್ರಿಗಸ್ ಗುಜರಾತ್‌ನ ಜಾಮ್ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ತೈಲ ಸಂಸ್ಕರಣಾ ಘಟಕಕ್ಕೂ ಭೇಟಿ ನೀಡಲಿದ್ದಾರೆ. ದಿನಕ್ಕೆ 12.4 ಲಕ್ಷ ಬ್ಯಾರೆಲ್‌ಗಳ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಜಾಮ್ನಗರ ರಿಫೈನರಿ ವಿಶ್ವದ ಅತಿದೊಡ್ಡ ಏಕೈಕ ತೈಲ ಸಂಸ್ಕರಣಾ ಸಂಕೀರ್ಣ ಎನಿಸಿಕೊಂಡಿದೆ. ವೆನೆಜುವೆಲಾದ ಕಚ್ಚಾ ತೈಲದ ಪ್ರಮುಖ ಖರೀದಿದಾರರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಪ್ರಮುಖ ಸ್ಥಾನದಲ್ಲಿದೆ.