Rakshabandhan: ಪ್ರವಾಹ ಪೀಡಿತ ಪ್ರದೇಶದಲ್ಲಿ ಪುಷ್ಕರ್ ಸಿಂಗ್ ಧಾಮಿಗೆ ದುಪ್ಪಟ್ಟಾ ಹರಿದು ರಾಖಿ ಕಟ್ಟಿದ ಮಹಿಳೆ
ಉತ್ತರಕಾಶಿಯ ಧರಾಲಿಯಲ್ಲಿ ಮೇಘಸ್ಪೋಟದಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ ಮಹಿಳೆಯೊಬ್ಬರು ತಮ್ಮ ದುಪ್ಪಟ್ಟಾವನ್ನು ಹರಿದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಕೈಗೆ ಕಟ್ಟಿದರು. ರಾಖಿಯನ್ನು ಕಟ್ಟುವಾಗ ಅವರು ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಎಂ ಧಾಮಿ ಅವರ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸಿದರು.


ಡೆಹ್ರಾಡೂನ್: ಪ್ರವಾಹ ಪೀಡಿತ ಪ್ರದೇಶಕ್ಕೆ (Flood affected area) ಭೇಟಿ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Uttarakhand Chief Minister Pushkar Singh Dhami) ಅವರಿಗೆ ಮಹಿಳೆಯೊಬ್ಬರು (Gujarat Woman) ತಮ್ಮ ದುಪ್ಪಟ್ಟಾ ಹರಿದು ರಾಖಿ ಕಟ್ಟಿದ ಘಟನೆ ನಡೆದಿದೆ. ಆಗಸ್ಟ್ 5ರಂದು ಉಂಟಾದ ಮೇಘಸ್ಪೋಟದ (cloudburst) ಬಳಿಕ ಹಠಾತ್ ಭೂಕುಸಿತ ಸಂಭವಿಸಿ ತೀವ್ರ ಪ್ರವಾಹದಿಂದ ರಸ್ತೆ ಮುಚ್ಚಿ ಹೋಯಿತು. ಇದರಲ್ಲಿ ಮಹಿಳೆ ಮತ್ತು ಅವರ ಕುಟುಂಬ ಸಿಕ್ಕಿ ಹಾಕಿಕೊಂಡಿತು. ಅವರ ರಕ್ಷಣೆಯ ಬಳಿಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿಯಾದರು.
ಉತ್ತರಕಾಶಿಯ ಧರಾಲಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸುತ್ತಿದ್ದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಗುಜರಾತ್‌ನ ಪ್ರವಾಸಿಗರಲ್ಲಿ ಒಬ್ಬರಾದ ಅಹಮದಾಬಾದ್‌ನ ಇಸ್ನಾಪುರದ ಧನಗೌರಿ ಬರೋಲಿಯಾ ಎಂಬ ಮಹಿಳೆ ತಮ್ಮ ದುಪಟ್ಟಾದ ಒಂದು ಭಾಗವನ್ನು ಹರಿದು ಅವರ ಕೈಗೆ ರಕ್ಷೆಯಾಗಿ ಕಟ್ಟಿದರು. ರಾಖಿಯನ್ನು ಕಟ್ಟುವಾಗ ಅವರು ಸಿಎಂ ಧಾಮಿ ಅವರ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸಿದರು.
ʼʼನನಗೆ ನೀವು ಶ್ರೀಕೃಷ್ಣನಂತೆ. ನನ್ನನ್ನು ಮಾತ್ರವಲ್ಲ, ಇಲ್ಲಿರುವ ಎಲ್ಲ ತಾಯಂದಿರು ಮತ್ತು ಸಹೋದರಿಯರನ್ನು ನಿಜವಾದ ಸಹೋದರನಂತೆ ರಕ್ಷಿಸುತ್ತಿದ್ದೀರಿ. ನೀವು ಮೂರು ದಿನಗಳಿಂದ ನಮ್ಮೊಂದಿಗಿದ್ದೀರಿ, ನಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದೀರಿ ಮತ್ತು ನಮ್ಮ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದೀರಿʼʼ ಎಂದು ಧನಗೌರಿ ಬರೋಲಿಯಾ ಅವರು ಪುಷ್ಕರ್ ಸಿಂಗ್ ಧಾಮಿ ಅವರಿಗೆ ಹೇಳಿದ್ದಾರೆ.
ಧನಗೌರಿ ಬರೋಲಿಯಾ ತಮ್ಮ ಕುಟುಂಬದೊಂದಿಗೆ ಗಂಗೋತ್ರಿಗೆ ತೀರ್ಥಯಾತ್ರೆಗೆ ಬಂದಿದ್ದರು. ಆಗಸ್ಟ್ 5ರಂದು ಉಂಟಾದ ತೀವ್ರ ಮೇಘಸ್ಫೋಟದಿಂದಾಗಿ ಹಠಾತ್ ಭೂಕುಸಿತವಾಗಿ ಅವರು ಮತ್ತು ಕುಟುಂಬ ಬಲವಾದ ಪ್ರವಾಹದಲ್ಲಿ ಸಿಲುಕಿತ್ತು. ಖೀರ್ ಗಂಗಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದ ಭಾಗವಾದ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಹಠಾತ್ ಪ್ರವಾಹ ಉಂಟಾಗಿ ಐವರು ಸಾವನ್ನಪ್ಪಿದ್ದಾರೆ.
#WATCH | Uttarkashi | On Chief Minister Pushkar Singh Dhami's arrival at Harsil, a woman tourist from Gujarat tore a part of her dupatta and tied a Rakhi on the CM's wrist, as a token of thanks and appreciation for his government's disaster relief operations. pic.twitter.com/Zm3zVpXfVq
— ANI (@ANI) August 8, 2025
ಬಿರುಸಿನ ರಕ್ಷಣಾ ಕಾರ್ಯ
ಗಂಗೋತ್ರಿ ಧಾಮ್‌ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳನ್ನು ನೆಲೋಂಗ್ ಕಣಿವೆಯ ಮೂಲಕ ಸ್ಥಳಾಂತರಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಅವರನ್ನು ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Rains: ನಾಳೆ ಕರಾವಳಿ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಭಾರಿ ಮಳೆ ಸಾಧ್ಯತೆ
ಈವರೆಗೆ ಸುಮಾರು 840 ಜನರನ್ನು ರಕ್ಷಿಸಲಾಗಿದೆ ಮತ್ತು 50 ಮಂದಿ ನಾಪತ್ತೆಯಾಗಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪುಷ್ಕರ್ ಸಿಂಗ್ ಧಾಮಿ, ಉತ್ತರಕಾಶಿಯ ಧರಾಲಿಯಲ್ಲಿ ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಲಾಗಿದೆ. ಹೆಲಿ ಸೇವಾ, ಎಂಐ-17 ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳ ಸಹಾಯದಿಂದ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು ಜನರನ್ನು ಸುರಕ್ಷಿತವಾಗಿ ಮರಳಿ ಕರೆತರಲಾಗುತ್ತಿದೆ. ಹಠಾತ್ ಪ್ರವಾಹದಿಂದ ಕಟ್ಟಡಗಳು ಉರುಳಿವೆ, ನೆರೆಯ ಗ್ರಾಮದ ಅರ್ಧಕ್ಕಿಂತ ಹೆಚ್ಚು ಭಾಗ ಕೊಚ್ಚಿಹಾಕಿದೆ ಎನ್ನಲಾಗಿದೆ ಎಂದು ತಿಳಿಸಿದ್ದಾರೆ.