Nelamangala News: ರಾಜಕೀಯ ದುರುದ್ದೇಶದಿಂದ ಸಂಸದ ಡಾ.ಕೆ. ಸುಧಾಕರ್ ವಿರುದ್ಧ ಎಫ್‌ಐಆರ್: ರಂಗನಾಥ್ ಬಾಬು ಆರೋಪ
Dr K Sudhakar: ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ರಾಜಕೀಯ ದುರುದ್ದೇಶದಿಂದ ಡಾ.ಕೆ. ಸುಧಾಕರ್ ಅವರನ್ನು ಎ1 ಆರೋಪಿ ಮಾಡಿದ್ದಾರೆ ಎಂದು ನೆಲಮಂಗಲ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರಂಗನಾಥ್ ಬಾಬು ಆರೋಪಿಸಿದ್ದಾರೆ.


ನೆಲಮಂಗಲ: ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ರಾಜಕೀಯ ದುರುದ್ದೇಶದಿಂದ ಡಾ.ಕೆ. ಸುಧಾಕರ್ ಅವರನ್ನು ಎ1 ಆರೋಪಿ ಮಾಡಿದ್ದಾರೆ ಎಂದು ನೆಲಮಂಗಲ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರಂಗನಾಥ್ ಬಾಬು ಆರೋಪಿಸಿದ್ದಾರೆ. (Nelamangala News) ನಗರದ ಖಾಸಗಿ ಹೋಟಲ್‌ನಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ಕಾಂಗ್ರೆಸ್ ಶಾಸಕ ಪೊನ್ನಣ್ಣ ಅವರ ಮೇಲೆ ಎಫ್‌ಐಆರ್ ಮಾಡಲಿಲ್ಲ, ಆದರೆ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರ ಹೆಸರು ಇಲ್ಲದಿದ್ದರೂ ಎಫ್‌ಐಆರ್ ಮಾಡಿದ್ದಾರೆ. ಪೊನ್ನಣ್ಣ ಅವರಿಗೆ ಒಂದು ಕಾನೂನು, ಸುಧಾಕರ್ ಅವರಿಗೆ ಬೇರೆ ಕಾನೂನು ಇದೆಯೇ? ಎಂದು ಪ್ರಶ್ನಿಸಿದ ಅವರು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಡೆತ್‌ನೋಟ್ 6ನೇ ತಾರೀಕು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ, ಈತ ಆತ್ಮಹತ್ಯೆ ಮಾಡಿಕೊಂಡಿದ್ದು 7ರಂದು, ಆದರೆ ಮೊದಲೇ ಆತನನ್ನು ಕರೆಸಿ, ಮಾತನಾಡಿ ಉಳಿಸಿಕೊಳ್ಳುವ ಕೆಲಸ ಮಾಡಬೇಕಿತ್ತು. ಆರೋಪ ಮಾಡುವ ನಾಯಕರು ಹೋಗಿ ಏಕೆ ಕಾಪಾಡಲಿಲ್ಲ ಎಂದು ಪ್ರಶ್ನಿಸಿದರು. ಯಾವುದೇ ತನಿಖೆ ಮಾಡದೆ, ಕೂಲಂಕುಶ ಪರಿಶೀಲನೆ ಮಾಡದೇ ಎಫ್‌ಐಆರ್‌ನಲ್ಲಿ ಸುಧಾಕರ್ ಅವರ ಹೆಸರನ್ನು ಸೇರಿಸಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ವಿ. ನಾಗರಾಜು ಮಾತನಾಡಿ, ಸಂಸದ ಡಾ.ಕೆ ಸುಧಾಕರ್ ಅವರಿಗೂ ಚಿಕ್ಕಬಳ್ಳಾಪುರದ ಸಿಇಓ ಕಚೇರಿ ಬಳಿ ಆತ್ಮಹತ್ಯೆ ಮಾಡಿಕೊಂಡ ಬಾಬುವಿಗೂ ಯಾವುದೇ ಸಂಬಂಧವಿಲ್ಲ, ಆತನನ್ನು ಸಂಸದರು ಭೇಟಿಯೂ ಮಾಡಿಲ್ಲ, ಫೋನ್ ಮೂಲಕ ಮಾತನಾಡಿಲ್ಲ, ಆತ ಆರೋಪ ಮಾಡಿರುವ ಇಬ್ಬರು ಮುಖಂಡರಿಗೆ ಸುಧಾಕರ್ ಅವರಿಗೂ ಸಂಬಂಧವಿಲ್ಲ, ಡೆತ್‌ನೋಟ್‌ನಲ್ಲಿ ಡಾ.ಕೆ. ಸುಧಾಕರ್ ಹೆಸರು ಇಲ್ಲದಿದ್ದರೂ ಎಫ್‌ಐಆರ್ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | ಮತಗಳ್ಳತನ ಮಾಡುತ್ತಿರುವುದೇ ಕಾಂಗ್ರೆಸ್; ರಾಹುಲ್ ಗಾಂಧಿಗೆ 5 ಪ್ರಶ್ನೆ ಕೇಳಿದ ಎಚ್.ಎಂ.ರಮೇಶ್ ಗೌಡ
ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಚಾಲಕ ಬಾಬು ಆತ್ಮಹತ್ಯೆ ಕೇಸ್‌ನಲ್ಲಿ ಸಂಸದ ಡಾ.ಕೆ ಸುಧಾಕರ್ ಅವರ ಹೆಸರು ಬಳಕೆಯಾಗಿಲ್ಲದಿದ್ದರೂ ದುರುದ್ದೇಶಪೂರ್ವಕವಾಗಿ ರಾಜಕೀಯ ಷಡ್ಯಂತ್ರದಿಂದ ಎಫ್‌ಐಆರ್‌ನಲ್ಲಿ ಸೇರಿಸಿದ್ದಾರೆ. ಮೃತ ವ್ಯಕ್ತಿಯು ಡೆತ್‌ನೋಟ್‌ನಲ್ಲಿ ಡಾ.ಕೆ. ಸುಧಾಕರ್ ಬೆಂಬಲಿಗರು ಎಂದು ಬಳಸಿದ್ದಾನೆಯೇ ವಿನಃ ಡಾ.ಕೆ. ಸುಧಾಕರ್ ಅವರು ಕೆಲಸ ಕೊಡಿಸುವುದಾಗಿ ಹಣ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲ, ಪೊಲೀಸರು ಸ್ಥಳೀಯ ರಾಜಕೀಯ ಪ್ರಭಾವ ಹಾಗೂ ಕಾಂಗ್ರೆಸ್ ಸರ್ಕಾರದ ಕುತಂತ್ರದಿಂದ ಸಂಸದ ಡಾ.ಕೆ. ಸುಧಾಕರ್ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.