ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಧರ್ಮಸ್ಥಳ ಕೇಸ್‌; ವರದಿ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌

Supreme Court: ಧರ್ಮಸ್ಥಳ ವಿವಾದಕ್ಕೆ ಸಂಬಂಧಿಸಿ ವರದಿ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ನಿರಾಕರಿಸಿದೆ. ಧರ್ಮಸ್ಥಳ ದೇವಸ್ಥಾನದ ಕಾರ್ಯದರ್ಶಿ ಡಿ. ಹರ್ಷೇಂದ್‌ ಕುಮಾರ್‌ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕೋಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ, ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಕರ್ನಾಟಕದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ನಿರ್ಬಂಧಿಸಲು ಸುಪ್ರೀಂ ಕೋರ್ಟ್‌ ನಕಾರ

Ramesh B Ramesh B Aug 8, 2025 7:05 PM

ದೆಹಲಿ: ಧರ್ಮಸ್ಥಳ ಗ್ರಾಮದಲ್ಲಿ ಪ್ರಭಾವಿಗಳ ಸೂಚನೆಯಂತೆ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ದೂರುದಾರನೊಬ್ಬ ಆರೋಪಿಸಿದ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ (Dharmasthala Case). ಈ ಮಧ್ಯೆ ವಿವಾದಕ್ಕೆ ಸಂಬಂಧಿಸಿ ವರದಿ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ (Supreme Court) ಶುಕ್ರವಾರ (ಆಗಸ್ಟ್‌ 8) ನಿರಾಕರಿಸಿದೆ. ಧರ್ಮಸ್ಥಳ ದೇವಸ್ಥಾನದ ಕಾರ್ಯದರ್ಶಿ ಡಿ. ಹರ್ಷೇಂದ್‌ ಕುಮಾರ್‌ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕೋಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ, ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಕರ್ನಾಟಕದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣದ ವರದಿಗೆ ಸಂಬಂಧಿಸಿದಂತೆ ಬೆಂಗಳೂರು ಸಿವಿಲ್ ನ್ಯಾಯಾಲಯವು ಯುಟ್ಯೂಬ್ ಚಾನೆಲ್ ಕುಡ್ಲ ರ‍್ಯಾಂಪೇಜ್‌ ಮೇಲೆ ವಿಧಿಸಿದ್ದ ಪ್ರತಿಬಂಧಕ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದರ ವಿರುದ್ಧ ಹರ್ಷೇಂದ್ರ ಕುಮಾರ್ ಡಿ. ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿತು.



ಈ ಸುದ್ದಿಯನ್ನೂ ಓದಿ: Dharmasthala: ಧರ್ಮಸ್ಥಳ ಪ್ರಕರಣ; ಫಸ್ಟ್ ಸ್ಪಾಟ್‌ನಲ್ಲಿ ದೊರೆತ ಎಟಿಎಂ ಗುರುತು ಪತ್ತೆ; ಆತ ಸಾವನಪ್ಪಿದ್ದು ಜಾಂಡಿಸ್‌ನಿಂದ ಎಂದ ಅಧಿಕಾರಿಗಳು

ದೇವಾಲಯ ಆಡಳಿತವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ʼʼದಿನದಿಂದ ದಿನಕ್ಕೆ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆʼʼ ಎಂದು ವಾದಿಸಿದರು. ಆದರೆ ಇದಕ್ಕಾಗಿ ಮಾಧ್ಯಮಗಳು ವರದಿ ಮಾಡುವುದನ್ನು ನಿರ್ಬಂಧಿಸಬೇಕೇ ಎಂದು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠವು ಪ್ರಶ್ನಿಸಿತು.

"ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗುತ್ತದೆ. ಉದಾಹರಣೆಗೆ ಪೊಲೀಸ್ ಅಧಿಕಾರಿಯ ಬಳಿ ಭಯೋತ್ಪಾದಕರ ಮಾಹಿತಿ ಇರುವುದು ಪತ್ರಕರ್ತನಿಗೆ ತಿಳಿಯುತ್ತದೆ ಎಂದುಕೊಳ್ಳಿ. ಆ ಮಾಹಿತಿಯನ್ನು ಪ್ರಕಟಿಸಲಾಗದು. ಆದರೆ ಈ ಪ್ರಕರಣದಲ್ಲಿ ಪ್ರತಿಬಂಧಿಸುವ ಆದೇಶಗಳು ವ್ಯಾಪಕ ನಿರ್ಬಂಧಕ ಆದೇಶಗಳಾಗಿವೆ. ಅವು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತವೆ. ಈ ಪ್ರಕರಣದಲ್ಲಿ ಒಬ್ಬ ನೈರ್ಮಲ್ಯ ಕೆಲಸಗಾರನಿದ್ದಾನೆ. ನಾವು ನಿರ್ಬಂಧಕ ಆದೇಶ ಜಾರಿಗೊಳಿಸಿದರೆ ಆತನ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು.

ʼʼವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಸ್ವತಂತ್ರವಾಗಿ ನಿರ್ಧರಿಸಲಿʼʼ ಎಂದು ನ್ಯಾ. ಮನಮೋಹನ್‌ ಹೇಳಿದರು. ಮೀಮ್‌ಗಳ ವಿಚಾರವಾಗಿ ಪೀಠವು "ಮೀಮ್‌ಗಳನ್ನು ತೆಗೆದುಹಾಕಲು ಹೇಳಬಹುದು. ನೀವು ಹೇಳಿದಂತೆ ಇದಕ್ಕೆಲ್ಲ ಒಂದು ಮಿತಿ ಇರಬೇಕು" ಎಂದು ತಿಳಿಸಿತು. "ಇದೆಲ್ಲವನ್ನೂ ವಿಚಾರಣಾ ನ್ಯಾಯಾಲಯದ ಗಮನಕ್ಕೆ ತನ್ನಿ. ಅವರು ಸ್ವತಂತ್ರವಾಗಿ ತಮ್ಮ ವಿವೇಚನೆಯನ್ನು ಬಳಸಿ ನಿರ್ಧರಿಸಲಿ" ಎಂದಿತು.

ಧರ್ಮಸ್ಥಳ ಪ್ರಕರಣದ ಹಿನ್ನೆಲೆ

2025ರ ಜುಲೈ 3ರಂದು ಅನಾಮಿಕ ದೂರುದಾರನೊಬ್ಬ, ತಾನು 1995ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡಿದ್ದಾಗ, 100ಕ್ಕೂ ಹೆಚ್ಚು ಶವಗಳನ್ನು ಅಕ್ರಮವಾಗಿ ಹೂತಿದ್ದೇನೆ ಎಂದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದ. ಈ ಸ್ಫೋಟಕ ಆರೋಪವು ದೇಶಾದ್ಯಂತ ಸಂಚಲನ ಸೃಷ್ಟಿಸಿ, ಎಸ್‌ಐಟಿ ರಚನೆಗೆ ಕಾರಣವಾಯಿತು. ಜುಲೈ 28ರಂದು, ದೂರುದಾರನನ್ನು ನೇತ್ರಾವತಿ ಸ್ನಾನಘಟ್ಟದ ಸಮೀಪಕ್ಕೆ ಕರೆತಂದು, 13 ಸ್ಥಳಗಳನ್ನು ಗುರುತಿಸಲಾಯಿತು. ಜುಲೈ 29ರಿಂದ ಈ ಸ್ಥಳಗಳಲ್ಲಿ ಅಗೆಯುವ ಕಾರ್ಯ ಆರಂಭವಾಯಿತು. ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ.