ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stray Dogs: 2 ಬಾರಿ ಕಚ್ಚುವ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ! ಏನಿದು ಹೊಸ ಆದೇಶ?

ಬೀದಿ ನಾಯಿಗಳ ಹಾವಳಿ ತಡೆಯಲು ಮುಂದಾದ ಉತ್ತರ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಒಂದೇ ನಾಯಿ 2 ಬಾರಿ ಕಚ್ಚಿದರೆ ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಯಾವುದೇ ಪ್ರಚೋದನೆ ಇಲ್ಲದೆ ಮೊದಲ ಬಾರಿ ಮನುಷ್ಯರಿಗೆ ಕಚ್ಚುವ ಬೀದಿ ನಾಯಿಯನ್ನು 10 ದಿನಗಳ ಕಾಲ ಪ್ರಾಣಿ ಕೇಂದ್ರದಲ್ಲಿ ಇರಿಸಲಾಗುತ್ತದೆ. ಅದಾದ ಬಳಿಕ ಮತ್ತೊಮ್ಮೆ ಕಡಿದರೆ ಜೀವನ ಪರ್ಯಂತ ಪ್ರಾಣಿ ಕೇಂದ್ರದಲ್ಲೇ ಇರಿಸಲಾಗುತ್ತದೆ.

2 ಬಾರಿ ಕಚ್ಚುವ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ!

ಸಾಂದರ್ಭಿಕ ಚಿತ್ರ -

Ramesh B Ramesh B Sep 16, 2025 7:57 PM

ಲಖನೌ: ದೇಶಾದ್ಯಂತ ಬೀದಿ ನಾಯಿಗಳ (Stray Dogs) ಹಾವಳಿ ಹೆಚ್ಚಾಗಿದ್ದು, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಜನರು ಬೇಸತ್ತಿದ್ದಾರೆ. ಇದೀಗ ಉತ್ತರ ಪ್ರದೇಶ ಸರ್ಕಾರ (Uttar Pradesh Government) ಬೀದಿ ನಾಯಿಗಳ ಹಾವಳಿಗೆ ತಡೆ ಒಡ್ಡಲು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಒಂದೇ ನಾಯಿ 2 ಬಾರಿ ಕಚ್ಚಿದರೆ ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಇದರಿಂದ ಸಿಕ್ಕ ಸಿಕ್ಕಲ್ಲೆಲ್ಲ ಓಡಾಡಿ ಅವಾಂತರ ಎಬ್ಬಿಸುವ ಇವಕ್ಕೆ ನಿಜವಾದ ನಾಯಿ ಪಾಡಿನ ಅನುಭವವಾಗಲಿದೆ!

ಯಾವುದೇ ಪ್ರಚೋದನೆ ಇಲ್ಲದೆ ಮೊದಲ ಬಾರಿ ಮನುಷ್ಯರಿಗೆ ಕಚ್ಚುವ ಬೀದಿ ನಾಯಿಯನ್ನು 10 ದಿನಗಳ ಕಾಲ ಪ್ರಾಣಿ ಕೇಂದ್ರದಲ್ಲಿ ಇರಿಸಲಾಗುತ್ತದೆ. ಅದಾದ ಬಳಿಕ ಮತ್ತೊಮ್ಮೆ ಕಡಿದರೆ ಜೀವನ ಪರ್ಯಂತ ಪ್ರಾಣಿ ಕೇಂದ್ರದಲ್ಲೇ ಇರಿಸಲಾಗುತ್ತದೆ. ಅಂದರೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳುವ ಅವಕಾಶವೂ ಇದೆ. ಇದಕ್ಕಾಗಿ ಯಾವುದೇ ಕಾರಣಕ್ಕೂ ಬೀದಿಗೆ ಬಿಡುವುದಿಲ್ಲ ಎನ್ನುವ ಅಫಿಡವಿತ್‌ ಸಲ್ಲಿಸಬೇಕಾಗುತ್ತದೆ.



ಈ ಸುದ್ದಿಯನ್ನೂ ಓದಿ: Delhi Street Dog: ದೆಹಲಿ ಬೀದಿ ನಾಯಿ ಸ್ಥಳಾಂತರ ಆದೇಶ; ಪರಿಶೀಲನೆ ನಡೆಸುತ್ತೇವೆಂದು ಮುಖ್ಯ ನ್ಯಾಯಮೂರ್ತಿ ಆಶ್ವಾಸನೆ

ಆಕ್ರಮಣಕಾರಿ ಬೀದಿ ನಾಯಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸೆಪ್ಟೆಂಬರ್ 10ರಂದು ಎಲ್ಲ ಗ್ರಾಮೀಣ ಮತ್ತು ನಗರ ನಾಗರಿಕ ಸಂಸ್ಥೆಗಳಿಗೆ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಈ ಆದೇಶ ಹೊರಡಿಸಿದ್ದಾರೆ. ಬೀದಿ ನಾಯಿ ಕಚ್ಚಿದ ನಂತರ ಯಾವುದೇ ವ್ಯಕ್ತಿ ರೇಬೀಸ್ ನಿರೋಧಕ ಲಸಿಕೆ ತೆಗೆದುಕೊಂಡರೆ ಅದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಮತ್ತು ನಾಯಿಯನ್ನು ಹತ್ತಿರದ ಪ್ರಾಣಿ ಜನನ ನಿಯಂತ್ರಣ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಆದೇಶದಲ್ಲಿ ಏನಿದೆ?

ʼʼಬೀದಿ ನಾಯಿಯನ್ನು ಪ್ರಾಣಿ ಕೇಂದ್ರಕ್ಕೆ ದಾಖಲಿಸಿದ ನಂತರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ಇಲ್ಲದಿದ್ದರೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಬಳಿಕ ಅದನ್ನು 10 ದಿನಗಳವರೆಗೆ ಇರಿಸಿ ನಡವಳಿಕೆಯನ್ನು ಗಮನಿಸಲಾಗುತ್ತದೆ. ನಾಯಿಯನ್ನು ಹೊರಗೆ ಬಿಡುವ ಮೊದಲು ಅದಕ್ಕೆ ಮೈಕ್ರೋಚಿಪ್ ಅಳವಡಿಸಲಾಗುತ್ತದೆ. ಅದರ ಚಲನವಲನ ಗಮನಿಸಲು ಈ ಕ್ರಮ ನಮಗೆ ಅನುವು ಮಾಡಿಕೊಡುತ್ತದೆ" ಎಂದು ಪ್ರಯಾಗ್‌ರಾಜ್ ಮುನ್ಸಿಪಲ್ ಕಾರ್ಪೊರೇಷನ್‌ನ ಪಶುವೈದ್ಯಾಧಿಕಾರಿ ಡಾ. ಬಿಜಯ್ ಅಮೃತ್ ರಾಜ್ ಹೇಳಿದ್ದಾರೆ. ಈ ನಾಯಿ ಮತ್ತೊಮ್ಮೆ‌ ಯಾವುದೇ ಪ್ರಚೋದನೆ ಇಲ್ಲದ ಕಚ್ಚಿದರೆ ಜೀವನ ಪರ್ಯಂತ ಅಲ್ಲೇ ಇರಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಇದಕ್ಕಾಗಿ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುತ್ತದೆ ಎಂದೂ ಹೇಳಿದ್ದಾರೆ. ʼʼಮೂವರು ತಜ್ಞರನ್ನು ಒಳಗೊಂಡ ಸಮಿತಿಯನ್ನು ರೂಪಿಸಲಾಗುತ್ತದೆ. ಆ ಪ್ರದೇಶದ ಪಶುವೈದ್ಯ, ಪ್ರಾಣಿಗಳ ಸ್ವಭಾವದ ಬಗ್ಗೆ ಅಧ್ಯಯನ ನಡೆಸಿದ ತಜ್ಞ ಮತ್ತು ಪುರಸಭೆಗೆ ಸಂಬಂಧಪಟ್ಟ ವ್ಯಕ್ತಿ-ಹೀಗೆ ಮೂವರ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿ ಸದಸ್ಯರು ಪ್ರಚೋದನೆ ಇಲ್ಲದೆ ನಾಯಿ ದಾಳಿ ನಡೆಸಿದೆಯಾ ಎನ್ನುವುದನ್ನು ಗಮನಿಸಲಿದ್ದಾರೆ. ಒಂದುವೇಳೆ ಕಲ್ಲು ಎಸೆಯುವುದು ಸೇರಿ ಯಾವುದಾದರೂ ಪ್ರಚೋದನೆಯಿಂದ ನಾಯಿ ಕಚ್ಚಿದರೆ ಈ ಶಿಕ್ಷೆ ಅನ್ವಯವಾಗುವುದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.

ಶಿಕ್ಷೆಗೆ ಗುರಿಯಾದ ನಾಯಿಯನ್ನು ದತ್ತು ಪಡೆಯುವವರು ತಮ್ಮ ಹೆಸರು, ವಿಳಾಸ ಇತ್ಯಾದಿಗಳ ಎಲ್ಲ ವಿವರಗಳನ್ನು ಒದಗಿಸಬೇಕು ಮತ್ತು ನಾಯಿಯನ್ನು ಬೀದಿಗಳಲ್ಲಿ ಬಿಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.