ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೋದಿ ವಿರೋಧಿ ಜನಾಂದೋಲನಕಾರರು ಮುಂದೆ ಅವರ ಅಭಿಮಾನಿ ಆಗೋದ್ಯಾಕೆ?

ಜಿರಳೆ ಪಾರ್ಟಿ ದಿಲ್ಲಿಯಲ್ಲಿ ಅಧಿಕೃತವಾಗಿ ಬೀದಿಗಿಳಿದು ಮೀಸೆ ಅಲ್ಲಾಡಿಸಿದೆ. Cockroach Janta Party - CJP ರೂವಾರಿ ಅಭಿಜೀತ್ ದೀಪ್ಕೆ ಅಮೆರಿಕದಿಂದ ಧರೆಗಿಳಿದಿದ್ದಾನೆ. ಆತನ ಸುತ್ತ ಒಂದಿಷ್ಟು ಯುವ ಜನ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಹೋಯ್‌ಗುಟ್ಟಿದ್ದಾರೆ. ಈ ಪ್ರತಿಭಟನೆಯ ದೃಶ್ಯ ನೋಡುತ್ತಿದ್ದಾಗ, ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರದ ವಿರುದ್ಧ ನಡೆದಿದ್ದ ಬೃಹತ್‌ ಜನಾಂದೋಲನಗಳು ಕಣ್ಮುಂದೆ ಬಂದವು.

ಮೋದಿ ವಿರೋಧಿ ಜನಾಂದೋಲನಕಾರರು ಮುಂದೆ ಅವರ ಅಭಿಮಾನಿ ಆಗೋದ್ಯಾಕೆ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 7, 2026 1:24 PM

ವಿಶ್ಲೇಷಣೆ: ರಮೇಶ್ ಕುಮಾರ್ ನಾಯಕ್

ಜಿರಳೆ ಪಾರ್ಟಿ ದಿಲ್ಲಿಯಲ್ಲಿ ಅಧಿಕೃತವಾಗಿ ಬೀದಿಗಿಳಿದು ಮೀಸೆ ಅಲ್ಲಾಡಿಸಿದೆ. Cockroach Janta Party - CJP ರೂವಾರಿ ಅಭಿಜೀತ್ ದೀಪ್ಕೆ ಅಮೆರಿಕದಿಂದ ಧರೆಗಿಳಿದಿದ್ದಾನೆ. ಆತನ ಸುತ್ತ ಒಂದಿಷ್ಟು ಯುವ ಜನ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಹೋಯ್‌ಗುಟ್ಟಿದ್ದಾರೆ. ಈ ಪ್ರತಿಭಟನೆಯ ದೃಶ್ಯ ನೋಡುತ್ತಿದ್ದಾಗ, ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರದ ವಿರುದ್ಧ ನಡೆದಿದ್ದ ಬೃಹತ್‌ ಜನಾಂದೋಲನಗಳು ಕಣ್ಮುಂದೆ ಬಂದವು. ಹಾಗೆಯೇ, ಆ ಆಂದೋಲನಗಳ ʼಹೀರೊʼಗಳೆಲ್ಲ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ನೋಡೋಣ ಅನಿಸಿತು.

ಮೊದಲನೆಯದಾಗಿ ರೈತ ಚಳವಳಿ

ಮೋದಿ ಸರ್ಕಾರದ ಕೃಷಿ ಸುಧಾರಣೆ ಕಾಯಿದೆ ವಿರೋಧಿಸಿ ಭಾರತೀಯ ಕಿಸಾನ್ ಯೂನಿಯನ್ (BKU) 2020ರಿಂದ 2021ರವರೆಗೆ ಸುಮಾರು 13 ತಿಂಗಳುಗಳ ಕಾಲ ದೆಹಲಿಯ ಗಡಿಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಪಂಜಾಬ್‌, ಹರಿಯಾಣದ ರೈತ ಸಂಘಟನೆಗಳು ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಗಳನ್ನು ಅಕ್ಷರಶಃ seize ಮಾಡಿ ಬಿಟ್ಟಿದ್ದವು. ರಾಕೇಶ್ ಟಿಕಾಯತ್ ಈ ಆಂದೋಲನದ ನೇತಾರ.

Farmers Protest (1)

2021ರ ಜನವರಿ 26ರ ಗಣರಾಜ್ಯೋತ್ಸವದಂದು ಈ ಚಳವಳಿಗಾರರು ಭಯೋತ್ಪಾದಕರಂತೆ ದೆಹಲಿಯ ಕೆಂಪುಕೋಟೆ ಮೇಲೆ ದಾಳಿ ಮಾಡಿದ್ದರು. ವ್ಯಾಪಕ ಹಿಂಸಾಚಾರ ನಡೆಸಿದ್ದರು. ಪೊಲೀಸರು ಪ್ರವೇಶಿಸದಂತೆ ರಸ್ತೆಗಳಿಗೆ ಮೊಳೆಗಳನ್ನು ಜಡಿದಿದ್ದರು. ಬ್ಯಾರಿಕೇಡ್‌, ಮುಳ್ಳುತಂತಿಗಳನ್ನು ಹಾಕಿದ್ದರು. ಗಡಿಗಳಲ್ಲಿ ಪ್ರತಿಭಟನಾಕಾರರ ತಾತ್ಕಾಲಿಕ ಹಳ್ಳಿಗಳೇ ನಿರ್ಮಾಣವಾಗಿದ್ದವು. ಉತ್ತರ ಪ್ರದೇಶ, ಹರಿಯಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಜಾಟರೆಲ್ಲ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದೇ ಬಿಂಬಿಸಲಾಗಿತ್ತು. ಆದರೆ ರೈತ ಚಳವಳಿ ನಡೆದ ಕೆಲವೇ ತಿಂಗಳಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತು!

Gurnam Singh Charuni

ಮುಂದೆ, ರೈತ ಚಳವಳಿಯಲ್ಲಿ ಆಕ್ರಮಣಕಾರಿಯಾಗಿ ವರ್ತಿಸಿದ್ದ, ಮೋದಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದ ರೈತ ನಾಯಕ ಗುರುನಾಮ್ ಸಿಂಗ್ ಚಾರುಣಿ ಸಂಯುಕ್ತ ಸಂಘರ್ಷ್ ಪಾರ್ಟಿ ಎಂಬ ಪಕ್ಷ ಸ್ಥಾಪಿಸಿದ. ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಜತೆ ಕೈ ಜೋಡಿಸಿದ. ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ನಾಯಕರೆಲ್ಲ ಕ್ಯೂನಲ್ಲಿ ನಿಂತು ಬಿಜೆಪಿ ಸೇರಿಕೊಂಡರು. ರೈತ ಹೋರಾಟದಿಂದ ಜ್ವಲಿಸುತ್ತಿದ್ದ ಹರಿಯಾಣದಲ್ಲಿ ಈಗಲೂ ಬಿಜೆಪಿ ಸರ್ಕಾರ!

ಅವನೊಬ್ಬನಿದ್ದ ಕನ್ಹಯ್ಯ ಕುಮಾರ್‌

ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (NRC) ಪ್ರಕ್ರಿಯೆಯ ವಿರುದ್ಧ 2019ರ ಡಿಸೆಂಬರ್‌ನಿಂದ 2020ರ ಮಾರ್ಚ್‌ವರೆಗೆ ಆಂದೋಲನ ಭುಗಿಲೆದ್ದಿತ್ತು. "ದೇಶ ದ್ರೋಹಿʼ ಕಾರಸ್ಥಾನಗಳಿಂದಾಗಿ ಕುಖ್ಯಾತಿ ಗಳಿಸಿರುವ ದಿಲ್ಲಿಯ ಜವಾಹರ್‌ ಲಾಲ್‌ ನೆಹರೂ ವಿಶ್ವವಿದ್ಯಾಲಯ ಜೆಎನ್‌ಯು ಈ ಚಳವಳಿಯ ಅಡಗುದಾಣವಾಗಿತ್ತು. ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯ ಕುಮಾರ್‌ ಈ ಆಂದೋಲನದಲ್ಲಿ ಬೆಂಕಿ ಭಾಷಣ ಮಾಡಿ ಯುವ ಜನರನ್ನು ರೊಚ್ಚಿಗೆಬ್ಬಿಸಿದ್ದ. ಅಪ್ಜಲ್‌ ಗುರು ಪರವಾಗಿ ಕಾರ್ಯಕ್ರಮ ಸಂಘಟಿಸಿ ಜೈಲು ಸೇರಿದ್ದ ಆಸಾಮಿ ಈತ. ಈ ಪ್ರತಿಭಟನೆ ವ್ಯಾಪಕ ಹಿಂಸಾಚಾರಕ್ಕೆ ತಿರುಗಿ ದಿಲ್ಲಿಯಲ್ಲಿ 53 ಅಮಾಯಕರು ಬಲಿಯಾಗುವಂತಾಯಿತು. ಇದು ರಾಜಕೀಯೇತರ ಆಂದೋಲನ ಎಂದೇ ಹೇಳಿಕೊಳ್ಳುತ್ತಿದ್ದ ಕನ್ಹಯ್ಯ, 2019ರ ಲೋಕಸಭಾ ಚುನಾವಣೆಯಲ್ಲಿ CPI ಅಭ್ಯರ್ಥಿಯಾಗಿ ತನ್ನ ತವರು ಕ್ಷೇತ್ರ ಬಿಹಾರದ ಬೇಗುಸರಾಯ್‌ನಿಂದ ಸ್ಪರ್ಧಿಸಿ ಬಿಜೆಪಿ ವಿರುದ್ಧ ಭಾರಿ ಅಂತರದಿಂದ ಸೋತು ಹೋದ.

Kanhaiya Kumar

ಮುಂದೆ, ಅಷ್ಟು ವರ್ಷಗಳ ತನ್ನ ಕಮ್ಯುನಿಸ್ಟ್‌ ನಿಷ್ಠೆಯನ್ನು ಕ್ಯಾಕರಿಸಿ ಉಗಿದು ಕಾಂಗ್ರೆಸ್‌ ಸೇರಿದ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈಶಾನ್ಯ ದೆಹಲಿಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಒಂದೇ ಸಮನೆ ಮೋದಿ ವಿರುದ್ಧ ಊಳಿಟ್ಟ. ಅಲ್ಲೂ ಬಿಜೆಪಿ ವಿರುದ್ಧ ಹೀನಾಯವಾಗಿ ಸೋತ. ಈ ಕನ್ಹಯ್ಯನಿಗೀಗ ರಾಹುಲ್‌ ಗಾಂಧಿ, ದೇಶಾದ್ಯಂತ ಯುವ ಮತದಾರರನ್ನು ಸೆಳೆಯುವ ಕೆಲಸ ಒಪ್ಪಿಸಿದ್ದಾರೆ!

ಉಲ್ಟಾ ಹೊಡೆದ ಅಲ್ಪೇಶ್ ಠಾಕೂರ್

ಈ ಅಲ್ಪೇಶ್ ಠಾಕೂರ್ 2015-17ರ ಅವಧಿಯಲ್ಲಿ ಗುಜರಾತ್‌ನಲ್ಲಿ ಒಬಿಸಿ ಸಮುದಾಯಗಳ ಹಿತರಕ್ಷಣೆ ಹೆಸರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್‌ ಆಂದೋಲನ ನಡೆಸಿದ್ದ. ಇನ್ನೇನು ಈ ಅಲ್ಪೇಶ್‌ ಠಾಕೂರ್‌ನ "OSS (OBC, SC, ST) ಏಕತಾ ಮಂಚ್' ಬಿಜೆಪಿ ಸರ್ಕಾರವನ್ನು ಕೆಡವಿ ಹಾಕುತ್ತದೆ ಎಂದೇ ಬಿಂಬಿಸಲಾಗಿತ್ತು. 2017ರಲ್ಲಿ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿ ಶಾಸಕನಾದ ಅಲ್ಪೇಶ್‌, ಅಲ್ಪ ಅವಧಿಯಲ್ಲೇ ಆ ಪಕ್ಷಕ್ಕೆ ರಾಜೀನಾಮೆ ಬಿಸಾಕಿ ಬಿಜೆಪಿ ಸೇರಿ ಈಗ ಎಂಎಲ್‌ಎ! ಒಬಿಸಿ ಸಮುದಾಯದ ಪರ ಆಂದೋಲನ ರೂಪಿಸಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯ ವಿರುದ್ಧ ತೊಡೆತಟ್ಟಿದ್ದ ಅಲ್ಪೇಶ್ ಠಾಕೂರ್ ಈಗ ಅದೇ ಬಿಜೆಪಿಯ ಪ್ರಮುಖ ಒಬಿಸಿ ಮುಖವಾಗಿ ಉತ್ತರ ಗುಜರಾತ್ ಭಾಗದಲ್ಲಿ ಪಕ್ಷವನ್ನು ಬಲಪಡಿಸುತ್ತಿದ್ದಾನೆ!

Alpesh Thakor

ಹಾರ್ದಿಕ್‌ ಪಟೇಲ್‌: ಅಂದು ಮೋದಿ ದ್ವೇಷಿ, ಇಂದು?

ಪಾಟೀದಾರ್ ಸಮುದಾಯದ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಬೇಕೆಂದು 'ಪಾಟೀದಾರ್ ಅನಾಮತ್ ಆಂದೋಲನ ಸಮಿತಿ' (PAAS) ಸಂಘಟನೆ ಹುಟ್ಟು ಹಾಕಿದ್ದ ಹಾರ್ದಿಕ್‌ ಪಟೇಲ್‌. ಪಾಟೀದಾರ್‌ ಆಂದೋಲನದ ಮೂಲಕ ಕೇವಲ 22ನೇ ವಯಸ್ಸಿನಲ್ಲೇ ದೇಶದ ಗಮನ ಸೆಳೆದಿದ್ದ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರಕ್ಕೆ ಭಾರಿ ರಾಜಕೀಯ ಸವಾಲು ಒಡ್ಡಿದ್ದ ಯುವ ನಾಯಕ. 2015ರ ಆಗಸ್ಟ್ 25ರಂದು ಅಹಮದಾಬಾದ್‌ನ ಜಿಎಂಡಿಸಿ ಮೈದಾನದಲ್ಲಿ ಈತ ಆಯೋಜಿಸಿದ್ದ ಬೃಹತ್ ರ‍್ಯಾಲಿಗೆ 5 ಲಕ್ಷಕ್ಕೂ ಹೆಚ್ಚು ಪಾಟೀದಾರ್ ಯುವಕರು ಜಮಾಯಿಸಿದ್ದರು. ಇದು ಸ್ವಾತಂತ್ರ್ಯಾನಂತರ ಗುಜರಾತ್ ಕಂಡ ಅತಿ ದೊಡ್ಡ ಪ್ರತಿಭಟನೆಗಳಲ್ಲಿ ಒಂದಾಗಿತ್ತು.

Hardik Patel

2017ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿ ರಾಜ್ಯಾದ್ಯಂತ ಬಿಜೆಪಿ ವಿರುದ್ಧ ಬಿರುಸಿನ ಪ್ರಚಾರ ನಡೆಸಿದ. ಇಷ್ಟಾಗಿಯೂ ಗುಜರಾತ್‌ನಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬಂತು. 2019ರ ಮಾರ್ಚ್‌ನಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ. 2020ರಲ್ಲಿ ಈತನಿಗೆ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ (GPCC) ಕಾರ್ಯಾಧ್ಯಕ್ಷದಂಥ ಅತಿದೊಡ್ಡ ಹುದ್ದೆಯನ್ನೇ ನೀಡಲಾಯಿತು. ಆದರೆ 2022ರ ಮೇನಲ್ಲಿ ಈತ ರಾಹುಲ್‌ ಗಾಂಧಿಯ ಬರ್ಮುಡಾದ ಜೇಬಿನಲ್ಲಿ ರಾಜೀನಾಮೆ ಪತ್ರ ತುರುಕಿ ಬಿಜೆಪಿ ಸೇರಿಕೊಂಡ. ಈಗ ಬಿಜೆಪಿಯ ನಿಷ್ಠಾವಂತ ಶಾಸಕ! ಈತನಿಗೆ ಬಿಜೆಪಿ ಕನಿಷ್ಠ ಸ್ಟೇಟ್‌ ದರ್ಜೆಯ ಸಚಿವ ಸ್ಥಾನವನ್ನೂ ನೀಡಿಲ್ಲ. ಆದರೂ, ಅಂದು ಮೋದಿಯನ್ನು ಕಟುವಾದ ಮಾತುಗಳಿಂದ ಕುಟುಕುತ್ತಿದ್ದ ಹಾರ್ದಿಕ್‌ ಪಟೇಲ್‌ ಈಗ ಮೋದಿ ಕಾರ್ಯವೈಖರಿಯನ್ನು ಶ್ಲಾಘಿಸುತ್ತ ಓಡಾಡುತ್ತಿದ್ದಾನೆ!

ತುಕ್ಡಾ ಗ್ಯಾಂಗ್‌‌ ತೊರೆದ ಶೆಹ್ಲಾ ರಶೀದ್‌

ಶೆಹ್ಲಾ ರಶೀದ್‌ ಸಿಪಿಐ ಪಕ್ಷದ ವಿದ್ಯಾರ್ಥಿ ವಿಭಾಗವಾದ AISA (All India Students' Association) ಮೂಲಕ ಜೆಎನ್‌ಯು (JNU) ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿದ್ದಾಕೆ. 2016ರಲ್ಲಿ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ದೇಶದ್ರೋಹದ ಆರೋಪದಡಿ ಜೈಲು ಪಾಲಾದಾಗ, ಜೆಎನ್‌ಯು ಕ್ಯಾಂಪಸ್‌ನಲ್ಲಿ ಇಡೀ ಆಂದೋಲನದ ನೇತೃತ್ವ ವಹಿಸಿ ಮೋದಿ ಸರ್ಕಾರದ ವಿರುದ್ಧ ಗುಡುಗುತ್ತ ರಾಷ್ಟ್ರೀಯ ಸುದ್ದಿಯಾಗಿದ್ದವಳು. ಶೆಹ್ಲಾ ರಶೀದ್ ಜಮ್ಮು ಕಾಶ್ಮೀರದ ಶ್ರೀನಗರದ ಮುಸ್ಲಿಂ ಕುಟುಂಬದ ಹೆಣ್ಣು ಮಗಳು. ಎನ್‌ಐಟಿ ಶ್ರೀನಗರದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮುಗಿಸಿದ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಸೇರಿ ಅಲ್ಲಿ ಪಿಎಚ್.ಡಿ ಮುಗಿಸಿದ್ದಾಳೆ.

Shehla Rashid

ಜಮ್ಮು-ಕಾಶ್ಮೀರಕ್ಕೆ ಸುಖಾಸುಮ್ಮನೆ ಒಣಶೋಕಿಯ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370ನ್ನು ಮೋದಿ ಸರ್ಕಾರ 2019ರ ಆಗಸ್ಟ್‌ನಲ್ಲಿ ಕಿತ್ತು ಬಿಸಾಕಿದಾಗ, ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಗುಜರಾಯಿಸಿದ್ದಳು. ಅಚ್ಚರಿ ಅಂದರೆ, ಒಂದು ಕಾಲದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿಯ ಪರಮ ವಿರೋಧಿಯಾಗಿದ್ದ ಶೆಹ್ಲಾ ರಶೀದ್‌ ಈಗ ಇವರಿಬ್ಬರ ಕಟ್ಟಾ ಅಭಿಮಾನಿ!

ಈಗ ಈಕೆ ಹೇಳುತ್ತಾಳೆ: ಮೋದಿ ಸರ್ಕಾರ ಆರ್ಟಿಕಲ್ 370 ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ರಕ್ತಪಾತ ನಿಂತಿದೆ, ಕಲ್ಲು ತೂರಾಟ ನಿಂತಿದೆ, ಶಾಂತಿ ನೆಲೆಸಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ರಾಜಕೀಯ ದೂರದೃಷ್ಟಿಯಿಂದಾಗಿ ಕಾಶ್ಮೀರದಲ್ಲಿ ಅಭಿವೃದ್ಧಿಯಾಗುತ್ತಿದೆ. ಅಲ್ಲಿನ ಯುವಕರಿಗೆ ಮುಖ್ಯವಾಹಿನಿಗೆ ಬರಲು ಅವಕಾಶ ಸಿಕ್ಕಿದೆ! ಕೇಂದ್ರ ಸರ್ಕಾರದ ನೀತಿಗಳನ್ನು ಈಕೆ ಮುಕ್ತಕಂಠದಿಂದ ಹಾಡಿ ಹೊಗಳುತ್ತಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಈಗ ಮೋದಿ ಮತ್ತು ಅಮಿತ್‌ ಶಾ ಅವರ ಪುಗಸಟ್ಟೆ ವಕ್ತಾರೆ ಮತ್ತು ಪ್ರಚಾರಕಿ!

ಇತ್ತೀಚೆಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮತ್ತು ವಿಶೇಷವಾಗಿ ಗಲ್ಫ್ ರಾಷ್ಟ್ರಗಳ ಸಂದರ್ಶನಗಳಲ್ಲಿ ಪಾಲ್ಗೊಳ್ಳುವ ಶೆಹ್ಲಾ, ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ, ಕಾಶ್ಮೀರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿಯಾಗುತ್ತಿದೆ ಎಂದು ಭಾರತ ಮತ್ತು ಮೋದಿ ಸರ್ಕಾರದ ಪರವಾಗಿ ಬಲವಾದ ವಾದ ಮಂಡಿಸುತ್ತಿದ್ದಾಳೆ!

ಈ ಹಿಂದೆ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಮಾಡುತ್ತಿದ್ದ ಶೆಹ್ಲಾ ಈಗ, ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದಕ್ಕಾಗಿ ಹಾಗೂ ಯುವಕರಿಗೆ ಕಲ್ಲು ತೂರಾಟದ ಹಾದಿ ತಪ್ಪಿಸಿ ಮುಖ್ಯವಾಹಿನಿಗೆ ತಂದಿದ್ದಕ್ಕಾಗಿ ಭಾರತೀಯ ಸೇನೆಯನ್ನು ಪ್ರಶಂಸಿಸುತ್ತಿದ್ದಾಳೆ!

ಇನ್ನು ಈಗ ಅಭಿಜೀತ್ ದೀಪ್ಕೆ!

30 ವರ್ಷದ ಅಭಿಜೀತ್ ದೀಪ್ಕೆ (Abhijeet Dipke) ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಮೂಲದವನು. "ಕಾಕ್ರೋಚ್ ಜನತಾ ಪಾರ್ಟಿ' (Cockroach Janta Party - CJP) ಆಂದೋಲನದ ಸಂಸ್ಥಾಪಕ. ಪುಣೆಯ ಪ್ರತಿಷ್ಠಿತ ಸಂಸ್ಥೆಯಿಂದ ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದಾನೆ. ಇತ್ತೀಚೆಗಷ್ಟೇ ಅಮೆರಿಕದ ಪ್ರಸಿದ್ಧ Boston Universityಯಿಂದ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾನೆ. ಸದ್ಯಕ್ಕೆ ಡಿಜಟಲ್‌ ಮಾಧ್ಯಮದ ಮೂಲಕ ಯುವ ಜನರನ್ನು ಉದ್ದೀಪಿಸಿ ಮೋದಿ ಸರ್ಕಾರದ ವಿರುದ್ಧ ಬೀದಿ ಹೋರಾಟಕ್ಕೆ ಪ್ರಚೋದಿಸುತ್ತಿದ್ದಾನೆ. ಒಂದು ಮುಖ್ಯ ಸಂಗತಿ ಏನೆಂದರೆ, ಈತ 2020ರಿಂದ 2023ರವರೆಗೆ ಆಮ್ ಆದ್ಮಿ ಪಾರ್ಟಿ (AAP) ಸಕ್ರಿಯ ಕಾರ್ಯಕರ್ತನಾಗಿದ್ದ. ದೆಹಲಿ ವಿಧಾನಸಭಾ ಚುನಾವಣೆ ವೇಳೆ ಆಪ್‌ನ ಯುವ ಕೇಂದ್ರಿತ ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವನು ಇವನೇ!

Abhijeet Dipke

'ಜಿರಳೆ' ವೇಷ ಧರಿಸಿ ಮೋದಿ ಸರ್ಕಾರದ ವಿರುದ್ಧ ಈಗ ಪುಂಗಿ ಊದುತ್ತಿರುವ ಅಭಿಜೀತ್ ದೀಪ್ಕೆ, ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ಅಥವಾ ಅದು ಮುಗಿದ ಬಳಿಕ ಮೋದಿ ಪರ ತುತ್ತೂರಿ ಊದಲು ಶುರು ಮಾಡಿದರೆ ಅಚ್ಚರಿ ಪಡುವಂಥದ್ದೇನೂ ಇಲ್ಲ!